ದೆಹಲಿ: ದೇಶದಲ್ಲಿ ನಿರುದ್ಯೋಗ, ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ವಿವಾದ ಹಾಗೂ ಸರ್ಕಾರದ ನೀತಿಗಳ ವಿರುದ್ಧ ಯುವಜನರಲ್ಲಿ ಅಸಮಾಧಾನ ತೀವ್ರಗೊಳ್ಳುತ್ತಿದ್ದು, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ ಒಂದು ದಶಕದಲ್ಲೇ ಕಂಡು ಕೇಳರಿಯದ ರಾಜಕೀಯ ಒತ್ತಡಕ್ಕೆ ಸಿಲುಕಿದೆ.
ಜಾಗತಿಕ ಸಂಘರ್ಷ ಮತ್ತು ಪ್ರತಿಭಟನೆಗಳ ದತ್ತಾಂಶವನ್ನು ದಾಖಲಿಸುವ ಸ್ವತಂತ್ರ ಸಂಸ್ಥೆ ‘ಆರ್ಮ್ಡ್ ಕಾನ್ಫ್ಲಿಕ್ಟ್ ಲೊಕೇಶನ್ ಅಂಡ್ ಇವೆಂಟ್ ಡೇಟಾ’ (ACLED) ಪ್ರಾಜೆಕ್ಟ್ನ ಇತ್ತೀಚಿನ ವರದಿಯ ಪ್ರಕಾರ, ಈ ವರ್ಷ ಭಾರತದಲ್ಲಿ ನಡೆಯುತ್ತಿರುವ ಬೀದಿ ಪ್ರತಿಭಟನೆಗಳ ಪ್ರಮಾಣ ಕಳೆದ 10 ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಯಿದೆ.
2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿಯವರು ಎದುರಿಸುತ್ತಿರುವ ಅತ್ಯಂತ ಗಂಭೀರ ಹಾಗೂ ಆಳವಾದ ಆಡಳಿತಾತ್ಮಕ ಬಿಕ್ಕಟ್ಟು ಇದಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರ ರಾಜಧಾನಿ ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಯುವಜನರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅವರನ್ನು ತಡೆಯಲು ಸುಮಾರು 10,000ಕ್ಕೂ ಹೆಚ್ಚು ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಿ, ಬ್ಯಾರಿಕೇಡ್ಗಳನ್ನು ಹಾಕಲಾಗಿದ್ದರೂ ಸಹ, ಯುವ ಪ್ರತಿಭಟನಾಕಾರರು ಆ ನಿರ್ಬಂಧಗಳನ್ನು ಮುರಿದು ಮುನ್ನುಗ್ಗಿದ್ದರು.
ಹಿಂದೆ ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಗಳನ್ನು ಕಠಿಣವಾಗಿ ನಿಯಂತ್ರಿಸುತ್ತಿದ್ದ ಸರ್ಕಾರದ ಕ್ರಮಗಳಿಗೆ ಪ್ರಸ್ತುತ ಬೀದಿಗೆ ಇಳಿದಿರುವ ಜೆನ್ಜಿ (Gen Z) ತಲೆಮಾರಿನ ಯುವಕರು ಕಿಂಚಿತ್ತೂ ಅಂಜುತ್ತಿಲ್ಲ. ಹೊಸದಾಗಿ ಮುನ್ನೆಲೆಗೆ ಬಂದಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯಂತಹ ಯುವ ಸಂಘಟನೆಗಳ ನೇತೃತ್ವದ ಆಂದೋಲನಗಳು ಈ ಅಸಮಾಧಾನಕ್ಕೆ ಬಲವಾದ ವೇದಿಕೆ ಕಲ್ಪಿಸಿವೆ.
ದೇಶದ ಒಟ್ಟು 100 ಕೋಟಿಗೂ ಅಧಿಕ ಮತದಾರರಲ್ಲಿ 30 ವರ್ಷದೊಳಗಿನ ಯುವಜನರು ಸರಿಸುಮಾರು ನಾಲ್ಕನೇ ಒಂದು ಭಾಗದಷ್ಟಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಗಳು 2029ರವರೆಗೂ ನಡೆಯಬೇಕಿಲ್ಲವಾದ್ದರಿಂದ ಪ್ರಸ್ತುತ ಕೇಂದ್ರ ಸರ್ಕಾರ ಸಂಖ್ಯಾಬಲದ ದೃಷ್ಟಿಯಿಂದ ಸುರಕ್ಷಿತವಾಗಿದ್ದರೂ, ಯುವ ಮತದಾರರಲ್ಲಿ ಕಾಣಿಸಿಕೊಂಡಿರುವ ಈ ಅಸಮ್ಮತಿ ಆಡಳಿತಾರೂಢರಿಗೆ ನಡುಕ ಹುಟ್ಟಿಸಿದೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಖ್ಯಾತ ಸಾಮಾಜಿಕ ಚಿಂತಕ ಯೋಗೇಂದ್ರ ಯಾದವ್, “ದೇಶವು ಅನಿರೀಕ್ಷಿತವಾಗಿ ತನ್ನ ಸ್ವಂತ ಧ್ವನಿಯನ್ನು ಕಂಡುಕೊಂಡಿದೆ; ಇದನ್ನು ಮೋದಿ ಆಡಳಿತದ ಅಂತ್ಯದ ಆರಂಭವೆಂದು ಕರೆಯದಿದ್ದರೂ, ಖಂಡಿತವಾಗಿಯೂ ಅವರ ಜನಪ್ರಿಯತೆಯ ಪತನದ ನಾಂದಿ ಎನ್ನಬಹುದು,” ಎಂದು ವಿಶ್ಲೇಷಿಸಿದ್ದಾರೆ.
