ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಕರೆ ನೀಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರರಾಜಧಾನಿಯ ಆಕಾಶವಾಣಿ ಭವನದ ಸಮೀಪ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಘರ್ಷಣೆ ಉಂಟಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಜಂತರ್ ಮಂತರ್ ಕಡೆಗೆ ತೆರಳಲು ಯತ್ನಿಸಿದ ಸುಮಾರು 500ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಂತರ್ ಮಂತರ್ನತ್ತ ಹೆಜ್ಜೆ ಹಾಕುತ್ತಿದ್ದ ಪ್ರತಿಭಟನಾಕಾರರನ್ನು ಆಕಾಶವಾಣಿ ಭವನದ ಸಮೀಪದ ಇಮ್ತಿಯಾಜ್ ಅಲಿ ನಗರದಲ್ಲಿ ಪೊಲೀಸರು ಬೃಹತ್ ಬ್ಯಾರಿಕೇಡ್ಗಳನ್ನು ಹಾಕಿ ತಡೆದರು. ಈ ವೇಳೆ ಸುಮಾರು 30ಕ್ಕೂ ಹೆಚ್ಚು ಪ್ರತಿಭಟನಾಕಾರರು ಬಲವಂತವಾಗಿ ಬ್ಯಾರಿಕೇಡ್ಗಳನ್ನು ಹಾರಿ ಮುನ್ನುಗ್ಗಲು ಪ್ರಯತ್ನಿಸಿದರು. ಇದರಿಂದಾಗಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ತಳ್ಳಾಟ-ನೂಕಾಟ ನಡೆಯಿತು.
ಈ ಸಂದರ್ಭದಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲ್ಲುತೂರಾಟದ ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಗಲಭೆಗೆ ಕಾರಣರಾದ ಕೆಲವರನ್ನು ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ಮತ್ತೊಂದೆಡೆ, ಜಂತರ್ ಮಂತರ್ ತಲುಪಲು ಬೇರೆ ಬೇರೆ ಮಾರ್ಗಗಳಲ್ಲಿ ಯತ್ನಿಸಿದ ಸುಮಾರು 500ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರತಾ ಪಡೆಗಳ ಕಣ್ತಪ್ಪಿಸಿ ವಿವಿಧ ಗಲ್ಲಿಗಳು ಹಾಗೂ ಸಂಪರ್ಕ ರಸ್ತೆಗಳ ಮೂಲಕ ಜಂತರ್ ಮಂತರ್ ಪ್ರವೇಶಿಸಲು ಯತ್ನಿಸಿದ ಯುವಕರನ್ನು ಪೊಲೀಸರು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದು ಬಸ್ಗಳಲ್ಲಿ ತುಂಬಿದ್ದಾರೆ ಎಂದು ತಿಳಿದುಬಂದಿದೆ.
