ನವದೆಹಲಿ: ಪಂಜಾಬ್‌ನ ಪಟಿಯಾಲದ 13 ವರ್ಷದ ಬಾಲಕ ತನ್ನ ನೆಚ್ಚಿನ ಯೂಟ್ಯೂಬ್ ಸ್ಟಾರ್‌ನನ್ನು ಭೇಟಿ ಮಾಡುವ ಪ್ರಯತ್ನದಲ್ಲಿ ಮೂರು ದಿನಗಳ ಕಾಲ 250 ಕಿಲೋಮೀಟರ್ ದೂರದ ದೆಹಲಿಗೆ ಸೈಕಲ್ ತುಳಿದಿದ್ದು, ಆತನನ್ನು ಇಂದು ಪೊಲೀಸರು ಪತ್ತೆ ಮಾಡಿ ಆತನ ಕುಟುಂಬಕ್ಕೆ ಒಪ್ಪಿಸಿದ್ದಾರೆ.
8 ನೇ ತರಗತಿಯ ವಿದ್ಯಾರ್ಥಿಯೊಬ್ಬ 1.7 ಕೋಟಿ ಚಂದಾದಾರರನ್ನು ಹೊಂದಿರುವ ಹಾಸ್ಯ ಮತ್ತು ವಿಡಂಬನಾತ್ಮಕ ಚಾನೆಲ್ ‘ಟ್ರಿಗರ್ಡ್ ಇನ್ಸಾನ್’ ಯುಟ್ಯೂಬ್ ಸ್ಟಾರ್ ʼನಿಶ್ಚಯ್ ಮಲ್ಹಾನ್ʼ ಅವರನ್ನು ನೋಡಲು ಸೈಕಲ್ ನಲ್ಲಿ ದೆಹಲಿಗೆ ತೆರಳಿದ್ದಾನೆ.
ಹುಡುಗನು ಅಕ್ಟೋಬರ್ 4 ರಂದು ಮನೆಯಲ್ಲಿ ಯಾರಿಗೂ ತಿಳಿಸದೆ ದೆಹಲಿಗೆ ಹೋಗಿದ್ದು, ಪೋಷಕರು ಮಗನ ಸುಳಿವು ಸಿಗದೆ ಕಂಗಾಲಾಗಿದ್ದಾರೆ. ನಂತರ ಆತನು ತನ್ನ ನೆಚ್ಚಿನ ಯುಟ್ಯೂಬ್ ಸ್ಟಾರ್ ನನ್ನು ಭೇಟಿಮಾಡಲು ಹೋಗಿರಬಹುದು ಎಂದು ಭಾವಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ ಪೊಲೀಸರು ಹುಡುಗನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ, ಈ ಕುರಿತು ಯುಟ್ಯೂಬರ್‌ಗೆ ಮಾಹಿತಿ ನೀಡಿದ್ದು, ಯೂಟ್ಯೂಬರ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗನಿಗೆ ಮನೆಗೆ ಮರಳಿ ಹೋಗುವಂತೆ ಒತ್ತಾಯಿಸಿದ್ದಾರೆ.
ಈ ಹಿನ್ನಲೆ ಹುಡುಗನ ಸುಳಿವಿಗೋಸ್ಕರ ಅವನು ಹೋಗಬೇಕಾಗಿದ್ದ ಮಾರ್ಗದಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಆತನು ಸೈಕಲ್ ನಲ್ಲಿ ದೆಹಲಿ ಕಡೆಗೆ ತೆರಳುವ ದೃಶ್ಯಗಳು ಸೆರೆಯಾಗಿವೆ.
ಪೊಲೀಸ್ ಮಾಹಿತಿ ಪ್ರಕಾರ, ಆತನು ರಾತ್ರಿ ವೇಳೆ ಎಲ್ಲಿ ತಂಗಿದ್ದ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ತನ್ನ ಮೂರುದಿನಗಳ ಪ್ರಯತ್ನದಿಂದ ಆತನು ಯುಟ್ಯೂಬರ್ ಇರುವ ಅಪಾರ್ಟ್ಮೆಂಟ್‌ಗೆ ಹೋಗಿದ್ದಾನೆ. ಅದರೆ ಯುಟ್ಯೂಬರ್ ದುಬೈಗೆ ಹೋಗಿದ್ದರಿಂದ ಅವರು ಮನೆಯಲ್ಲಿ ಇರಲಿಲ್ಲ. ಈ ಕಾರಣ ಬೇಸರಗೊಂಡು ಬಾಲಕ ಅಲ್ಲೇ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಕೂತಿದ್ದರಿಂದ, ಪೊಲೀಸರು ಆತನ್ನು ಗುರುತಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿಸಿದರು.
ನಂತರ ಹುಡುಗನನ್ನು ಅವರ ಪೋಷಕರಿಗೆ ಹಸ್ತಾಂತರಿಸಿದ್ದು, ಪೊಲೀಸರ ಈ ಕಾರ್ಯಕ್ಕೆ ಪೋಷಕರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಈ ಹಿನ್ನಲೆ ಯುಟ್ಯೂಬರ್ ಕೂಡ ಸಂತಸ ವ್ಯಕ್ತಪಡಿಸಿದ್ದು, ʼಒಳ್ಳೆಯ ಸುದ್ದಿ ಜನರೇ, ಹುಡುಗ ಪತ್ತೆಯಾಗಿದ್ದಾನೆ. ಆ ಹುಡುಗನ್ನು ಪೋಷಕರಿಗೆ ಸಿಗುವಂತೆ ಮಾಡಿದ ದೇವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.