Friday, June 14, 2024

ಸತ್ಯ | ನ್ಯಾಯ |ಧರ್ಮ

‘ಕಾಂತಾರ’: ದೃಶ್ಯಸಂಭ್ರಮದ ಮಂಜು ಕರಗಿದ ಮೇಲೆ…

ಹಿಂದೆ ನಡೆದಿರುವ ನಿಜ ಘಟನೆಗಳನ್ನು ದೈವ-ಕಾರ್ಣಿಕ-ಮಾಯಕ ಎನ್ನುವ ಬಟ್ಟಲಿನಲ್ಲಿ ಮೃಷ್ಟಾನ್ನ ಭೋಜನವಾಗಿ ಉಣಬಡಿಸಿದ್ದು ಈ ಚಿತ್ರದ ಜಾಣ್ಮೆ. ಹೊಟ್ಟೆ ತುಂಬಿದ ಮೇಲೆ ಪ್ರಶ್ನಿಸುವ ಪ್ರಜ್ಞೆ ಮತ್ತು ಹಕ್ಕು ಎರಡನ್ನೂ ಕಳಕೊಳ್ಳುವ ಅಪಾಯ ಹೆಚ್ಚು ಎಂದು ತಮ್ಮ ಅನ್ನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಕ್ಯಾಲಿಫೋರ್ನಿಯಾದಿಂದ ಹೇಮಶ್ರೀ ಸಯೇದ್.

ದಲಿತನೊಬ್ಬ ಮಾಸ್ ಕಮರ್ಶಿಯಲ್ ಕನ್ನಡ ಚಿತ್ರವೊಂದರ ನಾಯಕನಾಗಿರುವುದು, ದಮನಿತರ ಕತೆಯೊಂದು ನೇಟಿವಿಟಿ, ಭೂತಾರಾಧನೆಯ ವೈಭವಗಳೊಂದಿಗೆ ದೊಡ್ಡ ಪರದೆಯ ಮೇಲೆ ನ ಭೂತೋ ನ ಭವಿಷ್ಯತಿ ಎಂಬಂತೆ ಚಿತ್ರಿತವಾಗಿರುವುದು, ಕರಾವಳಿಯ ಹಸಿರು ಮರ ಕಾಡು ಬೆಟ್ಟ ಬೈಲು ಗುಡಿಸಲು ಎಲ್ಲವೂ ಡ್ರೋನ್ ಷಾಟ್ ಗಳಲ್ಲಿ ಸುಂದರವಾಗಿ ಕಂಗೊಳಿಸುತ್ತಿರುವುದು, ಕೆಲವೊಂದು ಸನ್ನಿವೇಶಗಳು ನಮ್ಮನ್ನು ಮುಖ್ಯವಾಗಿ ಕರಾವಳಿಗರನ್ನು ಭಾವುಕರನ್ನಾಗಿಸುವಲ್ಲಿ ಯಶಸ್ವಿಯಾಗಿರುವುದು ಇವೆಲ್ಲ ಖಂಡಿತವಾಗಿಯೂ ‘ಕಾಂತಾರ’ ಚಿತ್ರದ ಗೆಲುವು.

ಆರೋಗ್ಯಕರವಾದ ಚರ್ಚೆ, ಅಗತ್ಯ ಮತ್ತು ಒಂದು ಸಿನಿಮಾ ಅದನ್ನು ಹುಟ್ಟು ಹಾಕಿದೆಯೆಂದರೆ ಸಂತೋಷವೇ! ಸಿನಿಮಾವೊಂದರ ವಿಮರ್ಶೆ ಎನ್ನುವುದೇ ಇತ್ತೀಚಿನ ದಿನಗಳಲ್ಲಿ ಒಂದು ಸಾಹಿತ್ಯ ಪ್ರಕಾರವಾಗಿದೆ. ಹಾಗಿರುವಾಗ, ವಿವಿಧ ಸ್ತರಗಳಿಂದ ಬರುವ ಪರ ವಿರೋಧ ಅಭಿಪ್ರಾಯಗಳನ್ನು ಕಲೆ ಹಾಕಿ ಒಂದು ಸಿನಿಮಾವನ್ನು ಮರು ಓದಿಕೊಳ್ಳುವುದು ಆದಾಗಲೇ ಮುಂದಿನ (ಸಿನಿಮಾ) ‘ನೋಡುವಿಕೆ’ ಗೆ ಸಹಾಯವಾಗಬಹುದು.

