Sunday, October 12, 2025

ಸತ್ಯ | ನ್ಯಾಯ |ಧರ್ಮ

ಒಳಮೀಸಲಾತಿ ಜಾರಿಗೆ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ ಆಗ್ರಹ

ಬೆಂಗಳೂರು: ಪರಿಶಿಷ್ಟ ಜಾತಿ/ವರ್ಗಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೆ ತರಬೇಕು. ನ್ಯಾ. ಸದಾಶಿವ ಆಯೋಗದ ವರದಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟು ಕಡ್ಡಾಯವಾಗಿ ಅನುಷ್ಟಾನಗೊಳಿಸಬೇಕು ಎಂದು ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ ಆಗ್ರಹಿಸಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದವಾದ ಇಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ‘ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ’ ದಲ್ಲಿ ಹದಿನೈದು ಪ್ರಮುಖ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಅಂಗೀಕರಿಸಲಾದ ನಿರ್ಣಯಗಳು ಈ ಕೆಳಕಂಡಂತಿವೆ:

  1. ಭಾರತದ ವೈವಿದ್ಯಮಯ ಸೌಹಾರ್ಧಯುತ ಸಾಮರಸ್ಯ ಮತ್ತು ಬಹುತ್ವದ ಸಂಸೃತಿಯ ಮೇಲೆ ಮೇಲು -ಕೀಳು, ಸ್ಪೃಶ್ಯ- ಅಸ್ಪೃಶ್ಯ, ಶ್ರೇಷ್ಠತೆ – ಕನಿಷ್ಠತೆಯ ತಾರತಮ್ಯದ ವೈದಿಕಶಾಹಿಯ ಏಕ ಸಂಸ್ಕೃತಿಯನ್ನು ಹೇರುವಂತಹ ದಬ್ಬಾಳಿಕೆಯ ನೀತಿಯನ್ನು ಈ ಸಾಂಸ್ಕೃತಿಕ ಪ್ರತಿರೋಧ ಸಮಾವೇಶವು ತೀವ್ರವಾಗಿ ಖಂಡಿಸುತ್ತದೆ. ಮತ್ತು ಇಂತಹ ವೈವಿಧ್ಯಮಯ, ಸೌಹಾರ್ದಯುತ, ಸಾಮರಸ್ಯದ ಬಹುತ್ವದ ಸಾಂಸ್ಕೃತಿಕ ಅಸ್ಮಿತೆಯ ಬದುಕನ್ನು ಉಳಿಸಿಕೊಳ್ಳಲು ಈ ಪ್ರತಿರೋಧ ಸಮಾವೇಶವು ಸಂಕಲ್ಪ ಮಾಡುತ್ತದೆ.
  2. ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಯ ಸಾಧನದಂತೆ ವರ್ತಿಸುತ್ತಿರುವ ಸರ್ಕಾರದ ನಡೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ. ಇಂತಹ ಚಾತುರ್ವರ್ಣ ಮತ್ತು ಜಾತೀಯತೆ ತಾರತಮ್ಯಗಳನ್ನು ಎತ್ತಿ ಹಿಡಿಯುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸುತ್ತೇವೆ. ಭಾರತದ ಸಂವಿಧಾನ ಎತ್ತಿಹಿಡಿದಿರುವ ಮೂಲಭೂತ ಹಕ್ಕುಗಳನ್ನು ಸಮಸ್ತ ಭಾರತೀಯರೂ ಅನುಭವಿಸುವಂತಹ ವಾತಾವರಣವನ್ನು ಕೇಂದ್ರ ಸರ್ಕಾರ ಖಾತ್ರಿಗೊಳಿಸಬೇಕಿದೆ.
  3. ಹಿಂದುಳಿದ ವರ್ಗಗಳಲ್ಲಿ ಇರುವಂತೆ ಪರಿಶಿಷ್ಟ ಜಾತಿ/ವರ್ಗಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೆ ತರಬೇಕು. ನ್ಯಾ. ಸದಾಶಿವ ಆಯೋಗದ ವರದಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟು ಕಡ್ಡಾಯವಾಗಿ ಅನುಷ್ಟಾನಗೊಳಿಸಬೇಕು.
  4. ಪರಿಶಿಷ್ಟ ಜಾತಿ/ವರ್ಗಗಳಿಗೆ SಅSP/ಖಿSP ಕಾಯ್ದೆಯ ಅನುಗುಣವಾಗಿ ರಾಜ್ಯ ಬಜೆಟ್ಟಿನ ಶೇ. 24.10 ಯಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು. ಈ ಅನುದಾನವನ್ನು ಸಂಪೂರ್ಣವಾಗಿ ‘ಏಕಗವಾಕ್ಷಿ ಯೋಜನೆ’ ಯಲ್ಲಿ ಅನುಷ್ಟಾನಗೊಳಿಸಬೇಕು. ದಲಿತರ ಅವಶ್ಯಕತೆಗೆ ತಕ್ಕಂತೆ ಯೋಜನೆ ರೂಪಿಸುವುದರ ಮೂಲಕ ಅನುದಾನ ದುರ್ಬಳಕೆಯನ್ನು ಕೂಡಲೇ ನಿಲ್ಲಿಸಬೇಕು. ಇತರೆ ವೆಚ್ಚಕ್ಕಾಗಿ ಹಣ ಬಳಸಲು ಅವಕಾಶವಿರುವ ‘7ಡಿ ಸೆಕ್ಷನ್’ ಅನ್ನು ಕಾಯ್ದೆಯಿಂದ ತೆಗೆದುಹಾಕಬೇಕು. ಕೇಂದ್ರ ಸರ್ಕಾರವೂ ಸಹ ಇದೇ ಮಾದರಿಯ ಕಾಯ್ದೆಯನ್ನು ರೂಪಿಸಬೇಕು.
  5. ಕೇವಲ ಆರ್ಥಿಕ ಮಾನದಂಡದಲ್ಲಿ ಎಸ್ಸಿ/ಎಸ್ಟಿ/ಒಬಿಸಿ ಯವರನ್ನು ಹೊರತುಪಡಿಸಿ ವಾರ್ಷಿಕ 8 ಲಕ್ಷ ವರಮಾನವಿರುವ ಮೇಲ್ಜಾತಿಯವರಿಗೆ ನೀಡಿರುವ EWS ಮೀಸಲಾತಿಯನ್ನು ಈ ವೇದಿಕೆ ಖಡಾಖಂಡಿತವಾಗಿ ವಿರೋಧಿಸುತ್ತದೆ. ಈ ಅಸಂವಿಧಾನಿಕ ತಿದ್ದುಪಡಿಯನ್ನು ರದ್ದುಗೊಳಿಸಬೇಕು. ಖಾಸಗಿಯಲ್ಲಿಯೂ ಸಾಮಾಜಿಕ ನ್ಯಾಯದ ಹಿನ್ನೆಲೆಯ ಮೀಸಲಾತಿಯನ್ನು ಜಾರಿಗೊಳಿಸಬೇಕು.
  6. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಬಹುಕಾಲದಿಂದ ಖಾಲಿಯಾಗಿಯೇ ಉಳಿದಿರುವ ಲಕ್ಷಾಂತರ ಎಸ್ಸಿ/ಎಸ್ಟಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ಹೊರಗುತ್ತಿಗೆ ನೇಮಕಾತಿಯನ್ನು ರದ್ದುಗೊಳಿಸಬೇಕು. ಖಾಲಿ ಹುದ್ದೆಗಳನ್ನು ಕೂಡಲೇ ತುಂಬಬೇಕು.
  7. ‘ಪಿಟಿಸಿಎಲ್ ಕಾಯ್ದೆ’ ಯನ್ನು ಬಲಪಡಿಸಬೇಕು. ದಲಿತರ ಭೂಮಿಯು ದಲಿತರಲ್ಲಿಯೇ ಉಳಿಯುವಂತೆ ಮಾಡಬೇಕು. ಈ ಕಾಯ್ದೆಯ ಮೂಲ ಉದ್ದೇಶವಾದ ‘ದಲಿತರು ಭೂಮಿ ಹೊಂದುವ’ ಗುರಿಯನ್ನು ಸಮರ್ಥವಾಗಿ ಅನುಷ್ಟಾನಕ್ಕೆ ತರಬೇಕು.
  8. ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಗೋಹತ್ಯಾ ನಿಷೇಧ ಕಾಯ್ದೆ’ ಮತ್ತು ‘ಮತಾಂತರ ನಿಷೇಧ ಕಾಯ್ದೆ’ ಗಳನ್ನು ಈ ಕೂಡಲೇ ರದ್ದುಗೊಳಿಸಬೇಕು.
  9. ಎಸ್ಸಿ/ಎಸ್ಟಿ ಅಲೆಮಾರಿ, ಅರೆ-ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಹಾಗೂ ಪ್ರತ್ಯೇಕ ಆಯೋಗವನ್ನು ರಚಿಸಿ ಕಾಲಕಾಲಕ್ಕೆ ಸಮೀಕ್ಷೆ ಮಾಡಿ ಸೌಲಭ್ಯ ಒದಗಿಸಬೇಕು. ಡಿಎನ್‌ಟಿ (ಡಿನೋಟಿಫೈ ಟ್ರೆಬ್ಸ್) ಸಮುದಾಯಗಳಿಗೆ ವಿಶೇಷ ಸೌಲಭ್ಯ ಒದಗಿಸಬೇಕು.
  10. ರಾಜ್ಯ ಸರ್ಕಾರ ಜಾರಿಗೊಳಿಸಿರುವ
    ರೈತಾಪಿ ಜನರ ವಿರೋಧಿ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎ.ಪಿ.ಎಮ್.ಸಿ.ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಈ ಕೂಡಲೇ ರದ್ದುಗೊಳಿಸಬೇಕು.
  11. ಒಕ್ಕೂಟ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅನುಷ್ಟಾನಕ್ಕೆ ತಂದಿರುವ, ಅಸಮಾನತೆಯನ್ನು ಹಾಗೂ ಚಾತುರ್ವರ್ಣ ಪದ್ಧತಿಯನ್ನು ಎತ್ತಿ ಹಿಡಿಯುವ ರಾಷ್ಟ್ರೀಯ ಶಿಕ್ಷಣ ನೀತಿ – 2020 ಅನ್ನು ಈ ಕೂಡಲೇ ರದ್ದುಗೊಳಿಸಬೇಕು.
  12. ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ದಲಿತ ಮಕ್ಕಳಿಗೆ ಸ್ಕಾಲರ್‌ಶಿಪ್ ನಿಲ್ಲಿಸುವ ಯೋಚನೆಯನ್ನು ಕೂಡಲೇ ಕೈ ಬಿಡಬೇಕು. ಎಸ್ಸಿ/ಎಸ್ಟಿ ಮೀಸಲಾತಿಗೆ ನಿಗದಿಪಡಿಸುರುವ ವಾರ್ಷಿಕ ಆದಾಯ ಮಿತಿಯನ್ನು 10 ಲಕ್ಷಕ್ಕೆ ಏರಿಸಬೇಕೆಂದು ಒತ್ತಾಯಿಸುತ್ತೇವೆ.
  13. ಹತ್ತು ನಿಮಿಷಕ್ಕೊಂದು ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ನ್ಯಾಯಾಲಯಗಳಲ್ಲಿ ಶೇ.96 ರಷ್ಟು ಅಟ್ರಾಸಿಟಿ ಕಾಯ್ದೆಯಡಿಯ ಪ್ರಕರಣಗಳು ಬಾಕಿ ಉಳಿದಿವೆ. ಈ ಕಾಯ್ದೆಯಡಿ ಶಿಕ್ಷೆ ನೀಡುವ ಪ್ರಮಾಣ ತೀರ ಕಡಿಮೆ ಇದೆ. ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳ ಈ ಉದ್ದೇಶಪೂರ್ವಕ ನಿರ್ಲಕ್ಯವನ್ನು ಖಂಡಿಸುತ್ತೇವೆ. ಈ ಕೂಡಲೇ ದಲಿತರಿಗೆ ಭದ್ರತೆ ಹಾಗೂ ರಕ್ಷಣೆ ಒದಗಿಸಲು ಆಗ್ರಹಿಸುತ್ತೇವೆ.
  14. ಅರ್ಚಕ ಮತ್ತು ಪೌರಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸಬೇಕು. ಈ ಎರಡೂ ವೃತ್ತಿಗಳಲ್ಲಿ ಮೀಸಲಾತಿ ನೀತಿಯನ್ನು ಅನುಷ್ಟಾನಕ್ಕೆ ತರಬೇಕು. ಮಲ ಹೊರುವ ಪದ್ಧತಿ ನಿಷೇಧಗೊಂಡಿದ್ದರೂ ಸಹ ನೂರಾರು ಸಾವುಗಳು ಇದರಿಂದ ಸಂಭವಿಸಿದೆ. ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಟಾನಕ್ಕೆ ತರಲು ಆಗ್ರಹಿಸುತ್ತೇವೆ.
  15. ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದಿರುವ ಕೋಮುವಾದಿ ದೌರ್ಜನ್ಯಗಳನ್ನು ಖಂಡಿಸುತ್ತೇವೆ. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕನ್ನಡ ನಾಡಿನ ಬಹುತ್ವವನ್ನು ಹಾಳುಗೆಡುವುತ್ತಿರುವ ಕೋಮುವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page