​ಬೊಗಸೆಗೆ ದಕ್ಕಿದ್ದು-97 : ಪ್ರಜಾಪ್ರಭುತ್ವದ ಹಿತ್ತಿಲಲ್ಲಿ ನರಭಕ್ಷಕನ ಹೆಜ್ಜೆ ಗುರುತುಗಳು!

“..ಸರ್ವಾಧಿಕಾರಿಗಳು ಯಾವತ್ತೂ ತಮ್ಮನ್ನು ‘ಸರ್ವಾಧಿಕಾರಿ’ ಎಂದು ಕರೆದುಕೊಂಡಿಲ್ಲ. ಹೀಗಾಗಿ ನಾವುಗಳು ‘ವಿಶ್ವಗುರು’, ‘ಪ್ರಧಾನ ಸೇವಕ’, ‘ಚೌಕಿದಾರ್’ ಮುಂತಾದ ಬಿರುದುಗಳ ಕುರಿತು ಎಚ್ಚರದಿಂದ ಇರಬೇಕಾದ ಅಗತ್ಯವಿದೆ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಜಗತ್ತಿನಾದ್ಯಂತ ಆಗಿಹೋಗಿರುವ ಹಲವಾರು ಸರ್ವಾಧಿಕಾರಗಳ ನಕಲಿ ದೇಶಪ್ರೇಮದ ಕುರಿತು ಕಳೆದ ಬಾರಿ ನೋಡಿದ್ದೆವು. ಈ ಬಾರಿ ಆರೆಸ್ಸೆಸ್ಸಿಗೆ ಮಾದರಿಯಾಗಿರುವ ಹಿಟ್ಲರ್‌ನ ಜರ್ಮನಿಯಲ್ಲಿ ಆರಂಭಿಕವಾಗಿ ಕಂಡುಬಂದು, ಅಸಹನೀಯವಾಗಿ ಬೆಳೆದ ಗುಣಲಕ್ಷಣಗಳು ಮತ್ತು ಇಲ್ಲೀಗ ನಾವು ಕಾಣುತ್ತಿರುವುದಕ್ಕೂ ಇರುವ ಹೋಲಿಕೆಗಳನ್ನು ನೋಡೋಣ. ಇಲ್ಲಿ ಒಂದೊಂದಕ್ಕೂ ಉದಾಹರಣೆಯನ್ನು ನೀಡಲು ಹೋಗುವುದಿಲ್ಲ. ಯಾಕೆಂದರೆ, ನೀವೇ ಒಂದೊಂದು ವಿಚಾರವನ್ನು ಯೋಚಿಸಿ ನೋಡಿದರೆ, ಒಂದೊಂದಕ್ಕೂ ನೂರಾರು ಉದಾಹರಣೆಗಳು ನಿಮ್ಮದೇ ಕಣ್ಣಮುಂದೆ ಹಾದುಹೋಗುತ್ತವೆ!

​ಗಿಲೀಟಿನ ಮತ್ತು ಅಬ್ಬರದ ಸುಳ್ಳು ಪ್ರಚಾರ ಸರ್ವಾಧಿಕಾರದ ಮುಖ್ಯ ಲಕ್ಷಣಗಳಲ್ಲಿ ಮುಖ್ಯವಾದುದು. ನಾಜಿ ಜರ್ಮನಿಯಲ್ಲಿ ಜೋಸೆಫ್ ಗೊಬೆಲ್ಸ್ ಅದರ ರೂವಾರಿಯಾಗಿದ್ದ. ‘ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ’ ಎಂಬುದು ಅವನ ನಿಲುವಾಗಿತ್ತು. ಅಪಪ್ರಚಾರವು ಅವರ ಪ್ರಚಾರದ ಇನ್ನೊಂದು ಮುಖ. ಇಂದು ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಪ್ರಧಾನಿ ಮೋದಿಯವರನ್ನು ವಿಜ್ರಂಭಿಸುವ, ಅವರ ಸಾಹಸಗಳನ್ನು ಬಣ್ಣಿಸುವ, ಹಸಿಹಸಿ ಸುಳ್ಳುಗಳನ್ನು ಉತ್ಪಾದಿಸುವ ಬಲಪಂಥೀಯ ಕಾರ್ಖಾನೆಗಳೇ ನಡೆಯುತ್ತಿವೆ. ಅವುಗಳನ್ನು ಕಾಸಿಗಾಗಿ ಶೇರ್ ಮಾಡುವವರ ಪಡೆಗಳಿವೆ. ಎಐ (AI) ತಂತ್ರಜ್ಞಾನದಿಂದ ಸೃಷ್ಟಿಸಿದ ಡೀಪ್‌ಫೇಕ್ ವಿಡಿಯೋಗಳು ಮತ್ತು ಸತ್ಯಕ್ಕೆ ದೂರವಾದ ಫ್ಯಾಕ್ಟ್-ಚೆಕ್ ರಹಿತ ಮಾಹಿತಿಗಳು ಪ್ರತಿದಿನವೂ ಹರಿದಾಡುತ್ತಿವೆ. ವಿದ್ವೇಷದ, ಅವಹೇಳನದ, ವೈಯಕ್ತಿಕ ನಿಂದನೆಯ, ಅಶ್ಲೀಲವಾದ ಬೆದರಿಕೆಯ ಸಂದೇಶಗಳು ಸ್ವಯಂಘೋಷಿತ ಸಂಸ್ಕೃತಿಯ ರಕ್ಷಕರಿಂದ ಬರುತ್ತಿರುವುದು ಬರೇ ಕಾಕತಾಳೀಯವಾಗಿರಲು ಸಾಧ್ಯವೇ ಇಲ್ಲ!

