Thursday, June 13, 2024

ಸತ್ಯ | ನ್ಯಾಯ |ಧರ್ಮ

ಮೂಲನಿವಾಸಿ ಕೊರಗರ ಬದುಕಲ್ಲಿ ಅಜಲು ಮುಕ್ತವಾದ ಇತಿಹಾಸ

ಕೊರಗರು ಅಲೆಮಾರಿ ಜೀವನದ ಬಳಿಕ ಒಂದು ಕಡೆ ನೆಲೆ ನಿಂತು ತಮ್ಮ ತಮ್ಮ ತರವಾಡ (ಮೂಲ ಮನೆತನ) ಗಳಲ್ಲಿ ಸ್ವತಂತ್ರವಾಗಿ ಕೃಷಿ ಜೀವನ ಆರಂಭಿಸಿದವರು. ಯಾರದೇ ಹಂಗಿಲ್ಲದೇ ಬದುಕಿದವರು. ಸಂಪತ್ಭರಿತ ಸಂಸ್ಕೃತಿ ಹೊಂದಿದ್ದವರು. ಇಂತಿರ್ಪ ಕಾಲದೊಳ್ ಪರದೇಸಿ ಮಂದಿ ಈ ಕಾಡುವಾಸಿ ಕೊರಗರ ಸೊಂಪಾದ ಸಾಂಸ್ಕೃತಿಕ ಕಲಾ ಸಂಪನ್ನತೆಗೆ ಮನಸೋತು, ಇವರನ್ನು ನಯವಾಗಿ ತಮ್ಮ ತೆಕ್ಕೆಗೆ ಜಾರಿಸಿಕೊಂಡರು.

ಕೊನೆಗೆ ಗುಲಾಮರನ್ನಾಗಿ ಮಾಡಿ, ಬಿಟ್ಟಿ ಸೇವೆಗೆ ಬಳಸಿಕೊಂಡು, ಕೊಳಕರೆಂದು ಹಣೆಪಟ್ಟಿ ಅಂಟಿಸಿದರು. ಗ್ರಾಮಾಡಳಿತದ ಭಾಗವಾಗಿ ಅತ್ಯಂತ ಕೆಳದರ್ಜೆಯ ಅನಿಷ್ಟ ಹೊರುವ ಅಜಲು ನೀಡಿ ವಿಕೃತ ಸಂತೋಷ ಪಡೆದರು. ಈ ಅಜಲು ಕೊರಗರ ನರನಾಡಿ ಮೆದಳುಗಳನ್ನೇ ಬಂದ್ ಮಾಡಿತು.

ಇಂತಹ ಅಸಹಾಯಕ ಮುಗ್ಧ ಮಾನವರ ಮೇಲೆ ಎಷ್ಟು ಸಾಧ್ಯವೋ ಅಷ್ಟೂ ದೌರ್ಜನ್ಯ ದಬ್ಬಾಳಿಕೆ ನಡೆಸಿದ್ದಾರೆ. ಸಾವಿರಾರು ವರ್ಷಗಳ ಕಾಲ ಅಜಲು ಹೆಸರಲ್ಲಿ ಶೋಷಣೆಗೆ ಒಳಗಾದ ನಮ್ಮವರು ಅದೇ ಸತ್ಯ, ಹಾಗಯೇ ನಮ್ಮ ಬದುಕು ಎಂಬ ಭ್ರಮೆಗೆ ಬಲಿಯಾದರು. ಆದರೆ ಇದು ಯಾವ ಪ್ರಗತಿ ಪರ ಹೋರಾಟಗಾರರ ಕಣ್ಣಿನ ಪೊರೆಯನ್ನೂ ತೆರೆಯಲಿಲ್ಲ. 1988/89 ರ ಸುಮಾರಿಗೆ ಕಾಪು ಪರಿಸರದಲ್ಲಿ ಒಂದು ಕಣ್ಣು ಈ ದೀನರ ಮೇಲೆ ನೆಟ್ಟತು. ಅದು ಬಲಿಷ್ಟ ಬಂಟ, ಕೊರಗರ ಪಾಲಿನ ಅಸ್ತಿತ್ವ ಪುನರ್ ನಿರೂಪಕ, ಎಂಟೆದೆಯ ದೇವದಾಸ್ ಶೆಟ್ಟಿ.

