ಖ್ಯಾತ ಸ್ಟ್ಯಾಂಡಪ್ ಕಾಮೆಡಿಯನ್ ಕುನಾಲ್ ಕಮ್ರಾ ಅವರ ಕಾರ್ಯಕ್ರಮಕ್ಕೆ ಹೈದರಾಬಾದ್ನಲ್ಲಿ ಬಜರಂಗದಳ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಭಾನುವಾರ ನಡೆಯಬೇಕಿದ್ದ ಶೋ ಅನ್ನು ತಡೆಯುವುದಾಗಿ ಬೆದರಿಕೆ ಹಾಕಿದೆ. ಹಿಂದೂ ದೇವರುಗಳಾದ ಶ್ರೀರಾಮ ಮತ್ತು ಸೀತೆಯ ಕುರಿತು ಕಮ್ರಾ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿರುವ ಸಂಘಟನೆ, ಕಾರ್ಯಕ್ರಮಕ್ಕೆ ತಡೆ ಒಡ್ಡುವುದಾಗಿ ಎಚ್ಚರಿಸಿದೆ.
ಹೈದರಾಬಾದ್ನ ಆರ್ಟಿಸಿ ಕ್ರಾಸ್ ರೋಡ್ಸ್ನಲ್ಲಿರುವ ಟಿಜಿಆರ್ಟಿಸಿ ಕಲಾ ಭವನದಲ್ಲಿ ಈ ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರಿಗೆ ದೂರು ನೀಡಿರುವ ಬಜರಂಗದಳ, ಈ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಒತ್ತಾಯಿಸಿದೆ. ಒಂದು ವೇಳೆ ಶೋ ನಡೆದರೆ ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳದ ಕಾರ್ಯಕರ್ತರು ನೇರವಾಗಿ ಮಧ್ಯಪ್ರವೇಶಿಸಿ ತಡೆಯಲಿದ್ದಾರೆ ಎಂದು ಹೇಳಿದೆ.
“ಹಿಂದೂ ವಿರೋಧಿ ಕುನಾಲ್ ಕಮ್ರಾ ಟಿಜಿಆರ್ಟಿಸಿ ಕಲಾ ಭವನದಲ್ಲಿ ನಡೆಸಲುದ್ದೇಶಿಸಿರುವ ಕಾರ್ಯಕ್ರಮವನ್ನು ನಾವು ತಡೆಯುತ್ತೇವೆ. ಕಮ್ರಾ ಸದಾ ಹಿಂದೂ ದೇವರುಗಳಾದ ರಾಮ ಮತ್ತು ಸೀತೆಯನ್ನು ಅವಹೇಳನ ಮಾಡುತ್ತಿರುತ್ತಾರೆ. ಈ ಹಿಂದೆಯೂ ಅವರ ವಿರುದ್ಧ ಹಲವು ಕಡೆ ಪ್ರಕರಣಗಳು ದಾಖಲಾಗಿವೆ,” ಎಂದು ಬಜರಂಗದಳದ ಹೈದರಾಬಾದ್ ಘಟಕ ಹೇಳಿಕೆ ನೀಡಿದೆ.
ಹಿಂದೆಯೂ ವಿವಾದಕ್ಕೀಡಾಗಿದ್ದ ಕಮ್ರಾ:
ಕುನಾಲ್ ಕಮ್ರಾ ತಮ್ಮ ಹಾಸ್ಯ ಪ್ರದರ್ಶನಗಳ ಮೂಲಕ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. 2025ರ ಮಾರ್ಚ್ ತಿಂಗಳಲ್ಲಿ ಅವರ ‘ನಯಾ ಭಾರತ್’ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು “ಗದ್ದಾರ್” (ದ್ರೋಹಿ) ಎಂದು ಕರೆದಿದ್ದು ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಆಗ ಶಿಂಧೆ ಬಣದ ಶಿವಸೇನಾ ಕಾರ್ಯಕರ್ತರು ಪ್ರದರ್ಶನ ನಡೆದ ಸ್ಥಳ ಹಾಗೂ ಸಮೀಪದ ಹೋಟೆಲ್ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದರು. ಆ ಬಳಿಕ ಮುಂಬೈ ಪೊಲೀಸರು ಕಮ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ನಂತರ ಮದ್ರಾಸ್ ಹೈಕೋರ್ಟ್ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು ಹಾಗೂ ಬಾಂಬೆ ಹೈಕೋರ್ಟ್ ಕೂಡ ಬಂಧನದಿಂದ ರಕ್ಷಣೆ ನೀಡಿತ್ತು.
ಧಾರ್ಮಿಕ ಮತ್ತು ರಾಜಕೀಯ ವ್ಯಕ್ತಿಗಳ ಕುರಿತಾದ ಹೇಳಿಕೆಗಳ ಕಾರಣದಿಂದ ಕಮ್ರಾ ಅವರ ಶೋಗಳಿಗೆ ಎದುರಾಗುತ್ತಿರುವ ಸರಣಿ ವಿರೋಧಗಳ ನಡುವೆಯೇ ಹೈದರಾಬಾದ್ನಲ್ಲಿ ಈ ಹೊಸ ಬೆಳವಣಿಗೆ ನಡೆದಿದೆ.