ರಾಮ ಹೆಸರಿಗೆ; ಸುಳ್ಳೇ ಮನೆದೇವರು!
​ಗಾಂಧಿ ಪದತಲದಲ್ಲಿ ಯುವಕ ಮೋದಿ, ಬೋಸರ ಪಕ್ಕದಲ್ಲಿ ವಂದನೆ ಸ್ವೀಕರಿಸುತ್ತಿರುವ ಮೋದಿ, ಭಗತ್ ಸಿಂಗ್‌ಗೆ ಜೈಲಿನಲ್ಲಿ ಮನೆಯೂಟ ನೀಡುತ್ತಿರುವ ಮೋದಿ ಇತ್ಯಾದಿಯಾಗಿ ನಾಜಿಗಳೇ ನಾಚುವಂತಹ ಫೊಟೋಷಾಪ್ ಸುಳ್ಳುಗಳನ್ನು ನೀವು ನೋಡಿಯೇ ಇರುತ್ತೀರಿ. 1950ರಲ್ಲಿ ಅವರು ಹುಟ್ಟಿದಾಗ ಅವರೆಲ್ಲಾ ಮಣ್ಣಲ್ಲಿ ಲೀನವಾಗಿಹೋಗಿದ್ದರೆಂಬ ಸ್ಪಷ್ಟ ಸತ್ಯವೂ ಗೋಚರವಾಗದ ಮುಗ್ಧ ಜನರು ಅವುಗಳನ್ನು ನಂಬುತ್ತಾರೆ. ಇದುವೇ ಗೋಬೆಲ್ಸ್ ತಂತ್ರ: ನಂಬದಿರುವ ಅಲ್ಪ ಸಂಖ್ಯೆಯ ಬುದ್ಧಿವಂತರನ್ನು ಮಟ್ಟ ಹಾಕೋಣ; ನಂಬುವ ಬಹುಸಂಖ್ಯಾತ ಮೂರ್ಖರನ್ನು ಬುಟ್ಟಿಗೆ ಹಾಕಿಕೊಳ್ಳೋಣ. ಸುಳ್ಳನ್ನು ಸುಳ್ಳು ಎಂದು ಸಾಬೀತು ಮಾಡುವ ಸತ್ಯಗಳು ಅವರಿಗೆ ತಲುಪದಂತೆ ಮಾಡೋಣ. ಪ್ರಶ್ನೆಗಳನ್ನು ಕೇಳದಂತೆ ಮಾಡೋಣ. ಕೇಳಿದವರನ್ನು ಮಟ್ಟ ಹಾಕೋಣ. ಪ್ರಧಾನಿ ಎಂಬ ಗೌರವಾರ್ಹ ಸ್ಥಾನದಲ್ಲಿ ಇರುವ ಮೋದಿಯವರೇ ಸ್ವತಃ ಸಾರ್ವಜನಿಕವಾಗಿ ಸುಳ್ಳು ಹೇಳಿದ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಂತವರು ಸಂಸತ್ತಿನಲ್ಲೇ ಸುಳ್ಳು ಹೇಳಿ ಸಿಕ್ಕಿಬಿದ್ದ ಹಲವಾರು ಘಟನೆಗಳು ನಮ್ಮ ಮುಂದಿವೆ.
​ಯಾವಾಗಲೂ ಎಂತಾ ಗಂಭೀರ ಸನ್ನಿವೇಶದಲ್ಲೂ ಕ್ಯಾಮರಾಗಳಿಂದ ಸುತ್ತುವರಿಯಲ್ಪಟ್ಟು ಸದಾ ಅವುಗಳನ್ನೇ ನೋಡುವ ಮೋದಿಯವರ ಸೆಲ್ಫಿಗಳಲ್ಲಿ ವ್ಯಕ್ತವಾಗುವ ಸ್ವಮೋಹ ಗಾಬರಿ ಹುಟ್ಟಿಸುತ್ತದೆ. ಅವರು ಎಲ್ಲವನ್ನೂ ಗಮನಿಸುತ್ತಾರೆ, ನಿತ್ಯ ಲಕ್ಷಾಂತರ ಟ್ವೀಟ್‌ಗಳಿಗೆ ಸ್ವತಃ ಪ್ರತಿಕ್ರಿಯಿಸುತ್ತಾರೆಂದು ನಂಬುವ ಮೂರ್ಖರೂ ಇದ್ದಾರೆ. ಇದು ವಸ್ತುತಃ ಸಾಧ್ಯವೆ? ಮತ್ತೆ ಅವರು ಕೆಲಸ ಮಾಡುವುದು ಯಾವಾಗ? ಅವರ ಗಡಿಯಾರದಲ್ಲಿ ದಿನಕ್ಕೆ 48 ಗಂಟೆಗಳಿವೆಯೇ? ಯಾರೂ ಪ್ರಶ್ನೆಗಳನ್ನು ಕೇಳಲು ಹೋಗುವುದಿಲ್ಲ. ಇಂತಹ ಕುರುಡು ನಂಬಿಕೆ, ವ್ಯಕ್ತಿ ವೈಭವೀಕರಣ ಮತ್ತು ಸಮೂಹ ಸನ್ನಿಯೇ ಸರ್ವಾಧಿಕಾರಕ್ಕೆ ಮೆಟ್ಟಿಲು. ಅಪಾಯದ ಸೂಚನೆ ನೀಡಲು ಇಷ್ಟೇ ಸಾಕು.

ಸಬ್‌ಕಾ ಸಾಥ್, ಸಬ್‌ಕಾ ವಿನಾಶ್!
​ಜನಾಂಗ ಜನಾಂಗಗಳನ್ನೇ ನಿರ್ನಾಮ ಮಾಡಿದ ಸರ್ವಾಧಿಕಾರಗಳೆಲ್ಲವೂ ಮೊದಲಿಗೆ ‘ಎಲ್ಲರನ್ನು ಜೊತೆಗೊಯ್ಯುವ’ ಮಾತಾಡಿವೆ! ಲಕ್ಷಾಂತರ ಯಹೂದಿಗಳನ್ನು ಯಾತನಾ ಶಿಬಿರಗಳಿಗೆ ತಳ್ಳಿ ಅಮಾನವೀಯವಾಗಿ ಮುಗಿಸಿದ ಹಿಟ್ಲರ್‌ಗೆ—ಅಧಿಕಾರಕ್ಕೇರಿದ ಆರಂಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿಡಿತಹೊಂದಿದ್ದ ಯಹೂದಿಗಳು ಬೇಕಾಗಿದ್ದರು. ಅವನು ಅದಕ್ಕಾಗಿ ಅವರನ್ನು ಓಲೈಸಿದ್ದ ಕೂಡಾ. ಅವನ ಸರಕಾರ ಅವರಿಂದ ಬೇಕಾಬಿಟ್ಟಿ ಸಾಲ ಎತ್ತಿತ್ತು. ನಂತರ ಕೈಯೆತ್ತಿ ಅವರ ವಿರುದ್ಧ ಮುಗಿಬಿದ್ದಿದ್ದ. ನಮ್ಮಲ್ಲಿಯೂ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಮುಂತಾದ ಆಕರ್ಷಕ ಮಾತುಗಳನ್ನು ನಿರಂತರವಾಗಿ ಕೇಳುತ್ತಿದ್ದೇವೆ. ಆದರೆ, ವ್ಯವಸ್ಥಿತವಾಗಿ ಸಂಕುಚಿತವಾದ, ಗಂಭೀರವಾದ ದಾಳಿಗಳು ನಿರಂತರವಾಗಿ ಬುದ್ಧಿಜೀವಿಗಳ ಮೇಲೆ, ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆದುಕೊಂಡುಬಂದಿವೆ. ತಾವು ಸಂತರೆಂದು ಹೇಳಿಕೊಳ್ಳುವ ಕ್ರಿಮಿನಲ್‌ಗಳು, ಸಂಸದರು ಮತ್ತು ಸಚಿವರೂ ಕೂಡಾ ಹಿಂದುತ್ವದ ಹೆಸರಿನಲ್ಲಿ “ಕೊಚ್ಚಿ, ಕೊಲ್ಲಿ, ಬೆಂಕಿಹಚ್ಚಿ, ತಲೆಕಡಿಯಿರಿ, ದೇಶದಿಂದ ಓಡಿಸಿ” ಇತ್ಯಾದಿ ಪ್ರಚೋದನಾತ್ಮಕ ಭಾಷೆಯಲ್ಲಿ ಎಗ್ಗಿಲ್ಲದೇ ಮಾತನಾಡುತ್ತಿದ್ದಾರೆ. ಚುನಾವಣಾ ರ‍್ಯಾಲಿಗಳಲ್ಲಿ ಬಹಿರಂಗವಾಗಿ ದ್ವೇಷ ಭಾಷಣಗಳನ್ನು ಮಾಡಿದರೂ, ಎಲ್ಲರನ್ನೂ ಜೊತೆಗೊಯ್ಯುತ್ತೇವೆ ಎಂದು ಹೇಳುವ ಆಡಳಿತಗಾರರು ಇವುಗಳನ್ನು ಖಂಡಿಸದೇ, ಕ್ರಮ ಕೈಗೊಳ್ಳದೆ ಮೌನ ಅನುಮತಿ, ಪ್ರೋತ್ಸಾಹ ನೀಡುತ್ತಿರುವಂತಿದೆ. ನ್ಯಾಯಾಲಯಗಳೂ ಅಂತವರ ವಿರುದ್ಧ ಬಲವಂತದ ಕ್ರಮ ಬೇಡ ಎಂದುಬಿಡುತ್ತಿವೆ.

ಸಾಂವಿಧಾನಿಕ ಹುದ್ದೆಗಳ ಮಾನಭಂಗ
​ಇದಲ್ಲದೇ ಸಂವಿಧಾನವನ್ನು ಬದಲಾಯಿಸುವ, ಧರ್ಮ ಆಧಾರಿತ ರಾಷ್ಟ್ರವನ್ನಾಗಿ ಮಾಡುವ ಸಂಚೂ ನಡೆಯುತ್ತಿದೆ. ಭಾರತದಂತಹ ವೈವಿಧ್ಯಮಯ ವಿಶಾಲ ಜನಭರಿತ ದೇಶದಲ್ಲಿ ಸರ್ವಾಧಿಕಾರ ತರುವುದು ಸುಲಭದ ಕೆಲಸವೇನಲ್ಲ! ಹಿಂದೆ ಇಂದಿರಾ ಗಾಂಧಿಯವರ ಕಾಲದಲ್ಲಿ ತುರ್ತು ಪರಿಸ್ಥಿತಿಯ ಮೂಲಕ ಇಂತಹ ಯತ್ನ ನಡೆದಿತ್ತು ಮತ್ತು ಅದನ್ನು ಜನತೆಯ ಹೋರಾಟ ವಿಫಲಗೊಳಿಸಿತು ಎಂಬುದನ್ನು ಮರೆಯದಿರೋಣ. ಹಾಗಾಗಿ ಒಂದೊಂದೊಂದಾಗಿಯೇ ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳು ಮತ್ತು ನ್ಯಾಯಾಂಗದಲ್ಲಿ ಆರೆಸ್ಸೆಸ್ ಕಾರ್ಯಕರ್ತರು, ಬೆಂಬಲಿಗರು ಮತ್ತು ಭ್ರಷ್ಟರನ್ನು ತುಂಬಿಸಿ “ರಕ್ತರಹಿತ”ವಾಗಿ ಅವುಗಳನ್ನು ವಶಕ್ಕೆ ತೆಗೆದುಕೊಂಡು ನಿಯಂತ್ರಿಸುವ, ಸಂವಿಧಾನವನ್ನು ನಿಷ್ಕ್ರಿಯಗೊಳಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ಜ್ವಲಂತ ಉದಾಹರಣೆಯಾಗಿ ಗ್ಯಾನೇಶ್ ಕುಮಾರ್ ನೇತೃತ್ವದಲ್ಲಿ ಚುನಾವಣಾ ಆಯೋಗ ನಡೆಸಿದ ಬಹಿರಂಗ ವೋಟ್‌ಚೋರಿಯನ್ನೂ, ಅದರ ಹುಂಬ ಸಮರ್ಥನೆಗಳನ್ನೂ ನೋಡಬಹುದು. ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್, ಹಿಂದಿನ ಮುಖ್ಯ ಚುನಾವಣಾ ಆಯುಕ್ತ ರಾಜೇಶ್ ಕುಮಾರ್ ಸೇರಿದಂತೆ ಇಂತವರಿಗೆ ರಾಜಾರೋಷವಾಗಿ ರಾಜ್ಯಪಾಲ ಹುದ್ದೆ, ರಾಜ್ಯಸಭಾ ಸದಸ್ಯತ್ವ, ಸರಕಾರಿ ಸಂಸ್ಥೆಗಳಲ್ಲಿ ಉನ್ನತ ಸ್ಥಾನಗಳ ಬಹುಮಾನವನ್ನು ರಾಜಾರೋಷವಾಗಿ ನೀಡಲಾಗಿರುವುದು ಸಾಂವಿಧಾನಿಕ ಪ್ರಜಾಪ್ರಭುತ್ವದ ಅಣಕ.

