Thursday, June 13, 2024

ಸತ್ಯ | ನ್ಯಾಯ |ಧರ್ಮ

ಭೂಮ್ತಾಯಿಯ ಬಯಕೆ ತೀರಿಸುವ ಭೂಮಿ ಹುಣ್ಣಿಮೆ ಹಬ್ಬ

ಮಹಾನವಮಿ- ವಿಜಯದಶಮಿ ಕಳೆದು ಐದನೇ ದಿನ ಬರುವ ಹುಣ್ಣಿಮೆಯೇ ಭೂಮಿ ಹುಣ್ಣಿಮೆ. ಮಲೆನಾಡಿಲಲ್ಲಿರುವ ರೈತಾಪಿಗಳ ವಿಶೇಷ ಹಬ್ಬವೇ ಭೂಮಿ ಹುಣ್ಣಿಮೆ ಹಬ್ಬ ಅತವಾ ಬೂಮಣ್ಣಿ ಹಬ್ಬ. ಬಯಲುಸೀಮೆಯ ರೈತರು ಸೀಗೆ ಹುಣ್ಣಿಮೆ ಆಚರಿಸಿದರೆ, ಮಲೆನಾಡಿನ ರೈತಾಪಿ ಸಮುದಾಯಗಳು ಈ ಬೂಮಣ್ಣಿ ಹಬ್ಬ ಆಚರಿಸುತ್ತಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ಸೀಮೆಯ ಕೃಷಿ ಮೂಲದ ದೀವರು ಬೂಮಣ್ಣಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವುದು ವಾಡಿಕೆಯಾಗಿ ಬಂದಿದೆ. ಈ ಹಬ್ಬಕ್ಕೆ ನಾಲ್ಕೈದು ದಿನಗಳ ಮೊದಲೇ ಅಂದರೆ ಮಹಾನವಮಿ ಹಿಂದಿನ ದಿನ ಅಟ್ಟದ ಮೇಲಿಂದ ಬೂಮಣ್ಣಿ ಬುಟ್ಟಿ, ಹಚ್ಚಂಬಲಿ ಬುಟ್ಟಿ ಕೆಳಗೆ ಇಳಿಸಿ ಅವುಗಳನ್ನು ತೊಳೆದು ಸಗಣಿ ಸಾರಿಸಿ ಬಿಸಿಲಲ್ಲಿ ಒಣಗಿಸಿ ನಂತರ ಕೆಮ್ಮಣ್ಣು ಬಳಿದು ಬಿಸಿಲಲ್ಲಿ ಮತ್ತೆ ಒಣಗಿಸುತ್ತಾರೆ. ನಂತರ ಅದರ ಮೇಲೆ ಚಿತ್ತಾರ ಬಿಡಿಸುವುದು. ಇದಕ್ಕೆ ಅಕ್ಕಿ ನೆನೆಸಿಟ್ಟು, ಅದನ್ನು ತಿರುವಿ ಬಿಳಿ ಹಾಲಿನಂತ ಬಣ್ಣ ತಯಾರಿಸಿಕೊಂಡಿರುತ್ತಾರೆ. ಕೆಮ್ಮಣ್ಣು ಬಳಿದಿಟ್ಟಿರುವ ಬುಟ್ಟಿಗಳಿಗೆ ಮನೆಯ ಹೆಂಗಸರು ಚಿತ್ತಾರ ಬಿಡಿಸುತ್ತಾರೆ. ಈ ಚಿತ್ತಾರ ಬುಟ್ಟಿ ಬರೆಯುವುದು ಕೂಡ ಅವ್ವಂದಿರಿಂದ ಹೆಣ್ಣು ಮಕ್ಕಳಿಗೆ ತಲೆಮಾರಿನಿಂದ ನೋಡಿ ಕಲಿತು ಬರೆಯುವ ಕಲೆಯಾಗಿ ಅನೂಚಾನವಾಗಿ ಬಂದಿದೆ.  

ಪುಂಡಿ ನಾರಿನ ಕುಂಚದಿಂದ ಬುಟ್ಟಿಯ ಸುತ್ತಲೂ ಗೆರೆಗಳ ಚಿತ್ತಾರಗಳು ಅನಾವರಣಗೊಳ್ಳುತ್ತವೆ. ಅಲ್ಲಿ ಕೃಷಿ ಪರಿಕರಗಳು, ಭತ್ತದ ಸಸಿ, ಭತ್ತದ ಬಣವೆ, ಜೋಗಿ ಜಡೆ, ತೆಂಗಿನ ಮರ, ಗೂಡಿನ ಹಕ್ಕಿ, ಸೀತೆ ಮುಡಿ, ನೇಗಿಲು ಉಳುಮೆ, ಭೂಮಣ್ಣಿ ಬುಟ್ಟಿ ಹೊತ್ತುಕೊಂಡು ಹೊರಟ ಗಂಡಸು, ಹೆಂಗಸು ಮಕ್ಕಳು, ಹೀಗೆ ಬಿಳಿ ರೇಖೆಯ  ನಾನಾ ಚಿತ್ತಾರಗಳು ರೂಪುಗೊಳ್ಳುತ್ತವೆ. ಆ ಎಲ್ಲಾ ಚಿತ್ತಾರಗಳೂ ಬುಟ್ಟಿಯ ತುಂಬಾ ರೇಖೆಗಳಿಂದ ರಚಿಸಿದ ಚೌಕಗಳ ನಡುವೆ ಬರೆಯಲ್ಪಟ್ಟಿರುತ್ತವೆ. ಅಂದು ಹೆಣ್ಣುಮಕ್ಕಳು ರಾತ್ರಿ ಇಡೀ ಎಚ್ಚರವಿದ್ದು ತಯಾರಿಸಿಟ್ಟ ಸಿಹಿತಿಂಡಿ, ಕಡುಬು, ಕಜ್ಜಾಯ, ಮೊಸರು ಬುತ್ತಿ, ಮೀನು ಸಾರು, ಹೀಗೆ ವಿವಿಧ ತಿನಿಸುಗಳನ್ನು ಬೂಮಣ್ಣಿ ಬುಟ್ಟಿಯಲ್ಲಿ ತುಂಬಿಕೊಂಡು ಹೊಲಗಳಿಗೆ, ತೋಟಗಳಿಗೆ ಹೊತ್ತೊಯ್ದು ಕುಟುಂಬದ ಎಲ್ಲಾ ಸದಸ್ಯರು, ಸಸಿ ಪೂಜೆ ಮಾಡುವುದೇ ಒಂದು ವಿಶೇಷ.

ಹೊಡೆಗೆ ಬಂದ ಸಸಿಗಳೆಂದರೆ ಗರ್ಭವತಿಯಾದ ಹೆಣ್ಣೆಂದು ಕಲ್ಪಿಸಿಕೊಂಡು ಆಕೆಗೆ ಬಯಕೆ ತೀರಿಸುವುದೇ ಈ ಹಬ್ಬದ ವಿಶಿಷ್ಟತೆ. ಸಸಿ ಎಡೆ, ಇಲಿ ಎಡೆ, ಗೂಳಿ ಎಡೆ ಎಂದು ಬಾಳೆ ಎಲೆಯಲ್ಲಿ ಇಟ್ಟ ಎಡೆಗಳನ್ನು ಪೂಜೆ ಮಾಡುತ್ತಾರೆ. ಪೂಜೆಗೆ ಮೊದಲು ಎರಡು ಸಸಿಗಳಿಗೆ ತೋರಣ ಕಟ್ಟಿ ಮನೆಯ ಯಜಮಾನಿ ತನ್ನ ತಾಳಿಸರವನ್ನು ಕಟ್ಟಿ, ಹೂ ಮುಡಿಸಿ, ಪೂಜೆ ಮಾಡುತ್ತಾಳೆ. ನಂತರ ಗೂಳಿ ಎಡೆಯನ್ನು ಹೊಲದಲ್ಲೇ ಅಷ್ಟು ದೂರ ಹೋಗಿ ಕರೆದು ದೂರದಲ್ಲಿ ಇಟ್ಟು ಬರುತ್ತಾರೆ. ಗೂಳಿ ಎಂದರೆ ದೆವ್ವಕಾಗೆ ಎಂದು ಕರೆಯಲಾಗುವ ಕಾಗೆಗಳು. ʼನಮ್ಮ ಹಿರಿಯರು ಕಾಗೆಗಳ ರೂಪದಲ್ಲಿ ಈ ಹಬ್ಬಕ್ಕೆ ವಿಶೇಷ ಅಡುಗೆ ತಿನ್ನಲು ಬರುತ್ತಾರೆ ಎಂದು ನಂಬುಗೆ. ಆ ಕಾಗೆಗಳು ಬಂದು ಆ ಎಡೆಯಲ್ಲಿರುವ ತಿನಿಸುಗಳನ್ನು ತಿನ್ನುವವರೆಗೂ ಮನೆಮಂದಿ ಯಾರೂ ಊಟ ಮಾಡುವುದಿಲ್ಲ. ನಂತರ ಹೊಲದಲ್ಲಿಯೇ ಊಟ ಮಾಡಿ ಮನೆಗೆ ತೆರಳುತ್ತಾರೆ.