ಕರಾವಳಿಯ ಮೂಲವಾಸಿಗಳ – ತಳಸಮುದಾಯಗಳ ನೆಲದ ಹಕ್ಕನ್ನು ಕಸಿದು, ಅವರನ್ನು ಜೀತದಾಳುಗಳನ್ನಾಗಿಸಿದ ಸತ್ಯಕತೆಯನ್ನು ದಂತಕತೆ ಎನ್ನುವ taglineನೊಂದಿಗೆ ಜೋಡಿಸಿದ ಕೂಡಲೇ ನಂಬುವುದು ಬಿಡುವುದು ಪ್ರೇಕ್ಷಕನಿಗೆ ಬಿಟ್ಟದ್ದು. ಕರಾವಳಿಯ ಜನಕ್ಕೆ ಭಾವನಾತ್ಮಕವಾಗಿ ಹತ್ತಿರವಿರುವ ದೈವಾರಾಧನೆಯ ನಂಬಿಕೆಯ ಸುತ್ತ ಕತೆ ಕಟ್ಟಲು ಬಳಸಿಕೊಂಡದ್ದು ಸೂಕ್ತವೇ. ಚಿತ್ರದಲ್ಲಿ ಬರುವ ಹಲವು ರೆಬೆಲ್ ಅನ್ನಿಸುವ ಸನ್ನಿವೇಶಗಳು, ಮೈ ಜುಂ ಎನ್ನಿಸುವ ವಾಹ್ ಅನಿಸುವ ದೃಶ್ಯಗಳೇ. ಆದರೆ, ಅದರ ಆಚೆಗೆ ಒಟ್ಟಾರೆಯಾಗಿ ಚಿತ್ರ ಏನನ್ನು ಧ್ವನಿಸುತ್ತದೆ, ಹೊಸ ಹೊಳಹುಗಳನ್ನು ನೀಡುತ್ತಿದೆಯಾ ಅಥವಾ ಇರುವ ಕತೆಯನ್ನೇ ಹೇಗೆ ಜನರಿಗೆ ತಲುಪಿಸುತ್ತಿದೆ ಮತ್ತು ಹಾಗೆ ತಲುಪಿಸುವ ಪ್ರಕ್ರಿಯೆಯಲ್ಲಿ ನಿಜವಾಗಿಯೂ ಜನರಿಗೆ ಸಂದೇಶ ಮುಟ್ಟಿದೆಯೇ ಎನ್ನುವುದು ಕೂಡ ಮುಖ್ಯ. ಕರಾವಳಿಯ ಈಗಿನ ಸಂಕೀರ್ಣ ರಾಜಕೀಯದ ಸಂದರ್ಭದಲ್ಲಿ ಅದು ಸಾಧ್ಯವೇ? ಜನರು ಭಕ್ತಿಯಿಂದಾಚೆಗೆ ಬಂದು ಕತೆಯ ನಿಜವಾದ ಹೂರಣ ಏನು ಎನ್ನುವುದನ್ನು ಗಮನಿಸುತ್ತಾರೆಯೇ?

ದಲಿತ ಸಂವೇದನೆಯ ಕತೆಯೊಂದು ಮಾಸ್ ಕಮರ್ಶಿಯಲ್ ಸಿನೆಮಾ ಆಗಿರುವುದೂ ಸಹ ಚಿತ್ರದ ಗೆಲುವು ಮತ್ತು ಸೋಲೂ ಸಹ. ಚಿತ್ರದ ಕ್ಲೈಮಾಕ್ಸ್ ನಲ್ಲಿನ ರಿಷಭ್ ನಟನೆ, ದೈವಾರಾಧನೆಯ ಅಬ್ಬರ, ಕೊನೆಯ 20 ನಿಮಿಷಗಳು ಇಡೀ ಚಿತ್ರದ ಸಂದೇಶವನ್ನು ಮರೆ ಮಾಚುವಂತೆ ಮಾಡುವ ಅಪಾಯವಿದೆ. ಮತ್ತು ಈಗಾಗಲೇ ಜನ ಮಾತಾಡುತ್ತಿರುವುದು ಆ ಅಬ್ಬರವನ್ನೇ. ಜನರಿಗೆ ನೆನಪಲ್ಲಿ ಉಳಿಯುವುದೂ ಅಷ್ಟೇ. ದರ್ಶನ ಮುಗಿದ ನಂತರ ಪಾತ್ರಿ ಏನಿದ್ದರೂ ಅವ ಮುಟ್ಟಿಸಿಕೊಳ್ಳಲಾಗದವನೇ!


ಚಿತ್ರದ ಕೊನೆಯಲ್ಲಿ,  ಧಣಿ ಊರವರ ಮೇಲೆ unleash ಮಾಡುವ ಹಿಂಸೆ ಸಾಮಾನ್ಯದ್ದಲ್ಲ. ಎದುರಿಗೆ ಬಂದ ಎಲ್ಲರನ್ನೂ ಕೊನೆಗೆ ತನ್ನ ನಿಷ್ಠಾವಂತ ಬಂಟನನ್ನೂ ಲೆಕ್ಕಿಸದೆ ಕೊಲ್ಲುತ್ತಾ ಹೋಗುತ್ತಾನೆ. ಈ ಹಿಂಸೆಗೆ ಎದುರಾಗಿ ದೈವಾವೇಶಕ್ಕೆ ಒಳಗಾದ ನಾಯಕ ಶಿವ ದುಷ್ಟ ಸಂಹಾರ ಮಾಡುತ್ತಾನೆ. ಧಣಿಯ ಕ್ರೌರ್ಯದೆದುರು ಅರಣ್ಯಾಧಿಕಾರಿಯದ್ದು ಸಾತ್ವಿಕ ಹಿಂಸೆಯಾಗಿ ತೋರುತ್ತದೆ. ಹಾಗಾಗಿಯೇ ಅರಣ್ಯಾಧಿಕಾರಿ ಊರವರ ದೃಷ್ಟಿಯಲ್ಲಿ ಒಮ್ಮಿಂದೊಮ್ಮೆಲೇ ಖಳನಾಯಕನಿಂದ lesser evil ಆಗಿಬಿಡುತ್ತಾನೆ. ಕೊನೆಗೆ ದೈವವೇ ಎಲ್ಲರನ್ನು ಒಟ್ಟುಗೂಡಿಸಿತು ಎನ್ನುವಲ್ಲಿಗೆ … ಮಂಗಳ!

