ಮಾದಕ ವಸ್ತು ಮಾರಾಟ ವಿರೋಧಿಸಿದ್ದಕ್ಕೆ ಪಂಜಾಬ್‌ನಲ್ಲಿ ಮತ್ತೊಬ್ಬನ ಹತ್ಯೆ: ಶ್ರೀಹರಿಗೋವಿಂದ್‌ಪುರದಲ್ಲಿ ದಾರುಣ ಕೃತ್ಯ

ಶ್ರೀಹರಿಗೋವಿಂದ್‌ಪುರ (ಪಂಜಾಬ್): ಮಾದಕ ವಸ್ತುಗಳ (ಡ್ರಗ್ಸ್) ಅಕ್ರಮ ಮಾರಾಟದ ವಿರುದ್ಧ ಧ್ವನಿಯೆತ್ತಿದ್ದ ಕಾರ್ಯಕರ್ತ ಪರ್ವಿಂದರ್ ಸಿಂಗ್ ಝೋಟಾ ಅವರ ಭೀಕರ ಹತ್ಯೆಯ ಬೆನ್ನಲ್ಲೇ, ಪಂಜಾಬ್‌ನಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರಾಜ್ಯದ ಗುರ್ದಾಸ್‌ಪುರ ಜಿಲ್ಲೆಯ ಶ್ರೀಹರಿಗೋವಿಂದ್‌ಪುರ ವ್ಯಾಪ್ತಿಯ ಪನ್ನವಾನ್ ಗ್ರಾಮದಲ್ಲಿ ಡ್ರಗ್ಸ್ ಮಾರಾಟವನ್ನು ಪ್ರಶ್ನಿಸಿದ 40 ವರ್ಷದ ಬಿಕ್ರಮ್‌ಜಿತ್ ಸಿಂಗ್ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಗ್ರಾಮದ ರಸ್ತೆಗಳಲ್ಲಿ ಮಾದಕ ದ್ರವ್ಯ ಮಾರಾಟಗಾರರು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದನ್ನು ಆಕ್ಷೇಪಿಸಿದ ಕಾರಣಕ್ಕೆ ಕೆರಳಿದ 15ಕ್ಕೂ ಹೆಚ್ಚು ಜನರಿದ್ದ ದುಷ್ಕರ್ಮಿಗಳ ಗುಂಪು ಬಿಕ್ರಮ್‌ಜಿತ್ ಸಿಂಗ್ ಹಾಗೂ ಅವರ ಜತೆಗಿದ್ದ ಇತರ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಬಿಕ್ರಮ್‌ಜಿತ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿದ್ದ ನಿಶಾನ್ ಸಿಂಗ್ ಮತ್ತು ಗುರುಮುಖ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕೆಲವೇ ದಿನಗಳ ಹಿಂದಷ್ಟೇ ಮಾನ್ಸಾದ ವೈದ್ಯಕೀಯ ಮಳಿಗೆಯೊಂದರಲ್ಲಿ ನಶೆ ತರಿಸುವ ಮಾತ್ರೆಗಳು ಮತ್ತು ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿರುವುದನ್ನು ಬಯಲಿಗೆಳೆಯಲು ಫೇಸ್‌ಬುಕ್ ಲೈವ್ ನಡೆಸುತ್ತಿದ್ದ ಕಾರ್ಯಕರ್ತ ಪರ್ವಿಂದರ್ ಸಿಂಗ್ ಝೋಟಾ ಅವರನ್ನು ಮಳಿಗೆ ಮಾಲೀಕ ಗುಂಡಿಕ್ಕಿ ಕೊಂದಿದ್ದ. ಈ ಘಟನೆಯ ಬಿಸಿ ಇನ್ನೂ ಆರುವ ಮುನ್ನವೇ ಬಿಕ್ರಮ್‌ಜಿತ್ ಅವರ ಹತ್ಯೆ ನಡೆದಿರುವುದು ಪಂಜಾಬ್‌ನಲ್ಲಿ ಡ್ರಗ್ ಮಾಫಿಯಾದ ಹಾವಳಿ ಹಾಗೂ ಕಾನೂನು ಸುವ್ಯವಸ್ಥೆಯ ವೈಫಲ್ಯದ ವಿರುದ್ಧ ಸಾರ್ವಜನಿಕರು ಮತ್ತು ವಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು