ತತ್ವಪದ ಸಾಹಿತ್ಯ ಪರಂಪರೆ ಮತ್ತು ಸ್ವರೂಪ : ಚಿಂತನೆ

“..ತತ್ವಪದಕಾರರು ಮತ್ತು ತತ್ವಪದ ಸಾಹಿತ್ಯವನ್ನು ಕುರಿತು ಚಿಂತನೆ ನಡೆಸುವ ಭಾಗವಾಗಿ ಈ ಅಂಕಣ ಬರೆಹಗಳು ನಿಮ್ಮ ಓದಿಗೆ ಒದಗಲಿವೆ. ತತ್ವಪದ ಸಾಹಿತ್ಯ ಪರಂಪರೆ ಮತ್ತು ಸ್ವರೂಪ ಕುರಿತು ಮೊದಲ ಲೇಖನ ಇಲ್ಲಿದೆ..” ಸಾಹಿತಿಗಳಾದ ಡಾ.ಸಂಗಮೇಶ ಎಸ್ ಗಣಿ ಅವರ ಚಿಂತನಾ ಬರಹ.. ತಪ್ಪದೇ ಓದಿ

ನಮ್ಮ ಶೈಕ್ಷಣಿಕ ವ್ಯವಸ್ಥೆಯ ಕುರಿತು ಗಂಭೀರವಾಗಿ ವಿವೇಚಿಸುವ ಹಾಗೂ ಸಂಪ್ರದಾಯಸಿದ್ಧ ಮಾದರಿಗಳನ್ನು ಪುನರ್ ಅವಲೋಕಿಸುವ, ಪುನರ್‌ಪರಿಶೀಲಿಸುವ, ಪುನರ್‌ನಿರ್ವಚಿಸುವ ಅವಶ್ಯಕತೆಯಿದೆ. ಒಂದು ಕಾಲದ ಸಾಹಿತ್ಯ ಪರಂಪರೆಯನ್ನು ಸಮಕಾಲೀನ ನೆಲೆಯಲ್ಲಿ ಗ್ರಹಿಸುವ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಪಶ್ಚಿಮದ ಪ್ರಭಾವದಿಂದ ಬಿಡಿಸಿಕೊಂಡು ಕನ್ನಡ ಸಾಹಿತ್ಯ ಪ್ರಕಾರಗಳನ್ನು ಅಧ್ಯಯನಿಸಬೇಕಾಗುತ್ತದೆ. ನಡೆನುಡಿ ಸಿದ್ಧಾಂತದ ತಳಹದಿಯಲ್ಲಿ ರೂಪುಗೊಂಡ ತತ್ವಪದ ಸಾಹಿತ್ಯವು ಜೀವನವಿಧಾನದ ಉಪಉತ್ಪನ್ನವಾಗಿದೆ. ಜಾತಿ-ಮತ, ಪಂಥ ಪಂಗಡ, ಲಿಂಗತರತಮವಿಲ್ಲದ ಪ್ರಜಾಸತ್ತಾತ್ಮಕ ಆಶಯಗಳನ್ನು ಗರ್ಭೀಕರಿಸಿಕೊಂಡಿರುವ ತತ್ವಪದಗಳು ನಮ್ಮ ನೆಲದ ಅಸ್ಮಿತೆ. ಮನುಷ್ಯ ಬದುಕಿನ ಘನತೆ ಮತ್ತು ಗೌರವನ್ನು ಹೆಚ್ಚು ಮಾಡುವ ಹಾಗೂ ಸಮುದಾಯದ ಆರೋಗ್ಯವನ್ನು ಕಾಪಿಡುವ ತತ್ವಪದಗಳು ಕನ್ನಡ ಸಾಹಿತ್ಯ ಸಮೃದ್ಧಿ ಮತ್ತು ಸಂವರ್ಧನೆಗೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ತತ್ವಪದಕಾರರು ಮತ್ತು ತತ್ವಪದ ಸಾಹಿತ್ಯವನ್ನು ಕುರಿತು ಚಿಂತನೆ ನಡೆಸುವ ಭಾಗವಾಗಿ ಈ ಅಂಕಣ ಬರೆಹಗಳು ನಿಮ್ಮ ಓದಿಗೆ ಒದಗಲಿವೆ. ತತ್ವಪದ ಸಾಹಿತ್ಯ ಪರಂಪರೆ ಮತ್ತು ಸ್ವರೂಪ ಕುರಿತು ಮೊದಲ ಲೇಖನ ಇಲ್ಲಿದೆ.

ತತ್ವಚಿಂತನೆ: ಚಾರಿತ್ರಿಕ ಶೋಧ
‘ತತ್ವಪದ’ ಎಂದರೇನು ಎಂದು ತಿಳಿಯುವ ಪೂರ್ವದಲ್ಲಿ ಭಾರತೀಯ ಸಾಹಿತ್ಯದಲ್ಲಿ ತತ್ವಚಿಂತನೆಯ ಆರಂಭವನ್ನು ಕುರಿತು ತಿಳಿಯುವುದು ಅಗತ್ಯವಾಗಿದೆ. ‘ತತ್ವಚಿಂತನೆ’ ಎಂದರೆ ‘ತನ್ನೊಳಗಿನ ಶೋಧನೆ’ ಎಂದರ್ಥ. ತತ್ವಚಿಂತನೆ ‘ತನ್ನೊಳಗಿನ ಹುಡುಕಾಟದ ಜೊತೆಗೆ ತನ್ನತನದ ಹುಡುಕಾಟವೂ ಆಗಿದೆ’. ಪ್ರತಿಯೊಬ್ಬ ಸಾಧಕನೂ ಕೂಡ ಬಹಿರ್ಮುಖಿಯಾಗಿರುವುದಿಲ್ಲ. ಬದಲಿಗೆ ಅಂತರ್ಮುಖಿಯಾಗಿರುತ್ತಾನೆ. ಅಂತರ್ಮುಖಿಯಾಗಿರುವುದು ಆತ್ಮಶೋಧನೆಗೆ ಅಗತ್ಯವಾಗಿರುವ ಸಂಗತಿಯಾಗಿದೆ. ಹೀಗಾಗಿ ಆತ್ಮಶೋಧನೆ ಎಂದರೆ ತತ್ವಚಿಂತನೆಯ ಉದ್ದೇಶ ಆತ್ಮಶುದ್ಧಿ, ಆತ್ಮಬಲ ವರ್ಧನೆ, ಆತ್ಮದ ಸುಖಕ್ಕೆ ಹಾತೊರೆಯುವಂತೆ ಪ್ರೇರೇಪಿಸುವುದೇ ಆಗಿರುತ್ತದೆ. ಲೇಖಕ ರಾಗಂ ಅವರು ತಿಳಿಸಿದಂತೆ, ಭಾರತೀಯ ತತ್ವಚಿಂತನೆಯ ಇತಿಹಾಸ ತೀರ ಪ್ರಾಚೀನವಾದುದು. ಕ್ರಿ.ಶ.ಪೂ ೨೦೦೦ ಕ್ರಿ.ಪೂ. ೫೦೦ ರವರೆಗಿನ ಕಾಲಾವಧಿಯನ್ನು ‘ವೇದಗಳ ಕಾಲದ ತಾತ್ವಿಕ ಚಿಂತನೆ’, ಕ್ರಿ.ಪೂ ೫೦೦ ರಿಂದ ಕ್ರಿ.ಪೂ. ೨೦೦ ರವರೆಗಿನ ಅವಧಿಯನ್ನು ‘ಸೂತ್ರಗಳ ಕಾಲದ ತಾತ್ವಿಕ ಚಿಂತನೆ’, ಕ್ರಿ.ಶ ೨೦೦ ರಿಂದ ಕ್ರಿ.ಶ ೩೦೦ ರವರೆಗಿನ ಕಾಲವನ್ನು ‘ಮಹಾಕಾವ್ಯಗಳ ತಾತ್ವಿಕ ಚಿಂತನೆ’, ಕ್ರಿ.ಶ ೩೦೦ ರಿಂದ ಕ್ರಿ.ಶ ೭೫೦ ‘ಪುರಾಣಗಳ ಕಾಲದ ತಾತ್ವಿಕ ಚಿಂತನೆ’, ಕ್ರಿ.ಶ. ೭೫೦ ರಿಂದ ೧೦೦೦ ‘ಅನಂತರದ ದರ್ಶನದ ಕಾಲದ ಚಿಂತನೆ’, ಕ್ರಿ.ಶ ೧೦೦೦ ರಿಂದ ಕ್ರಿ.ಶ. ೧೮೦೦ ‘ಮಧ್ಯಕಾಲದ ಹಿಂದೂ ತಾತ್ವಿಕ ಚಿಂತನೆ’, ಕ್ರಿ.ಶ. ೧೮೦೦ ರಿಂದ ಕ್ರಿ.ಶ. ೧೯೫೦ ರ ಅವಧಿಯನ್ನು ‘ಆಧುನಿಕ ಕಾಲದ ತಾತ್ವಿಕ ಚಿಂತನೆಯ ಕಾಲ’ ಎಂದು ಏಳು ಘಟ್ಟಗಳನ್ನಾಗಿ ವಿಂಗಡಿಸಲಾಗಿದೆ. ತತ್ವಶಾಸ್ತç ಎಂಬುದು ಭಾರತೀಯರ ಪಾಲಿಗೆ ತರ್ಕಕ್ಕೂ ಸಿಗದೇ ಇರುವ ಸಂಗತಿಗಳನ್ನು ಒಳಗೊಳ್ಳುವ ಮತ್ತು ವಿಶ್ಲೇಷಿಸುವ ಜ್ಞಾನಶಿಸ್ತು. ಭಾರತದಲ್ಲಿ ೧೨ ನೇ ಶತಮಾನದ ಶರಣರ ಕಾಲಕ್ಕೆ ಇಸ್ಲಾಂ ಧರ್ಮ ಕಾಲಿರಿಸಿತ್ತು. ೧೪ ನೇ ಶತಮಾನದಲ್ಲಿ ಭಕ್ತಿ ಪಂಥಗಳೊಂದಿಗೆ ಸೂಫಿ ಪಂಥವು ನೆಲೆಯೂರಿತು.

ಅಕ್ಬರ್‌ನ ದೀನ್ ಇಲಾಹಿ ಪಂಥ, ಅನಂತರದ ೧೮ ನೇ ಶತಮಾನದಲ್ಲಿ ತತ್ವಚಿಂತನೆಯ ಬೆಳವಣಿಗೆಯನ್ನು ಗಮನಿಸಬೇಕಾಗುತ್ತದೆ. ಭಕ್ತಿಪಂಥಗಳ ಕುರಿತು ಚರ್ಚೆ ನಡೆಸುತ್ತಿರುವಾಗಲೇ ವಿಶಿಷ್ಟಾದೈತ, ದ್ವೆತಾದ್ವೈತ, ದ್ವೈತ, ಶುದ್ಧ ಅದ್ವೆತ, ಭಕ್ತಿಪಂಥ, ಹರಿದಾಸ ಭಕ್ತಿಪಂಥ, ಶಿವಶರಣ ಭಕ್ತಿಪಂಥ, ರಮಾನಂದ ಭಕ್ತಿಪಂಥ, ಗುರುನಾನಕ ಪಂಥ ಹೀಗೇ ಅನೇಕ ಪಂಥಗಳು ತಾತ್ವಿಕ ಚಿಂತನೆಯನ್ನೇ ಮುಖ್ಯವಾಗಿರಿಸಿಕೊಂಡು ಬೆಳೆದು ಬಂದಿರುವುದು ಗಮನಾರ್ಹ.

ಭಕ್ತಿಪಂಥದ ಒಂದು ಭಾಗವಾಗಿ ಕಾಣಿಸಿಕೊಂಡ ಅನುಭಾವಿ ಪಂಥದ ಸಾಧರಕರನ್ನು ಇಲ್ಲಿಯೇ ಗಮನಿಸಬೇಕಾಗುತ್ತದೆ. ರಾಷ್ಟ್ರಮಟ್ಟದಲ್ಲಿ ರಾಮಾನುಜಾಚಾರ್ಯ, ಮಧ್ವಾಚಾರ್ಯ, ಮೀರಾದೇವಿ, ಕಬೀರದಾಸರು, ಸಂತ ತುಕಾರಾಂ ಮುಂತಾದವರನ್ನು ಗುರುತಿಸಬಹುದು. ಕರ್ನಾಟಕದಲ್ಲಿ ಅನುಭಾವಿ ಪರಂಪರೆಯಲ್ಲಿ, ನಿಜಗುಣ ಶಿವಯೋಗಿಗಳು, ಮುಪ್ಪಿನ ಷಡಕ್ಷರಿ, ಸರ್ಪಭೂಷಣ ಶಿವಯೋಗಿಗಳು, ಬಾಲಾಲೀಲಾ ಮಹಾಂತ ಶಿವಯೋಗಿಗಳು, ಕಡಕೋಳ ಮಡಿವಾಳಪ್ಪನವರು, ನವಲಗುಂದದ ನಾಗಲಿಂಗ ಸ್ವಾಮಿಗಳು, ಶಿಶುನಾಳ ಶರೀಫರು, ಹುಬ್ಬಳ್ಳಿಯ ಸಿದ್ಧಾರೂಢರು ಅಲ್ಲದೇ ಮಹಿಳಾ ತತ್ವಪದಕಾರರೂ ಸೇರಿಕೊಂಡು ಅನುಭಾವ ಪರಂಪರೆಯನ್ನು ಬೆಳೆಸಿದರು.

“ಶ್ರೇಷ್ಠ ಸಾಹಿತಿ ಅನುಭವದ ಚೌಕಟ್ಟಿನಲ್ಲಿ ಧರ್ಮ, ತತ್ವವನ್ನು ಪರೀಕ್ಷಿಸತೊಡಗುತ್ತಾನೆ. ಸಾಹಿತಿಗಳು ವೈಯಕ್ತಿಕವಾಗಿ ಒಂದು ಮತ ಧರ್ಮಕ್ಕೂ ಸಂಬಂಧಪಟ್ಟವರಾದ್ದರಿಂದ ಅವರ ಸಾಹಿತ್ಯದಲ್ಲಿ ಈ ವೈಯಕ್ತಿಕ ಅಪೇಕ್ಷನುಪೇಕ್ಷೆಯನ್ನು ಮೀರಿ ಕಲಾಕೃತಿಯ ಬಂಧದಲ್ಲಿ ಈ ಸಂಬಂಧದ ಅನ್ವೇಷಣೆ ನಡೆಯುತ್ತದೆ. ಇಂಥ ಪರೀಕ್ಷಣದಿಂದಲೇ ಹೊಸಜೀವನ ತತ್ವವು ಮೂಡುತ್ತದೆ. ಇದು ಧರ್ಮತತ್ವಗಳ ಹಾಗೆ ಸ್ಥಾವರ ಗುಣವನ್ನು ಹೊಂದಿರದೆ, ತನ್ನ ಕಾಲದ ಅನುಭವದಲ್ಲಿ ಹೊಸ ದರ್ಶನವನ್ನು ಮೂಡಿಸಬಲ್ಲುದು. ಕೇವಲ ಆಧ್ಯಾತ್ಮಿಕ ಸತ್ಯವಾಗಿ ಕೇವಲ ಆಚರಣೆಯ ಅಂಶವಾಗಿ ಗ್ರಹಿಸಲಾಗುವ ಧರ್ಮದ ಅಂಶಗಳು ಶೋಧವಿಲ್ಲದ ನೆರಳಿನಾಕೃತಿಯ ಸಾಹಿತ್ಯ ಬಂಧವೊಂದರ ಸೃಷ್ಟಿಗೆ ಕಾರಣವಾಗುತ್ತದೆ. ಹೀಗೆ ಒಟ್ಟಾರೆ ಧರ್ಮ ತತ್ವ ಶೋಧದ ನೆಲೆ ಪ್ರತಿಯೊಬ್ಬ ಕವಿಯ ಕಾವ್ಯದಲ್ಲಿಯೂ ಹೊಸ ಆಕೃತಿಯನ್ನು ನಿರ್ಮಾಣ ಮಾಡುತ್ತದೆ” ಎಂದು ಬಸವರಾಜ ಕಲ್ಗುಡಿ ಅವರು ಅಭಿಪ್ರಾಯಪಟ್ಟಿದ್ದಾರೆ. ಅನುಭಾವ ಸಾಹಿತ್ಯದಲ್ಲೂ ಸಹ ತತ್ವದ ಶೋಧವನ್ನು ಮಾಡಿರುವುದನ್ನು ಇದಕ್ಕೆ ಪೂರಕವಾಗಿ ಪರಿಗಣಿಸಬಹುದಾಗಿದೆ.

ತತ್ವಪದ ಅರ್ಥ
‘ತತ್ವ’ ಎಂದರೆ ಏನು ಎನ್ನುವ ಪ್ರಶ್ನೆಗೆ ಉತ್ತರ ತುಂಬ ಸರಳವೂ, ಸಂಕೀರ್ಣವೂ ಆಗಿದೆ. ‘ತತ್ವ’ ಎಂದರೆ ಸಾಮಾನ್ಯವಾಗಿ ವ್ಯಾವಹಾರಕ್ಕಿಂತ ಭಿನ್ನವಾದ ಮಾತು ಎಂದು ಕರೆಯಲಾಗುತ್ತದೆ. ಕನ್ನಡ ರತ್ನಕೋಶದಲ್ಲಿ ‘ತತ್ವ’ ಎಂದರೆ ಆತ್ಮನ ಸ್ವರೂಪ, ಸಾರ, ಸತ್ಯ, ಸಿದ್ಧಾಂತ ಎಂದು ಉಲ್ಲೇಖಿತಗೊಂಡಿದೆ. ‘ಅದುತನ’. ಅಲ್ಲದೇ ‘ತತ್ವ’ ಎಂದರೆ ‘ಅದು’ ಎನ್ನುವುದು ‘ತತ್ವಮಸಿ’ ಮಹಾವಾಕ್ಯದಲ್ಲಿ ಬರುವ ತತ್ ಎಂದು ಹೇಳಿರುವ ಬ್ರಹ್ಮ. ಸರ್ವರ ಆತ್ಮನಾಗಿರುವ ಬ್ರಹ್ಮವು ಪ್ರತಿಯೊಬ್ಬರ ಆತ್ಮವಾಗುತ್ತದೆ. ‘ನಾನು’ ಹೋಗಿ ‘ನಾವು’ ಆಗಬೇಕಾದ ಪ್ರಕ್ರಿಯೆ ಇದು. ದೇಹ ಮತ್ತು ಆತ್ಮದಲ್ಲಿರುವ ನಿತ್ಯ, ಶುದ್ಧ, ಮುಕ್ತ, ನಿರ್ಮಲ, ಕೂಟಸ್ಥ, ಚೈತನ್ಯ ಸಾಕ್ಷಿ ಎಂದು ಕೆರೆಸಿಕೊಳ್ಳುವ ಆತ್ಮದ ತತ್ವವೇ ‘ತತ್ವ’ವಾಗಿದೆ. ದೇಹ ಮತ್ತು ಆತ್ಮಗಳ ನಡುವಿನ ಸಂಬಂಧದಲ್ಲಿ ಹುಟ್ಟಿಕೊಳ್ಳುವ ಚೈತನ್ಯ ಸ್ವರೂಪಿಯಾಗಿರುವುದನ್ನು ಹುಡುಕುವ, ತನ್ಮೂಲಕ ಶಾಂತಿ, ನೆಮ್ಮದಿಯನ್ನು ಕಂಡುಕೊಳ್ಳುವ ಸತ್ಯವನ್ನು ಶೋಧಿಸುವುದು ನಿಜವಾದ ತತ್ವ. ಮನುಷ್ಯನ ಬದುಕು ಸ್ಥಿರವಲ್ಲ, ಪ್ರಪಂಚ ನಶ್ವರ, ದೇಹವನ್ನು ನಂಬಬೇಡ, ಮೋಕ್ಷವೊಂದೇ ಶಾಶ್ವತವಾದುದು. ಈ ಜೀವನದ ಪರಮಸತ್ಯವಾಗಿರುವ ಮೋಕ್ಷವನ್ನು ಸಾಧಿಸಲು ಜೀವನದಲ್ಲಿ ಒಳ್ಳೆಯದನ್ನು ಮಾಡುವ ಮನೋಧರ್ಮವನ್ನು ರೂಪಿಸುವುದು ತತ್ವ. “ತತ್ವ ಎಂದರೆ ಸಿದ್ಧಾಂತ, ಪರಮಾತ್ಮ, ನಿಜಸ್ಥಿತಿ” ಎಂದು ಬಸವರಾಜ ಸಬರದ ಅವರು ಅಭಿಪ್ರಾಯ ಪಡುತ್ತಾರೆ. ‘ಪದ’ ಎಂಬುದನ್ನು ‘ಹಾಡು’ ‘ಹದಗೊಂಡ ಶಬ್ದ’ ಎಂದು ಭಾವಿಸಲಾಗಿದೆ. “ಪರಮಾತ್ಮನಿಗೆ ಸಂಬಂಧಿಸಿದ ಸಿದ್ಧಾಂತವನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಕ್ರಿಯೆಗೆ ‘ತತ್ವಪದ’ ಎಂದು ಕರೆಯುತ್ತಾರೆ. ‘ತತ್ವ’ ವಸ್ತುವಾದರೆ ‘ಪದ’ ಅಭಿವ್ಯಕ್ತಿ ಮಾಧ್ಯಮ. ವಸ್ತು ಮತ್ತು ಅಭಿವ್ಯಕ್ತಿ ಇವೆರೆಡನ್ನೂ ಸಮನ್ವಯಗೊಳಿಸಿಕೊಂಡು ಇರುವ ತತ್ವಪದ ಸಾಹಿತ್ಯ ಕನ್ನಡ ಸಾಹಿತ್ಯದ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿರುವುದರ ಜೊತೆಗೆ ಸಂಸ್ಕೃತಿಯೊಂದರ ಪ್ರತೀಕವೂ ಆಗಿದೆ” ಎಂಬ ಸಬರದರ ಅಭಿಪ್ರಾಯ ಉಚಿತವಾದುದಾಗಿದೆ. ಆಧ್ಯಾತ್ಮಿಕ ನೆಲೆಯಲ್ಲಿ ತತ್ವಪದ ಬಳಕೆಯಾಗುತ್ತದೆ. ತತ್ವವು ಲೌಕಿಕ ಬದುಕಿನ ಆರ್ಥಿಕ ವ್ಯಾವಾಹರಗಳನ್ನು ಮೀರಿ ನೈತಿಕತೆಯನ್ನು ಬೆಳೆಸುತ್ತ ಜನರೊಳಗೆ ಸಾಮರಸ್ಯವನ್ನು ಮೂಡಿಸುವ ಮೂಲಕ ಬದುಕನ್ನು ಉನ್ನತಿಯೆಡೆಗೆ ಕೊಂಡೊಯ್ಯುವ ಕಾರ್ಯವನ್ನು ಮಾಡುತ್ತದೆ.

ತತ್ವಪದ ಸಾಹಿತ್ಯ ಪರಂಪರೆ
ತತ್ವಪದ ಸಾಹಿತ್ಯವನ್ನು ಶಿಷ್ಟ ಸಾಹಿತ್ಯ ಪರಂಪರೆಗೆ ಅಥವಾ ಜನಪದ ಸಾಹಿತ್ಯ ಪರಂಪರೆಗೆ ಸೇರಿಸಬೇಕೊ ಎನ್ನುವ ಜಿಜ್ಞಾಸೆ ಮೊದಲಿನಿಂದಲೂ ಇದ್ದೇ ಇದೆ. ತತ್ವಪದಗಳ ರಚನೆ ಶಿಷ್ಟ ಪರಂಪರೆಯ ಕವಿಗಳಿಂದಲೇ ಆಗಿದೆ. ೧೨ ನೇ ಶತಮಾನವನ್ನು ಅನುಭಾವ ಸಾಹಿತ್ಯದ ಆರಂಭದ ಘಟ್ಟ ಎಂದು ಕರೆಯಬಹುದು. ಈ ಶತಮಾನದಲ್ಲಿ ಸಕಲೇಶ ಮಾದರಸ, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಮುಂತಾದವರು ಬರೆದ ಅನುಭಾವ ಸಾಹಿತ್ಯವನ್ನು ಶಿಷ್ಟಪರಂಪರೆಗೆ ಸೇರಿಸಲಾಗಿದೆ. ೧೫ ನೇ ಶತಮಾನದಲ್ಲಿದ್ದ ನಿಜಗುಣ ಶಿವಯೋಗಿಗಳು, ಮುಪ್ಪಿನ ಷಡಕ್ಷರಿಗಳು, ಬಾಲಲೀಲಾ ಮಹಾಂತ ಶಿವಯೋಗಿಗಳು ಅನುಭಾವ ಪದ್ಯಗಳನ್ನು ರಚಿಸಿದ್ದಾರೆ. ಎರಡೂ ಕಾಲಘಟ್ಟಗಳಲ್ಲಿ ರಚನೆಯಾದ ಅನುಭಾವ ಸಾಹಿತ್ಯವನ್ನು ಶಿಷ್ಟಪರಂಪರೆಗೆ ಸೇರ್ಪಡೆಗೊಳಿಸಿರುವುದು ಈಗ ಇತಿಹಾಸ. ಅನಂತರದಲ್ಲಿನ ೧೮ ಮತ್ತು ೧೯ ನೇ ಶತಮಾನದಲ್ಲಿನ ತತ್ವಪದಕಾರರನ್ನು ಶಿಷ್ಟಸಾಹಿತ್ಯಕ್ಕೊ ಅಥವಾ ಜಾನಪದಕ್ಕೊ ಸೇರಿಸಬೇಕೆಂಬ ನಿಲುವಿನಲ್ಲಿ ಭಿನ್ನಾಭಿಪ್ರಾಯಗಳು ಕಂಡುಬಂದವು. ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯ ಪ್ರಾರಂಭವನ್ನು ತತ್ವಪದಕಾರರಿಂದಲೇ ಗುರುತಿಸಬೇಕು ಎಂದು ಕಿ.ರಂ. ನಾಗರಾಜ ಅವರು ಅಭಿಪ್ರಾಯಪಡುತ್ತಾರೆ. ಆದರೆ ಈ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಎಂ.ಎಸ್. ಸುಂಕಾಪುರ, ಬಿ.ವಿ. ಮಲ್ಲಾಪುರ, ಮ.ಗು. ಬಿರಾದಾರ, ಶಾಂತರಸ ಮುಂತಾದವರು ತತ್ವಪದ ಸಾಹಿತ್ಯವನ್ನು ಜನಪದ ಸಾಹಿತ್ಯದ ಒಂದು ಪ್ರಕಾರವೆಂದೇ ಪರಿಭಾವಿಸಿದ್ದಾರೆ. ಆದರೆ ಈ ಎರಡೂ ಧ್ರುವಗಳ ನಡುವೆ ತತ್ವಪದ ಸಾಹಿತ್ಯ ಮೌಖಿಕವೂ ಹೌದು. ಶಿಷ್ಟವೂ ಹೌದು ಎಂಬ ದೃಢ ನಿಲುವು ವ್ಯಕ್ತವಾಗಿದೆ. ಎರಡು ಪರಂಪರೆಗಳಿಗೂ ಈ ತತ್ವಪದಸಾಹಿತ್ಯ ಸಲ್ಲುತ್ತದೆ. ಇವುಗಳಲ್ಲಿ “ಧರ್ಮಸಮನ್ವಯ, ಭಾಷಾಸಮನ್ವಯ, ಪ್ರಾದೇಶಿಕ ಸಮನ್ವಯವನ್ನು ಸಾಧಿಸುವುದರೊಂದಿಗೆ ತತ್ವಪದವು ಸಾಹಿತ್ಯಸಮನ್ವಯವನ್ನೂ ಸಾಧಿಸಿದೆ”. ಈ ಮಾತಿನಿಂದ ತತ್ವಪದಗಳು ‘ತತ್ವ’ಪ್ರಧಾನ, ತತ್ವಪ್ರೌಢವಾದುದರ ಜೊತೆಗೆ ಶಿಷ್ಟಪರಂಪರೆಗೆ ಸೇರುತ್ತವೆ ಎಂಬುದು ಖಚಿತ. ಆದರೆ ಅಭಿವ್ಯಕ್ತಿ ಕ್ರಮದಲ್ಲಿ ಮಾತ್ರ ಇದು ಜನಪದ ಸಾಹಿತ್ಯ ಪರಂಪರೆಗೆ ಸೇರುವುದು ಎಂಬ ಪ್ರಕಾಶ ಖಾಡೆಯವರ ನಿಲುವು ಅಷ್ಟೊಂದು ಸಮಂಜವೆನಿಸಲಾರದು. ಕಾರಣ, ತತ್ವಪದಗಳು ವಸ್ತುವಿನ ದೃಷ್ಟಿಯಿಂದ ನಿಗೂಢ ಎನಿಸಿದರೂ, ಅವೂ ಸಹ ಮನುಷ್ಯ ಜೀವನದಲ್ಲಿನ ಮೂಲಭೂತ ವಿಷಯಗಳಲ್ಲಿ ಒಂದಾಗಿರುವ ಮೋಕ್ಷ ಸಂಪಾದನೆಯ ಗುರಿಯನ್ನಾಗಿರಿಸಿಕೊಂಡಿದೆ. ಇದು ಜನಪದ ಜೀವನದಲ್ಲಿನ ಮೂಲಭೂತ ಅಂಶ ಎಂಬುದನ್ನು ತಿಳಿದರೆ, ಈ ತತ್ವಪದವು ಶಿಷ್ಟ ಜೊತೆಗೆ ಜನಪದ ಎರಡೂ ಆಗಿದೆ ಎಂಬುದನ್ನು ದೃಢವಾಗಿ ಹೇಳಬೇಕಾಗುತ್ತದೆ.

ಶಿಷ್ಟ ಮತ್ತು ಜನಪದ ಸಂಸ್ಕೃತಿಗಳ ನಡುವೆ ಕೊಡು-ಕೊಳ್ಳುವಿಕೆ ನಡೆದುಕೊಂಡು ಬಂದಿದೆ. ಸಾಮಾನ್ಯವಾಗಿ ಅನುಭಾವಿ ಪರಂಪರೆಯಲ್ಲಿ ಸಾಧಕರು ಗುರುಪರಂಪರೆಯನ್ನು ಅನುಸರಿಸುತ್ತಾರೆ. ಆದರೆ ಶಿಷ್ಟಸಂಪ್ರದಾಯದ ತತ್ವಪದಕಾರರಿಗೆ ಗುರುಗಳೇ ಇರುವುದಿಲ್ಲ. ಜನಪದ ತತ್ವಪದಕಾರರು ಮಾತ್ರ ಗುರುವಿನ ಸಹಾಯದಿಂದಲೇ ಸಾಧಕರಾಗಿ ತೋರುತ್ತಾರೆ. ತತ್ವಪದಗಳು ಹಳ್ಳಿಗಳಲ್ಲಿ ಭಜನಾ ಮೇಳಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ-ಹರಿದಿನ, ಹುಣ್ಣಿಮೆ, ಅಮವಾಸ್ಯೆ, ಹುಟ್ಟು, ಸಾವು, ಕಾರ್ತೀಕ ಮುಂತಾದ ಸಂದರ್ಭಗಳಲ್ಲಿ ಭಜನೆಗಳ ಮೂಲಕ ತತ್ವಪದಗಳು ಜನರನ್ನು ತಲುಪುತ್ತಿವೆ. ಮನೆ, ಮಠ, ಗುಡಿ, ಗುಂಡಾರ ಎಲ್ಲೆಂದರಲ್ಲಿ ಈ ಭಜನಾ ಪದಗಳನ್ನು ಹಾಡುವ-ಕೇಳುವ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕೆಲವೊಂದು ಭಜನಾ ಮೇಳ, ತಂಡದವರು ತತ್ವಪದಗಳನ್ನು ಹಾಡುವ ಮೂಲಕ ಸ್ಥಳೀಯ ಜ್ಞಾನವನ್ನು ಹೆಚ್ಚು ಮಾಡಿಕೊಳ್ಳುತ್ತಿರುತ್ತಾರೆ. ಇವರು ಹಾಡುವ ತತ್ವಪದಗಳು ಕಾಲದಿಂದ ಕಾಲಕ್ಕೆ ಸ್ವರೂಪ ಭಿನ್ನತೆ ಪಡೆದುಕೊಂಡು ಉಳಿದುಕೊಂಡು ಬರುತ್ತವೆ. ಹಾಡುವವರೂ ಕಾಲಕ್ಕೆ ತಕ್ಕಂತೆ ಪದಗಳನ್ನು ಕತ್ತರಿಸಿ ಇಲ್ಲದೇ ಹೊಸದನ್ನು ಸೇರಿಸಿ ಹಾಡುವ ರೂಢಿ ಮಾಡಿಕೊಂಡಿರುತ್ತಾರೆ. ಹೀಗಾಗಿ ಮೌಖಿಕ ಪರಂಪರೆಯ ತತ್ವಪದಗಳು ಜನಪದದ ಮೂಲ ಗುಣವನ್ನು ಪಡೆದು, ಉಳಿದುಕೊಂಡು ಬರುತ್ತವೆ. “ಮೌಖಿಕ ಪರಂಪರೆಯ ತತ್ವಪದ ಸಾಹಿತ್ಯವನ್ನು ಜನಸಮುದಾಯಗಳು ತಮ್ಮ ಒಡಲಕೂಸಿನಂತೆ ಜತನ ಮಾಡಿಕೊಂಡು ಬಂದರು. ತತ್ವಪದಕಾರರಾಗಲಿ, ಸೂಫಿ ಸಂತರಾಗಲಿ, ಜನಸಾಮಾನ್ಯರ, ಕೆಳವರ್ಗದ ಜತೆ ಬೆರೆತು, ಜಾತಿ-ಮತವನ್ನು ಮೀರಿ ನಿಲ್ಲುವ ಶಕ್ತಿಯನ್ನು ಸೃಷ್ಟಿಸಿದರು” ಇದನ್ನೇ ಎಚ್.ಎಸ್. ಶಿವಪ್ರಕಾಶ್ ‘ಎಲ್ಲ ಜಾತಿಯ ಮರಗಳ ಕಾಡು’ ಎಂದು ಕರೆದಿರುವುದು ಗಮನಾರ್ಹ.

