‘ಬಾಂಗ್ಲಾದೇಶಿ ಪ್ರಜೆಗಳು’ ಎಂಬ ಅನುಮಾನದ ಮೇಲೆ ಛತ್ತೀಸ್ಗಢ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲದ ನಾಲ್ವರು ವಲಸೆ ಕಾರ್ಮಿಕರು ಒಂದು ತಿಂಗಳಿಗೂ ಹೆಚ್ಚು ಕಾಲದ ಕಸ್ಟಡಿಯ ನಂತರ ಕೊನೆಗೂ ಬಿಡುಗಡೆಯಾಗಿದ್ದಾರೆ. ಕಲ್ಕತ್ತಾ ಹೈಕೋರ್ಟ್ ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ಪ್ರಶ್ನಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಬಿಡುಗಡೆಯಾದ ಕಾರ್ಮಿಕರನ್ನು ಶಫೀಕುಲ್ ಇಸ್ಲಾಂ, ಸಬೀರ್ ಶೇಖ್, ನಾಸಿರುದ್ದೀನ್ ಶೇಖ್ ಮತ್ತು ಲಾಲ್ಟು ಶೇಖ್ ಎಂದು ಗುರುತಿಸಲಾಗಿದೆ. ಮುರ್ಷಿದಾಬಾದ್ನ ಸೂತಿ ಮತ್ತು ಶಂಶೇರ್ಗಂಜ್ ಭಾಗದ ನಿವಾಸಿಗಳಾದ ಇವರು ಜೀವನೋಪಾಯಕ್ಕಾಗಿ ಛತ್ತೀಸ್ಗಢದ ಬಿಲಾಸ್ಪುರಕ್ಕೆ ತೆರಳಿ ಸಣ್ಣಪುಟ್ಟ ವ್ಯಾಪಾರ ಹಾಗೂ ಅಸಂಘಟಿತ ವಲಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.
ಘಟನೆಯ ಹಿನ್ನೆಲೆ:
ಸೆಪ್ಟೆಂಬರ್ 4 ರಂದು ಬಿಲಾಸ್ಪುರದ ಸಿರ್ಗಿಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 23 ವಲಸೆ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಕಾರ್ಮಿಕರು ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತಿತರ ಭಾರತೀಯ ದಾಖಲೆಗಳನ್ನು ಹಾಜರುಪಡಿಸಿದರೂ ಅವರನ್ನು ರಾಯ್ಪುರದ ಡಿಟೆನ್ಷನ್ ಸೆಂಟರ್ಗೆ ಸ್ಥಳಾಂತರಿಸಲಾಗಿತ್ತು. ದಾಖಲೆಗಳ ಪರಿಶೀಲನೆಯ ನಂತರ ಸೆಪ್ಟೆಂಬರ್ 18 ರಂದು 19 ಮಂದಿಯನ್ನು ಬಿಡುಗಡೆ ಮಾಡಲಾಯಿತಾದರೂ, ಈ ನಾಲ್ವರನ್ನು ಮಾತ್ರ ಮುಂದುವರಿದ ಕಸ್ಟಡಿಯಲ್ಲಿ ಇರಿಸಲಾಗಿತ್ತು.
ಹೈಕೋರ್ಟ್ ತರಾಟೆ:
ಈ ಅಕ್ರಮ ಬಂಧನವನ್ನು ಪ್ರಶ್ನಿಸಿ ಸಂತ್ರಸ್ತರ ಕುಟುಂಬಗಳು ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದವು. ಅಕ್ಟೋಬರ್ 5 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ರಾವ್ ಅವರ ಪೀಠವು, “ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಇವರ ಹೆಸರು ತೆಗೆದುಹಾಕಿರುವುದರ ವಿರುದ್ಧದ ಮೇಲ್ಮನವಿ ಅರ್ಜಿಗಳು ಕಾನೂನು ಪ್ರಾಧಿಕಾರದ ಮುಂದೆ ಬಾಕಿ ಇರುವಾಗ, ಪ್ರತ್ಯೇಕವಾಗಿ ಅವರ ಪೌರತ್ವ ತನಿಖೆ ನಡೆಸಲು ಅಧಿಕಾರಿಗಳಿಗೆ ಅಧಿಕಾರ ಕೊಟ್ಟವರು ಯಾರು? ಅಧಿಕಾರಿಗಳು ಜನರ ಬದುಕಿನ ಜತೆ ಆಟವಾಡುತ್ತಿದ್ದಾರೆಯೇ?” ಎಂದು ಖಾರವಾಗಿ ತರಾಟೆಗೆ ತೆಗೆದುಕೊಂಡಿತ್ತು.
ಹೈಕೋರ್ಟ್ನ ಈ ಖಡಕ್ ಎಚ್ಚರಿಕೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಛತ್ತೀಸ್ಗಢ ಆಡಳಿತವು ನಾಲ್ವರನ್ನೂ ಬಿಡುಗಡೆ ಮಾಡಿದೆ. ಮುರ್ಷಿದಾಬಾದ್ ಜಿಲ್ಲಾಡಳಿತವು ಸೂಕ್ತ ಪರಿಶೀಲನಾ ವರದಿಯನ್ನು ಸಕಾಲಕ್ಕೆ ನೀಡದಿದ್ದ ಕಾರಣ ಕಾರ್ಮಿಕರು ಇಷ್ಟು ದಿನ ಜೈಲಿನಲ್ಲಿ ನರಳಬೇಕಾಯಿತು ಎಂದು ಟಿಎಂಸಿ ರಾಜ್ಯಸಭಾ ಸಂಸದ ಸಮೀರುಲ್ ಇಸ್ಲಾಂ ಅಸಮಾಧಾನ ವ್ಯಕ್ತಪಡಿಸಿದ್ದು, ಹೈಕೋರ್ಟ್ನ ಮಧ್ಯಪ್ರವೇಶಕ್ಕೆ ಧನ್ಯವಾದ ತಿಳಿಸಿದ್ದಾರೆ.
