ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಮತದಾರರ ಪಟ್ಟಿಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರು ತಮ್ಮ ಹೋರಾಟವನ್ನು ದೇಶವ್ಯಾಪಿ ವಿಸ್ತರಿಸುವುದಾಗಿ ಘೋಷಿಸಿದ್ದಾರೆ.
ದೆಹಲಿ ಪೊಲೀಸರ ಕಸ್ಟಡಿಯಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸಿಜೆಪಿ ಸಹ ಸಂಚಾಲಕ ಆಶುತೋಷ್ ರಾಂಕಾ ಹಾಗೂ ಪಕ್ಷದ ನಾಯಕ ಸೌರವ್ ದಾಸ್ ಮಾಧ್ಯಮಗಳೊಂದಿಗೆ ಮಾತನಾಡಿದರು. “ನಮ್ಮ ಹೋರಾಟ ಈಗಷ್ಟೇ ಶುರುವಾಗಿದೆ. ಜ್ಞಾನೇಶ್ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವವರೆಗೂ ನಾವು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ,” ಎಂದು ಸ್ಪಷ್ಟಪಡಿಸಿದರು. ಕೇಂದ್ರದ ಮೋದಿ ಸರ್ಕಾರವು ದೆಹಲಿಯಲ್ಲಿ 1975–77ರ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಹ ಭಯದ ವಾತಾವರಣ ಸೃಷ್ಟಿಸಿದೆ ಎಂದು ದಾಸ್ ಕಿಡಿಕಾರಿದರು.
ಯಾವುದೇ ಅಧಿಕೃತ ನೋಟಿಸ್ ನೀಡದೆ ತಮ್ಮನ್ನು ಅಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು, ಮೊಬೈಲ್ ಫೋನ್ಗಳನ್ನು ಕಸಿದುಕೊಂಡು ವಕೀಲರನ್ನು ಸಂಪರ್ಕಿಸಲೂ ಅವಕಾಶ ನೀಡಲಿಲ್ಲ ಎಂದು ನಾಯಕರು ಆರೋಪಿಸಿದರು. “ನಮ್ಮ ಮೊಬೈಲ್ಗಳನ್ನು ಹ್ಯಾಕ್ ಮಾಡಿ, ಅವುಗಳಲ್ಲಿ ದಾಖಲೆಗಳು ಅಥವಾ ಇತರ ನಕಲಿ ಸಾಕ್ಷ್ಯಗಳನ್ನು ಸೇರಿಸಿ ಷಡ್ಯಂತ್ರ ರೂಪಿಸುವ ಸಂಶಯವಿದೆ. ಕೇವಲ ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಇಡೀ ದೇಶದ ಜನರ ಮೇಲೆಯೇ ಯುದ್ಧ ಸಾರಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನಿಲ್ಲಿಸಲು ಯಾವುದೇ ಬಾಂಡ್ ಬರೆದುಕೊಟ್ಟಿಲ್ಲ – ಅಭಿಜೀತ್ ದೀಪ್ಕೆ:
ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾದ ಬೆನ್ನಲ್ಲೇ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ‘ಎಕ್ಸ್’ (ಟ್ವಿಟರ್) ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಾವು ಇನ್ಮುಂದೆ ಪ್ರತಿಭಟನೆ ನಡೆಸುವುದಿಲ್ಲ ಎಂದು ಯಾವುದೇ ಬಾಂಡ್ ಪತ್ರಕ್ಕೆ ಸಹಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, “ಮತ್ತೆ ಬೀದಿಗಿಳಿದು ಹೋರಾಟ ಮುಂದುವರಿಸುತ್ತೇವೆ. ಪ್ರಜಾಪ್ರಭುತ್ವ ರಕ್ಷಣೆಗಾಗಿ ಆರಂಭವಾಗಿರುವ ಈ ಆಂದೋಲನವು ಸರ್ವಾಧಿಕಾರಕ್ಕೆ ಅಂತ್ಯ ಹಾಡುವ ಮುನ್ನುಡಿಯಾಗಲಿದೆ,” ಎಂದು ಹೇಳಿದ್ದಾರೆ.
ಷರತ್ತುಬದ್ಧ ಜಾಮೀನಿನ ಮೇಲೆ ನಾಯಕರ ಬಿಡುಗಡೆ:
ದೆಹಲಿಗೆ ಆಗಮಿಸುತ್ತಿದ್ದಂತೆಯೇ ವಿಮಾನದಲ್ಲೇ ವಶಕ್ಕೆ ಪಡೆಯಲಾಗಿದ್ದ ಅಭಿಜೀತ್ ದೀಪ್ಕೆ, ಆಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ದೆಹಲಿ ಕಂಟೋನ್ಮೆಂಟ್ನ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯವು, ತಲಾ ₹50,000 ಮುಚ್ಚಳಿಕೆ ಹಾಗೂ ಒಂದು ವರ್ಷದವರೆಗೆ ಶಾಂತಿ ಸುವ್ಯವಸ್ಥೆಗೆ ಭಂಗ ತರದಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಬಿಡುಗಡೆಯಾದ ಬಳಿಕ ಮಾತನಾಡಿದ ನಾಯಕರು, ಜಂತರ್ ಮಂತರ್ನಲ್ಲಿ ಶಾಂತಿಯುತ ಪ್ರತಿಭಟನೆಗೆ ದಿನಾಂಕ ಹಾಗೂ ಅನುಮತಿ ಕೋರಿ ಸೋಮವಾರ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.
