ಅಮೆರಿಕ-ಪಾಕ್ ನಡುವೆ ಯುದ್ಧ ನಡೆದರೆ ಪಾಕಿಸ್ತಾನದ ಪರ ನಿಲ್ಲುತ್ತೇವೆ: ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್ ವಿವಾದಾತ್ಮಕ ಹೇಳಿಕೆ

ದೆಹಲಿ: ಅಮೆರಿಕ ಮತ್ತು ನೆರೆರಾಷ್ಟ್ರ ಪಾಕಿಸ್ತಾನದ ನಡುವೆ ಒಂದು ವೇಳೆ ಯುದ್ಧ ಸಂಭವಿಸಿದರೆ, ಭಾರತವು ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ನೀಡಿರುವ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಭಾರಿ ವಿವಾದ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಜೈಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ನಮ್ಮ ನೆರೆಯ ದೇಶ ಎಂಬ ಕಾರಣಕ್ಕೆ ಆ ಪರಿಸ್ಥಿತಿಯಲ್ಲಿ ನಾವು ಅದರ ಪರವಾಗಿ ನಿಲ್ಲಬೇಕಾಗುತ್ತದೆ ಎಂದು ಪ್ರತಿಪಾದಿಸಿದ್ದರು.

ಈ ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆಯೇ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ (ಎಎಪಿ) ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.

ಕಾಂಗ್ರೆಸ್ ವಕ್ತಾರೆ ಶಾಮಾ ಮೊಹಮ್ಮದ್ ಈ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದು, ಭಾರತೀಯ ಯೋಧರು ಹಾಗೂ ನಾಗರಿಕರನ್ನು ಹತ್ಯೆ ಮಾಡುವ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಮೇಲಿನ ಬಿಜೆಪಿಯ ಪ್ರೇಮ ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದು ಟೀಕಿಸಿದ್ದಾರೆ. ಇಂತಹ ‘ದೇಶವಿರೋಧಿ’ ಹೇಳಿಕೆ ನೀಡಿರುವ ನಾಯಕನ ವಿರುದ್ಧ ಪ್ರಧಾನಿ ಮೋದಿ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಅತ್ತ ಆಮ್ ಆದ್ಮಿ ಪಕ್ಷವೂ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಜನಸಾಮಾನ್ಯರು ಮತ್ತು ಯುವಜನರು ಸರ್ಕಾರದ ವಿರುದ್ಧ ಧ್ವನಿಯೆತ್ತಿದರೆ ಅವರನ್ನು ಪಾಕಿಸ್ತಾನಿಗಳು, ಉಗ್ರರು ಎಂದು ಕರೆಯುವ ಬಿಜೆಪಿಯ ರಾಷ್ಟ್ರೀಯತೆ, ತನ್ನದೇ ನಾಯಕ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದಾಗ ಎಲ್ಲಿ ಅಡಗಿಕೊಳ್ಳುತ್ತದೆ ಎಂದು ವ್ಯಂಗ್ಯವಾಡಿದೆ.

ತಮ್ಮ ಹೇಳಿಕೆ ವ್ಯಾಪಕ ವಿರೋಧಕ್ಕೆ ಗುರಿಯಾಗುತ್ತಿದ್ದಂತೆಯೇ ಮದನ್ ರಾಥೋಡ್ ಸ್ಪಷ್ಟನೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಸಂದರ್ಭವನ್ನು ಉಲ್ಲೇಖಿಸಿ ತಾವು ಮಾತನಾಡಿದ್ದು, ಭಾರತ ಸೋತಾಗ ಪಟಾಕಿ ಸಿಡಿಸುವವರನ್ನು ದೇಶಪ್ರೇಮಿಗಳೆಂದು ಕರೆಯಲು ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಹೇಳಿದ್ದೆ ಎಂದಿದ್ದಾರೆ. ಕೆಲವರು ತಮ್ಮ ಮಾತುಗಳನ್ನು ತಿರುಚಿ, ಕೊನೆಯ ಎರಡು ಸಾಲುಗಳನ್ನು ಮಾತ್ರ ದುರುದ್ದೇಶಪೂರ್ವಕವಾಗಿ ಪ್ರಸಾರ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು