ಸ್ಟಿಂಗ್ ಆಪರೇಷನ್ ನಡೆಸಿ ಬ್ಲ್ಯಾಕ್‌ಮೇಲ್ ಮಾಡುವುದು ಕಾಂಗ್ರೆಸ್ಸಿನ ಹಳೆಯ ಚಾಳಿ: ಬಿ.ವೈ. ವಿಜಯೇಂದ್ರ

ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ ಎಂಬ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ತಿರುಗೇಟು ನೀಡಿದ್ದಾರೆ. “ಸ್ಟಿಂಗ್ ಆಪರೇಷನ್‌ಗಳನ್ನು ನಡೆಸಿ ಜನರನ್ನು ಬ್ಲ್ಯಾಕ್‌ಮೇಲ್ ಮಾಡುವುದೇ ಕಾಂಗ್ರೆಸ್‌ಗೆ ರಕ್ತಗತವಾಗಿ ಬಂದಿರುವ ಇತಿಹಾಸ. ಈ ಬಗ್ಗೆ ಸ್ವತಃ ಆಡಳಿತ ಪಕ್ಷದ ಹಿರಿಯ ಸಚಿವರು ಮತ್ತು ಶಾಸಕರನ್ನೇ ಕೇಳಿದರೆ ಸ್ಪಷ್ಟ ಉತ್ತರ ಸಿಗುತ್ತದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸ್ಟಿಂಗ್ ಮಾಡುವುದು ಮತ್ತು ಬ್ಲ್ಯಾಕ್‌ಮೇಲ್ ಮಾಡುವ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಕೇಳಿದರೆ ಸಾಕು. ಯಾರು ಏನು ಮಾಡಿದರು, ಇದಕ್ಕೆ ಯಾರು ಹೊಣೆಗಾರರು ಎಂಬ ವಿವರಕ್ಕೆ ನಾನು ಹೋಗುವುದಿಲ್ಲ. ಆದರೆ, ಆಡಳಿತ ಪಕ್ಷದ ಶಾಸಕರೇ ಇಂದು ಸ್ಟಿಂಗ್ ಆಪರೇಷನ್ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಯಾವ ಸಂಸ್ಥೆಗಳು ಇಂತಹ ಕಾರ್ಯಾಚರಣೆ ನಡೆಸುತ್ತಿವೆ ಎಂಬುದನ್ನು ಸರ್ಕಾರವೇ ಜನತೆಗೆ ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.

“ಮೊಬೈಲ್ ಸ್ವಿಚ್ ಆಫ್ ಮಾಡಿ, ಬಾಗಿಲು ಮುಚ್ಚಿ ಲಂಚ ಪಡೆಯಿರಿ ಎಂದು ಸಚಿವರಿಗೆ ಸಲಹೆ ನೀಡುವಂತಹ ದುಃಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆಯನ್ನು ಯಾರು ನಡೆಸುತ್ತಿದ್ದಾರೆ ಎಂಬುದನ್ನು ಆಡಳಿತಗಾರರೇ ಉತ್ತರಿಸಬೇಕು” ಎಂದು ಲೇವಡಿ ಮಾಡಿದರು.

ಇದೇ ವೇಳೆ ರಿಯಲ್ ಎಸ್ಟೇಟ್ ದಂಧೆ ಕುರಿತು ಗಂಭೀರ ಆರೋಪ ಮಾಡಿದ ವಿಜಯೇಂದ್ರ, “ಇತ್ತೀಚೆಗೆ ರಾಜ್ಯದ ಅತ್ಯಂತ ಪ್ರಭಾವಿ ನಾಯಕರೊಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳ ಸಭೆ ಕರೆದು, ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಸಿದ್ದರು. ‘ಇದುವರೆಗೆ ನೀವು ರೂ. 75 ಕೊಡುತ್ತಿದ್ದಿರಿ, ಇನ್ಮುಂದೆ ರೂ. 150 ಕೊಡಬೇಕು’ ಎಂದು ತಾಕೀತು ಮಾಡಿದ್ದಾರೆ. ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದ ಉದ್ಯಮಿಗೆ ‘ರಾಜ್ಯ ಬಿಟ್ಟು ತೊಲಗಿ’ ಎಂದು ಬೆದರಿಕೆ ಹಾಕಿದ್ದಾರೆ. ಆ ಪ್ರಭಾವಿ ವ್ಯಕ್ತಿ ಯಾರು ಎಂಬುದನ್ನು ಜನತೆಯ ಮುಂದೆ ಬಹಿರಂಗಪಡಿಸಬೇಕು” ಎಂದು ಸವಾಲು ಹಾಕಿದರು.

ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ ಅವರು, “ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಪ್ರಾಥಮಿಕ ಮಾತುಕತೆ ನಡೆಸಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಇರಾದೆ ಇದ್ದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಬಗ್ಗೆಯೂ ಸ್ಪಷ್ಟತೆ ಇರಬೇಕು. ಎರಡೂ ಪಕ್ಷಗಳ ನಾಯಕರು ಒಟ್ಟಿಗೆ ಕುಳಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ” ಎಂದರು.

ಇದೇ ವೇಳೆ ಅಮಾನತುಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮರುಸೇರ್ಪಡೆ ಕುರಿತು ಕೇಳಲಾದ ಪ್ರಶ್ನೆಗೆ, “ಯತ್ನಾಳ್ ಅವರು ಕಳೆದ ಒಂದು ತಿಂಗಳಿಂದ ಮೌನವಾಗಿದ್ದಾರೆ. ಈಗ ಗಣೇಶೋತ್ಸವ ನಡೆಯುತ್ತಿದೆ, ಅವರಿಗೆ ತೊಂದರೆ ಕೊಡಬೇಡಿ, ಆ ಬಗ್ಗೆ ನಂತರ ಮಾತನಾಡುತ್ತೇನೆ” ಎಂದು ಪ್ರತಿಕ್ರಿಯಿಸಿದರು.

Related Articles

ಇತ್ತೀಚಿನ ಸುದ್ದಿಗಳು