​ಕಳ್ಳನಿಗೊಂದು ಪಿಳ್ಳೆ ನೆಪ!
ಸಾಮಾನ್ಯವಾಗಿ ಎಲ್ಲಾ ಸರ್ವಾಧಿಕಾರಿಗಳು, ಧರ್ಮದ ನೆಲೆಯಲ್ಲಿ (ಲಿಬಿಯಾ, ಸುಡಾನ್ ಮುಂತಾದ ಮುಸ್ಲಿಂ ರಾಷ್ಟ್ರಗಳು, ಯಹೂದಿ ಇಸ್ರೇಲ್), ಭಾಷೆಯ ನೆಲೆಯಲ್ಲಿ (ಸ್ಪೇನ್‌ನಲ್ಲಿ ಸ್ಪಾನಿಷ್- ಬಾಸ್ಕ್), ಜನಾಂಗದ ನೆಲೆಯಲ್ಲಿ (ಜರ್ಮನಿಯ ಜನಾಂಗೀಯ ರಾಷ್ಟ್ರೀಯವಾದ, ದಕ್ಷಿಣ ಆಫ್ರಿಕಾದಲ್ಲಿದ್ದ ಅಪಾರ್ಥೀಡ್ ವರ್ಣಭೇದ ನೀತಿ), ಬುಡಕಟ್ಟುಗಳ ನೆಲೆಯಲ್ಲಿ (ಹೆಚ್ಚಿನ ಆಫ್ರಿಕನ್ ದೇಶಗಳು), ಸುಳ್ಳು ತತ್ವಗಳ ನೆಲೆಯಲ್ಲಿ (ಕಾಂಬೋಡಿಯಾ, ಮ್ಯಾನ್ಮಾರ್, ಉತ್ತರ ಕೊರಿಯಾ ಇತ್ಯಾದಿ) ರಾಷ್ಟ್ರೀಯತೆಯ ನೆಲೆಯಲ್ಲಿ (ಇಟಲಿ, ಅರ್ಜೆಂಟೀನಾ, ಮ್ಯಾನ್ಮಾರ್, ಫಿಲಿಪೈನ್ಸ್ ಇತ್ಯಾದಿ) ತಮ್ಮ ಬಲವನ್ನು ಪಡೆದುಕೊಂಡಿದ್ದರು, ಪಡೆದುಕೊಂಡಿದ್ದಾರೆ. ನೆರೆಯ ರಾಷ್ಟ್ರಗಳನ್ನು, ಬೇರೆ ಭಾಷೆ, ಬುಡಕಟ್ಟು, ಜನಾಂಗಗಳ ಜನರನ್ನು ಶತ್ರುಗಳಂತೆ ಬಿಂಬಿಸಿ, ಆಂತರಿಕ ಒಗ್ಗಟ್ಟನ್ನು ಪ್ರತಿಪಾದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಸರ್ವಾಧಿಕಾರಿಗಳ ಪ್ರಮುಖ ಕಾರ್ಯತಂತ್ರ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಬಲಪಂಥೀಯ ಆಡಳಿತ ಮತ್ತು ಪ್ರತಿಪಕ್ಷಗಳು ಇದೇ “ನಾವು-ಅವರು” ತಂತ್ರವನ್ನು ಅನುಸರಿಸುತ್ತಾಬಂದಿವೆ.

​ಭಾರತದಲ್ಲಿ ಸರ್ವಾಧಿಕಾರಿ ಆಡಳಿತ ಎಂದಾದರೂ ಬಂದರೆ, ಅದು ಧರ್ಮ, ಜಾತಿ ಮತ್ತು ಹುಸಿ ರಾಷ್ಟ್ರೀಯತೆ ಮತ್ತು ಪೊಳ್ಳು ದೇಶಪ್ರೇಮದ ಹೆಸರಲ್ಲಿ ಬರಲಿದೆ. ಅದುದರಿಂದಲೇ ಇಲ್ಲಿ ಸದ್ಯಕ್ಕೆ ನಡೆಯುತ್ತಿರುವ ವಿದ್ಯಮಾನಗಳು ಭಯ ಹುಟ್ಟಿಸುತ್ತಿರುವುದು! ಹಿಂದುತ್ವದ ಹೆಸರಿನಲ್ಲಿ ಮುಸ್ಲಿಂ, ಕ್ರೈಸ್ತ ಸಮುದಾಯಗಳ ದೇಶಪ್ರೇಮವನ್ನು ಶಂಕಿಸುವಂತೆ ಮಾಡಿ, ಅವುಗಳ ವಿರುದ್ಧ ಅಸಹನೆಯನ್ನು ಮೂಡಿಸುವ ಯತ್ನಗಳನ್ನು—ಆರ್ಯನ್ ಶ್ರೇಷ್ಟತೆಯ ಹೆಸರಿನಲ್ಲಿ ಯಹೂದಿಗಳ ವಿರುದ್ಧ ಜರ್ಮನಿಯ ಸಾಮಾನ್ಯ ಪ್ರಜೆಗಳನ್ನು ಎತ್ತಿಕಟ್ಟಿದ ಹಿಟ್ಲರನ ನಾಜಿತಂತ್ರಗಳ ಕಡೆಗೆ ಇಟ್ಟ ಹೆಜ್ಜೆ ಎಂದೇ ಭಾವಿಸಬೇಕು. ಗೋಮಾಂಸ ಸಾಗಿಸುತ್ತಿದ್ದರು, ಮನೆಯ ಫ್ರಿಜ್ಜಿನಲ್ಲಿ ಗೋಮಾಂಸ ಇಟ್ಟಿದ್ದಾರೆ ಎಂಬ ಸಂಶಯ ಇತ್ಯಾದಿ ಕಾರಣಗಳಿಗಾಗಿ ನಡೆದ ದಾಳಿಗಳನ್ನು ಮತ್ತು ಬುಲ್ಡೋಝರ್ ನ್ಯಾಯದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮನೆಗಳನ್ನು ಕೆಡಹುವುದನ್ನು ಈ ನಿಟ್ಟಿನಲ್ಲಿ ನೋಡಬೇಕು.

​’ಹಿಂದೂ ಒಂದು’ ಎನ್ನುವ ಘೋಷಣೆಯ ಬೆನ್ನಲ್ಲೇ—ದನ ಸಾಗಾಟ, ದಲಿತರು ಕಾಲಮೇಲೆ ಕಾಲುಹಾಕಿದ್ದು, ಮದುಮಗ ಕುದುರೆಯ ಮೇಲೆ ಕುಳಿತದ್ದು, ಮೀಸೆ ಬಿಟ್ಟಿದ್ದು ಮುಂತಾದ ಕ್ಷುಲ್ಲಕ ಕಾರಣಗಳಿಗೆ ಮಾತ್ರವಲ್ಲ, ಕಾರಣವೇ ಇಲ್ಲದೇ ದಾಳಿಗಳು, ಕೊಲೆಗಳು, ಅತ್ಯಾಚಾರಗಳು ನಡೆದಿವೆ. ಸವರ್ಣೀಯರು ದಲಿತರನ್ನು ಥಳಿಸಿದ, ಬೆತ್ತಲೆಗೊಳಿಸಿದ, ಕೊಂದ ಘಟನೆಗಳಿಗೆ ಬೇರೇನು ವಿವರಣೆ ಕೊಡೋಣ!? ಜರ್ಮನಿಯಲ್ಲಿಯೂ ಅಲೆಮಾರಿ ಜಿಪ್ಸಿಗಳನ್ನು ನಿಷ್ಪ್ರಯೋಜಕ ಕೀಳು ಜನಾಂಗ ಎಂದು ಕಂಡಕಂಡಲ್ಲಿ ತಂಡೋಪತಂಡವಾಗಿ ಕೊಲ್ಲಲಾಗಿತ್ತು.
​ಅಲ್ಲಿ ಮಾಡಿದಂತೆಯೇ ಇಲ್ಲಿಯೂ ದಾಭೋಲ್ಕರ್, ಪಾನ್ಸರೆ, ಕಲ್ಬುರ್ಗಿ, ಗೌರಿ ಲಂಕೇಶ್ ಅವರಂತಹ ಬುದ್ಧಿಜೀವಿಗಳ ಕೊಲೆಗಳು, ವಿಚಾರವಾದಿಗಳ ಮೇಲೆ ದಾಳಿಗಳು, ವಿಚಾರಣೆ ಇಲ್ಲದೇ ಯುಎಪಿಎ ಅಡಿಯಲ್ಲಿ ವರ್ಷಗಟ್ಟಲೆ ಬಂಧನಗಳು ನಡೆದಿವೆ. ವಿರೋಧಿಸಿದವರಿಗೆ ‘ದೇಶದ್ರೋಹಿ’ ಪಟ್ಟಕಟ್ಟಿ ಪಾಕಿಸ್ತಾನಕ್ಕೆ ಕಳಿಸುವ ಮಾತಾಗುತ್ತಿರುವುದು ಬರೇ ಕಾಕತಾಳೀಯವೇ? ಅಥವಾ ಯೋಜಿತ ಸಂಚಿನ ಭಾಗವೇ?

ಸಕಲ ಕಲಾ ವಲ್ಲಭನ್!
​ಸರ್ವಾಧಿಕಾರದ ಇನ್ನೊಂದು ಲಕ್ಷಣವೆಂದರೆ ಏಕಪಕ್ಷೀಯ ನಿರ್ಧಾರ. ಒಬ್ಬ ವ್ಯಕ್ತಿ ಅಥವಾ ಒಂದು ಜಂಟಾ ಅಥವಾ ಗುಂಪಿನದ್ದೇ ಕಾರುಬಾರು. ಅವರ ನಿರ್ಧಾರಗಳನ್ನು ವಿರೋಧಿಸುವ ಧೈರ್ಯ ಮಾಡಿದವರು ಮೂಲೆಗುಂಪು. ಗಡಿಪಾರು, ಮರಣದಂಡನೆ ಇತ್ಯಾದಿಗಳು ಕ್ರೂರ ಸರ್ವಾಧಿಕಾರಗಳಲ್ಲಿ ಕಟ್ಟಿಟ್ಟ ಬುತ್ತಿ. ನಾವಿನ್ನು ಆ ಹಂತಕ್ಕೆ ತಲಪಿಲ್ಲ ಅಷ್ಟೇ. ನಮ್ಮ ದೇಶದಲ್ಲೇ ನಡೆಯುತ್ತಿರುವ ವ್ಯಕ್ತಿಪೂಜೆಯನ್ನು ನೋಡಿದರೆ, ಇದು ಪ್ರಜಾಪ್ರಭುತ್ವವು ಪರೋಕ್ಷ ಸರ್ವಾಧಿಕಾರದತ್ತ ಹೊರಳುವ ಲಕ್ಷಣದಂತೆ ಕಾಣುತ್ತಿದೆ. ಬಿಜೆಪಿಯಲ್ಲಿಯೇ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ ಜೋಶಿ, ಯಶವಂತ ಸಿನ್ಹಾ ಅವರಂತಹ ಹಿರಿಯ ನಾಯಕರನ್ನು ‘ಮಾರ್ಗದರ್ಶಕ್ ಮಂಡಲ’ದ ಹೆಸರಿನಲ್ಲಿ ಹೇಗೆ ಮೂಲೆಗುಂಪು ಮಾಡಲಾಯಿತು ಎಂಬುದನ್ನು ನಾವು ಗಮನಿಸಬಹುದು. ಉದಾಹರಣೆಗೆ ನಾವು ಒಂದು ಪ್ರಶ್ನೆಯನ್ನು ಕೇಳಿಕೊಳ್ಳೋಣ: ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಮುಂತಾದ ಕೆಲವರನ್ನು ಬಿಟ್ಟರೆ, ಯಾವ ಖಾತೆಗೆ ಯಾವ ಮಂತ್ರಿ ಎಂಬುದು ಎಷ್ಟು ಜನರಿಗೆ ಗೊತ್ತು?! ರೈಲು ಮಂತ್ರಿ ಇದ್ದರೂ ಪ್ರತಿಯೊಂದು ಯಕಶ್ಚಿತ್ ರೈಲಿಗೂ ಮಾಡಲು ಕೆಲಸವಿಲ್ಲದ ಪ್ರಧಾನಿಯೇ ಬಾವುಟ ತೋರಿಸಬೇಕು. ಎಲ್ಲಾ ಖಾತೆಗಳ ಯೋಜನೆಗಳನ್ನು ಅವರೇ ಉದ್ಘಾಟನೆ ಮಾಡಬೇಕು. ವಿದೇಶಾಂಗ ಮಂತ್ರಿ ಇದ್ದರೂ, ಚಿಕ್ಕಪುಟ್ಟ ದೇಶಗಳಿಗೂ ಅವರೇ ಭೇಟಿ ನೀಡಿ “ಗೌರವ ಪ್ರಶಸ್ತಿ” ಪಡೆದುಕೊಳ್ಳಬೇಕು!

