Saturday, June 15, 2024

ಸತ್ಯ | ನ್ಯಾಯ |ಧರ್ಮ

ಸೋಮೇಶ್ವರದ ರುದ್ರಪಾದೆಯಲ್ಲಿ ಸಮುದ್ರ ಪಾಲಾದ ರಾಮನಗರ ಮೂಲದ ವೈದ್ಯ

ಮಂಗಳೂರು: ಇಲ್ಲಿನ ಸೋಮೇಶ್ವರದ ರುದ್ರಪಾದೆ ಎಂಬಲ್ಲಿ ಸೆ.3ರಂದು ತಡರಾತ್ರಿ ಯುವ ವೈದ್ಯರೊಬ್ಬರು ಸಮತೋಲನ ತಪ್ಪಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಮೃತರನ್ನು ರಾಮನಗರ ಮೂಲದ ಆಶಿಕ್ ಗೌಡ (30) ಎಂದು ಗುರುತಿಸಲಾಗಿದ್ದು, ಅವರು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿದ್ದರು.

ಮೂಲಗಳ ಪ್ರಕಾರ, ಡಾ ಆಶಿಕ್ ಜೊತೆಗೆ ಡಾ.ಪ್ರದೀಶ್ ಮತ್ತು ಇನ್ನೂ ಮೂವರು ಇಂಟರ್ನಿಗಳು ಬಿಡುವಿನ ಸಮಯವನ್ನು ಕಳೆಯಲೆಂದು ಸೋಮೇಶ್ವರದ ರುದ್ರಪಾದೆಗೆ ಹೋಗಿದ್ದರು. ಅವರೆಲ್ಲರೂ ರುದ್ರಪಾದೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ, ಡಾ.ಪ್ರದೀಶ ಸಮತೋಲನ ಕಳೆದುಕೊಂಡು ಸಮುದ್ರಕ್ಕೆ ಬಿದ್ದರು. ಡಾ.ಪ್ರದೀಶ್ ಸಹಾಯಕ್ಕಾಗಿ ಕಿರುಚಿದಾಗ, ಡಾ.ಆಶಿಕ್ ಮುಂದೆ ಹೋಗಿ ಡಾ.ಪ್ರದೀಶರಿಗೆ ಏನಾಯಿತು ಎಂದು ನೋಡಲು ಪ್ರಯತ್ನಿಸಿದ್ದಾರೆ. ಅದೇ ವೇಳೆ ಡಾಕ್ಟರ್ ಆಶಿಕ್ ಕೂಡ ಸಮತೋಲನ ತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ಡಾ.ಪ್ರದೀಶ್ ಸಮುದ್ರದಲ್ಲಿ ಸಣ್ಣ ಬಂಡೆಯನ್ನು ಹಿಡಿದುಕೊಂಡು ತನ್ನನ್ನು ರಕ್ಷಿಸಿಕೊಂಡರು ಆದರೆ ಡಾ.ಆಶಿಕ್ ನೀರಿನಲ್ಲಿ ಮುಳುಗಿದರು.

ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಡಾ. ಆಶಿಕ್‌ಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಆಗಸ್ಟ್ 4ರಂದು ಬೆಳಿಗ್ಗೆ ಆಶಿಕ್ ಮೃತದೇಹ ತೀರದಲ್ಲಿ ಪತ್ತೆಯಾಗಿತ್ತು.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು