ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (KPSC) 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಂತ ಹೊಸಮನಿಗೆ (Shanta Hosamani) ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಅರ್ಜಿದಾರರು ಕೋರಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯ ಸದ್ಯ ನಿರಾಕರಿಸಿದೆ. ಶಾಂತ ಹೊಸಮನಿ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು.
ಕೋರ್ಟ್ನಲ್ಲಿ ನಡೆದ ಸುದೀರ್ಘ ವಾದ-ಪ್ರತಿವಾದ
ಅಭ್ಯರ್ಥಿಗಳಿಗೆ ಅಂಕ ನೀಡಿರುವ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.ಪ್ರಕರಣದಲ್ಲಿ ಶಾಂತ ಅವರು ಎರಡನೇ ಆರೋಪಿ ಎಂದು ಸರ್ಕಾರದ ಪರ ವಕೀಲ ಬಿ.ಎನ್.ಜಗದೀಶ್ ವಾದಿಸಿದರು.
ಕೆಪಿಎಸ್ಸಿ ಪರ ವಕೀಲೆ ಎಂ.ಆರ್.ಸಿಂಚನಾ ವಾದ ಮಂಡಿಸಿದರು. ಸಹಾಯಕ ಕಾರ್ಯದರ್ಶಿ ನೀಡಿದ ವರದಿ ಸಲ್ಲಿಸಿದರು. ವರದಿಯನ್ನು ತನಿಖಾಧಿಕಾರಿಗೆ ನೀಡಲಾಗಿದೆಯೇ ಎಂದು ಹೈಕೋರ್ಟ್ ಪ್ರಶ್ನಿಸಿತು. ಇಲ್ಲ ಎಂದು KPSC ಪರ ವಕೀಲೆ ಉತ್ತರ ನೀಡಿದರು.
ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಪ್ರಕ್ರಿಯೆ ಕುರಿತು ವಿಚಾರಣೆ ನಡೆಯಿತು. 2025ರ ಜುಲೈನಲ್ಲಿ ನೇಮಕಾತಿಗೆ ತಡೆ ನೀಡಲಾಗಿತ್ತು ಎಂದು ಶಾಂತ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ತಿಳಿಸಿದರು. ಆಯ್ಕೆ ಪ್ರಕ್ರಿಯೆ ಮುಂದುವರಿಸಬಹುದು. ಆದರೆ, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಬಾರದು ಎಂದು ಆದೇಶವಿದೆ ಎಂದು ವಾದಿಸಿದರು. ಸಂದರ್ಶನಕ್ಕೆ ಒಟ್ಟು 9 ಅಭ್ಯರ್ಥಿಗಳು ಹಾಜರಾಗಿದ್ದರು. ಬೆಳಗ್ಗೆ 5 ಮಂದಿ, ಸಂಜೆ 4 ಮಂದಿ ಅಭ್ಯರ್ಥಿಗಳ ಸಂದರ್ಶನ ನಡೆದಿತ್ತು. KPSCಯ ಮೂವರು ಸದಸ್ಯರು ಸಂದರ್ಶನ ನಡೆಸಿದ್ದರು. ಸಂದರ್ಶನಕ್ಕೆ ಹಾಜರಾದ ಎಲ್ಲ 9 ಅಭ್ಯರ್ಥಿಗಳ ಅಂಕಗಳನ್ನು ಪರಿಶೀಲಿಸುವಂತೆ ಸರ್ಕಾರದ ಪರ ವಕೀಲರು ಮನವಿ ಮಾಡಿದರು.
ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ!
2026ರ ಮೇ 8 ರಂದು ಸಂದರ್ಶನದಲ್ಲಿ ಶಾಂತ ಹೊಸಮನಿಗೆ ನೀಡಿದ ಅಂಕಗಳ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಲಾಯಿತು. ಎಲ್ಲಾ 9 ಅಭ್ಯರ್ಥಿಗಳಿಗೆ ನೀಡಿದ ಅಂಕಗಳ ಪಟ್ಟಿಯನ್ನು ಸಲ್ಲಿಸುವಂತೆ KPSC ನಿರ್ದೇಶಕರಿಗೆ ಪೀಠ ಸೂಚನೆ ನೀಡಿತು. ಯಾವುದೇ ಮಧ್ಯಂತರ ಆದೇಶ ನೀಡಲು ಹೈಕೋರ್ಟ್ ನಿರಾಕರಿಸಿತು. ಆರೋಪ ಬೇರೆ ಇರಬಹುದು. ಈ ಮಹಿಳೆ ಎಲ್ಲದಕ್ಕೂ ಸಂಬಂಧಿಸಿದ್ದಾರೆ ಎಂದ ಹೈಕೋರ್ಟ್, ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿತು.
