Wednesday, June 19, 2024

ಸತ್ಯ | ನ್ಯಾಯ |ಧರ್ಮ

ಪಕ್ಷದ ಅಧಿಕೃತ ಚಿಹ್ನೆ ಮತ್ತು ಹೆಸರಿಗಾಗಿ ಉದ್ಧವ್ ಠಾಕ್ರೆ ಬಣ ಸುಪ್ರೀಂಕೋರ್ಟ್ ಗೆ ಮೊರೆ!

ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ಚುನಾವಣಾ ಚಿಹ್ನೆ ರದ್ದುಗೊಳಿಸಿದ ಚುನಾವಣಾ ಆಯೋಗದ ವಿರುದ್ಧ ಇಂದು ಶಿವಸೇನೆ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿನ ಉಪಚುನಾವಣೆ ಹಿನ್ನೆಲೆ ಉದ್ಧವ್‌ ಠಾಕ್ರೆ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಗುಂಪುಗಳು ಮುಂದಿನ ತಿಂಗಳು ಪಕ್ಷದ ಹೆಸರನ್ನು ಬಳಸದಂತೆ ಚುನಾವಣಾ ಆಯೋಗ ಶನಿವಾರ ನೀಡಿರುವ ಮಧ್ಯಂತರ ಆದೇಶದಲ್ಲಿ ನಿರ್ಬಂಧಿಸಿತ್ತು.

ನವೆಂಬರ್ 3 ರಂದು ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಪಕ್ಷದ ಹೆಸರು ಮತ್ತು ಅದರ ಚುನಾವಣಾ ಚಿಹ್ನೆ ‘ಬಿಲ್ಲು ಮತ್ತು ಬಾಣವನ್ನು ಬಳಸದಂತೆ ಚುನಾವಣಾ ಆಯೋಗ ಎರಡೂ ಬಣಗಳನ್ನು ನಿರ್ಬಂಧಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನಡುವಿನ ರಾಜಕೀಯ ಸೆಣಸಾಟದಲ್ಲಿ ಏಕನಾಥ ಶಿಂದೆ ತಮ್ಮದೇ ಅಸಲಿ ಶಿವಸೇನೆ ಪಕ್ಷ ಎಂದು ವಾದಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪಕ್ಷದ ಚಿಹ್ನೆ ಬಿಲ್ಲು-ಬಾಣವನ್ನು ಮತ್ತು ಪಕ್ಷದ ಹೆಸರನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಮೊದಲ ಹಂತದಲ್ಲಿ ಉದ್ದವ್ ಠಾಕ್ರೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿ ಪಕ್ಷದ ಅಧಿಕೃತ ‘ಬಿಲ್ಲು-ಬಾಣ’ದ ಚಿಹ್ನೆಯನ್ನು ಉಪಚುನಾವಣೆಗೆ ಬಳಸಲು ಅನುಮತಿ ನೀಡುವಂತೆ ಕೋರಿಕೊಂಡಿತ್ತು.

ಕಾನೂನು ಪ್ರಕ್ರಿಯೆ ಅಡಿಯಲ್ಲಿ ಇದು ತಡವಾಗುವುದಾದರೆ ತ್ರಿಶೂಲ ಅಥವಾ ಉದಯಿಸುತ್ತಿರುವ ಸೂರ್ಯ ಅಥವಾ ಬೆಳಗುತ್ತಿರುವ ದೀವಟಿಗೆ ಚಿಹ್ನೆಯನ್ನು ಕೊಡುವಂತೆಯೂ ಅನುಮತಿ ಕೋರಿತ್ತು. ಚುನಾವಣಾ ಆಯೋಗ ಇದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಯಿಸಿದ ಹಿನ್ನೆಲೆಯಲ್ಲಿ ಇನ್ನೇನು ಚುನಾವಣೆ ಕೆಲವೇ ದಿನ ಉಳಿದಿದ್ದು, ಇಂದು ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು