Tuesday, February 11, 2025

ಸತ್ಯ | ನ್ಯಾಯ |ಧರ್ಮ

ನೆಲದ ತವಕ : ಬದಲಾಗುತ್ತಿರುವ ಭಾಷೆ – ಶ್ರೀಪತಿ ಹಳಗುಂದ

“..ಒಂದು ಭಾಷೆ ತನ್ನೊಳಗೆ ಹೊಸ ಬದಲಾವಣೆ ಪಡೆದುಕೊಳ್ಳುವುದಾದರೆ ಸ್ವಾಗತ. ಆದರೆ ಪರಭಾಷೆ ನಮ್ಮ ಭಾಷೆಯ ಮೇಲೆ ಯಜಮಾನಿಕೆಯನ್ನು ಸಾಧಿಸುವುದಾದರೆ ಖಂಡಿತ ಬೇಡ..” ಲೇಖಕರಾದ ಶ್ರೀಪತಿ ಹಳಗುಂದ ಅವರು ಬರಹದಲ್ಲಿ

ಭಾಷೆಯ ಪ್ರಮುಖ ಕ್ರಿಯೆ ಸಂವಹನ. ಎರಡು ಜೀವಗಳು ಭಾವಗಳ ಸೇತುವೆಯಾಗಿ ನಮ್ಮೊಂದಿಗೆ ಬದುಕುತ್ತಾ ನಮ್ಮನ್ನು ಬದುಕಿಸುತ್ತದೆ. ಭಾಷೆ ದೈವಸೃಷ್ಟಿಯಲ್ಲ ಮಾನವ ಸೃಷ್ಟಿ. ಆ ಕಾರಣಕ್ಕೆ ಕಾಲಕಾಲಕ್ಕೆ ಬದಲಾಗುವುದು ಅದರ ಸಹಜತೆ.

ಭಾಷೆ ಎಂದು ಹುಟ್ಟಿತು ಎಂದು ಇದುವರೆಗೂ ‘ಇದಮಿತ್ಥಂ’ ಎಂದು ಹೇಳಲಾಗಿಲ್ಲ. ಆ ಗುಟ್ಟನ್ನು ತನ್ನೊಡಲಲ್ಲೆ ಇಟ್ಟುಕೊಂಡಿದೆ. ಪ್ರಪಂಚದಲ್ಲಿ ಸುಮಾರು ಆರು ಸಾವಿರ ಭಾಷೆಗಳಿವೆ. ಅದರಲ್ಲಿ ಭಾರತದ್ದೇ ಸಿಂಹಪಾಲು. ಭಾಷೆ ಸಂಸ್ಕೃತಿಯ, ಸಂಸ್ಕಾರದ, ಸಂಪನ್ನತೆಯ ಸಂಕೇತ. ಭಾಷಾಶಾಸ್ತ್ರಜ್ಞರ ಪ್ರಕಾರ ಭಾಷೆ ಪ್ರತಿ ೧೨ರಿಂದ ೧೫ ಕಿ.ಮೀ.ಗೆ ಸೂಕ್ಷ್ಮವಾಗಿ ಬದಲಾವಣೆಯಾಗುತ್ತದೆ.

ಬದಲಾವಣೆ ಪ್ರಾಕೃತಿಕ ನಿಯಮ. ಅದು ಭಾಷೆಯನ್ನು ಬಿಟ್ಟಿಲ್ಲ. ಆದರೆ ಈ ಬದಲಾವಣೆ ಯಾವ ತೆರನಾದುದು ಎಂಬುದು ವಿಚಾರಾರ್ಹ. ಜಾಗತೀಕರಣದಡಿಯಲ್ಲಿ ಜಗತ್ತೆ ಹಳ್ಳಿಯಾಗಹೊರಟಿದೆ. ಈ ನಿಟ್ಟಿನಲ್ಲಿ ಭೌಗೋಳಿಕವಾಗಿ ಒಂದು ನಿರ್ದಿಷ್ಟವಾದ ಸಂಪ್ರದಾಯದವರನ್ನು ನಿರ್ದಿಷ್ಟ ಭಾಷೆಯವರನ್ನು ಗುರುತಿಸುವುದು ಒಂದು ಸವಾಲೇ ಸರಿ.