ಕತೆಯ ಆಶಯ ದೈವ ಎಲ್ಲರನ್ನೂ ಒಟ್ಟುಗೂಡಿಸಿತು ಎನ್ನುವುದು ಚಂದದ ಆದರ್ಶವೇನೋ ಹೌದು. ಹಾಗೆ ಒಟ್ಟು ಗೂಡಿಸಿದ್ದಾದರೂ ಯಾರನ್ನು? ಕತೆಯ ಉದ್ದಕ್ಕೂ ಕಾಡಿನವಾಸಿಗಳ ಬಗ್ಗೆ ಸಂಶಯ ತೋರಿ ಅವರನ್ನು ಶಿಕ್ಷಿಸುವ ಅರಣ್ಯ ಇಲಾಖೆಯ ಅಧಿಕಾರಿಯನ್ನು ಮತ್ತು ಅದೇ ಅಧಿಕಾರಿಯ ಕೆಳಗೆ ಶೋಷಣೆಗೊಳಗಾದ ಮಂದಿಯನ್ನು. ಆ ಅಧಿಕಾರಿ ಒಂದು ಕೇವಲ ಪಾತ್ರವಾಗದೆ ಒಟ್ಟು ಪೋಲಿಸ್ – ಅಧಿಕಾರಶಾಹಿ ವರ್ಗದ ಪ್ರತಿನಿಧಿಯಲ್ಲವೇ? ಇರಲಿ, ಆ ಅಧಿಕಾರಿಯಾದರೂ ಮೊದಲಿಂದಲೂ ಶೋಷಿತರ ಬಗ್ಗೆ ಕಾಳಜಿ ಇದ್ದವನೆಂದು ತೋರಿಸಿದ್ದರೂ ದೈವದ ನುಡಿಗೆ ಹೆಚ್ಚಿನ ಬಲ ಬರುತಿತ್ತೇನೋ?

ನಮ್ಮ ಕಣ್ಣೆದುರೇ ಲಿಖಿತ ಇತಿಹಾಸಗಳನ್ನೇ ತಿದ್ದಿ ತಿರುಚಲಾಗುತ್ತಿದೆ. ಇನ್ನು ಮೌಖಿಕ ಪರಂಪರೆಯ ಜನಪದರ ಕತೆಗಳನ್ನು ದಂತಕತೆಯಾಗಿಸುವುದೇನು ಕಷ್ಟವೇ? ಧಣಿಗಳ ಯಾಜಮಾನ್ಯ ಪರಂಪರೆ ಹೋಗಿ ನವ ವಸಾಹತುಶಾಹಿ ವರ್ಗ ಆ ಜಾಗದಲ್ಲಿ ಬಂದು ಕೂತಾಗಿದೆ. ದಮನಿತರ ಕತೆಯನ್ನು ಹೇಳುತ್ತಲೇ ಅವರು ಒಪ್ಪಂದದ ಮಾರ್ಗವನ್ನೇ ಅನುಸರಿಸಬೇಕೆನ್ನುವುದು ನಿರ್ದೇಶಕರ ಸೇಫ್ ಆಯ್ಕೆ. ಚಿತ್ರದ ಮೊದಲು ಮತ್ತು ಕೊನೆಯಲ್ಲಿ ಬರುವ ವರಾಹ ಸ್ತೋತ್ರ (?) ಇಡೀ ಚಿತ್ರವನ್ನು ಪ್ರಸಾದದ ಗಿಫ್ಟ್ ಕವರ್ ನಲ್ಲಿ ಕೊಟ್ಟು ಕಣ್ಣಿಗೆ ಒತ್ತಿಕೊಳ್ಳಿ ಎಂದ‌ ಹಾಗಿದೆ.

ಸಿನಿಮಾದ ಕೊನೆಯ ವಿಶುವಲ್ ರಚನೆ ನೋಡಿದಾಗ – ಗರ್ಭಿಣಿ ಲೀಲಾಳ closeup tilt down, ಶಿವ ಮತ್ತೆ ಕಾಡಿನಲ್ಲಿ ಮಾಯವಾಗುವುದು, ಕೊನೆಯಲ್ಲಿ ಮಗು ಕೇಳುವ ಪ್ರಶ್ನೆಗೆ ನಗುವಿನ ಉತ್ತರ ಎಲ್ಲವೂ open ended ಆಗಿರುವುದು, ಶಿವನೂ ಸಹ ಮಾಯವಾಗುವ (ಮಾಯವಾಗಿಸಿದ) ಸುಳಿವಿಗೆ ಅರ್ಥವೇನು ಎನ್ನುವುದನ್ನು ನಿರ್ದೇಶಕ ನೋಡುಗರಿಗೇ ಬಿಟ್ಟಿದ್ದಾರೆ!

