ಜೀವಂತ ವ್ಯಕ್ತಿಗೆ ನಕಲಿ ಮರಣ ಪ್ರಮಾಣಪತ್ರ ಆರೋಪ: ಶಾಸಕ ಯತ್ನಾಳ್ ವಿರುದ್ಧ FIR

ವಿಜಯಪುರ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ ಜೀವಂತ ವ್ಯಕ್ತಿಯೊಬ್ಬರನ್ನು ಮೃತಪಟ್ಟಿದ್ದಾರೆಂದು ತೋರಿಸುವ ನಕಲಿ ಮರಣ ಪ್ರಮಾಣಪತ್ರವನ್ನು ಬಳಸಿ, ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಯತ್ನಿಸಿದ ಆರೋಪದಡಿ ವಿಜಯಪುರ ನಗರ ಶಾಸಕ ಬಸನಗೌಡ ರಾಮನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 1,054 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಯತ್ನಾಳ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು ಎನ್ನಲಾಗಿದ್ದು, ಈ ಪಟ್ಟಿಯಲ್ಲಿದ್ದ ಕೆಲವರನ್ನು ಮೃತಪಟ್ಟಿದ್ದಾರೆಂದು ತೋರಿಸುವ ಮರಣ ಪ್ರಮಾಣಪತ್ರಗಳನ್ನು ಲಗತ್ತಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಜಾಗೃತ ಕರ್ನಾಟಕ’ ಸಂಘಟನೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಜೀವಂತವಾಗಿರುವವರನ್ನೇ ಮೃತರೆಂದು ತೋರಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿತ್ತು. ವಿಜಯಪುರದ ಮಲನ್‌ಬಿ ಡಿ. ಜಾಮದಾರ್, ಮಹಬೂಬಿ ಶೇಖ್ ಮತ್ತು ರಜಿಯಾ ಶೇಖ್ ಸೇರಿದಂತೆ ಮಹಿಳೆಯರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ನಡೆದಿರುವ ಪ್ರಯತ್ನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಸಿಐಡಿ ತನಿಖೆಗೆ ಆಗ್ರಹ
ಜೀವಂತವಾಗಿರುವವರನ್ನು ಮೃತಪಟ್ಟಿದ್ದಾರೆಂದು ತೋರಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಪ್ರಕರಣದ ಹಿಂದೆ ಯಾರ ಪಾತ್ರವಿದೆ ಎಂಬುದನ್ನು ತನಿಖೆ ಮೂಲಕ ಪತ್ತೆಹಚ್ಚಬೇಕು ಎಂದು ‘ಜಾಗೃತ ಕರ್ನಾಟಕ’ ಆಗ್ರಹಿಸಿತ್ತು. ಪ್ರಕರಣವನ್ನು ಸಿಐಡಿಗೆ ವಹಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಸಂಘಟನೆ ಒತ್ತಾಯಿಸಿತ್ತು.

ಇದಾದ ಬೆನ್ನಲ್ಲೇ ವಿಜಯಪುರದ ಜಮಖಂಡಿ ರಸ್ತೆಯ ಬಾಗವಾನ ಕಾಲೋನಿ ನಿವಾಸಿ ಹಾಗೂ ತರಕಾರಿ ವ್ಯಾಪಾರಿಯೊಬ್ಬರು ಜಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರುದಾರರು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ.

ತಾನು ಜೀವಂತವಾಗಿದ್ದರೂ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಅಧಿಕೃತ ಲೆಟರ್‌ಪ್ಯಾಡ್‌ನಲ್ಲಿ ನಕಲಿ ಮರಣ ಪ್ರಮಾಣಪತ್ರವನ್ನು ಲಗತ್ತಿಸಿ, ತನ್ನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

BNS ಅಡಿ ಪ್ರಕರಣ ದಾಖಲು
ಸೆಪ್ಟೆಂಬರ್ 3ರಂದು ಈ ಕೃತ್ಯ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಅಕ್ಟೋಬರ್ 8ರಂದು ಜಲನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ದೂರಿನ ಆಧಾರದ ಮೇಲೆ ಜಲನಗರ ಠಾಣೆ ಪೊಲೀಸರು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು A1 ಆರೋಪಿಯಾಗಿ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 318(4), 336(3) ಮತ್ತು 340(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೊಕದ್ದಮೆ ಸಂಖ್ಯೆ 137/2026 ಎಂದು ನಮೂದಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಎಮ್‌ಎಫ್‌ಸಿ ನ್ಯಾಯಾಲಯಕ್ಕೂ ಪೊಲೀಸರು ವರದಿ ಸಲ್ಲಿಸಿದ್ದಾರೆ.

ಈ ನಡುವೆ, 1,054 ಮತದಾರರ ಹೆಸರುಗಳನ್ನು ತೆಗೆದುಹಾಕುವಂತೆ ಸಲ್ಲಿಸಲಾಗಿದ್ದ ಮನವಿಯಲ್ಲಿ ಬಳಸಲಾದ ದಾಖಲೆಗಳು, ಮರಣ ಪ್ರಮಾಣಪತ್ರಗಳ ಸತ್ಯಾಸತ್ಯತೆ ಹಾಗೂ ಅವುಗಳನ್ನು ಸಿದ್ಧಪಡಿಸಿದವರು ಯಾರು ಎಂಬುದು ತನಿಖೆಯ ಪ್ರಮುಖ ಅಂಶಗಳಾಗಿವೆ.

Related Articles

ಇತ್ತೀಚಿನ ಸುದ್ದಿಗಳು