ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳು ಇನ್ಮುಂದೆ ರೋಗಿಗಳನ್ನು ಸೆಳೆಯಲು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಿಷ್ಟದಂತೆ ಆಕರ್ಷಕ ಜಾಹೀರಾತು ಹಾಗೂ ಮಾರ್ಕೆಟಿಂಗ್ ಪ್ರಚಾರ ಮಾಡುವಂತಿಲ್ಲ. ವೈದ್ಯಕೀಯ ಕ್ಷೇತ್ರದ ನೈತಿಕತೆಯನ್ನು ಕಾಪಾಡುವ ಉದ್ದೇಶದಿಂದ ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಹೊಸ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇವು ತಕ್ಷಣದಿಂದಲೇ ಜಾರಿಗೆ ಬಂದಿವೆ. ಇನ್ಸ್ಟಾಗ್ರಾಮ್, ಇನ್ಫ್ಲುಯೆನ್ಸರ್ ಮಾರ್ಕೆಟಿಂಗ್, ಪ್ರಾಯೋಜಿತ (Sponsored) ಪೋಸ್ಟ್ಗಳು ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಪ್ರಚಾರ ಸಾಮಗ್ರಿಗಳನ್ನೂ ಸಹ ನೂತನ ನಿಯಮಾವಳಿಯ ವ್ಯಾಪ್ತಿಗೆ ತರಲಾಗಿದೆ.
ನೋಂದಾಯಿತ ವೈದ್ಯಕೀಯ ವೃತ್ತಿಪರರು (RMP) ಹಾಗೂ ಆಸ್ಪತ್ರೆಗಳು ಪಾಲಿಸಬೇಕಾದ ನೈತಿಕ ಜಾಹೀರಾತು ಮತ್ತು ಮಾಹಿತಿ ಪ್ರಸಾರದ ಕುರಿತು ಅಕ್ಟೋಬರ್ 6 ರಂದು ಎನ್ಎಂಸಿ ಈ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ. ವೈದ್ಯಕೀಯ ಸೇವೆಗಳನ್ನು ಮಾರಾಟ ಮಾಡುವ ಸಲುವಾಗಿ ರೋಗಿಗಳ ಭಾವನಾತ್ಮಕ ವಿಡಿಯೋಗಳು, ನಕಲಿ ಅಥವಾ ಹಣ ನೀಡಿ ಬರೆಸಿದ ವಿಮರ್ಶೆಗಳು (Paid Reviews), ದಾರಿ ತಪ್ಪಿಸುವ ಕ್ಲೇಮ್ಗಳು ಮತ್ತು “ಖಚಿತವಾಗಿ ಗುಣಪಡಿಸುತ್ತೇವೆ” ಎಂಬ ಆಶ್ವಾಸನೆಗಳನ್ನು ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ವೈದ್ಯರು ಕೇವಲ ಆರೋಗ್ಯ ಜಾಗೃತಿ ಮೂಡಿಸುವುದಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ಬ್ರ್ಯಾಂಡ್ ನಿರ್ಮಿಸಿಕೊಳ್ಳಲು ಹಾಗೂ ಹೆಚ್ಚಿನ ರೋಗಿಗಳನ್ನು ಆಕರ್ಷಿಸಲು ಇನ್ಸ್ಟಾಗ್ರಾಮ್, ಯೂಟ್ಯೂಬ್ ರೀಲ್ಸ್ಗಳನ್ನು ಅತಿಯಾಗಿ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎನ್ಎಂಸಿ ಈ ಮಹತ್ವದ ಕ್ರಮ ಕೈಗೊಂಡಿದೆ.
ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಕಮರ್ಷಿಯಲ್ ಪ್ರಚಾರದ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಗುರುತಿಸಿರುವ ನಿಯಂತ್ರಣ ಮಂಡಳಿ, “ವೈಜ್ಞಾನಿಕ ಪುರಾವೆಗಳನ್ನು ಒದಗಿಸದ ಹೊರತು, ತಮ್ಮ ಚಿಕಿತ್ಸೆ, ಆಸ್ಪತ್ರೆಯ ಸೌಲಭ್ಯ ಅಥವಾ ನೈಪುಣ್ಯತೆ ಇತರರಿಗಿಂತ ಶ್ರೇಷ್ಠವಾದುದು ಎಂದು ವೈದ್ಯರು ಪ್ರಚಾರ ಮಾಡಿಕೊಳ್ಳುವಂತಿಲ್ಲ” ಎಂದು ಎಚ್ಚರಿಕೆ ನೀಡಿದೆ.