‘ನಾವು ಬಂದದ್ದು ಎಲ್ಲಿಂದ ಎನ್ನುವುದನ್ನು ಮರೆತು ಬಿಡುವುದು ನಮ್ಮ ಜನರ ಸಮಸ್ಯೆ’. ಹೌದು. ಹಾಗೆ ಮರೆತು ಬಿಡಲು

ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸ್ಥಿತ್ಯಂತರಗಳೂ ಕಾರಣವಾಗುತ್ತವೆಯೇನೋ?

ಸ್ವಾತಂತ್ರ್ಯೋತ್ತರದಲ್ಲಿ ಹೆಚ್ಚಿನ ಶೂದ್ರ-ದಲಿತ ಸಮುದಾಯಗಳು ವಿದ್ಯಾವಂತರಾಗಿ  ತಮ್ಮ ಭೂಮಿಯ ಹಕ್ಕು, ಶಿಕ್ಷಣದ ಹಕ್ಕು,  ಉದ್ಯೋಗದ ಹಕ್ಕು, ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕುಗಳನ್ನು  ಗುರುತಿಸಿಕೊಳ್ಳುವ, ದಕ್ಕಿಸಿಕೊಳ್ಳುವ, ಉಳಿಸಿಕೊಳ್ಳುವ , ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ. ಸಾಮಾನ್ಯ ಜನರ ಈ ಸಂಘರ್ಷಗಳು ‘ದಂತಕತೆ’ಯ ಹೆಸರಲ್ಲಿ ಆರಾಧನೆಯ ಪೀಠವೇರಿ ಕೂತರೆ, ಮುಂದೆಯೂ ಹೋರಾಟ, ದುರಂತಗಳು ನಡೆದಾಗ ಪ್ರಶ್ನಿಸುವ ಹಕ್ಕು ಇರುವವರೂ ಧರ್ಮಸಂಕಟಕ್ಕೆ ಸಿಲುಕಿ ಕೊಳ್ಳುತ್ತಾರೆ. ಗೊತ್ತಿದ್ದೂ ಗೊತ್ತಿದ್ದೂ ಎಲ್ಲರೂ ಧರ್ಮ-ಜಾತಿ-ವರ್ಗದ ಹೆಸರಲ್ಲಿ ಅನ್ಯಾಯ ನಡೆಸುವವರಿಗೆ ಸಾಥ್ ನೀಡುವ ಹಾಗಾಗುತ್ತದೆ.

ಹಿಂದೆ ನಡೆದಿರುವ ನಿಜ ಘಟನೆಗಳನ್ನು ದೈವ-ಕಾರ್ಣಿಕ-ಮಾಯಕ ಎನ್ನುವ ಬಟ್ಟಲಿನಲ್ಲಿ ಮೃಷ್ಟಾನ್ನ ಭೋಜನವಾಗಿ ಉಣಬಡಿಸಿದ್ದು ಈ ಚಿತ್ರದ ಜಾಣ್ಮೆ. ಹೊಟ್ಟೆ ತುಂಬಿಸಿದ ಮೇಲೆ ಜನ ಮರುಳೇ. ಪ್ರಶ್ನಿಸುವ ಪ್ರಜ್ಞೆ ಮತ್ತು ಹಕ್ಕು ಎರಡನ್ನೂ ಕಳಕೊಳ್ಳುವ ಅಪಾಯ ಹೆಚ್ಚು.

