ದಕ್ಷಿಣ ಕನ್ನಡದಾದ್ಯಂತ ಮುದ್ದಾದ ಬೆಕ್ಕುಗಳನ್ನು ಮಾರಣಾಂತಿಕ ರೋಗ ಕಾಡುತ್ತಿದೆ. ಮಂಗಳೂರಿನಲ್ಲೂ ಈ ಹಾವಳಿ ಅತಿಯಾಗಿದೆ. ದ.ಕ. ಜಿಲ್ಲಾ ಪಾಲಿಕ್ಲಿನಿಕ್ ನ ವೈದ್ಯರು ದಣಿವರಿಯದೆ ರೋಗಪೀಡಿತ ಬೆಕ್ಕುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರಲ್ಲಿ ವ್ಯಸ್ತರಾಗಿದ್ದಾರೆ. ಆದರೆ, ಬಹುತೇಕರಿಗೆ ಈ ರೋಗದ ಮಾಹಿತಿಯಿಲ್ಲದೆ ಅವುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ, ತಮ್ಮ ಬಿಡುವಿರದ ಕೆಲಸದ ನಡುವೆಯೇ ಬೆಕ್ಕುಗಳಿಗೆ ಅಪ್ಪಳಿಸಿದ ʼಫಿಲೈನ್ ಪ್ಯಾನ್ ಲ್ಯೂಕೋಪಿನಿಯಾʼ ರೋಗದ ಕುರಿತು ಬರೆದು ಬೆಕ್ಕು ಪ್ರಿಯರನ್ನು ಎಚ್ಚರಿಸಿದ್ದಾರೆ ಡಾ. ಎ ಬಿ ತಮ್ಮಯ್ಯ ಮತ್ತು ಡಾ. ಜಿ.ಕೆ. ಭಟ್. ಈ ರೋಗ ನಿಮ್ಮೂರನ್ನೂ ತಲಪಬಹುದು! ಜಾಗೃತರಾಗಿ.
ಮನೆಯಲ್ಲೊಂದು ಮುದ್ದು ನಾಯಿಯೋ, ಬೆಕ್ಕೋ, ದನವೋ ಅಥವಾ ಇನ್ಯಾವುದೇ ಸಾಕುಪ್ರಾಣಿ ಇದ್ದರೆ, ಆ ಮನೆಯ ಚೆಂದವೇ ಬೇರೆ. ಮಕ್ಕಳಂತೆ ಓಡಾಡುತ್ತ, ಮುದ್ದು ಮಾಡಿಸಿಕೊಳ್ಳುತ್ತಾ, ಪ್ರೀತಿಯಿಂದ ಬೈಸಿಕೊಳ್ಳುತ್ತಾ ಎಲ್ಲರ ಗಮನ ಸೆಳೆಯುವ ಸಾಕು ಪ್ರಾಣಿಗಳು, ಮನಸ್ಸಿಗೆ ಉಲ್ಲಾಸ ನೀಡುತ್ತವೆ ಎನ್ನುವುದು ಎಲ್ಲ ಪ್ರಾಣಿ ಪ್ರಿಯರ ಅನುಭವ. ಮುದ್ದಿನ ಬೆಕ್ಕಂತೂ ತನ್ನ ಮೃದುವಾದ ಮೈಯನ್ನು ಕಾಲಿಗೋ ಕೈಗೋ ಉಜ್ಜುತ್ತಾ, ನಮ್ಮ ಸುತ್ತ ಮತ್ತ ಓಡಾಡುತ್ತಿದ್ದರೆ ದಿನದ ಮಾನಸಿಕ, ದೈಹಿಕ ದಣಿವೆಲ್ಲ ಮಾಯ. ಹೀಗಿರುವಾಗ, ಪ್ರಾಣಿಗಳಿಗೆ ಮಿಡಿಯುವ ಮನಸುಗಳಿಗೆ ಆಘಾತಕಾರಿ ಸುದ್ದಿಯೊಂದಿದೆ. ಅದುವೇ ಈಗ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಕ್ಕುಗಳನ್ನು ಬಾಧಿಸುತ್ತಿರುವ ಫಿಲೈನ್ ಪ್ಯಾನ್ ಲ್ಯೂಕೋಪಿನಿಯಾ ಎಂಬ ಮಾರಣಾಂತಿಕ ರೋಗ. ದಿನವೊಂದಕ್ಕೆ ಸರಿ ಸುಮಾರು ಹದಿನೈದಕ್ಕೂ ಹೆಚ್ಚು ರೋಗಪೀಡಿತ ಬೆಕ್ಕುಗಳು ನಮ್ಮ, ಅಂದರೆ ಮಂಗಳೂರಿನಲ್ಲಿರುವ ದ.ಕ. ಜಿಲ್ಲಾ ಪಾಲಿಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿವೆ.