ಅಜಲಿನ ಇಂಚಿಂಚು ಅಳೆದು ತೂಗಿದ ದೇವದಾಸರು ಅಜಲಿನಿಂದ ಕೊರಗರ ಮುಕ್ತಿಗೆ ಸಂಕಲ್ಪತೊಟ್ಟರು. ಮಳ್ಳನ್ನು ಮುಳ್ಳಿಂದಲೇ ತೆಗೆವ ಸಾಹಸಕ್ಕೆ ಕೈ ಇಕ್ಕಿದರು. ಸಾಮಾಜಿಕ ಪಿಡುಗುಗಳ ಪರಿವೆಯೇ ಇರದ ಕೊರಗರನ್ನು ಸಂಘಟಿಸಿ ಕೊರಗರ ಅಜಲಿನ ವಿರುದ್ಧ ಆಂದೋಲನ ಕಟ್ಟಿದರು. ಗರಬಡಿದಂತಿದ್ದ ಕೊರಗರೂ ಒಮ್ಮೆಲೆ ಎಚ್ಚರವಾಗಿ ಆಂದೋಲನದ ಭಾಗೀಧಾರಿಗಳಾದರು. ಟೊಂಕ ಕಟ್ಟಿ ಹೋರಾಡಿದರು.

ಇದರ ಪರಿಣಾಮವಾಗಿಯೇ 2000ನೇ ಇಸವಿ ಆಗಸ್ಟ್ 17ರಂದು ಕರ್ನಾಟಕ ಸರಕಾರ ಈ ಕೊರಗರ ಅಜಲು ಸೇವೆಯನ್ನು ನಿಷೇಧಿಸಿ ಸುಗ್ರೀವಾಜ್ಞೆಯ ಮೂಲಕ ಆದೇಶವನ್ನು ಹೊರಡಿಸಿತು. ನಂತರ ಸೂಕ್ತ ತಿದ್ದುಪಡಿಗಳೊಂದಿಗೆ ಕಾನೂನು ಆಗಿ ಜಾರಿಗೆ ಬಂದಿತು. ಹಾಗಾಗಿ ಆಗಸ್ಟ್ 17 ಕೊರಗರ ಜೀತ ಮುಕ್ತಿಯ ದಿನ” ವಾಗಿರುತ್ತದೆ. ಎಲ್ಲರಿಗೂ ” ಕೊರಗರ ಅಜಲು ಮುಕ್ತ ದಿನ”ದ ಶುಭಾಶಯಗಳು.

ಅಜಲು ನಿಷೇಧ ಚಳುವಳಿ’ಯ ಪ್ರಮುಖಾಂಶಗಳು

1997-1998

  • ಸೂರಾಲು ಹಬ್ಬದಲ್ಲಿ ಕದನಿ ನಿಲ್ಲಿಸಲಾಯಿತು.
  • ಸೂರಾಲು ಹಬ್ಬಕ್ಕೆ ಅರಸರನ್ನು ಊರ ಧನಿ ಡೋಲು ಮೇಳದೊಂದಿಗೆ ಕರೆತಂದು, ಪುನಃ ಅವರ ಮನೆಗೆ ಬಿಟ್ಟು ಬರುವುದನ್ನು ನಿಲ್ಲಿಸಿರುವುದು.
  • ಸೂರಾಲು ಹಬ್ಬದ ದಿನ ಊರ ಹೋಟೇಲಿನವರು – ಕೊರಗರಿಗೆ ಹಾಕಿದ ಪ್ರತ್ಯೇಕ ಚಪ್ಪರವನ್ನು ಹಬ್ಬದ ದಿನ ಕಿತ್ತು ಬಿಸಾಡಲಾಯಿತು
  • ಇದುವರೆಗಿನ ಸಂಪ್ರದಾಯದಂತೆ ನೂತನ ವಧುವರರು ಮದುವೆಯ ದಿನ ಮನೆಗೆ ಬರುವ ಮುನ್ನ, ಧನಿಯವರ ಕಾಲು ಹಿಡಿಯಲು ಹೋಗಬೇಕಿತ್ತು. ಅದನ್ನು ನಿಲ್ಲಿಸಲಾಯಿತು.
  • ಮದುವೆಯಲ್ಲಿ ಕುಡಿತವನ್ನು ಕಡ್ಡಾಯವಾಗಿ ನಿಲ್ಲಿಸಲಾಯಿತು.
  • ಪಾದೆಮಠ ಹಬ್ಬದಲ್ಲಿ ವೇಷ ಹಾಕಿ ಬೇಡುವುದನ್ನು ನಿಲ್ಲಿಸಲಾಯಿತು.
  • ಸೂರಾಲು, ಪಾದೆಮಠ, ಕೊಕ್ಕರ್ಣೆ, ಚೆಗ್ರಿಬೆಟ್ಟು, ಮೊಗೇರಪೇಟೆ, ರಂಗನಕೆರೆ, ಬಂಡೀಮಠ, ಕೂರಾಡಿ, ನಿಂಜೂರು ಮುಂತಾದ ಕಡೆಗಳಲ್ಲಿ ಮಾರಿ ಹಬ್ಬದ ದಿನ ಊರ ಮನೆ ಮನೆಗೆ ಹೋಗಿ ಬೇಡುವುದನ್ನು ನಿಲ್ಲಿಸಲಾಯಿತು.
  • ಬಾರ್ಕೂರು ಮಾರಿ ಹಬ್ಬದಂದು ಸಂಬಳರಹಿತ ಡೋಲು ಸೇವೆಗೆ ವಿರೋಧ ವ್ಯಕ್ತಪಡಿಸಲಾಯಿತು. ಆ ಮೂಲಕ ಬಾರ್ಕೂರಿನಲ್ಲಿ ಮೊದಲ ಬಾರಿಗೆ ಕೊರಗರು ಡೋಲಿನ ಕೆಲಸಕ್ಕೆ ಸಂಭಾವನೆ ಪಡೆದುಕೊಂಡರು.
  • ಬೈದಬೆಟ್ಟಿನಲ್ಲಿ ಪಾಯಿಖಾನೆ ಸ್ವಚ್ಛಗೊಳಿಸುವುದಕ್ಕೆ ಕೊರಗರಿಂದ ವಿರೋಧ. ಇನ್ನು ಮುಂದೆ ಸ್ವಚ್ಛತೆಯ ಕೆಲಸಗಳಿಗೆ ಅನಿಷ್ಟ ಚಾಕರಿಗಳಿಗೆ ಹೋಗುವುದಿಲ್ಲವೆಂಬ ತೀರ್ಮಾಣ.
  • ಹೆಜಮಾಡಿ ನೇಮೋತ್ಸವದಲ್ಲಿ ಡೋಲು ಚಾಕ್ರಿಯ ವಿರುದ್ಧ ಪೋಲೀಸರಿಗೆ ದೂರು ನೀಡಲಾಯಿತು.

1998-99

  • ಕೊರಗರಿಂದ ಯಾವುದೇ ರೀತಿಯ ಅಜಲು ಕೆಲಸಗಳಿಗೆ ಹೋಗುವುದಿಲ್ಲವೆಂಬ ತೀರ್ಮಾನ.
  • ವಡ್ಡಬೆಟ್ಟು ಕಂಬಳದಲ್ಲಿ ಅಜಲು ಚಾಕರಿ ನಿಲ್ಲಿಸಲಾಯಿತು.
  • ಕೆಂಜೂರು ಕಂಬಳದಲ್ಲಿ ಅಜಲು ಚಾಕರಿಯನ್ನು ನಿಲ್ಲಿಸಲಾಯಿತು. ಊರ ಮಂದಿಯಿಂದ ತೀವ್ರ ಪ್ರತಿರೋಧ.
  • ಬಾರ್ಕೂರಿನಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಪಾದಯಾತ್ರೆ. ಅಜಲು ನಿಷೇಧಿಸುವಂತೆ ಮನವಿ.
  • ಬಾರ್ಕೂರು ಮೂರು ಮಾಗಣಿಯ ಮಾರಿಯಲ್ಲಿ ಅಜಲು ಚಾಕರಿಯನ್ನು ನಿಲ್ಲಿಸಲಾಯಿತು.
  • ವಂಡಾರು ಕಂಬಳದಲ್ಲಿ ಸುಮಾರು 200ರಷ್ಟಿದ್ದ ಕೊರಗರ ವೇಷಗಳಿಗೆ ಈ ವರ್ಷ ಪೂರ್ಣವಿರಾಮ.
  • ಶಿಬರೂರು ಜಾತ್ರೆಯಲ್ಲಿ ಅಜಲು ಚಾಕ್ರಿಗೆ ಬಳಸಿದ ಡೋಲುಗಳನ್ನು ಪೋಲೀಸರಿಂದ ಮುಟ್ಟುಗೋಲು ಹಾಕಿಸಲಾಯಿತು.
  • ಮುಲ್ಕಿ ಅರಸು ಕಂಬಳದಲ್ಲಿ ಕಂಬಳದ ಗದ್ದೆಯ ಸುತ್ತ ನೂರಾರು ಸಂಖ್ಯೆಯಲ್ಲಿ ಸೇರಿ ಅಜಲು ಚಾಕ್ರಿಯನ್ನು ವಿರೋಧಿಸಲಾಯಿತು.
  • ಕಟಪಾಡಿ ಕಂಬಳದ ದಿನ ಅಜಲು ಚಾಕ್ರಿಯನ್ನು ವಿರೋಧಿಸಿ ಮಾನವ ಸರಪಳಿ ರಚಿಸಲಾಯಿತು.


ಬರಹ : ಪಾಂ.ಬಾಬು ಕೊರಗ

Related Articles

ಇತ್ತೀಚಿನ ಸುದ್ದಿಗಳು