ದೈವ ದೇವರ ನಂಬಿಕೆ ಇರುವ ವ್ಯಕ್ತಿಗಳನ್ನು ಅವರ ನಂಬಿಕೆಯ ಕಾರಣಕ್ಕಾಗಿಯೇ ಪ್ರಶ್ನೆ ಮಾಡುವ ಅಗತ್ಯವಿಲ್ಲ. ಆದರೆ ಖಾಸಗಿಯಾಗಿರಬೇಕಾದ ನಂಬಿಕೆ ಆಚರಣೆಗಳು ಆ ಚೌಕಟ್ಟನ್ನು ದಾಟಿ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ವ್ಯವಸ್ಥೆಯ ಬುನಾದಿಯಾಗಿರುವಾಗ, ಬಹುತೇಕ ಭಾರತದ ಹೆಗ್ಗುರುತೇ ಆಗಿರುವಾಗ ‘ಕಾಂತಾರ’ ದಂತಹ ಚಿತ್ರಗಳು ಸಾಂಸ್ಕೃತಿಕ ರಾಯಭಾರದ ಸಿದ್ಧಮಾದರಿಯ ಅಧಿಕೃತ ದಾಖಲೆಗಳಾಗಿಬಿಡುತ್ತವೆ. ಜತೆಗೆ ಅವುಗಳ ಲೋಪ ದೋಷಗಳೂ ಸಹ.

ಕನ್ನಡದ ಸಿನಿಮಾವೊಂದು ತಮಿಳು, ತೆಲುಗು, ಹಿಂದಿ ಚಿತ್ರಗಳ ಕಲಾತ್ಮಕತೆ, ತಂತ್ರಜ್ಞಾನಕ್ಕೆ ಸರಿಸಮಾನವಾಗಿ ನಿಂತಿರುವುದೂ ಹೆಗ್ಗಳಿಕೆಯೇ. ಮತ್ತು ಆ ಕಾರಣಕ್ಕಾಗಿಯೇ ರಿಷಭ್ ಶೆಟ್ಟಿ ಹಾಗೂ ‘ಕಾಂತಾರ’ ಚಿತ್ರ ತಂಡಕ್ಕೆ ಥ್ಯಾಂಕ್ಸ್ ಹೇಳಲೇಬೇಕು.‌

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

(ಹೇಮಶ್ರೀ ಸಯೇದ್ಈಟಿವಿ-ಕನ್ನಡ, ದೂರದರ್ಶನ ಸುದ್ದಿ ವಿಭಾಗದಲ್ಲಿ ಕೆಲಸದ ಅನುಭವ. ಫ್ರೀಲಾನ್ಸರ್‌ ಆಗಿಯೂ ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ನಿರ್ದೇಶನ ಮಾಡಿರುತ್ತಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರವಣಿಗೆ ಹವ್ಯಾಸ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸ)

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ರಾಹುಲ್‌ ಗಾಂಧಿಯವರೇ ಕನ್ನಡಿಗರ ಈ ಸೊಲ್ಲು ಆಲಿಸಿ
ಭಾರತವನ್ನು ಜೋಡಿಸಲು ಚಾರಿತ್ರಿಕ “ಬಾರತ್‌ ಜೋಡೋ” ಪಾದಯಾತ್ರೆ ಹಮ್ಮಿಕೊಂಡಿರುವ ರಾಹುಲ್‌ ಗಾಂಧಿಯವರು ಕನ್ನಡಿಗರ ಆತಂಕಗಳನ್ನು ನಿವಾರಿಸುವ ಬದ್ಧತೆ ತೋರುರೆ, ಕನ್ನಡಿಗರ ಈ ಸೊಲ್ಲನ್ನು ಆಲಿಸುವವರೆ? ಪತ್ರಕರ್ತ, ಲೇಖಕ ಹರ್ಷಕುಮಾರ್‌ ಕುಗ್ವೆ ಕನ್ನಡಿಗರ ಹಕ್ಕೊತ್ತಾಯವೇನು ಎಂದು ಇಲ್ಲಿ ತಿಳಿಸಿದ್ದಾರೆ

https://www.facebook.com/peepaltvkannada/videos/1200412170521513


ಈ ವಿಡಿಯೋವನ್ನು ಯೂಟ್ಯೂಬ್‌ ನಲ್ಲಿ ನೋಡಲು 👇🏼
https://youtu.be/

Related Articles

ಇತ್ತೀಚಿನ ಸುದ್ದಿಗಳು