ಏನಿದು ಫಿಲೈನ್ ಪ್ಯಾನ್ ಲ್ಯೂಕೋಪಿನಿಯಾ?

ಫಿಲೈನ್ ಪ್ಯಾನ್ ಲೊಕೋಪಿನಿಯಾ- ಫಿಲೈನ್ ಡಿಸ್ಟೆಂಪರ್/ ಫಿಲೈನ್ ಅಟಾಕ್ಸಿಯಾ / ಕ್ಯಾಟ್ ಪ್ಲೇಗ್/ ಬೆಕ್ಕುಗಳ ಸಾಂಕ್ರಾಮಿಕ ಎಂಟರೈಟಿಸ್ ವೈರಸ್‌ನಿಂದ ಬೆಕ್ಕುಗಳಲ್ಲಿ ಬರುವ ರೋಗ. ಇದು ರಕ್ತದಲ್ಲಿರುವ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಗಣನೀಯವಾಗಿ ಕಡಿಮೆ ಮಾಡಿ ದೇಹದ ರೋಗ ನಿರೋಧಕ ಶಕ್ತಿಯನ್ನು ನಿಷ್ಕ್ರಿಯಗೊಳಿಸಿ ಬೆಕ್ಕುಗಳನ್ನು ಸಾವಿಗೆ ದೂಡುತ್ತದೆ. ಈ ರೋಗವು ಅತ್ಯಂತ ಸಾಂಕ್ರಾಮಿಕವೂ, ಮಾರಣಾಂತಿಕವೂ ಆಗಿದೆ. ಬೆಕ್ಕುಗಳನ್ನು ಮಾತ್ರ ಕಾಡುವ ರೋಗ ಇದಾಗಿದ್ದು ಮನುಷ್ಯರನ್ನು ಹಾಗೂ ಇತರ ಪ್ರಾಣಿಗಳನ್ನು ಇದು ಕಾಡುವುದಿಲ್ಲ. ಈ ಮಾರಕ ವೈರಸ್ ಲಸಿಕೆ ಹಾಕದ ಬೆಕ್ಕುಗಳ ದೇಹದಲ್ಲಿ ಅತ್ಯಂತ ವೇಗವಾಗಿ ಸಂತಾನಾಭಿವೃದ್ಧಿ ಹೊಂದುವ ಜೀವಕೋಶಗಳಾದ ಅಸ್ತಿಮಜ್ಜೆ, ಕರುಳಿನ ಒಳಪದರ ಮತ್ತು ಯಕೃತ್ತಿನ ಜೀವಕೋಶ, ಬೆಳೆಯುತ್ತಿರುವ ಭ್ರೂಣಗಳಲ್ಲಿ ಬೆಳವಣಿಗೆ ಹೊಂದಿ ಆ ಜೀವಕೋಶಗಳನ್ನು ಕೊಲ್ಲುವುದರಿಂದ, ಬಿಳಿರಕ್ತಕಣಗಳ ಉತ್ಪಾದನೆ ತೀವ್ರವಾಗಿ ಕುಸಿಯುತ್ತದೆ; ಪರಿಣಾಮವಾಗಿ, ಬಹುತೇಕ ರೋಗಪೀಡಿತ ಬೆಕ್ಕುಗಳು ಸಾವನ್ನಪ್ಪುತ್ತವೆ.