“ಚೌಕಿದಾರ್ ಹೀ ಚೋರ್ ಹೈ!”
​ಇನ್ನೊಂದು ಲಕ್ಷಣವೆಂದರೆ, ಮಾನವ ಮತ್ತು ವೈಯಕ್ತಿಕ ಹಕ್ಕುಗಳ ದಮನ ಹಾಗೂ ಪ್ರತಿಭಟನೆಗಳ ಹತ್ತಿಕ್ಕುವಿಕೆ. ಪ್ರಜೆಯ ಅಧಿಕಾರಗಳನ್ನು ಮೊಟಕುಗೊಳಿಸುವುದು, ಅವರ ಚಲನವಲನಗಳ ಮೇಲೆ ಗುಪ್ತವಾಗಿ ಕಣ್ಣಿಡುವುದು, ಕಿರುಕುಳ ನೀಡುವುದು. ನಾಜಿ ಜರ್ಮನಿಯಲ್ಲಿ ಹಿಟ್ಲರನ ಆಡಳಿತವನ್ನು ವಿರೋಧಿಸಿ ಧ್ವನಿ ಎತ್ತಿದ ವಿದ್ಯಾರ್ಥಿ ಸಂಘಟನೆಗಳು (ಉದಾಹರಣೆಗೆ ‘ವೈಟ್ ರೋಸ್’ ಚಳವಳಿ) ಮತ್ತು ಕಾರ್ಮಿಕ ಸಂಘಗಳನ್ನು ಗೆಸ್ಟಾಪೋ ಹಾಗೂ ನಾಜಿ ಪಡೆಗಳು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಿ, ಗಲ್ಲಿಗೇರಿಸಿದ್ದವು. ಇಂದಿನ ಭಾರತದಲ್ಲೂ ವಿರೋಧ ಪಕ್ಷಗಳ ಧ್ವನಿಯನ್ನು, ಸಿಜೆಪಿ (CJP) ನಂತಹ ನಾಗರಿಕ ಹಕ್ಕುಗಳ ಸಂಘಟನೆಗಳ ಹೋರಾಟಗಳನ್ನು ಹಾಗೂ ಸರಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸಿ ದಿಲ್ಲಿ ಹಾಗೂ ದೇಶದ ಇತರೆಡೆ ನಡೆಯುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಕಠಿಣ ತಂತ್ರಗಳನ್ನು ಬಳಸಲಾಗುತ್ತಿದೆ. ದೆಹಲಿಯಲ್ಲಿ ನಡೆದ ವಿವಿಧ ಪ್ರತಿಭಟನೆಗಳ ಸಂದರ್ಭದಲ್ಲಿ, ಕಾನೂನುಬಾಹಿರವಾಗಿ ಜನರನ್ನು ವಶಕ್ಕೆ ಪಡೆಯುವುದು, ವಿರೋಧ ಪಕ್ಷದ ನಾಯಕರು ಹಾಗೂ ಹೋರಾಟಗಾರರನ್ನು ಗೃಹಬಂಧನದಲ್ಲಿಡುವುದು ಮುಂತಾದ ಧೋರಣೆಗಳು ಹೆಚ್ಚಾಗಿವೆ. ವಿಶೇಷವಾಗಿ, ಪ್ರತಿಭಟನೆಗಳನ್ನು ಹತ್ತಿಕ್ಕುವ ಮತ್ತು ನಿಯಂತ್ರಿಸುವ ವೇಳೆ ಕೆಲವೊಮ್ಮೆ ಪೊಲೀಸರು ತಮ್ಮ ಸಮವಸ್ತ್ರದ ಮೇಲೆ ಗುರುತಿನ ಚೀಟಿ (Name Tags) ಇಲ್ಲದೆ ಕಾರ್ಯಾಚರಣೆ ನಡೆಸುತ್ತಿರುವುದು, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಹಾಗೂ ಗುಪ್ತ ದಮನಕಾರ್ಯ ನಡೆಸುವ ನಾಜಿ ಶೈಲಿಯ ಪೊಲೀಸ್ ಗಿರಿಯನ್ನು ನೆನಪಿಸುತ್ತದೆ. ಇದರ ಜೊತೆಗೆ, ಅಧಿಕಾರಾರೂಢ ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿರುವ ಸಂಘಟನೆಗಳ ಕಾರ್ಯಕರ್ತರು ಮತ್ತು ನೇಮ್ ಟ್ಯಾಗ್ ರಹಿತ ಗೂಂಡಾ ಗುಂಪುಗಳು ಪೊಲೀಸರ ಮೌನ ಅಥವಾ ನೇರ ಆಶ್ರಯದಲ್ಲಿ ಪ್ರತಿಭಟನಾಕಾರರ ಮೇಲೆ ಹಿಂಸಾಚಾರ ನಡೆಸುವುದು ಹಾಗೂ ಪ್ರಚೋದನೆ ನೀಡುವುದು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೇ ಸವಾಲಾಗಿ ಪರಿಣಮಿಸಿದೆ.

​’ಅರ್ಬನ್ ನಕ್ಸಲ್’ ಪಿಳ್ಳೆ ನೆಪದ ಮೇಲೆ ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಸಾಹಿತಿಗಳು, ವಕೀಲರು, ಬುದ್ಧಿಜೀವಿಗಳ ಬಂಧನ, ಯು.ಎ.ಪಿ.ಎ (UAPA) ನಂತಹ ಕಠಿಣ ಕಾಯ್ದೆಗಳ ದುರ್ಬಳಕೆ, ಜಾರಿ ನಿರ್ದೇಶನಾಲಯ (ED), ಸಿಬಿಐ (CBI) ಮತ್ತು ಆದಾಯ ತೆರಿಗೆ ಇಲಾಖೆಯನ್ನು ವಿರೋಧ ಪಕ್ಷಗಳ ನಾಯಕರ ವಿರುದ್ಧ ಅಸ್ತ್ರವಾಗಿ ಬಳಸುವುದು ಮತ್ತಿನ್ನೇನು? ‘ಆಧಾರ್’ ಮತ್ತು ಪೆಗಾಸಸ್ (Pegasus) ಗೂಢಚಾರ ತಂತ್ರಾಂಶದ ಬಳಕೆಯ ಬಗ್ಗೆ ವ್ಯಕ್ತವಾಗಿರುವ ಆತಂಕಗಳ ಹಿಂದೆ ಇದೇ ಕಾರಣವಿದೆ. ಹತ್ತು ತನಿಖಾ ಸಂಸ್ಥೆಗಳಿಗೆ ನಾಗರಿಕರ ಇ-ಮೇಲ್ ಸಹಿತ ಸಾಮಾಜಿಕ ಜಾಲತಾಣಗಳ ಮಾಹಿತಿ ಪಡೆಯುವ ಅಧಿಕಾರ ನೀಡಿರುವುದನ್ನು ಈ ಹಿನ್ನೆಲೆಯಲ್ಲಿ ನೋಡಬಹುದು. ಮೋದಿಯವರಂತೂ “ದಿಮಾಗಿ ನಕ್ಸಲ್” (ಅಂದರೆ ಮೆದುಳು ಅಥವಾ ಬುದ್ಧಿವಂತಿಕೆ ಇರುವುದೇ ಅಪರಾಧ ಎಂಬಂತೆ) ಎಂಬ ಪದವನ್ನು ಎತ್ತಿಎತ್ತಿ ಕುಣಿದು ಪ್ರಧಾನಿ ಸ್ಥಾನದ ಗೌರವವನ್ನೇ ಇನ್ನಷ್ಟು ಕೆಳಗಿಳಿಸಿದರು.