ನಮ್ಮ ರಾಜ್ಯವೂ ಸೇರಿದಂತೆ ಹೊರ ರಾಜ್ಯಗಳಲ್ಲೂ ತತ್ವಪದಗಳನ್ನು ಹಾಡುವ ಮೇಳಗಳಿವೆ. ಅವು ತತ್ವಪದಗಳನ್ನು ಹಾಡುವಾಗ ಪ್ರಾದೇಶಿಕ ಪ್ರಜ್ಞೆಯೊಂದಿಗೆ ತಮಗೆ ಪ್ರಿಯವಾದ ಭಾಷೆಯಲ್ಲಿ ಭಿನ್ನವಾಗಿ ಹಾಡುತ್ತಾರೆ. ಸೊಲ್ಲಾಪುರ, ಪಂಡರಾಪುರ, ಕಲಬುರ್ಗಿ, ಶ್ರೀಶೈಲ, ಹಂಪಿ ಮುಂತಾದ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವ ಭಜನಾ ತಂಡಗಳು ತತ್ವಪದಗಳನ್ನು ಹಾಡುತ್ತವೆ.

ಕನ್ನಡದಲ್ಲಿ ತತ್ವಪದ ಸಾಹಿತ್ಯ ಪರಂಪರೆಗೆ ಸುದೀರ್ಘ ಇತಿಹಾಸ ಇದೆ. ೧೨ನೇ ಶತಮಾನದಲ್ಲಿನ ವಚನಕಾರರಿಂದಲೂ ತತ್ವಪದ ಸಾಹಿತ್ಯದ ಮೂಲ ಬೇರುಗಳನ್ನು ಗುರುತಿಸಬಹುದಾಗಿದೆ. ಅನಂತರ ದಾಸ ಸಾಹಿತ್ಯದಲ್ಲೂ ಅದರ ಬೆಳವಣಿಗೆ ಇದೆ. ಕ್ರಿ.ಶ ೧೫೦೦ ರಲ್ಲಿ ಮುಪ್ಪಿನ ಷಡಕ್ಷರಿ, ಕ್ರಿ.ಶ. ೧೭೦೦ರಲ್ಲಿ ಮೈಲಾರದ ಬಸವಲಿಂಗ ಶರಣರು, ನಿಂಬರಗಿ ಮಹಾರಾಜರು, ಶಂಕರಾನAದರು, ಕ್ರಿ.ಶ ೧೭೫೦ರಲ್ಲಿ ಚಿದಾನಂದ ಅವಧೂತರು, ರಾಮಾಪುರದ ಬಕ್ಕಪ್ಪಯ್ಯಾ, ಹಾಗಲವಾಡಿ ಮದ್ವೀರ ಸ್ವಾಮಿಗಳು, ಕ್ರಿ.ಶ ೧೭೫೮ರಲ್ಲಿ ಸಾರವಾಡದ ಚಿಕ್ಕಪ್ಪಯ್ಯ, ಕ್ರಿ.ಶ ೧೮೦೦ರಲ್ಲಿ ಕೂಡಲೂರು ಬಸವಲಿಂಗ ಶರಣರು, ನೀರಲಕೇರಿ ಪಂಚಾಕ್ಷರಿ ಶಿವಯೋಗಿಗಳು, ಕ್ರಿ.ಶ. ೧೮೨೫ರಲ್ಲಿ ಸರ್ಪಭೂಷಣ ಶಿವಯೋಗಿಗಳು, ಕ್ರಿ.ಶ ೧೮೫೦ರಲ್ಲಿ ಬಾಲಲೀಲಾ ಮಹಾಂತ ಶಿವಯೋಗಿಗಳು, ೧೮೪೦ರಲ್ಲಿ ಶಿಶುನಾಳ ಶರೀಫರು, ಕಡಕೋಳ ಮಡಿವಾಳಪ್ಪ ಮೊದಲಾದವರು ತತ್ವಪದಕಾರರಲ್ಲಿ ಪ್ರಮುಖರಾಗಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಧರ್ಮಗಳ ಸಮನ್ವಯತತ್ವವನ್ನು ಪ್ರತಿಪಾದಿಸಿದ ತತ್ವಪದಕಾರರಲ್ಲಿ ಇಸ್ಲಾಂ ಧರ್ಮದ ಸಂತರನ್ನು ಕುರಿತು ತಿಳಿಯಬೇಕಾಗುತ್ತದೆ. ಹಲವು ತತ್ವಪದಕಾರರು ಎರಡೂ ಧರ್ಮಗಳ ನಡುವಿನ ಸಂಘರ್ಷ ಮತ್ತು ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ. ಕ್ರಿ.ಶ ೧೭೦೦ರಲ್ಲಿ ಚನ್ನೂರು ಜಲಾಲ ಸಾಹೇಬ್, ಕ್ರಿ.ಶ ೧೮೫೫ ರಲ್ಲಿ ಮೋಟ್ನಳ್ಳಿ ಹಸನ್ ಸಾಹೇಬ್, ಕ್ರಿ.ಶ ೧೮೭೫ರಲ್ಲಿ ಕೋಹಿನೂರು ಹಸನ್, ಕ್ರಿ.ಶ ೧೯೧೭ರಲ್ಲಿ ದೇಗಾವಿ ಹಜರತ್, ಕ್ರಿ.ಶ. ೧೯೩೦ರಲ್ಲಿ ಮಂಜಿಲಾನ್ ಖಾದರಸಾಬ್, ಅರವಲಿ ಬಿಜಲಿ ವಸ್ತಾದಿ, ಕ್ರಿ.ಶ ೧೯೧೭ರಲ್ಲಿ ಸಾವಳಗಿ ಮೊಹಮ್ಮದ್‌ಸಾಬ್, ಸಾಹಿಬಣ್ಣ ತಾತಾ, ಸಾಲಗುಂದಿ ಗುರು ಖಾದರಿ ಹೀಗೇ ಅನೇಕ ಮುಸ್ಲಿಂ ತತ್ವಪದಕಾರರು ಮುಖ್ಯರಾಗಿದ್ದಾರೆ.

“ತತ್ವಪದಕಾರರ ಪ್ರಧಾನ ಸಾಮಗ್ರಿ ಕನ್ನಡ ಸಾಹಿತ್ಯ ಪರಂಪರೆಯ ಪ್ರಮುಖ ಚಳವಳಿಯಾದ ವಚನ ಹಾಗೂ ದಾಸ ಸಾಹಿತ್ಯದ ನೆಲೆಯಿಂದ ಬಂದದ್ದು. ಆದರೆ ಸಾಮಗ್ರಿಯನ್ನು ವರ್ತಮಾನದ ಸಂದರ್ಭವನ್ನು ಹೊರತುಪಡಿಸುವಂತೆ ಅವರು ಪುನರ್‌ನಿರ್ಮಾಣ ಮಾಡುತ್ತಾರೆ. ಹೀಗಾಗಿ ತತ್ವಪದಕಾರರ ರಚನೆಗಳು ಪಾಂಡಿತ್ಯದ ಪ್ರಭಾವದಿಂದ ಪಾರಾಗಲು ಸಾಧ್ಯವಾಗದೇ ಹೋಗಿವೆ. ಆದರೂ ಒಟ್ಟು ಸೃಷ್ಟಿ ಕನ್ನಡ ಸಂಸ್ಕೃತಿಯ ಸಂದರ್ಭದಲ್ಲಿ ಗಂಭೀರವಾದ ಸೃಜನಶೀಲ ದಾಖಲೆಯಾಗಿವೆ” ಎಂಬ ಕೆ.ಸಿ. ಶಿವಾರೆಡ್ಡಿ ಅವರ ಅಭಿಪ್ರಾಯದಲ್ಲಿ ತತ್ವಪದಕಾರರ ಹಿರಿಮೆಯನ್ನು ಗುರುತಿಸಬಹುದಾಗಿದೆ.

ತತ್ವಪದ ಸಾಹಿತ್ಯದ ಸ್ವರೂಪ
ತತ್ವಪದವು ವ್ಯಕ್ತಿಯನ್ನು ಲೌಕಿಕದ ಮೋಹಗಳ ಪಾಶದಿಂದ ಬಿಡುಗಡೆಗೊಳಿಸಿ ಅಲೌಕಿಕ ಸಾಧನೆಗೆ ಅವಕಾಶ ಮಾಡಿಕೊಡುವ ಅಭಿವ್ಯಕ್ತಿಯಾಗಿದೆ. ದಿನಿತ್ಯದ ಬದುಕಿನ ಜಂಜಡಗಳಿಂದ ಮುಕ್ತಿ ಕಾಣುವ ಹಂಬಲ ಮೂಡಿಸುವ ತತ್ವಪದಗಳು ವ್ಯಕ್ತಿಯನ್ನು ಮುಕ್ತಿಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸುತ್ತವೆ.