ಒಂದು ರಾಷ್ಟ್ರ, ರಾಜ್ಯ ತನ್ನದೇ ಆದ ಸಂವಿಧಾನಾತ್ಮಕವಾದ ಸಾರ್ವತ್ರಿಕವಾದ ಭಾಷೆಯನ್ನು ಹೊಂದಿದ್ದರೂ ಅದು ಆಡಳಿತಾತ್ಮಕವಾಗಿಯೇ ಹೊರತು ಭಾವನಾತ್ಮಕವಾಗಲ್ಲ. ಹೀಗಿರುವಾಗ ಸಾರ್ವಜನಿಕ ಭಾಷೆಯೊಂದು ಇದ್ದರೂ ಖಾಸಗಿ ಭಾಷೆ ಗೊತ್ತಿಲ್ಲದೆಯೆ ನಮ್ಮೊಂದಿಗೆ ಜೀವಿಸುತ್ತಿರುತ್ತದೆ.

ಸುಮಾರು ಹತ್ತನೆ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಕನ್ನಡವನ್ನು ಸುಮಾರು ಹದಿನಾರನೆ ಶತಮಾನದಲ್ಲಿ ಸೃಷ್ಟಿಯಾದ ಆಂಗ್ಲಭಾಷೆ ಹೊಸಕಿ ಹಾಕಿರಬಹುದೇನೊ ಎಂಬ ಭಯ ನಮ್ಮನ್ನು ಏಕೆ ಕಾಡುತ್ತಿದೆ? ಒಂದು ಆಂಗ್ಲಭಾಷೆ ಇಡೀ ಜಗತ್ತನ್ನೆ ಆಳುತ್ತಿದೆ ಎಂಬ ಭ್ರಮೆ. ಆ ಕಾರಣಕ್ಕೆ ನಾವು ಜಗತ್ತಿಗೆ ಅನಿವಾರ್ಯವಾದ ಭಾಷೆಯನ್ನು ಕಲಿಯಲೇಬೇಕೆಂಬ ಆತುರ. ವಾಸ್ತವವಾಗಿ ಆಂಗ್ಲಭಾಷೆ ಕಲಿಯದಿದ್ದರೂ ಬದುಕಬಲ್ಲೆವು ಎಂಬ ಸತ್ಯ ನಮ್ಮಿಂದ ಇನ್ನೂ ದೂರವಿದೆ. ಉದಾ: ಜಪಾನ್, ಫ್ರಾನ್ಸ್, ಚೀನಾ ಮುಂತಾದ ರಾಷ್ಟ್ರಗಳಲ್ಲಿ ಆಂಗ್ಲಭಾಷೆ ಅನಿವಾರ್ಯವಾಗಿಲ್ಲ.

ಕನ್ನಡದಲ್ಲಿ ಪ್ರತಿಶತ ೪೦ಕ್ಕಿಂತ ಹೆಚ್ಚು ಸಂಸ್ಕೃತ ಪದಗಳಿವೆ. ಅವು ಕನ್ನಡದ್ದೇ ಪದಗಳು ಎಂಬುವಷ್ಟರ ಮಟ್ಟಿಗೆ ಬೆರೆತುಹೋಗಿವೆ. ಮುಂದೊಂದು ದಿನ ಸಂಸ್ಕೃತದ ಸ್ಥಾನವನ್ನು ಆಂಗ್ಲಭಾಷೆ ತುಂಬಬಹುದೆನೋ ಎಂಬ ಆತಂಕ ಮೂಡಲಾರಂಭಿಸಿದೆ.

ಭಾಷೆ ಎರಡು ರೀತಿಯಲ್ಲಿ ಬದಲಾಗುತ್ತಿದೆ.
೧. ಬದಲಾವಣೆಯಲ್ಲಿ ಮುಗ್ಧತೆ,
೨. ಬದಲಾವಣೆಯಲ್ಲಿ ಸ್ವ ಪ್ರತಿಷ್ಠೆ

೧. ಬದಲಾವಣೆಯಲ್ಲಿ ಮುಗ್ಧತೆ: ಮುಗ್ಧವಾಗಿ ಬದಲಾಗುತ್ತರುವ ಭಾಷೆಯಲ್ಲಿ ಗ್ರಾಮ್ಯಭಾಷೆ ಪ್ರಮುಖ ಪಾತ್ರ ವಹಿಸಿದೆ. ಉದಾ: ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಒಕ್ಕಲಿಗ ಜನಾಂಗದವರು ಬರುತ್ತದೆ, ಹೋಗುತ್ತದೆ ಎಂಬ ಗ್ರಾಂಥಿಕ, ಸಾರ್ವತ್ರಿಕ ಭಾಷೆಗೆ ಬದಲಾಗಿ ಬತ್ತದೆ, ಹೋತದೆ ಎಂದೇ ಬಳಸುತ್ತಾರೆ. ಗ್ರಾಂಥಿಕ ಭಾಷೆಯ ಅರ್ಥವನ್ನೆ ಉಳಿಸಿಕೊಂಡು ಉಚ್ಚರಿಸುತ್ತಿರುವಾಗ ಸರಳೀಕರಣ ಮಾಡಿಕೊಳ್ಳುತ್ತಾರೆ. ಭಾಷೆಯ ಮೂಲಕ್ರಿಯೆ ಸಂವಹನ ಎನ್ನುವುದಾದರೆ ಇದನ್ನು ಸ್ವೀಕರಿಸೋಣ. ಹಾಗೆಯೇ ದಕ್ಷಿಣ ಕನ್ನಡದ ಭಾಷೆ. ಅದರಲ್ಲೂ ಕುಂದಾಪುರದ ಕನ್ನಡ, ಧಾರವಾಡ ಕನ್ನಡ, ಮೈಸೂರು ಕನ್ನಡ ಇವೆಲ್ಲವೂ ಈ ರೀತಿ ಇವೆ. ಅಂದರೆ ಅಲ್ಲಿಯ ಪ್ರಾದೇಶಿಕ ವೈವಿಧ್ಯತೆಯಿಂದ. ಅಂದರೆ ಈ ಮುಗ್ಧ ಭಾಷೆಯ ಬದಲಾವಣೆಯ ಹಿಂದೆ ಅನಕ್ಷರಸ್ಥ ಸಮೂಹ ಪಾತ್ರವೇ ಹೆಚ್ಚು. ವಾಸ್ತವವಾಗಿ ಅವರು ಗ್ರಾಂಥಿಕ, ಗ್ರಾಮ್ಯ ಭಾಷೆಯ ವ್ಯತ್ಯಾಸ ಗೊತ್ತಿರದೆ ತಾವಾಡುವ ಭಾಷೆಯೇ ಕನ್ನಡ (ಸಾರ್ವತ್ರಿಕ) ಎಂದುಕೊಂಡಿರುತ್ತಾರೆ. ಅಕ್ಷರಸ್ಥರು ಖಾಸಗಿಯಾಗಿದ್ದಾಗ ಈ ತೆರನಾದ ಭಾಷೆಯನ್ನು ಬಳಸುತ್ತಾರೆ.

