ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಐಆರ್ ವಿರೋಧಿ ಕಿಚ್ಚು: ಧ್ರುವ್ ರಾಠಿ, ಪ್ರಕಾಶ್ ರಾಜ್ ಭಾಗಿ; ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಚುನಾವಣಾ ಆಯೋಗದ ವಿವಾದಾತ್ಮಕ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಪಡಿಸಲು ಮತ್ತು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಅಭಿಜೀತ್ ದಿಪ್ಕೆ ನೇತೃತ್ವದ ಕಾಕ್‌ರೋಚ್ ಜನತಾ ಪಾರ್ಟಿ (CJP), ನಾಗರಿಕ ಸಂಘಟನೆಗಳು ಹಾಗೂ ವಿದ್ಯಾರ್ಥಿ ಒಕ್ಕೂಟಗಳು ಜಂಟಿಯಾಗಿ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಹಾಗೂ ನಟ-ಕಾರ್ಯಕರ್ತ ಪ್ರಕಾಶ್ ರಾಜ್ ಭಾಗವಹಿಸಿ ಆಕ್ರೋಶ ಹೊರಹಾಕಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಧ್ರುವ್ ರಾಠಿ, “ಚುನಾವಣಾ ಆಯೋಗದಲ್ಲಿ ಶೂನ್ಯ ಪಾರದರ್ಶಕತೆ ಮತ್ತು ಶೂನ್ಯ ಹೊಣೆಗಾರಿಕೆಯಿದೆ. ನಾನಿಲ್ಲಿಗೆ ಯಾವುದೇ ಆಡಳಿತ ಅಥವಾ ಸರ್ಕಾರವನ್ನು ಬದಲಾಯಿಸಲು (Regime Change) ಬಂದಿಲ್ಲ. ಬದಲಾಗಿ ಜನರ ಸಾಂವಿಧಾನಿಕ ಮತದಾನದ ಹಕ್ಕನ್ನು ಉಳಿಸಲು ಬಂದಿದ್ದೇನೆ” ಎಂದು ಹೇಳಿದರು.

ಬಳಿಕ ಮಾತನಾಡಿದ ನಟ ಪ್ರಕಾಶ್ ರಾಜ್, “ಇದು ಕೇವಲ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ವಿಷಯವಲ್ಲ, ಪ್ರಜೆಗಳ ಘನತೆ ಮತ್ತು ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ. ಕೇವಲ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆ ಪಡೆದರೆ ಸಾಲದು; ಅವರು ಹೋದರೆ ಮತ್ತೊಬ್ಬರು ಬರುತ್ತಾರೆ. ನಮ್ಮ ಮೂಲ ಉದ್ದೇಶವೇ ಈ ಅನ್ಯಾಯದ ಎಸ್‌ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸುವುದು” ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರು, ಆದಿವಾಸಿಗಳು ಮತ್ತು ಮುಸ್ಲಿಂ ಸಮುದಾಯಗಳ ಮತಗಳನ್ನು ವ್ಯವಸ್ಥಿತವಾಗಿ ಡಿಲೀಟ್ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇದೇ ವೇಳೆ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ‘ಪೀಪಲ್ಸ್ ಟ್ರಿಬ್ಯೂನಲ್’ (ಜನತಾ ನ್ಯಾಯಾಲಯ) ವೇದಿಕೆಯಲ್ಲಿ ರಾಜ್ಯದ ವಿವಿಧ ಭಾಗಗಳ ಮತದಾರರು ತಮ್ಮ ಗೋಳು ತೋಡಿಕೊಂಡರು. ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಮುಜೀಬುರ್ ರೆಹಮಾನ್ ಎಂಬುವವರು, “ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದೆ; ನನ್ನ ಹೆಸರನ್ನು ತೆಗೆದುಹಾಕಲು ಫಾರ್ಮ್-7 ಅರ್ಜಿಯನ್ನು ಯಾರು ಸಲ್ಲಿಸಿದ್ದಾರೆಂಬುದೇ ನನಗೆ ತಿಳಿದಿಲ್ಲ, ನಮ್ಮ ಮತದಾನದ ಹಕ್ಕನ್ನೇ ದೋಚಲಾಗಿದೆ” ಎಂದು ಆಕ್ರೋಶ ಹೊರಹಾಕಿದರು.

ಭಾಲ್ಕಿ, ಬಬಲೇಶ್ವರ ಸೇರಿದಂತೆ ಹಲವು ಭಾಗಗಳಿಂದ ಬಂದಿದ್ದ ಜನರು, ತಾವು ಅದೇ ಮನೆಯಲ್ಲೇ ವಾಸವಿದ್ದರೂ ತಮ್ಮನ್ನು ‘ಸ್ಥಳಾಂತರಗೊಂಡವರು’ (Shifted) ಅಥವಾ ‘ಗೈರುಹಾಜರಾದವರು’ (Absent) ಎಂದು ನಮೂದಿಸಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು “Error 404: Name Not Found” (ದೋಷ 404: ಹೆಸರು ಪತ್ತೆಯಾಗಿಲ್ಲ) ಮತ್ತು “ನಮ್ಮನ್ನು ಅಳಿಸಬೇಡಿ, ನಮ್ಮ ದನಿಯನ್ನು ಆಲಿಸಿ” ಎಂಬ ಫಲಕಗಳನ್ನು ಪ್ರದರ್ಶಿಸಿದರು. ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮಾತನಾಡಿ, ಎಸ್‌ಐಆರ್ ಮೂಲಕ ತೆಗೆದುಹಾಕಲಾದ ಎಲ್ಲ ಮತಗಳನ್ನು ಮರುಸ್ಥಾಪಿಸಿ, ಎಸ್‌ಐಆರ್‌ಗೂ ಮುಂಚಿನ ಮತದಾರರ ಪಟ್ಟಿಯನ್ನೇ ಮುಂದುವರಿಸಬೇಕೆಂದು ಆಗ್ರಹಿಸಿದರು. ಇದೇ ವೇಳೆ ಫ್ರೀಡಂ ಪಾರ್ಕ್‌ನಲ್ಲಿ ಸಾಂಕೇತಿಕವಾಗಿ ‘ಚಪ್ಪಲಿ ಚಳವಳಿ’ ಮತ್ತು ಮಹಿಳಾ ಒಗ್ಗಟ್ಟಿನ ನಡಿಗೆಯನ್ನು ಆಯೋಜಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು