ಹಾಸನ : ಹಾಸನಾಂಬ ಜಾತ್ರೆಯಲ್ಲಿ ಪಾಲ್ಗೊಂಡು, ಹಾಸನಾಂಬೆ ದೇವಿ ದರ್ಶನ ಮುಗಿಸಿ ಹೋಗುವಾಗ ಭಕ್ತರ ಕಾರು ಅಪಘಾತಕ್ಕೆ ಈಡಾಗಿದ್ದು, ತಂದೆ-ಮಗಳು ಧಾರುಣವಾಗಿ ಸಾವಿಗೀಡಾಗಿದ್ದಾರೆ. ಹಾಗೂ ತಾಯಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಆಲೂರು ತಾಲ್ಲೂಕಿನ, ಪಾಳ್ಯ ಹೋಬಳಿ, ಎಚ್.ಪುರ ಗ್ರಾಮದ ಕುಮಾರ ( 38), ಕಾವ್ಯ (12) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಹಾಸನ ನಗರದ ತಣ್ಣೀರಹಳ್ಳದಲ್ಲಿ ಈ ಘಟನೆ ನಡೆದಿದೆ.
ನಿನ್ನೆ ರಾತ್ರಿ ಪತ್ನಿ ಪುಟ್ಟಮ್ಮ, ಮಗಳು ಕಾವ್ಯ ಜೊತೆ ಹಾಸನಾಂಬೆ ದೇವಿ ದರ್ಶನಕ್ಕೆ ಕುಮಾರ್ ಅವರು ಬಂದಿದ್ದರು. ಹಾಸನಾಂಬೆ ದೇವಿ ದರ್ಶನ ಪಡೆದು ವಿಜಯನಗರದಲ್ಲಿರುವ ಸಂಬಂಧಿಕರ ಮನೆಗೆ ರಸ್ತೆ ಬದಿಯಲ್ಲಿ ಮೂವರೂ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ KA-02-MM-9815 ನಂಬರ್‌ನ ಸ್ವಿಫ್ಟ್ ಕಾರು ತೀವ್ರವಾಗಿ ಡಿಕ್ಕಿ ಹೊಡೆದಿದೆ.
ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ತೀವ್ರವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕುಮಾರ ಮತ್ತು ಕಾವ್ಯ ಅಸುನೀಗಿದ್ದಾರೆ. ಗಾಯಾಳು ಪುಟ್ಟಮ್ಮನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳು ಪುಟ್ಟಮ್ಮನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಅಪಘಾತ ಮಾಡಿದ ಕಾರು ಚಾಲಕನನ್ನು ಫೋಟೋಗ್ರಾಫರ್ ಶಶಾಂಕ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.