೨. ಬದಲಾವಣೆಯಲ್ಲಿ ಸ್ವಪ್ರತಿಷ್ಠೆ: ಭಾಷೆ ಮೊದಲೆ ಹೇಳಿದ ಹಾಗೆ ಸಂಸ್ಕೃತಿಯ ಸಂಕೇತ. ಈ ಕಾರಣಕ್ಕೆ ಸಾರ್ವಜನಿಕ ಭಾಷೆಯನ್ನು ನಾವು ಹೆಚ್ಚು ನೆಚ್ಚಿಕೊಂಡಿರುತ್ತೇವೆ. ಉದಾ: ಟಿ.ವಿ.ಯಲ್ಲಿ ನಿರೂಪಕರು ಬಳಸುವ ಕಂಗ್ಲೀಷ್ ಭಾಷೆ ಆಶ್ಚರ್ಯ ಹುಟ್ಟಿಸುತ್ತದೆ. ವಾರ್ತೆಗಳಲ್ಲಿ, ಸಂದರ್ಶನಗಳಲ್ಲಿ ಇಂಗ್ಲೀಷ್ ಬಳಸುವುದನ್ನೇ ತಮ್ಮ ಬುದ್ಧಿವಂತಿಕೆಯ ಪ್ರದರ್ಶನ ಎಂದು ಭಾವಿಸಿದಂತಿದೆ.

ಎಫ್.ಎಂ.ಗಳಲ್ಲಿ HOT ENJOY ಈ ಪದಗಳನ್ನು ನಿರರ್ಗಳವಾಗಿ ಬಳಸುತ್ತಾರೆ. ಪತ್ರಿಕೆಗಳಲ್ಲಿಯೂ ಆಕರ್ಷಕ ಶೀರ್ಷಿಕೆ ಕೊಡುವ ಆತುರದಲ್ಲಿ ಭಾಷೆಯ ಸ್ವರೂಪವನ್ನೇ ಬದಲಾಯಿಸುತ್ತಿರುವುದು ಖೇದಕರ.

ಉದಾ : Socio-Science ಎನ್ನುವ ಆಂಗ್ಲ ಪದಕ್ಕೆ ಸಂವಾದಿಯಾಗಿ ಸಮಾಜ ವಿಜ್ಞಾನ ಎಂಬುದರ ಬದಲಾಗಿ ಸಮಾಜೋ-ವಿಜ್ಞಾನ ಎಂದೇ ಬಳಸುತ್ತಾರೆ. ಪ್ರಾಗ್ ಭಾಷಾಶಾಸ್ತ್ರಜ್ಞರ ಪ್ರಕಾರ ಪ್ರತಿಯೊಂದು ವಾಕ್ಯವು ನಾವು ಉಚ್ಚಾರದಲ್ಲಿ ಕೊಡುವ ಒತ್ತು, ಸಂದರ್ಭ, ಪದಜೋಡಣೆ ಇವುಗಳನ್ನು ಆಧರಿಸಿ ನಾನಾರ್ಥಗಳಿಗೆ ಎಡೆಮಾಡಿಕೊಡುತ್ತದೆ. ಸಿನಿಮಾಗಳಲ್ಲೆಲ್ಲಾ ಗಾಡಿ (ಸೊಬಗು) ಮಗ (ಕಂದ) ಎನ್ನುವ ಪದಗಳು ನೇತ್ಯಾತ್ಮಕವಾಗಿ ಬಳಕೆಯಾಗುತ್ತಿರುವುದು ಒಂದು ಭಾಷೆಯ ಕೆಟ್ಟ ಬದಲಾವಣೆಯ ಸಂಕೇತ, ಇಂತಹ ಪದಗಳು ಅನಿವಾರ್ಯವಲ್ಲ. ಹಾಗಿದ್ದೂ ಏಕೆ ಬಳಸುತ್ತಾರೆ? ಇದನ್ನೆ ನಾನು ಸ್ವಪ್ರತಿಷ್ಠೆ ಎನ್ನುವುದು.

