ಎರಡು ಮಕ್ಕಳಿರುವ ಹೆಂಗಸನ್ನು ಮದುವೆಯಾಗುವುದಾಗಿ ಹಟ ಹಿಡಿದ ಮಗನನ್ನು ಕೊಂದು ಮುಗಿಸಿದ ತಾಯಿ
ಲಿಂಕ್ ನಕಲಿಸಲಾಗಿದೆ ✓
ತುಮಕೂರು: ಮದುವೆಯಾಗಿರುವ, ಇಬ್ಬರು ಮಕ್ಕಳ ತಾಯಿಯನ್ನು ಮದುವೆಯಾಗುವುದಾಗಿ ಮಗ ಹಠ ಹಿಡಿದಿದ್ದಕ್ಕೆ ಆತನ ತಾಯಿಯೇ ಕೊಲೆ ಮಾಡಿರುವ ಆರೋಪ ತುಮಕೂರು ತಾಲ್ಲೂಕಿನ ಜಕ್ಕೇನಹಳ್ಳಿ ಗ್ರಾಮದಲ್ಲಿ ಕೇಳಿಬಂದಿದೆ. ಪ್ರಕರಣದ ತನಿಖೆ ನಡೆಸಿದ ತುಮಕೂರು ಗ್ರಾಮಾಂತರ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿ ಶಿವಮ್ಮ ಅವರನ್ನು ಬಂಧಿಸಿದ್ದಾರೆ.
ಮೃತನನ್ನು ಮುತ್ತುರಾಜ್ ಎಂದು ಗುರುತಿಸಲಾಗಿದೆ. ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮುತ್ತುರಾಜ್, ಘಟನೆ ನಡೆಯುವ ಮೂರು ದಿನಗಳ ಮೊದಲು ತನ್ನ ಸ್ವಗ್ರಾಮ ಜಕ್ಕೇನಹಳ್ಳಿಗೆ ಮರಳಿದ್ದ. ತಂದೆ ಪುಟ್ಟಯ್ಯ, ತಾಯಿ ಶಿವಮ್ಮ, ಸಹೋದರಿ ನರಸಮ್ಮ ಹಾಗೂ ಆಕೆಯ ಪುಟ್ಟ ಮಗುವಿನೊಂದಿಗೆ ಮನೆಯಲ್ಲಿ ವಾಸವಾಗಿದ್ದ.
ಸಾವಿಗೂ ಹಿಂದಿನ ದಿನ ಖುಷಿಯಿಂದ ಇದ್ದ ಮುತ್ತುರಾಜ್
ಘಟನೆ ನಡೆಯುವ ಹಿಂದಿನ ಸಂಜೆ ಮುತ್ತುರಾಜ್ ಮನೆಗೆ ಗೋಬಿ ಮಂಚೂರಿ ತಂದಿದ್ದ. ಕುಟುಂಬದ ಸದಸ್ಯರಿಗೆ ಪ್ರಸಾದವನ್ನೂ ಹಂಚಿದ್ದ. ಆ ದಿನ ಆತ ಸಂತೋಷದಿಂದ ಇದ್ದುದಾಗಿ ತಿಳಿದುಬಂದಿದೆ.
ರಾತ್ರಿ ಊಟ ಮುಗಿಸಿದ ಬಳಿಕ ಮನೆಯ ಹೊರಭಾಗದಲ್ಲಿ ಚಾಪೆ ಹಾಕಿಕೊಂಡು ಮಲಗಿದ್ದ. ಮರುದಿನ ಬೆಳಗ್ಗೆ ಸಹೋದರಿ ನರಸಮ್ಮ ಎದ್ದು ನೋಡಿದಾಗ, ಮುತ್ತುರಾಜ್ ಹೊದಿಕೆಯೊಳಗೆ ಮಲಗಿರುವುದು ಕಂಡುಬಂದಿದೆ. ಆತನ ಬಳಿ ಹೋದಾಗ ಚಾಪೆಯ ಮೇಲೆ ರಕ್ತದ ಕಲೆಗಳು ಕಾಣಿಸಿಕೊಂಡಿವೆ. ಪರಿಶೀಲಿಸಿದಾಗ ಆತನ ತಲೆಗೆ ಗಂಭೀರ ಗಾಯಗಳಾಗಿದ್ದು, ಮೃತಪಟ್ಟಿರುವುದು ಕುಟುಂಬದವರಿಗೆ ತಿಳಿದುಬಂದಿದೆ.
ಮದುವೆ ವಿಚಾರವಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ
ಪೊಲೀಸರ ತನಿಖೆಯ ಪ್ರಕಾರ, ಮುತ್ತುರಾಜ್ ಅದೇ ಗ್ರಾಮದ ಬೇರೆ ಜಾತಿಗೆ ಸೇರಿದ ವಿವಾಹಿತ ಮಹಿಳೆಯೊಬ್ಬರೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಆ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಆಕೆಯನ್ನು ಮದುವೆಯಾಗುವುದಾಗಿ ಮುತ್ತುರಾಜ್ ಹಠ ಹಿಡಿದಿದ್ದ. ಆದರೆ ಕುಟುಂಬದವರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಮಗನ ನಿರ್ಧಾರದಿಂದ ತಾಯಿ ಶಿವಮ್ಮ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಈ ಮದುವೆ ವಿಚಾರವಾಗಿ ಮಗನಿಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದರೂ ಆತ ತನ್ನ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದೇ ವಿಚಾರವಾಗಿ ಕುಟುಂಬದಲ್ಲಿ ನಿರಂತರ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಿಂದ ಪ್ರಕರಣಕ್ಕೆ ಮಹತ್ವದ ಸುಳಿವು
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ದೃಶ್ಯಗಳಲ್ಲಿ ಮುತ್ತುರಾಜ್ ಮನೆಯ ಹೊರಗೆ ಮಲಗಿದ್ದ ಸಂದರ್ಭದಲ್ಲಿ ಶಿವಮ್ಮ ಆತನ ಬಳಿ ಬಂದು ಮರದ ಕೋಲು ಅಥವಾ ದೊಣ್ಣೆಯಿಂದ ಹಲ್ಲೆ ನಡೆಸಿರುವುದು ಸೆರೆಯಾಗಿದೆ ಎಂದು ವರದಿಯಾಗಿದೆ.
ಈ ಸಿಸಿಟಿವಿ ದೃಶ್ಯಾವಳಿಗಳು ತನಿಖೆಯಲ್ಲಿ ಪ್ರಮುಖ ಸುಳಿವಾಗಿವೆ. ಬಳಿಕ ಪೊಲೀಸರು ಶಿವಮ್ಮ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ಅವರು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ತುಮಕೂರು ನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ್ ಹಾಗೂ ತುಮಕೂರು ಗ್ರಾಮಾಂತರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಶಿವಮ್ಮ ಅವರನ್ನು ಬಂಧಿಸಿ, ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.
ಘಟನೆಯಿಂದ ಜಕ್ಕೇನಹಳ್ಳಿ ಗ್ರಾಮದಲ್ಲಿ ಆತಂಕ ಮತ್ತು ಚರ್ಚೆ ಉಂಟಾಗಿದೆ. ಕುಟುಂಬದೊಳಗಿನ ಮದುವೆ ವಿಚಾರದ ಭಿನ್ನಾಭಿಪ್ರಾಯ ಕೊಲೆ ಪ್ರಕರಣಕ್ಕೆ ಕಾರಣವಾಗಿದೆ ಎಂಬ ಆರೋಪದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
Peepal Media
Peepal Media · ಕ್ರೈಂ ವಿಭಾಗ