ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಆರಂಭಿಕ ಹಂತದಲ್ಲಿ, ಭಾರತೀಯ ಚುನಾವಣಾ ಆಯೋಗವು (ECI) ಕಾನೂನುಬಾಹಿರವಾಗಿ 16.18 ಲಕ್ಷ ಮತದಾರರ ವಿವರಗಳನ್ನು ಗೋಪ್ಯವಾಗಿಟ್ಟಿದೆ ಎಂದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ತನಿಖಾ ವರದಿ ಬಹಿರಂಗಪಡಿಸಿದೆ.
ನಿಯಮಾವಳಿಗಳ ಪ್ರಕಾರ ಬೂತ್ವಾರು ಬಂದ ಹಕ್ಕುಗಳು ಹಾಗೂ ಆಕ್ಷೇಪಣೆಗಳ ಅರ್ಜಿ ವಿವರಗಳನ್ನು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಯ (CEO) ವೆಬ್ಸೈಟ್ನಲ್ಲಿ ಸಾರ್ವಜನಿಕ ಪರಿಶೀಲನೆಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ಆದರೆ, ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಿದ ಈ 16.18 ಲಕ್ಷ ಮತದಾರರ ಯಾವುದೇ ಮಾಹಿತಿ ಅಥವಾ ಪಟ್ಟಿ ಉತ್ತರ ಪ್ರದೇಶದ ಸಿಇಒ ಪೋರ್ಟಲ್ನಲ್ಲಿ ಲಭ್ಯವಿಲ್ಲದೆ ನಾಪತ್ತೆಯಾಗಿದೆ.
ಕರಡು ಪಟ್ಟಿಯಿಂದ ಕೈಬಿಡಲಾದವರು ಸೇರಿದಂತೆ ಹೆಸರು ಸೇರ್ಪಡೆಗಾಗಿ ಸಾರ್ವಜನಿಕರಿಂದ ಬಂದ 71.38 ಲಕ್ಷ ಅರ್ಜಿಗಳ ವಿವರಗಳನ್ನು ಆಯೋಗ ಪ್ರಕಟಿಸಿತ್ತಾದರೂ, ಅಂತಿಮ ಮತದಾರರ ಪಟ್ಟಿಯಲ್ಲಿ ಬರೋಬ್ಬರಿ 84.3 ಲಕ್ಷ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಅಂದರೆ, ಅಧಿಕೃತವಾಗಿ ಸಲ್ಲಿಕೆಯಾದ ಅರ್ಜಿಗಳಿಗಿಂತ ಸುಮಾರು 12.92 ಲಕ್ಷಕ್ಕೂ ಅಧಿಕ ಮತದಾರರು ಅಂತಿಮ ಪಟ್ಟಿಯಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾರೆ.
ನಿಯಮಾವಳಿಗಳ ಪ್ರಕಾರ ಫಾರ್ಮ್ 6 ಮೂಲಕ ಅರ್ಜಿ ಸಲ್ಲಿಸಿದವರನ್ನು ಮಾತ್ರ ಪಟ್ಟಿಗೆ ಸೇರಿಸಲು ಅವಕಾಶವಿದ್ದು, ಸ್ವೀಕೃತವಾದ ಅರ್ಜಿಗಳ ಸಂಖ್ಯೆಗಿಂತ ಹೆಚ್ಚಿನ ಮತದಾರರು ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ.
ಕರಡು ಪಟ್ಟಿ ತಯಾರಾಗುವ ಮುನ್ನವೇ 16.18 ಲಕ್ಷ ಜನರು ಫಾರ್ಮ್ 6 ಮೂಲಕ ಅರ್ಜಿ ಸಲ್ಲಿಸಿದ್ದರು ಎಂದು ಚುನಾವಣಾ ಆಯೋಗವು ಹಿಂದಿನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿತ್ತು. ಆದರೆ ಚುನಾವಣಾ ಪಾರದರ್ಶಕತೆಯ ಕಾನೂನಿನ ಪ್ರಕಾರ, ಯಾವುದೇ ಹಂತದಲ್ಲಿ ಅರ್ಜಿ ಸಲ್ಲಿಸಿದವರ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಾಗುತ್ತದೆ, ಇದರಿಂದ ಆ ಅರ್ಜಿಗಳು ನೈಜವೇ ಅಥವಾ ಇಲ್ಲವೇ ಎಂಬುದನ್ನು ಇತರರು ಪರಿಶೀಲಿಸಲು ಸಾಧ್ಯವಾಗುತ್ತದೆ.
ಉತ್ತರ ಪ್ರದೇಶದ ಚುನಾವಣಾ ಅಧಿಕಾರಿಗಳು ಈ ಮಹತ್ವದ ಡೇಟಾವನ್ನು ಮುಚ್ಚಿಟ್ಟಿರುವುದರಿಂದ, ಈ 16.18 ಲಕ್ಷ ಮತದಾರರು ಯಾರು, ಅವರ ಅರ್ಹತೆಯನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿದ್ದಾರೆಯೇ ಮತ್ತು ಅವರನ್ನು ಯಾವ ವಿಧಾನಸಭಾ ಕ್ಷೇತ್ರ ಅಥವಾ ಬೂತ್ಗಳಿಗೆ ಸೇರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಸ್ತುತ ಯಾರಿಗೂ ಸಾಧ್ಯವಾಗುತ್ತಿಲ್ಲ.