​ಸರ್ವಾಧಿಕಾರಗಳಲ್ಲಿ ಇದು ಅತಿರೇಕಕ್ಕೆ ಹೋಗುತ್ತದೆ. ವಿರೋಧಿಗಳು ಮತ್ತು ಸರಕಾರದ ವಿರುದ್ಧ ಇರುವ ನಾಗರಿಕರನ್ನು ಗುರುತಿಸಿ, ಗುಪ್ತಚರ್ಯೆ ನಡೆಸಿ, ದಮನಿಸಲು ಜರ್ಮನಿಯಲ್ಲಿ ಅತ್ಯಂತ ಕ್ರೂರ ಗುಪ್ತ ರಾಜಕೀಯ ಪೊಲೀಸ್ ಪಡೆಯಾಗಿದ್ದ ‘ಗೆಸ್ಟಾಪೋ’ (Gestapo) ಅನ್ನು ಸ್ಥಾಪಿಸಲಾಗಿತ್ತು. ಈ ಹೆಸರು ಕೇಳಿದರೆ ನಾಗರಿಕರು ಮಾತ್ರವಲ್ಲ, ಸಾಮಾನ್ಯ ಪೊಲೀಸರೂ ಗಡಗಡ ನಡುಗುತ್ತಿದ್ದರು. ಲಕ್ಷಾಂತರ ಜರ್ಮನರನ್ನು ಮತ್ತು ಆಕ್ರಮಿತ ದೇಶಗಳ ಪ್ರಜೆಗಳನ್ನು ಚಿತ್ರಹಿಂಸೆ ಮಾಡಿ ಕೊಂದ ಕುಖ್ಯಾತಿ ಈ ‘ಗೆಸ್ಟಾಪೋ’ ರಾಕ್ಷಸರಿಗಿದೆ. ಹಿಟ್ಲರ್ ಬಾಲಬಡುಕ ಹೈನ್ರಿಚ್ ಮ್ಯುಲ್ಲರ್ ಇದರ ಮುಖ್ಯಸ್ಥನಾಗಿದ್ದ. ಭಾರತದಲ್ಲೂ ಇಂತಾ ದಿನಗಳು ಬರಬಹುದೇ ಎಂಬ ಆತಂಕ ಆಧಾರರಹಿತವಾದುದಲ್ಲ.

​ಮತ್ತೊಂದು ಲಕ್ಷಣವೆಂದರೆ ಸಮಾನಾಂತರ ವ್ಯವಸ್ಥೆ. ಸಾಮಾನ್ಯ ಸೇನಾಪಡೆಗಳಿಗೆ ಸಮಾನಂತರವಾಗಿ ನಾಜಿ ಜರ್ಮನಿಯಲ್ಲಿ ‘ವಾಫೆನ್ ಎಸ್‌ಎಸ್’ (Waffen-SS) ಎಂಬ ಪಡೆಗಳನ್ನು ಸ್ಥಾಪಿಸಲಾಗಿತ್ತು. ಎಸ್‌ಎಸ್ ಎಂದರೆ ‘ಶುಡ್ಝ್ ಸ್ಟ್ರಾಫೆಲ್’ ಎಂಬುದರ ಸಂಕ್ಷಿಪ್ತ. ಅದು ಆಡಳಿತ ಪಕ್ಷದ ಘಟಕ! ಅದರ ಸೇನಾ ವಿಭಾಗವೇ ವಾಫೆನ್ ಎಸ್ಎಸ್. ಇದರಲ್ಲಿ ಇದ್ದದ್ದು ಹಿಟ್ಲರನ ಕುರುಡು ಭಕ್ತರು! ‘ವರ್‌ಮ್ಯಾಷ್’ ಎಂದು ಕರೆಯಲ್ಪಡುತ್ತಿದ್ದ ಸಾಮಾನ್ಯ ಸೇನೆಯ ಹಿರಿಯ ಅಧಿಕಾರಿ ಕೂಡಾ ಈ ಎಸ್ಎಸ್‌ನ ಕಿರಿಯ ಅಧಿಕಾರಿಗೂ ಹೆದರಬೇಕಾಗಿತ್ತು! ಹೈನ್ರಿಚ್ ಹಿಮ್ಲರ್ ಎಂಬ ಬುದ್ಧಿವಂತ ಕ್ರೂರಿ ಇದರ ಮುಖ್ಯಸ್ಥನಾಗಿದ್ದ. ದಶಕಗಳಿಂದಲೂ ರಾಜಕೀಯದಿಂದ ದೂರ ಉಳಿದು ಸೇವೆ ಸಲ್ಲಿಸುತ್ತಿರುವ ರಕ್ಷಣಾ ಪಡೆಗಳಲ್ಲೂ ರಾಜಕೀಯ ನೇಮಕಗಳು ಹೆಚ್ಚಾಗುತ್ತಿವೆ. ಹೆಚ್ಚು ಹೆಚ್ಚು ಸೇನಾಧಿಕಾರಿಗಳು ಸರಕಾರದ ಪರ ಭಟ್ಟಂಗಿ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ವಿವಾದಾಸ್ಪದ “ಅಗ್ನಿವೀರ್” ಯೋಜನೆ ಕೂಡಾ ರಾಜಕೀಯ ಕಾರ್ಯಕರ್ತರ ನುಸುಳುತನದ ಆರೋಪಕ್ಕೆ ಗುರಿಯಾಗಿದೆ.