ಮುಗ್ಧ ಭಾಷೆಗಳಲ್ಲಿನ ಬದಲಾವಣೆಗಳಿಗೂ, ಸ್ವಪ್ರತಿಷ್ಠೆಯ ಅಡಿಯಲ್ಲಿ ಬದಲಾಗುವ ಭಾಷೆಗಳಿಗೂ ವ್ಯತ್ಯಾಸವಿದೆ.

ಉದಾ: ಕಾಗದ – ಕಾದಗ
ಪಂಕ – ಕಂಪ
ಕರಡಿಗೆ – ಕರಡಿ
ಆವಾಗ – ಅಗವ
ಬೆಂಕಿ – ಬಿಂಕಿ
ಮಣ್ಣು – ಮುಣ್ಣು
ಹೆಣ್ಣು – ಹಿಣ್ಣು

ಕೆಲವೆಡೆ ಅಕ್ಷರ ಪಲ್ಲಟವಾದರೆ, ಕೆಲವೆಡೆ ಅಕ್ಷರಗಳೇ ಇಲ್ಲವಾಗಿವೆ. ಇನ್ನೂ ಕೆಲವು ಕಡೆ ‘ಎ’ ಕಾರದಿಂದ ಆರಂಭವಾಗುವ ಪದಗಳು ‘ಇ’ ಕಾರದಿಂದ ಆರಂಭವಾಗಿವೆ. ಇಲ್ಲೆಲ್ಲ ಸಾರ್ವಜನಿಕವಾಗಿ ಗ್ರಂಥಸ್ಥ ಭಾಷೆಯನ್ನು ಅವಲಂಬಿಸಿರುತ್ತಾರೆ. ಇದು ಸಾರ್ವತ್ರಿಕ ಭಾಷೆಯ ಮೇಲೆ ಯಜಮಾನಿಕೆಯನ್ನು ಹೇರುವುದಿಲ್ಲ.

ಆದರೆ ಈ ಸ್ವಪ್ರತಿಷ್ಠೆಯಡಿಯಲ್ಲಿ ಬದಲಾಗುತ್ತಿರುವ ಭಾಷೆಗಳು ಸಾರ್ವತ್ರಿಕ ಭಾಷೆಯನ್ನು ಹೊಸಕಿ ಹಾಕುವ ಅಪಾಯವಿದೆ. ಮಾಧ್ಯಮಗಳಲ್ಲಿ ಕಾಣುವ ಭಾಷೆಯನ್ನು ಸಾರ್ವಜನಿಕ ಭಾಷೆ ಎಂದು ಒಪ್ಪಿಕೊಳ್ಳುವ ಸ್ಥಿತಿಯಿರುವಾಗ ಈ ರೀತಿಯ ಬದಲಾವಣೆಗಳಿಂದ ಭಾಷಿಕನೊಬ್ಬ ತೊಳಲಾಟಕ್ಕೆ ಒಳಗಾಗುತ್ತಾನೆ. ಇದ್ದ ಭಾಷೆಯನ್ನು ಸಂವಹನಕ್ಕೆ ನೆರವಾಗುವಂತೆ ತೆಗೆದುಕೊಳ್ಳುವುದು ಬೇರೆ.

ಮೂಲಭಾಷೆಯ ಪದವನ್ನು ಇಲ್ಲವಾಗಿಸುವುದು ಬೇರೆ. ಭಾಷೆ ಬಗ್ಗೆ ಇಷ್ಟು ಮಡಿವಂತಿಕೆ ಬೇಡ ಎಂಬುದು ಕೆಲವರ ಅಂಬೋಣ. ತಮಿಳುನಾಡಿನಲ್ಲಿ ಇಂದಿಗೂ ವಂಡಿ (ಬಸ್) ಕಾವಲ್ (ಆರಕ್ಷಕ) ಎಂಬ ಪದಗಳಿವೆ. ಕನ್ನಡದಲ್ಲಿ ಏಕೆ ಸಾಧ್ಯವಿಲ್ಲ? ತಮಿಳರನ್ನು ಭಾಷಾ ದುರಾಭಿಮಾನಿಗಳು ಎಂದು ಕರೆಯುತ್ತೇವೆ. ಕೆಲವೊಮ್ಮೆ ಒಂದು ಸಾರ್ವತ್ರಿಕ ಭಾಷೆಯನ್ನು ಉಳಿಸಿಕೊಳ್ಳುವಲ್ಲಿ ಈ ತೆರನಾದ ಅಭಿಮಾನ ಅವಶ್ಯಕ.

ಪಂಪನ ಕಾಲದ ಕನ್ನಡ ಈಗಿಲ್ಲ. ಆದರೆ ಪಂಪನ ಕಾಲದ ಹಳೆಗನ್ನಡ ಹೊಸಗನ್ನಡದ ರೂಪ ಪಡೆದುಕೊಂಡಿದೆ. ಉದಾ: ಪಾಲ್ (ಹಾಲು), ಪೇಣ್ಣು (ಹೆಣ್ಣು) ‘ಪ’ಕಾರದಿಂದ ಆರಂಭವಾಗುವ ಪದಗಳು ‘ಹ’ಕಾರದಿಂದ ಆರಂಭಗೊಳ್ಳುತ್ತಿವೆ. ಈ ತೆರನಾದ ಸ್ಥಿತ್ಯಂತರದಿಂದ ಆಗುವ ಅನಾಹುತಗಳು ಕಡಿಮೆ ಎನ್ನಬಹುದು.

ಆದರೆ ಈಗಾಗುತ್ತಿರುವ ಬದಲಾವಣೆ ಕನ್ನಡದ ಬದಲಿಗೆ ಇನ್ನೊಂದು ಭಾಷೆಯ ಪದಗಳು ಸೇರ್ಪಡೆಯಾಗುತ್ತಿರುವುದು. ಇದು ಕ್ರಮೇಣ ಮೂಲ ಭಾಷೆಯ ಪದಗಳನ್ನೆ ಮಾಯವಾಗಿಸಿ ಬಿಡುವ ಅಪಾಯವಿದೆ. ಉದಾ: ಕನ್ನಡ ಕೆಲವು ಪದಗಳಿಗೆ ಇಂಗ್ಲೀಷಿನ ಪದಗಳು ಬಂದು ಕುಳಿತಿವೆ. ಜೊತೆಗೆ ಕನ್ನಡದ್ದೆ ಪದಗಳು ಎನ್ನುವಂತೆ ರಾರಾಜಿಸುತ್ತಿವೆ. ಇದರಿಂದ ಒಂದು ಭಾಷೆಯು ಉಳಿಯುವುದು ಅಸಾಧ್ಯ

ಭಾಷೆ ಬದಲಾವಣೆಯಾಗುವುದು ಎಂದರೆ ಒಂದರ್ಥದಲ್ಲಿ ಆ ಭಾಷೆಯ ಅವಸಾನವೇ ಎಂದರ್ಥ. (ಕನ್ನಡದ ಬದಲಿಗೆ ಇಂಗ್ಲೀಷ್ ಪದಗಳು) ಈ ಕಾರಣದಿಂದ ಮುಗ್ಧ ಬದಲಾವಣೆಗಿಂತ ಸ್ವಪ್ರತಿಷ್ಠೆಯ ಬದಲಾವಣೆ ಹೆಚ್ಚು

ಒಂದು ಭಾಷೆ ತನ್ನೊಳಗೆ ಹೊಸ ಬದಲಾವಣೆ ಪಡೆದುಕೊಳ್ಳುವುದಾದರೆ ಸ್ವಾಗತ. ಆದರೆ ಪರಭಾಷೆ ನಮ್ಮ ಭಾಷೆಯ ಮೇಲೆ ಯಜಮಾನಿಕೆಯನ್ನು ಸಾಧಿಸುವುದಾದರೆ ಖಂಡಿತ ಬೇಡ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page