“ರೂಪದ ದೃಷ್ಟಿಯಿಂದ ಇವನ್ನು ಹಾಡುಗಳೆಂದು, ವಸ್ತುವಿನ ದೃಷ್ಟಿಯಿಂದ ತತ್ವಪದಗಳೆಂದೂ, ಗುರಿಯ ದೃಷ್ಟಿಯಿಂದ ಕೈವಲ್ಯಪದ’ಗಳೆಂದು ಈ ಸಾಹಿತ್ಯವನ್ನು ಗುರುತಿಸಲಾಗಿದೆ. ದೇಶೀ ಸೃಜನಶೀಲ ಶಕ್ತಿಯ ಉತ್ತಮ ಮಾದರಿಗಳು ತತ್ವಪದಗಳು ಎಂದರೆ ಅತಿಶಯೋಕ್ತಿ ಆಗಲಾರದು”. ತತ್ವಪದವು ಬೇರೆ ಬೇರೆ ಸ್ವರೂಪವನ್ನು ಪಡೆದುಕೊಂಡು ಅಸ್ತಿತ್ವದಲ್ಲಿದೆ. ಆದ್ದರಿಂದ ಅದು ಬಗೆಬಗೆಯ ಹೆಸರುಗಳಿಂದಲೂ ಕರೆಯಲ್ಪಡುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ. ‘ಪರಮಾತ್ಮನ ಕುರಿತು ಅನುಭಾವಿಗಳು ಹಾಡಿಕೊಂಡಿದ್ದರಿಂದ ‘ಅನುಭಾವ’ ಪದಗಳೆಂದು, ಒಂದೇ ಸ್ವರವನ್ನು ಹೊರಡಿಸುವ ವಾದ್ಯವನ್ನು ಬಳಸಿ ಹಾಡಿಕೊಳ್ಳುವುದರಿಂದ ಮತ್ತು ಸ್ವರವನ್ನು ಎತ್ತಿ ಹಾಡುವುದರಿಂದ ‘ಸ್ವರವಚನ’ಗಳೆಂದು, ಅಂತರಂಗದ ಅರಿವಿನ ಮೂಲಭೂತ ತತ್ವಗಳ ದೀಪ್ತಿಯನ್ನು ಬೆಳೆಗಿಸುವುದರಿಂದ ‘ತತ್ವಪದ’ಗಳೆಂದು, ಜನಸಾಮಾನ್ಯರು ಹಳ್ಳಿ ಪ್ರದೇಶಗಳಲ್ಲಿ ಭಜನೆಯ ರೂಪದಲ್ಲಿ ಇವುಗಳನ್ನು ಹಾಡುವುದರಿಂದ ‘ಭಜನಾಪದ’ಗಳೆಂದು ಕರೆಯಲಾಗುತ್ತದೆ. ತತ್ವಪದ ಸಾಹಿತ್ಯವು ತನ್ನದೇಯಾದ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ತತ್ವಪದಗಳು ಮೇಲ್ನೋಟಕ್ಕೆ ವಚನ, ದಾಸರ ಕೀರ್ತನೆಗಳಂತೆ ಕಾಣುತ್ತವೆ. ಆದರೆ ಕೆಲವೊಂದು ಸೂಕ್ಷö್ಮ ವ್ಯತ್ಯಾಸಗಳ ಮೂಲಕ ಅದರ ಸ್ವರೂಪವನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ.

ಗುರುಪರಂಪರೆ :
‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ..’ ಎಂದು ದಾಸರು ಹೇಳುವಂತೆ ಅನುಭಾವಿ ಪರಂಪರೆಯಲ್ಲಿ ಗುರು ತೋರಿದ ದಾರಿಯಲ್ಲಿಯೇ ಸಾಗಿ ಮುಕ್ತಿಮಾರ್ಗವನ್ನು ಹುಡುಕುವ ಪ್ರವೃತ್ತಿ ಕಂಡುಬರುತ್ತದೆ. ಸಾಧನೆ ಎಂಬುದು ಸುಲಭವಾಗಿ ಸಿದ್ಧಿಸುವುದಿಲ್ಲ. ಅದನ್ನು ಪಡೆದುಕೊಳ್ಳಲು ಗುರುವಿನ ಮೊರೆ ಹೋಗಲೇಬೇಕು. ಆದ್ದರಿಂದ ಸಿದ್ಧರು, ಆರೂಢರು, ಸೂಫಿಗಳು, ಅನುಭಾವಿ ತತ್ವಪದಕಾರರ ಪಂಥಗಳಲ್ಲಿ ಸಾಧಕರಿಗೆ ಸಾಧನೆ ಮಾಡಲು ಗುರುವಿನ ಅಗತ್ಯ ಇರುವುದನ್ನು ಗುರುತಿಸಬಹುದು. ಈ ಅರಿವನ್ನು ಪಡೆಯುವ ನಿಜ ಹಂಬಲದ ಈ ಅನುಭಾವಿ ಪಂಥಗಳಲ್ಲಿ ಗುರು-ಶಿಷ್ಯ ಪರಂಪರೆಯು ಕಾಣಬರುತ್ತದೆ. ಇಲ್ಲಿ ಪ್ರತಿಯೊಬ್ಬ ಶಿಷ್ಯನೂ ಗುರುವನ್ನು ಕಡ್ಡಾಯವಾಗಿ ಪಡೆದುಕೊಳ್ಳಲೇಬೇಕು. ಗುರುವಾದವನು ಸಾಧಕನನ್ನು ಕರೆದು ತನ್ನ ಹಸ್ತವನ್ನು ಇರಿಸುವ ಮೂಲಕ ದೀಕ್ಷೆಯನ್ನು ಕೊಡುತ್ತಾನೆ. ಆನಂತರ ಗುರು ತೋರಿದ ದಾರಿಯಲ್ಲಿ ನಿಷ್ಠೆ, ಶ್ರದ್ಧೆಯಿಂದ ಮುಂದೆ ಸಾಗುತ್ತಾನೆ. ಸಾಧಕನಾಗುತ್ತಾನೆ. ಸಾಧಕನಾಗುವ ಪ್ರತಿ ಹಂತದಲ್ಲೂ ಗುರುವನ್ನು ಮೀರಿಸಿ ನಡೆಯುವ ಛಲವನ್ನು ಸಾಧಕನು ಪಡೆದುಕೊಳ್ಳುತ್ತಾ ಸಾಗುತ್ತಾನೆ. ಆತ್ಮಸಾಧನೆ, ಆತ್ಮಸಿದ್ಧಿಯನ್ನೇ ಮುಖ್ಯ ಗುರಿಯಾಗಿಸಿಕೊಂಡು ಸಾಗುವ ಸಂಪ್ರದಾಯ ಎಲ್ಲ ಸಿದ್ಧ ಪಂಥಗಳಲ್ಲಿನ ಸಾಮಾನ್ಯ ಲಕ್ಷಣವಾಗಿದೆ. ನಿಜಗುಣ ಶಿವಯೋಗಿಗಳು “ಶ್ರೀಗುರು ವಚನುಪದೇಶವನಾಲಿಸಿದಾಗಳಹುದು ನರರಿಗೆ ಮುಕುತಿ” ಎಂದು ಹೇಳಿದ್ದಾರೆ. ಮುಕ್ತಿ ಮಾರ್ಗದಲ್ಲಿ ಸಾಗಬೇಕಾದರೆ ಗುರು ತೋರುವ ದಾರಿಯಲ್ಲಿ ಅನುಸರಿಸುವ ಮಾರ್ಗಗಳ ಕುರಿತು ಅವರು ತಿಳಿಸುತ್ತಾರೆ. “ಹರ ಮುನಿದರೂ ಗುರು ಕಾಯ್ವನು” ಎಂಬ ನೀರಲಕೇರಿ ಬಸವಲಿಂಗ ಶರಣರ ತತ್ವಪದವು ಗುರುವಿನ ಮಹತ್ವವನ್ನು ಸಾರುತ್ತದೆ. ತತ್ವಪದಕಾರರು ಗುರುಮಾರ್ಗ ಅನುಯಾಯಿಗಳಾಗಿರುವುದರಿಂದ ಯೋಗ, ಧ್ಯಾನ, ಮುಂತಾದ ಯೌಗಿಕ ಸಾಧನೆಯ ಮುಖಾಂತರ ಅಂತರಂಗದ ದನಿಗೆ ಓಗೊಡುವುದು ಅವರಿಗೆ ಅವಶ್ಯವಾಗಿರುತ್ತದೆ. ಗುರು ಮತ್ತು ಶಿಷ್ಯರಲ್ಲಿ ಜಾತಿ-ಮತಗಳ ಹಂಗಿಲ್ಲ. ಕಲಿಯುವ, ಸಾಧಿಸುವ ನಿಶ್ಚಲ ಮನಸ್ಸು ಇರುವ ಶಿಷ್ಯನನ್ನು ಗುರು ಹುಡುಕುತ್ತಾನೆ. ನಿಜದ ದಾರಿಯನ್ನು ಹೇಳುವ ಗುರು ಯಾವುದೇ ಪಂಥ, ಜಾತಿಯವನಾದರೂ ಸಾಧಕನು ಗುರುವನ್ನು ಸ್ವೀಕರಿಸುತ್ತಾನೆ. ಜಾತಿಯನ್ನೇ ಮೀರಿ ಬೆಳೆಯುವುದು ಇಲ್ಲಿ ಗುರು-ಶಿಷ್ಯರೂ ಇಬ್ಬರ ಮೂಲಗುರಿಯಾಗಿರುತ್ತದೆ. ಕಡಕೋಳ ಮಡಿವಾಳಪ್ಪ “ದಾರಗೊಡವಿ ನಮಗೇನಾದರಿ ಗುರು ತೋರಿದ ಹಾದಿಯೊಳಿರಬೇಕು” ಎನ್ನುವ ಮಾತಿನಂತೆ ಗುರು ಇಲ್ಲಿ ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ.

ಅನುಭಾವವೇ ಮೂಲ ನೆಲೆ :
ಅನುಭಾವ ತತ್ವಪದಸಾಹಿತ್ಯದ ಮತ್ತೊಂದು ಲಕ್ಷಣವಾಗಿದೆ. ಲೌಕಿಕ ಜೀವನದಲ್ಲಿ ಸಾಧಕನಾದರೆ ಮುಖ್ಯವಲ್ಲ. ಅಲೌಕಿಕ ಜೀವನದಲ್ಲಿ ಸಾಧಕನಾಗುವುದು ಮುಖ್ಯ. ಲೌಕಿಕದೊಳಗಿದ್ದು ಅಲೌಕಿಕ ಸಾಧನೆ ಸಿದ್ಧಿಸಿಕೊಳ್ಳಬೇಕು ಎಂಬುದನ್ನು ತತ್ವಪದಗಳು ತಿಳಿಸಿಕೊಡುತ್ತವೆ. ಅನುಭಾವಿಗಳು ಸಾಮಾನ್ಯವಾಗಿ ಲೌಕಿಕ ಸಂಸಾರದ ಮೋಹದ ಕುರಿತು ಮಾತನಾಡುವುದಿಲ್ಲ. ಪಾರಮಾರ್ಥಿಕತೆ ಕಡೆಗೆ ತುಡಿಯುವ ಅವರು ಸಿದ್ಧಿ ಪಡೆಯಲು, ಸಾಧನೆ ಮಾಡಲು ಪರಮಾತ್ಮನ ಧ್ಯಾನ, ಆತ್ಮಶುದ್ಧಿ, ಅಂತರಂಗ ಶುದ್ಧಿ ಕಡೆಗೆ ಗಮನ ಕೊಡುತ್ತಾರೆ. ಸಂಸಾರ, ಸಂಪತ್ತು, ಅರಿಷಡ್ವರ್ಗಗಳನ್ನು ಗೆಲ್ಲುವುದು, ಲೋಕದ ಅನ್ಯಾಯ, ಅನಾಚಾರಗಳನ್ನು ವಿರೋಧಿಸುವುದು, ಕುಲ-ಜಾತಿಯನ್ನು ಮೀರಿ ಬೆಳೆಯುವುದು ಅನುಭಾವಿಗಳ ಲಕ್ಷಣ. ಈ ಅಂಶಗಳು ಅವರ ಅನುಭಾವ ಪದ್ಯಗಳಲ್ಲಿ ಕಾಣುತ್ತದೆ. ತತ್ವಪದಕಾರರು ತಮ್ಮ ಅಭಿವ್ಯಕ್ತಿಯಲ್ಲಿ ಲೌಕಿಕದ ಮೋಹದಿಂದ ಬಿಡಿಸಿಕೊಂಡು ಆಧ್ಯಾತ್ಮದ ಕಡೆಗೆ ನಡೆಯುವಂತೆ ಪ್ರಚೋದಿಸುತ್ತಾರೆ. ಕೂಡಲೂರು ಬಸವಲಿಂಗಪ್ಪ “ಚೇಳು ಕಚ್ಚಿತವ್ವ ಯಾರಿಗೆ ಹೇಳಲವ್ವ” ಎಂಬುದನ್ನು ಗಮನಿಸಬೇಕು. ಇಲ್ಲಿ ‘ಚೇಳು’ ರೂಪಕವಾಗಿ ಬಳಸುವ ಮೂಲಕ ಪ್ರಾಪಂಚಿಕ ವಿಷಯಗಳ ಕಡೆಗೆ ಮನಸ್ಸನ್ನು ಹೋಗಲು ಬಿಡದೇ ಅಲೌಕಿಕ ಸುಖದ ಕಡೆಗೆ ವಾಲಿಸಿಕೊಳ್ಳುವುದು ಮುಖ್ಯ ಎಂಬುದನ್ನು ಸುಂದರವಾಗಿ, ಅರ್ಥಪೂರ್ಣವಾಗಿ ಹೇಳಿದ್ದಾರೆ. ಸಾಧಕನಾದವನು ತನ್ನ ನಡೆ-ನುಡಿಯನ್ನು ಶುದ್ಧಗೊಳಿಸಿಕೊಳ್ಳಬೇಕಾಗುತ್ತದೆ. ಅಲೌಕಿಕ ಶಕ್ತಿಯನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. ಇದೇ ತತ್ವಪದಗಳ ಮೂಲ ಆಶಯವೂ, ಗುರಿಯೂ ಅಗಿದೆ.

“ಗಡಿಗೆ ತೊಳೆದು ಅಡಗಿ ಮಾಡಮ್ಮ,
ತನುವೆಂಬ ಗಡಗಿ ತೊಳೆದು ಅಡಗಿ ಮಾಡಮ್ಮ,
ಅನುಭಾವದಡುಗೆಯ ಮಾಡಿ ಎಡಿಯ ಮಾಡಮ್ಮ,
ದೇವರಿಗೆಡಿಯ ಮಾಡಿ ಗಂಡನಿಗುಣಿಸಮ್ಮಾ…”
ಎಂದು ಕಡಕೋಳ ಮಡಿವಾಳಪ್ಪನವರು ಹಾಡಿದ್ದಾರೆ.

ಜಾತ್ಯಾತೀತ ನಿಲುವು :
ತತ್ವಪದ ಸಾಹಿತ್ಯದಲ್ಲಿ ಮುಖ್ಯವಾಗಿ ಕಂಡುಬುರುವ ಅಂಶವೆಂದರೆ ಜಾತಿಯನ್ನು ಮೀರುವುದು. ಕುಲ-ಜಾತಿ ಸಾಧಕನಿಗೆ ಎಂದೂ ಅಡ್ಡಿಪಡಿಸುವುದಿಲ್ಲ. ತತ್ವಪದ ಪರಂಪರೆಯಲ್ಲಿ ಜಾತಿಯನ್ನು ಮೀರುವ ನಿಜದ ಹಂಬಲವೇ ಕಾಣಿಸುತ್ತದೆ. ಗುರು-ಶಿಷ್ಯ, ತನ್ನ ಸುತ್ತಣ ಜನರ ಜಾತಿ-ಲಿಂಗ, ವರ್ಗ, ವರ್ಣ ಇತ್ಯಾದಿ ಸಂಕುಚಿತ ಸೀಮೆಗಳನ್ನು ದಾಟಿ ಸಾಧನೆಯೇ ಮುಖ್ಯ ಎಂದು ಭಾವಿಸಿ, ನಡೆದುಕೊಂಡ ಪರಂಪರೆ ಕಂಡುಬರುತ್ತದೆ.

“ತತ್ವಪದಕಾರರು ಜಾತಿ, ವೃತ್ತಿ, ಹಳ್ಳಿಯ ರೀತಿ-ನೀತಿ-ಸಂಸ್ಕೃತಿ, ಗ್ರಾಮ್ಯವೆನ್ನುವಂಥ ಸಂಗತಿಗಳು- ಭಾಷೆ ಇತ್ಯಾದಿಗಳನ್ನು ಕೀಳರಿಮೆಯಿಂದ ಕಡೆಗಣಿಸದೇ ಅವುಗಳಿಗೆ ಸಮಾನವಾದ ಸ್ಥಾನ-ಮಾನವನ್ನು ಕೊಟ್ಟಿದ್ದಾರೆ. ಜಾತಿ, ಮತ, ಅಂತಸ್ತು, ಲಿಂಗಭೇದ ಎಣಿಸದ ಪರಂಪರೆ, ಇವರು ಎಲ್ಲ ಧರ್ಮ, ದೈವಗಳನ್ನು ಸಮಾನವಾಗಿ ಕಂಡದ್ದು ವಿಶೇಷ. ವೀರಶೈವ, ಬ್ರಾಹ್ಮಣ, ಕಬ್ಬೇರ, ಕುರುಬ, ಹೊಲೆಯ, ಮುಸ್ಲಿಂ, ಅಕ್ಕಸಾಲಿ, ಪಾಂಚಾಳ, ಕಬ್ಬಲಿಗ, ಪತ್ತಾರ, ಚಲವಾದಿ, ಮಡಿವಾಳ, ನೇಕಾರ, ಅಂಬಿಗ -ಹೀಗೆ ಅನೇಕ ಜಾತಿಯವರು ಈ ಚಳವಳಿಗೆ ಸತ್ವ ತುಂಬಿದ್ದಾರೆ” ೨೩ ಎಂದು ಡಿ. ರಘುನಾಥರಾವ್ ಹೇಳಿರುವುದು ಸೂಕ್ತವಾಗಿದೆ. ಕೆಳವರ್ಗದ ಕಡಕೋಳ ಮಡಿವಾಳಪ್ಪನವರು ಬೇರೆ ಬೇರೆ ಜಾತಿಯ ಶಿಷ್ಯರಿಗೆ ಗುರುಬೋಧೆ ಮಾಡಿರುವುದು, ಗುರು ಗೋವಿಂದ ಭಟ್ಟರು ಶಿಶುನಾಳ ಶರೀಫರಿಗೆ ಗುರುದೀಕ್ಷೆ ನೀಡಿರುವುದು ಮುಂತಾದ ಪ್ರಸಂಗಗಳನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ. ಮೋಟ್ನಳ್ಳಿ ಹಸನಸಾಬ್, ಜಲಾಲಸಾಬ್. ನಿಜಲಿಂಗ ಭದ್ರೇಶ್, ಶರೀಫರು ಮುಂತಾದವರು ಜಾತಿಯನ್ನು ಕಟುವಾಗಿ ಟೀಕಿಸಿದ್ದಾರೆ.

“ಕುಲ ಕುಲ ಕುಲ ಕುಲ ಅಂತೀರಿ
ನಿಮದ್ಯಾವ ಕುಲ ನಮಗ ಹೇಳಿರಿ
ಎಲಬಿನ ಪಂಜರ ಮಾಡ್ಯಾನರಿ
ಚರ್ಮದ ಮುಚ್ಚಕಿ ಮಾಡ್ಯಾನರಿ”
ಇದಕ ಯಾವ ಕುಲ ಅನಬೇಕರಿ”

ಎಂದು ನಿಜಲಿಂಗ ಭದ್ರೇಶ ಹೇಳಿರುವುದು ಗಮನಿಸಬೇಕಾಗುತ್ತದೆ. ಶರೀರಕ್ಕೆ ಜಾತಿ ಇರಬಹುದು, ಶರೀರದೊಳಗಿನ ಆತ್ಮಕ್ಕೆ ಯಾವ ಕುಲ? ಈ ಹಿನ್ನೆಲೆಯಲ್ಲಿ ಸಾಧಕನಿಗೆ, ಸಾಧನೆಗೆ ಜಾತಿಯ ಹಂಗಿಲ್ಲ. ಆದ್ದರಿಂದ ತತ್ವಪದಗಳು ಯಾವುದೇ ಕುಲಶ್ರೇಷ್ಠತೆಯ ವ್ಯಸನದಿಂದ ಮುಕ್ತವಾದವು.

ಧರ್ಮಸಮನ್ವಯತೆ :
ತತ್ವಪದಗಳು ಧರ್ಮ ಸಮನ್ವಯತೆಯನ್ನು ಸಾರುತ್ತವೆ. ಹಿಂದೂ ಮುಸ್ಲಿಂ ಧರ್ಮಗಳ ನಡುವಿನ ಸಾಮರಸ್ಯಕ್ಕೆ ತತ್ವಪದಗಳು ಮುನ್ನುಡಿ ಹಾಡಿವೆ. ಇವುಗಳ ಜೊತೆಗೆ ಭಾಷಾಬಾಂಧವ್ಯವೂ ಏರ್ಪಟ್ಟಿದೆ. ತತ್ವಪದಕಾರರು ನಿರ್ದಿಷ್ಟ ಜಾತಿ, ಧರ್ಮಗಳಲ್ಲಿ ಜನಿಸಿದರೂ ಅವುಗಳನ್ನು ಮೀರಿ ಬೆಳೆದರು. “ಮುಸ್ಲಿಂ ಸಾಧಕರು ಹಿಂದೂ ಗುರುವಿನಿಂದ, ಹಿಂದೂ ಸಾಧಕರು ಮುಸ್ಲಿಂ ಗುರುಗಳಿಂದ ದೀಕ್ಷೆ ಪಡೆಯುವುದೂ ಸಾಮಾನ್ಯ. ಅವರು ಹಿಂದೂಗಳೂ ಅಲ್ಲ. ಮುಸ್ಲಿಂರೂ ಅಲ್ಲ; ಜಾತಿ ಧರ್ಮಗಳ ಬಂಧನಗಳಿAದ ಬಿಡುಗಡೆಯಾಗಿರುವ ಸಾಧಕರೆಂದು.” ಈ ಹಿನ್ನೆಲೆಯಲ್ಲಿ ಶಿಶುನಾಳ ಶರೀಫರು-ಗೋವಿಂದ ಭಟ್ಟರು, ಶೀಲವೇರಿ ಶಿವಪ್ಪ- ಅಲ್ಲಿ ಷಾ ಸಾಹೇಬ, ಕಡಕೋಳದ ಮಡಿವಾಳಪ್ಪ ಮುಂತಾದವರ ಪ್ರಸಂಗಗಳನ್ನು ಉದಾಹರಿಸಬಹುದಾಗಿದೆ.

ಚನ್ನೂರು ಜಲಾಲ್ ಸಾಹೇಬರು “ಸಬ್ ಕಹತೆ ಈಶ್ವರ ಅಲ್ಲಾ” ಎಂಬ ತತ್ವಪದದಲ್ಲಿ ಈಶ್ವರ ಮತ್ತು ಅಲ್ಲಾರನ್ನು ಒಂದೇ ಎಂದು ಸಮನ್ವಯಗೊಳಿಸಿದ್ದನ್ನು ಗಮನಿಸಬೇಕು. ಇದರಲ್ಲಿ ಮೊದಲಿಗೆ ಉರ್ದು ಭಾಷೆ ಅನಂತರ ಕನ್ನಡ ಭಾಷೆ ಬಳಕೆಯಾಗಿದೆ. ಹಿಂದೂ ಮುಸ್ಲಿಂರಿಗೂ ಶಾಸ್ತç, ಪುರಾಣಗಳಿಂದ ದೇವರು ದಕ್ಕುವುದಿಲ್ಲ. ಅನುಭಾವ ಸಿಗುವುದಿಲ್ಲ. ಅದನ್ನು ಮೀರಿ ಸಾಧನೆ ಮಾಡಿದಾಗ ಅದು ಸಾಧ್ಯವಾಗುತ್ತದೆ ಎಂಬುದನ್ನು ಮಾರ್ಮಿಕವಾಗಿ ತಿಳಿಸಿದ್ದಾನೆ ಕವಿ. ಸಾಮನ್ಯವಾಗಿ ಕನ್ನಡ, ಉರ್ದು, ಮರಾಠಿ, ಪಾರ್ಷಿ, ತಮಿಳು, ತೆಲುಗು, ತುಳು ಮಲೆಯಾಳಂ ಮುಂತಾದ ಭಾಷೆಗಳಲ್ಲೂ ತತ್ವಪದಗಳು ರಚನೆಯಾಗಿವೆ.