ಸರಕಾರಿ ಕಾವಲು ನಾಯಿಗಳು!
​ಮಾಧ್ಯಮಗಳ ನಿಯಂತ್ರಣ ಸರ್ವಾಧಿಕಾರದ ಇನ್ನೊಂದು ಲಕ್ಷಣ. ನಾಜಿ ಜರ್ಮನಿಯಲ್ಲಿ ‘ಗ್ಲೈಕ್‌ಶಾಲ್ಟುಂಗ್’ (Gleichschaltung) ನೀತಿಯ ಮೂಲಕ ಎಲ್ಲಾ ಸರಕಾರಿ ವಿರೋಧಿ ಪತ್ರಿಕೆಗಳನ್ನು ನಿಷೇಧಿಸಿ, ಮುಟ್ಟುಗೋಲು ಹಾಕಲಾಗಿತ್ತು. ಪತ್ರಕರ್ತರನ್ನು ಜೈಲಿಗೆ ತಳ್ಳಲಾಗಿತ್ತು. ರೇಡಿಯೋದಲ್ಲಿ ಹಿಟ್ಲರನ ಗುಣಗಾನ ಮಾಡಿ ಅವನನ್ನು ಸರ್ವಗುಣಸಂಪನ್ನ ವಿಶ್ವನಾಯಕನಂತೆ ಬಿಂಬಿಸಲಾಗಿತ್ತು. ಸಾಹಿತ್ಯ, ಸಿನಿಮಾ, ಸಂಗೀತ, ನಾಟಕ, ನೃತ್ಯ ಇತ್ಯಾದಿ ಎಲ್ಲಾ ಕ್ಷೇತ್ರಗಳನ್ನು ನಾಜಿ ಪಕ್ಷವೇ ನಿಯಂತ್ರಿಸುತ್ತಿತ್ತು. ನಮ್ಮಲ್ಲಿ ಅದರ ಅಗತ್ಯವೇ ಬಿದ್ದಿಲ್ಲ! ಪ್ರತಿಪಕ್ಷಗಳಂತೆ ಕೆಲಸಮಾಡಬೇಕಾದ ಮುಖ್ಯ ಮಾಧ್ಯಮಗಳೇ ಸರಕಾರದ ಕಾವಲು ನಾಯಿಗಳಾಗಿವೆ. ಪ್ರಮುಖ ದೃಶ್ಯ ಮಾಧ್ಯಮಗಳು ‘ಗೋದಿ ಮೀಡಿಯಾ’ಗಳಾಗಿ ಬದಲಾಗಿ ಸರಕಾರದ ತುತ್ತೂರಿ ಊದುತ್ತಿರುವ ಗುಲಾಮಿ ಸ್ಥಿತಿಯನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’, ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ಯಂತಹ ಪ್ರಚಾರ ಪ್ರಚೋದಿತ ಚಲನಚಿತ್ರಗಳು ಚಿತ್ರರಂಗಕ್ಕೂ ಈ ರೋಗ ವ್ಯಾಪಿಸಿರುವುದರ ಸಂಕೇತವಾಗಿದೆ. ಅವುಗಳಿಗೆ ಸರಕಾರದಿಂದ ಪ್ರೋತ್ಸಾಹ ಮತ್ತು ಪ್ರಶಸ್ತಿಗಳು ಸಿಗುತ್ತಿವೆ.

​ಸರ್ವಾಧಿಕಾರದ ಆರಂಭಿಕ ಲಕ್ಷಣಗಳಲ್ಲಿ ಒಂದೆಂದರೆ, ಪಕ್ಷದ ಕಾರ್ಯಕರ್ತರ ಗೂಂಡಾ ಪೊಲೀಸ್‌ಗಿರಿ. ಜರ್ಮನಿಯಲ್ಲಿ ಮೊದಲು ‘ಎಸ್‌ಎ’ (SA – Stormtroopers) ಪಡೆಗಳನ್ನು ಸ್ಥಾಪಿಸಿದ್ದು 1925ರಲ್ಲಿ—ಪಕ್ಷದ ಸಭೆಗಳಿಗೆ ಸೆಕ್ಯೂರಿಟಿ ಗಾರ್ಡುಗಳಾಗಿ! ವೃತ್ತಿಪರ ಗೂಂಡಾಗಳು, ನಿರುದ್ಯೋಗಿ ಕುರುಡು ಭಕ್ತರು ದೇಶಪ್ರೇಮದ ಹೆಸರಿನಲ್ಲಿ, ಜನಾಂಗೀಯ ಶ್ರೇಷ್ಟತೆಯ ಹೆಸರಿನಲ್ಲಿ ವಿರೋಧಿಗಳ ಸದ್ದಡಗಿಸುತ್ತಿದ್ದರು. ಇದೇ ಮುಂದೆ ಸರಕಾರಿ ಗೂಂಡಾಪಡೆಯಾಯಿತು. ಜೊತೆಗೆ ಯೂತ್‌ ಲೀಗ್, ವಿಮೆನ್ಸ್ ಲೀಗ್ ಇತ್ಯಾದಿ ಬೇರೆ ಬೇರೆ ಹೆಸರುಗಳಲ್ಲಿ ಹಲವು ಸಂಘಟನೆಗಳನ್ನು ರಚಿಸಲಾಯಿತು. ಉದ್ದೇಶ ಮಾತ್ರ ಒಂದೇ! ನಮ್ಮಲ್ಲಿಯೂ ಈ ಬೆಳವಣಿಗೆಯನ್ನು ಸ್ಪಷ್ಟವಾಗಿ ಕಾಣಬಹುದು. ‘ಗೋರಕ್ಷಕರು’, ‘ಸಂಸ್ಕೃತಿ ರಕ್ಷಕರು’ ಎಂಬ ಸೋಗಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ನೂರಾರು ಕ್ರಿಮಿನಲ್ ವಸೂಲಿ ಪಡೆಗಳು (Vigilante groups) ಸೃಷ್ಟಿಯಾಗಿವೆ. ಶಸ್ತ್ರಾಸ್ತ್ರ ಪೂಜೆ ಹಾಗೂ ತರಬೇತಿ ಶಿಬಿರಗಳನ್ನು ಬಹಿರಂಗವಾಗಿ ನಡೆಸುತ್ತಿರುವ ವರದಿಗಳು ಇವೆಲ್ಲವೂ ದೇಶವನ್ನು ಎತ್ತ ಸಾಗಿಸುತ್ತಿವೆ ಎಂಬುದನ್ನು ಸೂಚಿಸುತ್ತವೆ.

​ಇನ್ನೊಂದು ವಿಷಯವೆಂದರೆ, ಸರ್ವಾಧಿಕಾರಿಗಳು ಯಾವತ್ತೂ ತಮ್ಮನ್ನು ‘ಸರ್ವಾಧಿಕಾರಿ’ ಎಂದು ಕರೆದುಕೊಂಡಿಲ್ಲ. ದೇವರ ಪ್ರತಿನಿಧಿ, ಧರ್ಮರಕ್ಷಕ, ದೇಶರಕ್ಷಕ, ಅಧ್ಯಕ್ಷ, ಹಿಟ್ಲರನಂತೆ ಪರಮೋಚ್ಛ ನಾಯಕ (‘ಫ್ಯುರರ್’) ಇತ್ಯಾದಿ ಕರೆದುಕೊಂಡಿದ್ದಾರೆ. ಅದುದರಿಂದ ನಾವು ‘ವಿಶ್ವಗುರು’, ‘ಪ್ರಧಾನ ಸೇವಕ’, ‘ಚೌಕಿದಾರ್’ ಮುಂತಾದ ಬಿರುದುಗಳ ಕುರಿತೂ ಎಚ್ಚರದಿಂದ ಇರಬೇಕಾದ ಅಗತ್ಯವಿದೆ. ಇಂದಿನ ಮೌನವು ಮುಂದಿನ ಅಪಾಯಕ್ಕೆ ಸಮ್ಮತಿಯಾಗಬಹುದು.

Related Articles

ಇತ್ತೀಚಿನ ಸುದ್ದಿಗಳು