ಸಿಎಂ ಆದ ಬೆನ್ನಲ್ಲೇ ನನ್ನ ವಿರುದ್ಧ ಸ್ಟಿಂಗ್ ಆಪರೇಷನ್ ಷಡ್ಯಂತ್ರ ನಡೆದಿತ್ತು: ಡಿ.ಕೆ. ಶಿವಕುಮಾರ್ ಸ್ಪೋಟಕ ಆರೋಪ!

ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ತಕ್ಷಣವೇ ತಮ್ಮನ್ನು ಗುರಿಯಾಗಿಸಿಕೊಂಡು ‘ಸ್ಟಿಂಗ್ ಆಪರೇಷನ್’ (Sting Operation) ನಡೆಸಲು ವ್ಯವಸ್ಥಿತ ಸಂಚು ನಡೆದಿತ್ತು ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮನ್ನು ಬಲೆಗೆ ಬೀಳಿಸಲು ಯತ್ನಿಸಿದವರ ಸಂಪೂರ್ಣ ವಿವರಗಳು, ಫೋಟೋಗಳು ಹಾಗೂ ಅಗತ್ಯ ದಾಖಲೆಗಳು ತಮ್ಮ ಬಳಿ ಭದ್ರವಾಗಿವೆ ಎಂದು ಅವರು ಗುಡುಗಿದ್ದಾರೆ.

ದೆಹಲಿಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಾನು ಸಿಎಂ ಆದ ನಂತರ ಕೆಲ ವ್ಯಕ್ತಿಗಳು ನನ್ನನ್ನು ಭೇಟಿಯಾಗಲು ಬಂದಿದ್ದರು. ಅವರು ಯಾರು, ಯಾರ ಪರವಾಗಿ ಬಂದಿದ್ದರು, ಎಲ್ಲಿಂದ ಬಂದಿದ್ದರು ಎಂಬ ಪ್ರತಿಯೊಂದು ಮಾಹಿತಿಯೂ ನನಗಿದೆ. ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಲು ಸಂಚು ರೂಪಿಸಿದ್ದರು. ಆದರೆ ನಾನು ಎಚ್ಚೆತ್ತುಕೊಂಡಿದ್ದೆ. ನನ್ನ ಬಳಿ ಅವರ ಫೋಟೋಗಳು ಹಾಗೂ ಭೇಟಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳಿವೆ. ಈ ಕುರಿತು ಪೊಲೀಸರಿಗೂ ಅಗತ್ಯ ಮಾಹಿತಿ ನೀಡಿದ್ದೇನೆ” ಎಂದು ಬಹಿರಂಗಪಡಿಸಿದರು.

ಆದರೆ ಈ ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಸೂಕ್ತ ಸಮಯ ಬಂದಾಗ ಬಹಿರಂಗಪಡಿಸುವುದಾಗಿ ಹೇಳಿದ ಡಿ.ಕೆ. ಶಿವಕುಮಾರ್, “ಅವರು ನನ್ನ ಬಳಿ ಏನು ಮಾತನಾಡಲು ಬಂದಿದ್ದರು? ಹೇಗೆ ಪ್ರವೇಶ ಪಡೆದರು? ಯಾರ ಮೂಲಕ ಸಂಪರ್ಕಿಸಿದರು ಎಂಬುದು ಸಂಪೂರ್ಣವಾಗಿ ತಿಳಿದಿದೆ. ಈ ಸಂಚಿನ ಹಿಂದೆ ಯಾರಿದ್ದಾರೆಂಬುದೂ ನನಗೆ ಗೊತ್ತಿದೆ. ಕೇವಲ ರಾಜಕಾರಣಿಗಳಷ್ಟೇ ಅಲ್ಲದೆ ಸರ್ಕಾರದ ಉನ್ನತ ಅಧಿಕಾರಿಗಳನ್ನೂ ಇಂತಹ ಹನಿಟ್ರ್ಯಾಪ್ ಅಥವಾ ಸ್ಟಿಂಗ್ ಜಾಲಕ್ಕೆ ಸಿಲುಕಿಸುವ ಸಾಧ್ಯತೆ ಇರುವುದರಿಂದ ಎಲ್ಲ ಅಧಿಕಾರಿಗಳೂ ಸದಾ ಜಾಗರೂಕರಾಗಿರಬೇಕು” ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ, ತಮ್ಮ ಸುತ್ತಮುತ್ತ ಮೂರು ಹಂತಗಳಲ್ಲಿ ಜನರನ್ನು ಕಣ್ಗಾವಲಿಗಾಗಿ ಬಿಡಲಾಗಿದ್ದು, ಕೆಲವರನ್ನು ಇದಕ್ಕಾಗಿಯೇ ವಿಶೇಷವಾಗಿ ನೇಮಿಸಲಾಗಿದೆ ಎಂಬ ಮಾಹಿತಿಯಿದೆ ಎಂದ ಅವರು, “ನನ್ನ ಮೇಲೆ ಮಾತ್ರವಲ್ಲದೆ ಸರ್ಕಾರದ ಇನ್ನೂ ಹಲವರ ವಿರುದ್ಧ ಇಂತಹ ರಹಸ್ಯ ಸ್ಟಿಂಗ್ ಆಪರೇಷನ್‌ಗಳು ನಡೆಯುತ್ತಿವೆ. ಈ ಜಾಲದ ಹಿಂದೆ ಯಾರಿದ್ದಾರೆ ಮತ್ತು ಇಡೀ ಕಾರ್ಯಾಚರಣೆಗೆ ಹಣಕಾಸಿನ ನೆರವು (Funding) ಒದಗಿಸುತ್ತಿರುವವರು ಯಾರು ಎಂಬ ಪಕ್ಕಾ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳು ನನ್ನ ಬಳಿ ಇವೆ” ಎಂದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದರು.

Related Articles

ಇತ್ತೀಚಿನ ಸುದ್ದಿಗಳು