ಅಂದು ಬೆಳಕು ಹರಿಯುವುದರೊಳಗೆ ಹಚ್ಚಂಬಲಿಯನ್ನು ತಮ್ಮ ಎಲ್ಲಾ ಹೊಲಗದ್ದೆ, ತೋಟ, ಹಿತ್ತಲುಗಳಿಗೆ ಬೀರುವುದು ಒಂದು ಸಂಪ್ರದಾಯ. ಈ ಹಚ್ಚಂಬಲಿ ಎಂದರೆ ʼಚರಗʼ ಎಂದೂ ಕರೆಯುತ್ತಾರೆ. ಹಿತ್ತಲಲ್ಲಿ ಬೆಳೆದ ವಿವಿಧ ತರಕಾರಿ, ಸೊಪ್ಪುಗಳನ್ನು ಸೇರಿಸಿ ಅದಕ್ಕೆ ಅಕ್ಕಿಯನ್ನು ಹಾಕಿ ಮಿಶ್ರಣ ಮಾಡಿ ಬೇಯಿಸುವುದೇ ಹಚ್ಚಂಬಲಿ. ಈ ಹಚ್ಚಂಬಲಿ ಅಥವಾ ಚರಗವನ್ನು ಒಯ್ಯಲು ಇನ್ನೊಂದು ಚಿಕ್ಕ ಬುಟ್ಟಿ ಇದ್ದು ಅದನ್ನೂ ಚಿತ್ತಾರಗಳಿಂದ ಸಿಂಗರಿಸಲಾಗಿರುತ್ತದೆ. ಅದರಲ್ಲಿ ಮನೆಯ ಗಂಡಸರು ಬೆಳಕು ಹರಿಯುವುದರೊಳಗೆ ಚರಗ ಬೀರಿ ಬರುತ್ತಾರೆ. ಚರಗದಲ್ಲಿ ಅಮಟೆ ಕಾಯಿಯನ್ನು ಬೇಯಿಸಿ ಬೆರೆಸುವುದು ವಿಶೇಷ. ಹೀಗೆ ಬೀರುವಾಗ, “ಹಚ್ಚಂಬಲಿ ಹರಿವೆ ಸೊಪ್ಪು, ಹಿತ್ಲಾಗಿದ್ದ ಧಾರೆ ಹೀರೇಕಾಯಿ, ಹೋಯ್‌ ಹೊಯ್‌ ಹೊಯ್‌ ಹೊಯ್”‌ ಎಂದು ಕೂಗಿಹೇಳುವುದು ವಾಡಿಕೆ. ಚರಗ ಬೀರಿದಾಗ ಮಣ್ಣು ಹೆಚ್ಚು ಸಾರವಾಗಿ ಬೆಳೆ ಹುಲುಸಾಗುವುದು ಎಂಬ ನಂಬಿಕೆ ಜನಪದರಲ್ಲಿದೆ. ಆನಂತರ ಚಿತ್ತಾರದ ದೊಡ್ಡ ಬುಟ್ಟಿಯಲ್ಲಿ ಮನೆಯಲ್ಲಿ ಮಾಡಿದ ತಿಂಡಿ, ತಿನಿಸು ಹೊತ್ತುಕೊಂಡು ಹೋಗಿ ಭೂಮ್ಕ್ಯವ್ವಳಿಗೆ ಅಂದರೆ ಭೂಮಿತಾಯಿಗೆ ಬಯಕೆ ತೀರಿಸುವುದೇ ಈ ಹಬ್ಬದ ಆಚರಣೆ. ಈಗಲೂ ಸಂಭ್ರಮದಿಂದ ನಡೆದುಕೊಂಡು ಬಂದಿದೆ. ಹಬ್ಬದ ಊಟ ಮಾಡಿದ ನಂತರ ಕೈಗೆ ಮನೆ ಮಂದಿಯೆಲ್ಲ ಹಂಗು ನೂಲು ಕಟ್ಟಿಕೊಳ್ಳುತ್ತಾರೆ. ಭೂಮ್ಕ್ಯವ್ವಳ ಹಂಗು ತಮ್ಮ ಮೇಲಿದೆ ಎಂಬ ಸಂಕೇತ ಇದಿರಬಹುದು. ಮುಂದೆ ಸುಗ್ಗಿಯ ಸಮಯದಲ್ಲಿ ಭತ್ತ ಕುಯ್ದು ಕಣದಲ್ಲಿ ಬಣವೆ ಹಾಕಿದಾಗ ಈ ಹಂಗು ನೂಲನ್ನು ಬಿಚ್ಚಿ ಬಣವೆ ಮೇಲಿಡುತ್ತಾರೆ.