ಫಿಲೈನ್ ಪಾರ್ವೋ ವೈರಾಣು ಹೀಗೆ ಹರಡುತ್ತದೆ..
ಈ ವೈರಸ್ ವಿಶ್ವವ್ಯಾಪಿಯಾಗಿದೆ. ರೋಗಪೀಡಿತ ಬೆಕ್ಕುಗಳು ತಮ್ಮ ಮಲ, ಮೂತ್ರ, ವಾಂತಿ, ಮೂಗಿನಿಂದ ಇಳಿಯುವ ದ್ರಾವಣ ಇತ್ಯಾದಿಗಳ ಮೂಲಕ ವೈರಾಣುವನ್ನು ಪರಿಸರಕ್ಕೆ ಹರಡುತ್ತವೆ. ಈ ಮಾರಕ ವೈರಾಣುಗಳು ಅತ್ಯಂತ ಸ್ಥಿರವಾಗಿದ್ದು ಪರಿಸರದಲ್ಲಿ ಕೆಲವು ಘಂಟೆಗಳ ಕಾಲ ಇರಬಲ್ಲವು. ಆದ್ದರಿಂದ, ಲಸಿಕೆ ಹಾಕಿಸಿಕೊಳ್ಳದ ಆರೋಗ್ಯವಂತ ಬೆಕ್ಕುಗಳು ರೋಗಪೀಡಿತ ಬೆಕ್ಕುಗಳ ಸಂಪರ್ಕಕ್ಕೆ ಬರದಿದ್ದರೂ ಈ ರೋಗಕ್ಕೆ ತುತ್ತಾಗಬಲ್ಲವು. ಬೆಕ್ಕುಗಳು ಮಲಗುವ ಹಾಸಿಗೆ, ಬಟ್ಟೆ, ಅವುಗಳ ಊಟದ ತಟ್ಟೆಗಳು ಮತ್ತು ರೋಗಪೀಡಿತ ಬೆಕ್ಕುಗಳನ್ನು ಮುಟ್ಟಿದ ವ್ಯಕ್ತಿಗಳ ಕೈ ಹಾಗೂ ಬಟ್ಟೆಗಳಿಂದಲೂ ಈ ವೈರಾಣುಗಳು ಆರೋಗ್ಯವಂತ ಬೆಕ್ಕಿಗೆ ಹರಡಬಲ್ಲವು.
ನಮ್ಮ ಅನುಭವದಂತೆ ಒಳಸಂಕರಣ (ಇನ್ ಬ್ರೀಡಿಂಗ್) ದಿಂದ ಜನಿಸಿದ ಬೆಕ್ಕುಗಳು, ಅತಿಯಾದ ಜಂತು ಹುಳುಗಳ ಬಾಧೆ ಇರುವ ಮತ್ತು ಸಮತೋಲನಾ ಆಹಾರ ಸಿಗದ ಬೆಕ್ಕುಗಳು ರೋಗಕ್ಕೆ ತುತ್ತಾಗಿ ಮರಣಿಸುವ ಸಂಭವವು ಹೆಚ್ಚಾಗಿರುತ್ತದೆ.
