ಸುಪ್ರೀಂಗೆ ನನ್ನ ಬಗ್ಗೆ ಸರ್ಕಾರ ತಪ್ಪು ಮಾಹಿತಿ ನೀಡಿದ್ದಾರೆ – ಡಿಜಿಪಿ ಅಲೋಕ್ ಕುಮಾರ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಕ್ರಮಗಳ ತನಿಖೆಗಾಗಿ ಕರ್ನಾಟಕ ಹೈಕೋರ್ಟ್ ತಮ್ಮನ್ನು ಎಸ್‌ಐಟಿ (SIT) ಮುಖ್ಯಸ್ಥರನ್ನಾಗಿ ನೇಮಿಸಿದ್ದನ್ನು ರಾಜ್ಯ ಸರ್ಕಾರ ಆಕ್ಷೇಪಿಸಿದ ರೀತಿಯ ಬಗ್ಗೆ ಕರ್ನಾಟಕ ಡಿಜಿಪಿ (ಜೈಲು) ಅಲೋಕ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲೋಕ್ ಕುಮಾರ್ ನೇತೃತ್ವದ ಎಸ್‌ಐಟಿ ತಂಡ ರಚನೆಗೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಹೀಗಾಗಿ ಅಕ್ಟೋಬರ್ 1ರಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಸರ್ಕಾರ ಪರ ವಾದ ಮಂಡಿಸಿದ್ದ ಕಪಿಲ್ ಸಿಬಲ್, ಅಲೋಕ್ ಕುಮಾರ್ ಅವರ ವಿರುದ್ಧ ಸಿಬಿಐ ತನಿಖೆ ಬಾಕಿ ಇದೆ ಎಂದು ವಾದಿಸಿದ್ದರು. ಈ ವಾದವನ್ನು ಖಂಡಿಸಿ ಅಲೋಕ್ ಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ತಮ್ಮ ವಿರುದ್ಧ ಸಿಬಿಐ ತನಿಖೆ ಬಾಕಿಯಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸರ್ಕಾರ ಸಲ್ಲಿಸಿದ್ದ ಮಾಹಿತಿಯನ್ನು ತಿದ್ದುಪಡಿ ಮಾಡುವಂತೆ ಅಕ್ಟೋಬರ್ 5ರಂದು ಕರ್ನಾಟಕ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದರು. ಈ ಹೇಳಿಕೆಯು ವಾಸ್ತವಿಕವಾಗಿ ತಪ್ಪಾಗಿದೆ ಎಂದು ಕುಮಾರ್ ಪ್ರತಿಪಾದಿಸಿದ್ದರು. ಸರ್ಕಾರ ಸಲ್ಲಿಸಿದ ಈ ಮಾಹಿತಿಯು ಅನಗತ್ಯವಾಗಿ ತಮ್ಮ ಹೆಸರನ್ನು ವಿವಾದಕ್ಕೆ ಎಳೆತಂದಿದೆ. ತಮ್ಮ ವೃತ್ತಿಪರ ಪ್ರಾಮಾಣಿಕತೆ ಹಾಗೂ ಘನತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಅಲೋಕ್ ಕುಮಾರ್ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ (telephone-tapping) ಆರೋಪಗಳ ಕುರಿತು ಸಿಬಿಐ ತನಿಖೆ ಬಾಕಿಯಿದೆ ಎಂಬ ಕಾರಣವೊಡ್ಡಿ ಎಸ್‌ಐಟಿ ನೇತೃತ್ವದಿಂದ ತಮ್ಮ ನೇಮಕವನ್ನು ರಾಜ್ಯ ಸರ್ಕಾರ ವಿರೋಧಿಸಿತ್ತು.

Related Articles

ಇತ್ತೀಚಿನ ಸುದ್ದಿಗಳು