ಕೃಷಿ ಸಮುದಾಯಗಳು ಭೂಮಿಯನ್ನು ತಾಯಿ ಎಂದು ಬಗೆಯುವ ಪರಿಪಾಠ ಇಂದು ನೆನ್ನೆಯದಲ್ಲ. ಸುಮಾರು ಹನ್ನೊಂದು ಸಾವಿರ ವರ್ಶಗಳ ಹಿಂದೆ ಭಾರತದ ಭೂಖಂಡದಲ್ಲಿ ದ್ರಾವಿಡ ಸಮುದಾಯಗಳು ಆರಂಭಿಸಿದ ಕೃಷಿ ಸಂಸ್ಕೃತಿಯಲ್ಲೇ ಈ ತತ್ವದ ಬೇರುಗಳನ್ನು ಕಾಣಬಹುದು. ಪ್ರಾಚೀನ ಕಾಲದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಕೃಷಿ ನಾಗರಿಕತೆಯಾಗಿದ್ದ ಸಿಂಧೂ ಬಯಲಿನ ಹರಪ್ಪಾ ನಾಗರಿಕತೆಯಲ್ಲಿ ಈ ಮಾತೃ ಪ್ರಧಾನ ಸಂಸ್ಕೃತಿಯ ಬೇರುಗಳನ್ನು ಗುರುತಿಸಲಾಗಿದೆ. ನಾಡಿನ ಉದ್ದಗಲಕ್ಕೂ ಇರುವ ಗ್ರಾಮ ದೇವತೆಗಳು, ಸ್ತ್ರೀ ಭೂತಗಳು, ತುಳುನಾಡ ಸಿರಿಗಳು ಸಹ ಇಂತಹ ಒಂದು ದ್ರಾವಿಡ ಮಾತೃಪ್ರಧಾನ ಸಂಸ್ಕೃತಿಯ ಭಾಗವೇ ಆಗಿವೆ.

ಎನ್‌ ಶಿವಾನಂದ ಕುಗ್ವೆ, ಸಾಮಾಜಿಕ ಚಿಂತಕರು ಸಾಗರ

ಎನ್‌ ಶಿವಾನಂದ ಕುಗ್ವೆ

Related Articles

ಇತ್ತೀಚಿನ ಸುದ್ದಿಗಳು