ರೋಗ ಲಕ್ಷಣಗಳು

ಈ ರೋಗ ಬಾಧಿಸಿದ ಬೆಕ್ಕುಗಳನ್ನು ಮೊದಲಾಗಿ ಖಿನ್ನತೆ ಆವರಿಸುತ್ತದೆ. ಹಸಿವಿರುವುದಿಲ್ಲವಾದ್ದರಿಂದ ಆಹಾರ ತ್ಯಜಿಸುತ್ತವೆ. ಆಲಸ್ಯದಿಂದ ಬಿದ್ದುಕೊಂಡಿರುತ್ತವೆ. ಅತಿಯಾದ ವಾಂತಿ, ಜ್ವರ, ಅತಿಯಾದ ಬೇಧಿ, ಮೂಗಿನಿಂದ ಕಿವಿಯಿಂದ ಸ್ರಾವ ಇತ್ಯಾದಿ ಲಕ್ಷಣಗಳಿರುತ್ತವೆ (ಎಲ್ಲ ಬೆಕ್ಕುಗಳಲ್ಲೂ ಈ ಎಲ್ಲ ಲಕ್ಷಣಗಳು ಇರಬೇಕಿಲ್ಲ). ತೀವ್ರವಾಗಿ ನಿರ್ಜಲೀಕರಣಕ್ಕೆ (ಡಿ ಹೈಡ್ರೇಶನ್) ಒಳಗಾಗುವ ಇವುಗಳು ನೀರು ಕುಡಿಯಲು ನೀರಿನ ಬಳಿಗೆ ಹೋದರೂ, ಅದೆಷ್ಟೋ ಹೊತ್ತು ನೀರಿನ ಬಳಿ ಕುಳಿತೇ ಇರುತ್ತವೆಯೇ ಹೊರತು ಕುಡಿಯಲಾರವು. ಹಾಗೂ ಹಲವು ಬೆಕ್ಕುಗಳಲ್ಲಿ ಉಸಿರಾಟದ ತೊಂದರೆಯ ಲಕ್ಷಣ ಕಂಡುಬರುತ್ತದೆ. ಕಾಮಾಲೆಯೂ ಸಹ ಕಾಣಿಸಿಕೊಳ್ಳಬಹುದು.
ಬೆಕ್ಕಿನ ಮರಿಗಳಿಗೆ ಅತಿ ಅಪಾಯ
ಸಾಮಾನ್ಯವಾಗಿ ಎಂಟು ವಾರಕ್ಕಿಂತ ಸಣ್ಣಪ್ರಾಯದ ಬೆಕ್ಕಿನ ಮರಿಗಳಿಗೆ ಎಷ್ಟೇ ನಿಗಾ ವಹಿಸಿ ಚಿಕಿತ್ಸೆ ನೀಡಿದರೂ ಅವು ಚಿಕಿತ್ಸೆಗೆ ಸ್ಪಂದಿಸಲಾರವು. ಇದು 3-5 ತಿಂಗಳ ಮರಿಗಳಿಗೆ ಹೆಚ್ಚು ಮಾರಣಾಂತಿಕ. ಬದುಕುಳಿದವುಗಳಿಗೆ ಕಣ್ಣು ಮತ್ತು ಮೆದುಳಿಗೆ ಹಾನಿಯಾಗುವ ಸಾಧ್ಯತೆಗಳೂ ಇರುತ್ತವೆ. ಸುಮಾರು ಒಂದು ವರುಷಕ್ಕಿಂತ ಹೆಚ್ಚಿನ ಬೆಕ್ಕುಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತರೆ ಚೇತರಿಕೆಯ ಸಾಧ್ಯತೆ ಹೆಚ್ಚು.
ರೋಗಪೀಡಿತ ಬೆಕ್ಕುಗಳಿಗೆ ಚಿಕಿತ್ಸೆ ಹೇಗೆ?
ಈ ಮೇಲೆ ಹೇಳಿರುವ ರೋಗಲಕ್ಷಣ ಕಂಡುಬಂದ ತಕ್ಷಣ ತಡಮಾಡದೆ ಪಶು ವೈದ್ಯರನ್ನು ಸಂಪರ್ಕಿಸಬೇಕು. ಆರಂಭಿಕ ಹಂತದಲ್ಲಿ ಚಿಕಿತ್ಸೆ ದೊರೆತರೆ ಬದುಕುಳಿಯುವ ಸಾಧ್ಯತೆ ಹೆಚ್ಚು. ಐ.ವಿ. ಡ್ರಿಪ್ಸ್, ಆ್ಯಂಟಿಬಯಾಟಿಕ್ಸ್ ಮತ್ತು ಇತರೆ ಪೂರಕ ಚಿಕಿತ್ಸೆ ಹೆಚ್ಚು ಸಹಕಾರಿ. 4-5 ದಿನಗಳಲ್ಲಿ ಚೇತರಿಕೆಯ ಲಕ್ಷಣಗಳು ಕಂಡು ಬಂದು ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸಲು ಶುರುವಿಡುತ್ತವೆ. ಚೇತರಿಕೆಯು ರೋಗನಿರೋಧಕ ಶಕ್ತಿಯ (ಇಮ್ಯುನಿಟಿ) ಪ್ರಮಾಣದ ಮೇಲೆ ಅವಲಂಬಿತವಾಗಿದ್ದು, ಚೇತರಿಕೆಯ ಅವಧಿಯು ಬೆಕ್ಕಿನಿಂದ ಬೆಕ್ಕಿಗೆ ಬೇರೆಯಾಗಿರುತ್ತದೆ.

