ನಿಮ್ಮ ಡ್ರಾಮಾ ನಿಲ್ಲಿಸಿ ಜನರ ಮನಸ್ಸು ಗೆಲ್ಲುವುದು ಹೇಗೆನ್ನುವುದನ್ನು ಮೋದಿಯಿಂದ ಕಲಿಯಿರಿ: ವಿಪಕ್ಷಗಳ ಪ್ರತಿಭಟನೆಗೆ ಬಿಜೆಪಿ ತಿರುಗೇಟು

ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ (INDIA) ಒಕ್ಕೂಟದ ಸಂಸದರು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದ್ದು, ಇದೊಂದು “ಬರೀ ರಾಜಕೀಯ ಡ್ರಾಮಾ” ಎಂದು ಜರೆದಿದೆ. ಚುನಾವಣಾ ಸೋಲುಗಳನ್ನು ಜೀರ್ಣಿಸಿಕೊಳ್ಳಲಾಗದೆ ಕಾಂಗ್ರೆಸ್ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ದೇಶದಲ್ಲಿ ಗೊಂದಲ ಮತ್ತು ಅರಾಜಕತೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆಡಳಿತ ಪಕ್ಷ ಆರೋಪಿಸಿದೆ.

ಕೇಂದ್ರ ಸಚಿವ ಕಿರೆನ್ ರಿಜಿಜು ಅವರು ರಾಹುಲ್ ಗಾಂಧಿ ಅವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, “ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ಪ್ರತಿದಿನ ನಾಟಕವಾಡುವುದನ್ನು ವಿಪಕ್ಷಗಳು ತಕ್ಷಣ ನಿಲ್ಲಿಸಬೇಕು. ಪ್ರಜಾಪ್ರಭುತ್ವದಲ್ಲಿ ಜನರ ಸೇವೆ ಮಾಡುವ ಮೂಲಕ ಮಾತ್ರ ಜನರ ವಿಶ್ವಾಸ ಮತ್ತು ಜನಾದೇಶವನ್ನು ಗಳಿಸಲು ಸಾಧ್ಯ.

ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಕಾರ್ಯಕರ್ತರನ್ನು ನೋಡಿ ಕಲಿಯಬೇಕು” ಎಂದು ಸಲಹೆ ನೀಡಿದರು. ಅಲ್ಲದೆ, ಸುಮಾರು 55 ವರ್ಷಗಳ ಕಾಲ ದೇಶವನ್ನಾಳಿ, ಎರಡು ವರ್ಷ ತುರ್ತು ಪರಿಸ್ಥಿತಿಯನ್ನು ಹೇರಿದ್ದ ಪಕ್ಷವೇ ಇಂದು ಪ್ರಜಾಪ್ರಭುತ್ವದ ಪಾಠ ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಅವರು ವಾಗ್ದಾಳಿ ನಡೆಸಿದರು.

ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, “ಚುನಾವಣೆಗಳಲ್ಲಿ ಸೋತ ಹತಾಶೆಯಿಂದಲೇ ವಿಪಕ್ಷಗಳು ಈ ರೀತಿಯ ಆಧಾರರಹಿತ ಆರೋಪಗಳನ್ನು ಮಾಡುತ್ತಿವೆ. ಇದೇ ಚುನಾವಣಾ ವ್ಯವಸ್ಥೆಯಡಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಹಲವು ರಾಜ್ಯಗಳಲ್ಲಿ ಗೆದ್ದು ಅಧಿಕಾರ ನಡೆಸಿಲ್ಲವೇ?” ಎಂದು ಪ್ರಶ್ನಿಸಿದರು.

ಇತ್ತ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರನ್ನು ಪದೇಪದೇ ‘ಲಾಂಚ್ ಮತ್ತು ರೀ-ಲಾಂಚ್’ ಮಾಡುವ ವಿಫಲ ಕಸರತ್ತು ನಡೆಸುತ್ತಿದೆ. ರಾಜಕೀಯವಾಗಿ ಯಶಸ್ಸು ಸಿಗದಿದ್ದಾಗ ಸಾಂವಿಧಾನಿಕ ಸಂಸ್ಥೆಗಳನ್ನೇ ಗುರಿಯಾಗಿಸಿಕೊಂಡು ಹಲ್ಲೆ ನಡೆಸುವ ಹಾದಿಯನ್ನು ಹಿಡಿದಿದೆ” ಎಂದು ದೂರಿದರು.

ಇದೇ ವೇಳೆ, ರಾಜಕೀಯ ಗದ್ದಲದ ಕುರಿತು ಸ್ಪಷ್ಟನೆ ನೀಡಿರುವ ಭಾರತೀಯ ಚುನಾವಣಾ ಆಯೋಗ, ಮಂಗಳವಾರ ಸಂಜೆ 4 ಗಂಟೆಯವರೆಗೆ ಯಾವುದೇ ರಾಜಕೀಯ ಪಕ್ಷವೂ ತಮ್ಮನ್ನು ಭೇಟಿ ಮಾಡಲು ಅಧಿಕೃತ ಸಮಯಾವಕಾಶವನ್ನು (Appointment) ಕೋರಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ, “ವಿಪಕ್ಷಗಳಿಗೆ ಚುನಾವಣಾ ಆಯೋಗಕ್ಕೆ ಯಾವುದೇ ಅಹವಾಲು ಸಲ್ಲಿಸುವ ನೈಜ ಉದ್ದೇಶವಿರಲಿಲ್ಲ. ಮೊದಲಿಗೆ ಅವರು ಸಮಯ ಕೇಳಲಿಲ್ಲ, ಆಯೋಗವೇ ನಿಯೋಗ ಕಳುಹಿಸಲು ಸಿದ್ಧವಿದ್ದಾಗ ಇವರು ಒಪ್ಪಲಿಲ್ಲ. ಇದು ಅವರ ಇಬ್ಬಂದಿ ನೀತಿಯನ್ನು ಸ್ಪಷ್ಟವಾಗಿ ಬಯಲು ಮಾಡಿದೆ” ಎಂದು ಕಿಡಿಕಾರಿದರು.

Related Articles

ಇತ್ತೀಚಿನ ಸುದ್ದಿಗಳು