ತಿಂಗಳಿಗೆ ₹15 ಸಾವಿರ ಸಂಬಳ ಪಡೆಯುವ ಯುವಕನ ಹೆಸರಿನಲ್ಲಿ ₹350 ಕೋಟಿ ಜಿಎಸ್‌ಟಿ ವಹಿವಾಟು!
ಲಿಂಕ್ ನಕಲಿಸಲಾಗಿದೆ ✓
ಬಳ್ಳಾರಿ: ತಿಂಗಳಿಗೆ ಕೇವಲ ₹15 ಸಾವಿರ ಸಂಬಳ ಪಡೆಯುವ ಯುವಕನ ಹೆಸರಿನಲ್ಲಿ ಐದು ತಿಂಗಳ ಅವಧಿಯಲ್ಲಿ ಬರೋಬ್ಬರಿ ₹350 ಕೋಟಿ ಮೌಲ್ಯದ ಜಿಎಸ್‌ಟಿ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದ್ದು, ನಕಲಿ ಕಂಪನಿ ನೋಂದಣಿ ಮೂಲಕ ನಡೆದಿರುವ ದೊಡ್ಡ ಮಟ್ಟದ ವಂಚನೆಯ ಶಂಕೆ ವ್ಯಕ್ತವಾಗಿದೆ.
ಬಳ್ಳಾರಿ ನಿವಾಸಿ ರೋಷನ್ ಜಮೀಲ್ ಟೊಯೋಟಾ ಕಾರು ಶೋರೂಂನಲ್ಲಿ ಸೇವಾ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದು, ಅವರ ಕುಟುಂಬಕ್ಕೆ ಜಿಎಸ್‌ಟಿ ಅಧಿಕಾರಿಗಳು ಮನೆಗೆ ಬಂದು ವಹಿವಾಟಿನ ಕುರಿತು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ತಮ್ಮ ಹೆಸರಿನಲ್ಲಿ ಯಾವುದೇ ಉದ್ಯಮ ನಡೆಸದಿದ್ದರೂ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವುದನ್ನು ಕಂಡು ರೋಷನ್ ಮತ್ತು ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ಈ ಸಂಬಂಧ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ರೋಷನ್ ಅವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ವಿದ್ಯುತ್ ಬಿಲ್ ದಾಖಲೆಗಳನ್ನು ಬಳಸಿಕೊಂಡು ಮೇ 7ರಂದು ‘ರೋಷನ್ ಎಂಟರ್‌ಪ್ರೈಸಸ್’ ಎಂಬ ಹೆಸರಿನಲ್ಲಿ ನಕಲಿ ಸಂಸ್ಥೆ ನೋಂದಾಯಿಸಲಾಗಿದೆ. ಆದರೆ ಸಂಸ್ಥೆಯ ನೋಂದಣಿಯಲ್ಲಿ ಬಳಸಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ ರೋಷನ್ ಅವರದ್ದಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಂಚನೆಯ ಹಿಂದೆ ಯಾರಿದ್ದಾರೆ, ದಾಖಲೆಗಳನ್ನು ಹೇಗೆ ಪಡೆದುಕೊಳ್ಳಲಾಗಿದೆ ಮತ್ತು ₹350 ಕೋಟಿ ವಹಿವಾಟಿನ ಹಣಕಾಸಿನ ಮೂಲವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Peepal Media Desk
Peepal Media · ರಾಜ್ಯ ವಿಭಾಗ