ತಡೆಗಟ್ಟುವುದು ಹೇಗೆ?
ರೋಗನಿರೋಧಕ ಲಸಿಕೆ ಹಾಕುವುದೊಂದೇ ಇದಕ್ಕಿರುವ ಪರಿಹಾರ. ಬೆಕ್ಕಿನ ಮರಿಗಳಿಗೆ 6-8 ನೇ ವಾರದೊಳಗೆ ಮೊದಲ ಸುತ್ತಿನ ಲಸಿಕೆಯನ್ನು ಹಾಕಿಸಬೇಕು. ಬಳಿಕ ಬೂಸ್ಟರ್ ಡೋಸ್ ಹಾಕಿಸ ಬೇಕಾಗುತ್ತದೆ. ಇತರೆ ವಯೋಮಾನದ ಬೆಕ್ಕುಗಳಿಗೆ ಅದರ ವಯೋಮಾನಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಈ ಲಸಿಕೆ ಸರಕಾರದಿಂದ ಉಚಿತವಾಗಿ ಲಭ್ಯವಿಲ್ಲದ ಕಾರಣ ಲಸಿಕೆಯ ಪೂರ್ತಿ ವೆಚ್ಚವನ್ನು ಬೆಕ್ಕಿನ ಮಾಲೀಕರೇ ಭರಿಸಬೇಕಾಗುತ್ತದೆ. ಲಸಿಕೆ ಹಾಕಿಸಿದ ಬಳಿಕವೂ ಸುಮಾರು ಒಂದೂವರೆ ತಿಂಗಳ ಕಾಲ ಲಸಿಕೆ ಹಾಕಿಸದೇ ಇರುವ ಇತರೆ ಬೆಕ್ಕುಗಳೊಂದಿಗೆ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳುವುದು ಉತ್ತಮ.
ನಮ್ಮ ಬೆಕ್ಕುಗಳಿಗೆ ರೋಗ ಬರದಂತೆ ನೋಡಿಕೊಂಡರೆ, ರೋಗ ಬಂದಾಗಲೂ ಅವುಗಳನ್ನು ನಮ್ಮ ಮಗುವಿನಂತೆ ಕಾಳಜಿ ಮಾಡಿದರೆ ಅವುಗಳನ್ನು ದೀರ್ಘಕಾಲ ಬದುಕಿಸಿಕೊಳ್ಳಬಹುದು.
ಡಾ. ಎ ಬಿ ತಮ್ಮಯ್ಯ, ಉಪನಿರ್ದೇಶಕರು, ದ.ಕ. ಜಿಲ್ಲಾ ಪಾಲಿಕ್ಲಿನಿಕ್, ಮಂಗಳೂರು
ಡಾ. ಜಿ.ಕೆ.ಭಟ್, ಮುಖ್ಯ ಪಶುವೈದ್ಯ ಅಧಿಕಾರಿ, ದ.ಕ. ಜಿಲ್ಲಾ ಪಾಲಿಕ್ಲಿನಿಕ್, ಮಂಗಳೂರು
ಇದನ್ನೂ ಓದಿ-ಪತಿಯಿಂದಲೇ ಬುಡಕಟ್ಟು ಮಹಿಳೆಯ ಬೆತ್ತಲೆ ಮೆರವಣಿಗೆ!