Saturday, April 19, 2025

ಸತ್ಯ | ನ್ಯಾಯ |ಧರ್ಮ

ಬೆಂಗಳೂರು ಮೈಸೂರು ಹೈವೆ : ಸರಣಿ ಅಪಘಾತದಲ್ಲಿ ಹೊತ್ತಿ ಉರಿದ ಕಾರು

ಇನ್ನೇನು ಜಗದ್ವಿಖ್ಯಾತ ಮೈಸೂರು ದಸರಾದ ಅದ್ಭುತ ಕ್ಷಣಗಳಿಗೆ ತಯಾರಾಗುತ್ತಿದೆ. ಇನ್ನೊಂದು ಕಡೆ ಬೆಂಗಳೂರು ಮೈಸೂರು ಚತುಷ್ಪಥ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸಧ್ಯ ಈ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಶನಿವಾರ ಸರಣಿ ಅಪಘಾತವಾಗಿದೆ.

ಈ ಸರಣಿ ಅಪಘಾತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರು ಸೇರಿ ನಾಲ್ಕು ಕಾರು ಜಖಂಗೊಂಡಿವೆ, ಒಂದು ಕಾರು ಹೊತ್ತಿ ಉರಿದ ಬಗ್ಗೆಯೂ ವರದಿ ಲಭ್ಯವಾಗಿದೆ.

ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುವಾಗ ವೋಕ್ಸ್ ವ್ಯಾಗನ್ ಕಾರಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮುಂದೆ ಚಲಿಸುತ್ತಿದ್ದ ನಾಲ್ಕು ಕಾರುಗಳು ಸಹ ಒಂದಕ್ಕೊಂದು ಡಿಕ್ಕಿಯಾಗಿವೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಚಲಿಸುತ್ತಿದ್ದ ಕಾರಿಗೂ ಸಹ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಮೊದಲು ಅಫಘಾತವಾದ ವೋಕ್ಸ್ ವ್ಯಾಗನ್ ಕಾರು ಹೊತ್ತಿ ಉರಿದಿದೆ.

ಕಾರಿಗೆ ಬೆಂಕಿ ಆವರಿಸಿಕೊಳ್ಳುವಷ್ಟರಲ್ಲಿ ಸ್ಥಳೀಯರು ಕಾರಿನಲ್ಲಿ ಇದ್ದವರನ್ನು ರಕ್ಷಿಸಿದ್ದಾರೆ. ಕಾರಿನಲ್ಲಿದ್ದ ಬೆಂಗಳೂರಿನ‌ ನವ ದಂಪತಿ ಯಶವಂತ್- ಯಶಸ್ವಿನಿ ಹಾಗೂ ಚಾಲಕ ರಾಘವೇಂದ್ರ ಅಪಾಯದಿಂದ ಪಾರಾಗಿದ್ದಾರೆ.

ಸಧ್ಯ ಬೆಂಗಳೂರಿನಿಂದ ಮೈಸೂರು ವರೆಗೂ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಸೂಕ್ಷ್ಮವಾಗಿ ವಾಹನ ಚಲಾಯಿಸಲು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. ಶ್ರೀರಂಗಪಟ್ಟಣ ಬಳಿ ಆದ ಈ ಅಪಘಾತದಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page