“ಕತ್ತಲ ರಾತ್ರಿಯೆಂಬ ಕಾರ್ತೀಕ ಮಾಡಿರಿ, ಫತ್ತೇ ಸಾಹೇಬನ ಮುಂದು ಕಾಂಬುದುಕ ಪಾತಕ ಸುಡುವಂಥ ಫಾತೇ ಕೊಡಿರಿ ಪ್ರಣಮ ಅಕ್ಷರ ಪಂಜ್ಯಾಕ” (ಶಾಂತರಸ-೫೦) ಎಂಬ ತತ್ವಪದವನ್ನು ಭಾಷಾ ಸಾಮರಸ್ಯ ಮತ್ತು ಧರ್ಮಸಮನ್ವಯತೆಯ ದೃಷ್ಟಿಯಿಂದ ಗಮನಿಸಬೇಕು. ಅಜ್ಞಾತ ತತ್ವಪದಕಾರನ ರಚನೆಯನ್ನು ನಿದರ್ಶನವಾಗಿ ನೋಡಬೇಕು; “ಮೇರಾ ಮೇರಾ ಕಹತಾ, ಯಾರಿಗೆ ತಿಳಿಯದ ಮಾತಾ ಅಂತರ ಬಾಹೇರ ವ್ಯಾಪಕ ಝಾಲಾ, ಯೋಗಿ ಮುನಿಜನ ಧ್ಯಾತ” (ಶಾಂತರಸ, ಪು-೨೩) ಇಲ್ಲಿ ಕನ್ನಡ ಉರ್ದು ಮರಾಠಿ ಭಾಷೆಗಳ ಕೂಡುವಿಕೆಯನ್ನು ಗಮನಿಸಬೇಕು.

ಕರ್ಮಠತೆಯ ವಿರೋಧ :
ಸಾಂಸ್ಥಿಕ ಧರ್ಮಗಳಲ್ಲಿನ ಜಡತೆಯನ್ನು ತತ್ವಪದಕಾರರು ವಿರೋಧಿಸಿದರು. ಅವರು ತಮ್ಮದೇಯಾದ ಯಾವ ಧರ್ಮ, ಪಂಥವನ್ನು ಹುಟ್ಟುಹಾಕಲಿಲ್ಲ. ಅದಕ್ಕೊಂದು ಸಂಘಟಿತ ರೂಪವನ್ನು ಕೊಡಲಿಲ್ಲ. ಅವರ ಕಾಲದ ಪೂರ್ವದಲ್ಲಿಯೇ ಸ್ಥಾಪಿಸಲ್ಪಟ್ಟ ಧರ್ಮಗಳಲ್ಲಿನ ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸುತ್ತ ಬಂದಿರುವುದನ್ನು ಕಾಣಬಹುದು. ಮತ-ಧರ್ಮ-ಪಂಥಗಳ ಆಚಾರ, ವಿಚಾರಗಳನ್ನು ತತ್ವಪದಕಾರರು ನಿರಾಕರಿಸಿದರು. ಅವರು ದೈವದ ಸಂಕೇತದ ಮೂಲಕ ಸಾಧನೆಗೆ ಮಹತ್ವ ನೀಡಿದರು. ರಾಮ, ರಹೀಮ, ಶಿವ, ವಿಷ್ಣು, ಶಕ್ತಿದೇವಿ ಯಾರೇ ಆದರೂ ಅವರು ಅನುಭಾವದ ನೆಲೆಗೆ ಒದಗಿ ಬರುತ್ತಾರೆ. ದೈವೀ ಸ್ವರೂಪಗಳೆಲ್ಲ ತತ್ವಪದಕಾರರ ದೃಷ್ಟಿಯಲ್ಲಿ ಬರೀ ಸಂಕೇತಗಳಾಗಿದ್ದಾರೆ. ಈ ಸಂಕೇತ, ರೂಪಕಗಳ ಮೂಲಕ ಅವರು ಸಿದ್ಧಿ ಪಡೆದುಕೊಳ್ಳುವ ಪ್ರಯತ್ನ ಮಾಡಿದರು. ಸಾಂಪ್ರದಾಯಿಕ ಧರ್ಮ, ಪಂಥಗಳಲ್ಲಿನ ನಿಷ್ಕ್ರಿಯ, ಕರ್ಮಠತೆಯನ್ನು ತತ್ವಪದಗಳು ವಿರೋಧಿಸುತ್ತವೆ.

ಶಾಸ್ತ್ರ ಪುರಾಣಗಳ ಪಠಣ, ಅದರಿಂದ ಉಂಟಾಗುವ ಪ್ರಯೋಜನ, ಮನೆ-ಮಠಗಳನ್ನು ತೊರೆದು, ಹೆಂಡತಿ ಮಕ್ಕಳನ್ನು ಬಿಟ್ಟು, ಗಡ್ಡ, ಜಟೆಗಳನ್ನು ಬೆಳೆಸಿಕೊಂಡು, ವಿಕಾರ, ವಿರೂಪರಾಗಿ, ಗುಡ್ಡ-ಗವ್ಹರಗಳಲ್ಲಿ ವಾಸಿಸುವ ನಿರರ್ಥಕತೆಯನ್ನು ವಿರೋಧಿಸುವ ತತ್ವಪದಗಳು ‘ನಿನ್ನ ನೀನರಿಯೆ” ಎಂಬ ತತ್ವಕ್ಕೆ ಪ್ರಾಮುಖ್ಯತೆಯನ್ನು ನೀಡಿವೆ. ತತ್ವಪದಕಾರರು ಅಸಂಘಟಿತವಾಗಿ, ಸಂಚಾರಿ ಪ್ರವೃತ್ತಿಯವರಾಗಿದ್ದು, ಪರಮತ ನಿಂದನೆ, ಸ್ವ-ಮತ ಪರವಾದ ನಿಲುವುಗಳನ್ನು ಪ್ರಕಟಿಸಲಿಲ್ಲ. ದೈವೀ ಸಂಕೇತಗಳ ಮೂಲಕ ತನ್ನ ಅನುಭವಗಳನ್ನು ಹಾಡಿಕೊಂಡು ಸುತ್ತಾಡಿದರು. ಹೀಗಾಗಿ ಅವರಿಗೆ ಜಾತಿ-ಮತಗಳ ಹಂಗು ದೂರವಾಯಿತು. ವಚನಕಾರರು, ದಾಸರು ಬೇರೆ ಮತಗಳ ಬಗ್ಗೆ ಅಸಹಿಷ್ಣುತೆ ಇದ್ದರೂ ತಮ್ಮದೆಯಾದ ಚೌಕಟ್ಟಿನಲ್ಲಿ ಬದುಕಿ ಬಾಳಿದರು. ಆದರೆ, ತತ್ವಪದಕಾರರು ಮಾತ್ರ ಯಾವ ರಾಜಾಶ್ರಯವಿಲ್ಲದೇ ಸರ್ವಸ್ವತಂತ್ರವಾಗಿ, ಕ್ರಿಯಾಶೀಲವಾಗಿ ಬಾಳಿದರು ಎಂಬುದನ್ನು ಮರೆಯುವಂತಿಲ್ಲ.

ಕಾಲದ ಕನ್ನಡಿಗಳು :
ತತ್ವಪದಕಾರರು ತಮ್ಮ ಕಾಲದ ಎಲ್ಲ ವಿದ್ಯಮಾನಗಳಿಗೆ ದನಿಯಾದರು. ತಮ್ಮ ಸುತ್ತ ನಡೆಯುತ್ತಿರುವ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ವಿದ್ಯಮಾನಗಳನ್ನು ಗಮನಿಸಿ ತತ್ವಪದ ರಚಿಸಿದರು. ತತ್ವಪದಗಳಲ್ಲಿ ವೃತ್ತಿ, ಪ್ರಾಣಿ-ಪಕ್ಷಿ, ಹಬ್ಬ-ಹರಿದಿನ, ಆಚರಣೆ-ನಂಬಿಕೆ, ಕ್ರೀಡೆಗಳು, ಸುತ್ತಲಿನ ಪ್ರಕೃತಿ ಮೊದಲಾದವುಗಳ ಪ್ರಸ್ತಾಪವಿದೆ. ವಸಾಹತುಶಾಹಿ ಅನಂತರ ಕಾಲದ ಎಲ್ಲ ವಿದ್ಯಮಾನಗಳನ್ನು ಅಭಿವ್ಯಕ್ತಿಸಿದ ತತ್ವಪದಗಳಲ್ಲಿ ಆಯಾಯ ಕಾಲದಲ್ಲಿನ ಆಡಳಿತ, ಸಂಸ್ಥೆ, ಹುದ್ದೆ ಹೆಸರುಗಳು, ಕಾಲರಾ, ಪ್ಲೇಗು, ಕೋರ್ಟು, ಕಚೇರಿ, ಸರ್ಕಾರಿ, ಸಾಲಿ, ಗಿರಣಿ, ಕಲೆಕ್ಟರ್, ಸೂಜಿ, ವಿಲಾಯಿತಿ, ಕಾರ್ಖಾನೆ, ನೋಟೀಸು ಮುಂತಾದ ಪದಗಳು ರೂಪಕಗಳಾಗಿಸಿದರು.

೧೭ ಮತ್ತು ೧೮ ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತ ನೆಲೆಯೂರಿತು. ನಿಜಾಮಶಾಹಿ ಆಡಳಿತದ ಪ್ರಭಾವದಿಂದ ಉರ್ದು, ಪಾರ್ಷಿ ಭಾಷೆಗಳು ಜನಜೀವನದ ಮೇಲೆ ಪ್ರಭಾವ ಬೀರಿದವು. ಆಧುನಿಕತೆ ನಿಧಾನವಾಗಿ ಕಾಲಿರಿಸಲು ಪ್ರಾರಂಭವಾಗಿತ್ತು. ಹೊಸ ಶಿಕ್ಷಣದ ಪ್ರಭಾವವೂ ಇತ್ತು. ಇದೆಲ್ಲವೂ ಜನಸಾಮಾನ್ಯರೂ ಈ ಬದಲಾವಣೆಗಳನ್ನು ಕುತೂಹಲದಿಂದ, ಆಶ್ರ‍್ಯದಿಂದ ನೋಡತೊಡಗಿದರು. ರಾಷ್ರೀಯತೆ, ನಿರುದ್ಯೋಗ ಸಮಸ್ಯೆ, ಬಡತನ, ಭ್ರಷ್ಟಾಚಾರ, ಅನಾರೋಗ್ಯ ಮುಂತಾದ ಸಾಮಾಜಿಕ ಸಮಸ್ಯೆಗಳು ತತ್ವಪದಗಳಲ್ಲಿ ಢಾಳವಾಗಿ ಹಣಿಕಿಕ್ಕಿವೆ. ಸಾಂಪ್ರದಾಯಿಕ ಜೀವನ ಪದ್ಧತಿಯಲ್ಲಿ ಬದಲಾವಣೆಗಳು ಕಾಣಿಸಿದವು. ಊಟದ ಬದಲಿಗೆ ಚಹಾ-ಕಾಫಿ, ತಿಂಡಿ, ಹೊಟೇಲ್, ಸಿಗರೇಟ್ ಮುಂತಾದ ವಸ್ತುಗಳ ಬಳಕೆ ಕಂಡುಬಂದಿತು. ಈ ಎಲ್ಲ ಸಂಗತಿಗಳು ತತ್ವಪದಗಳಲ್ಲಿ ರೂಪಕ, ಪ್ರತಿಮೆಗಳಾಗಿ ಬಂದಿವೆ. ಸಮಾಜದ ಮೌಲ್ಯಪದ್ಧತಿ ಬದಲಾಯಿತು. ಸಮಾಜದ ಶಿಶುಗಳಾಗಿ, ದೇಸೀ ಸಂಸ್ಕೃತಿ ಪೋಷಕರಾಗಿದ್ದ ತತ್ವಪದಕಾರರು ವಸಾಹತುಶಾಹಿಗೆ ತಮ್ಮದೇಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ವಸಾಹತುಶಾಹಿ ಕಾಲದ ನಂತರದ ಶಿಕ್ಷಣ ಪದ್ಧತಿಯೂ ಸಹ ತತ್ವಪದಕಾರರ ಮೇಲೆ ತೀವ್ರವಾಗಿ ಪರಿಣಾಮ ಮಾಡಿತು. ಹೀಗಾಗಿ ಆ ಕಾಲದ ಒತ್ತಡಗಳು, ಹೊಸ ಶಿಕ್ಷಣವು ತತ್ವಪದಕಾರರಲ್ಲಿ ಅಂದಿನ ಕಾಲದ ವಿದ್ಯಮಾನಗಳಿಗೆ ಸಂವೇದಿಸುವ ಸೂಕ್ಷö್ಮತೆಯನ್ನು ತಂದುಕೊಟ್ಟಿತು. ಇಂದಿಗೂ ಸಮಕಾಲೀನ ಸಂಗತಿಗಳೊAದಿಗೆ ತಳಕು ಹಾಕಿಕೊಳ್ಳುವುದನ್ನು ಗಮನಿಸಿದರೆ ತತ್ವಪದಗಳ ಪ್ರಸ್ತುತತೆ ಅರ್ಥವಾಗುತ್ತದೆ. ಹೀಗಾಗಿ ತತ್ವಪದಗಳು ಕಾಲದ ಕನ್ನಡಿಗಳೆಂದರೆ ತಪ್ಪಾಗಲಾರದು.

ಗ್ರಾಮ್ಯ ಭಾಷೆ :
ಸಾಹಿತ್ಯ ಸೃಜನೆಯ ಮುಖ್ಯ ಅಭಿವ್ಯಕ್ತಿ ಮಾಧ್ಯಮ ಭಾಷೆ. ಭಾಷೆಯಿಲ್ಲದೇ ಸಾಹಿತ್ಯಸೃಷ್ಟಿ ಸಾಧ್ಯವಿಲ್ಲ. ತತ್ವಪದಕಾರರು ಮೂಲತಃ ಶ್ರಮಸಂಸ್ಕೃತಿಯಿಂದ ಬಂದಿದ್ದು, ಗ್ರಾಮೀಣ ಪ್ರದೇಶದಲ್ಲಿಯೇ ಹುಟ್ಟಿ ಬೆಳೆದರು. ಅವರು ಹೇಳಹೊರಟಿದ್ದು ತಮ್ಮದೆಯಾದ ಪ್ರಾದೇಶಿಕ ಭಾಷೆಯಲ್ಲಿ ಎಂಬುದು ಸ್ಪಷ್ಟವಾಗಿದೆ. ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಕಂಡುಬAದ ತತ್ವಪದಕಾರರು ತಮ್ಮ ಪ್ರಾದೇಶಿಕ ಭಾಷೆಯ ಸೊಗಡನ್ನೇ ಬಳಸಿ, ಬರೆದಿದ್ದಾರೆ. ಕಡಕೋಳ ಮಡಿವಾಳಪ್ಪನವರು ಸಮಾಜದಲ್ಲಿ ಮಾನ ಇಲ್ಲದೇ ಬದುಕುವ ಜನರು ಮಾಡುವ ಕೆಟ್ಟ ಕೆಲಸಗಳನ್ನು ನಿಷ್ಠುರವಾಗಿಯೇ ಟೀಕಿಸುತ್ತಾರೆ. “ಮಾನಗೇಡಿ ಮಂದಿ ಹುಟ್ಟಿ ಮರ್ತ್ಯ ಕೆಡಿಸ್ಯಾರೊ” ಎಂಬ ತತ್ವಪದದಲ್ಲಿ ಗ್ರಾಮ್ಯಭಾಷೆಯ ಸ್ವರೂಪವು ವ್ಯಕ್ತವಾಗಿದೆ. ತತ್ವಪದಕಾರರು ತಮ್ಮ ಅಭಿವ್ಯಕ್ತಿಗೆ ಆಡುನುಡಿಯನ್ನೇ ಸಮರ್ಥವಾಗಿ ಬಳಸಿಕೊಂಡರು. ಕೆಲವು ತತ್ವಪದಕಾರರು ಶಿಷ್ಟಭಾಷೆಯನ್ನೂ ಬಳಸಿದ್ದಾರೆ. ಆದರೆ ಅವರ ಪ್ರಮಾಣ ಕಡಿಮೆ. ಸಹಜ ಮಾತಿನ ಲಯ ತತ್ವಪದಗಳಲ್ಲಿ ಬೆರೆತುಕೊಂಡಿದೆ.

“ಛಂದಸ್ಸು ನಿಘಂಟು ಒಂದೂ ನಾನರಿಯೆ
ಚಂದ್ರಶೇಖರನು ಕರದಲ್ಲಿ ನಿಂತು ಹೇಳಿದಂತೆ ನುಡಿವೆನು ನಿಜ ಶರಣ..” ಎಂದು ರಾಮಾಪುರದ ಬಕ್ಕಪ್ಪಯ್ಯ ತನ್ನ ತತ್ವಪದ ರಚನೆಯ ಕುರಿತು ತಿಳಿಸುತ್ತಾನೆ.

“ಹತ್ತಿ ಬಿತ್ತಿ ಬತ್ತಿ ಕಾಣೆ
ಜೋಳ ಬಿತ್ತಿ ಬೋನ ಕಾಣೆ
ಮನೀ ತುಂಬ ಮಕ್ಕಳ್ಹಡದು
ಗಂಡನ ಸುಖ ಕಾಣೆ”

ಎಂಬ ತತ್ವಪದದಲ್ಲಿ ಗ್ರಾಮೀಣ ಭಾಷೆಯ ಬಳಕೆಯನ್ನು ಗಮನಿಸಬೇಕಾಗುತ್ತದೆ. ಹೀಗೇ ಗ್ರಾಮೀಣ ಭಾಷೆಯ ಸೊಗಡು, ಲಯ, ಸಹಜತೆ ತತ್ವಪದಗಳಲ್ಲಿ ಕಾಣುತ್ತೇವೆ. ಇವು ಮೂಲತಃ ಹಾಡುಗಬ್ಬ. ಇದು ಮೌಖಿಕ ಪರಂಪರೆಯ ವಿಸ್ತರಣೆಯ ಸಾಹಿತ್ಯ. ತತ್ವಪದಗಳ ರಚನೆಯಲ್ಲಿ ಮೌಖಿಕತೆ ಸಹಜವಾಗಿಯೇ ಒಡಮೂಡಿದೆ. ತತ್ವಪದಗಳಲ್ಲಿ ಅಲ್ಲಮಪ್ರಭುವಿನ ಪ್ರಭಾವವಿದೆ. ಅವನ ವಿಚಾರವಾದ, ನಿರ್ಭಿಡೆ, ಅಸಾಂಪ್ರದಾಯಿಕ ಚಿಂತನೆಗಳು ತತ್ವಪದಕಾರರನ್ನು ಪ್ರಭಾವಿಸಿರುವುದು ಗಮನಾರ್ಹ. ಸಂಸ್ಕೃತ, ಪಂಡಿತ ವರ್ಗದಿಂದ ಭಿನ್ನರಾಗಿದ್ದ ತತ್ವಪದಕಾರರು ಆ ಭಾಷೆಗಳಿಗೆ ಮಾರು ಹೋಗದೇ ತಮ್ಮದೇ ಆಡುನುಡಿಯನ್ನು ತತ್ವಪದಗಳ ರಚನೆಗೆ ಸಮರ್ಥವಾಗಿ ದುಡಿಸಿಕೊಂಡಿರುವುದನ್ನು ಕಾಣಬಹುದು.

ಆಕರ ಗ್ರಂಥಗಳು :
೧. ಸರ್ವಜ್ಞನ ವಚನಗಳು : ಒಂದು ಜಾನಪದೀಯ ಅಧ್ಯಯನ -ಲೇ: ಡಾ. ರಾಜಶೇಖರ ಜಮದಂಡಿ- ೨೦೦೪
೨. ನಕ್ಷೆ-ನಕ್ಷತ್ರ ; ಲೇ; ಡಾ.ಬಸವರಾಜ ಕಲ್ಗುಡಿ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ- ೨೦೧೦
೩. ತತ್ವಪದಗಳು : ಸಂ: ರಂಗಾರೆಡ್ಡಿ ಕೋಡಿರಾಂಪುರ - ಕನ್ನಡ ಮತ್ತು ಸಂಸ್ಕೃತಿ ಇಲಾಖೆ-೨೦೦೬
೪. ಶರಣ ಸಾಹಿತ್ಯ ಚಿಂತನೆ : ಲೇ: ಜಿ ಅಬ್ದುಲ್‌ಬಸೀರ್ ೨೦೦೪
೫. ತತ್ವಪದಕಾರರು ಮತ್ತು ವಸಾಹತುಶಾಹಿ ವ್ಯವಸ್ಥೆ : ಲೇ: ಡಿ. ರಘುನಾಥರಾವ್-೨೦೦೮
೬. ತತ್ವಪದ ಸಾಹಿತ್ಯ ಅಧ್ಯಯನ : ಲೇ: ಡಾ. ಅಮರೇಶ ನುಗಡೋಣಿ, ಕನ್ನಡ ವಿಶ್ವವಿದ್ಯಾಲಯ- ೨೦೧೪
೭. ಅಂತರ್ಜಾಲ ಲೇಖನ : ಲೇ : ಡಾ. ಪ್ರಕಾಶ ಖಾಡೆ- ೨೦೧೩
೮. ಅಂತರ್ಜಾಲ ಲೇಖನ : ಲೇ : ಡಾ. ರಾಜಶೇಖರ ಮಠಪತಿ

Related Articles

ಇತ್ತೀಚಿನ ಸುದ್ದಿಗಳು