Sunday, June 23, 2024

ಸತ್ಯ | ನ್ಯಾಯ |ಧರ್ಮ

ಭಾರತ್ ಜೋಡೋ ಯಾತ್ರೆ ನಿಯಂತ್ರಿಸಲು ಕೇರಳ ಹೈಕೋರ್ಟ್ ಗೆ ಮೊರೆ ಹೋದ ವಕೀಲ

ಹಿರಿಯ ನಾಯಕ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 11 ರಂದು ಕೇರಳ ರಾಜ್ಯವನ್ನು ಪ್ರವೇಶಿಸಿದೆ. ಕೇರಳದಲ್ಲಿ ಒಟ್ಟು 18 ದಿನಗಳ ಕಾಲ ನಡೆಯಲಿರುವ ಈ ಯಾತ್ರೆಗೆ ಸಣ್ಣ ಕಂಟಕ ಎದುರಾಗಿದೆ. ಅದೇನೆಂದರೆ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಪ್ರತಿನಿತ್ಯ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದ್ದು, ಈ ಟ್ರಾಫಿಕ್ ತೊಂದರೆಗಳನ್ನು ಕೊನೆಗೊಳಿಸಲು ಮಧ್ಯಪ್ರವೇಶಿಸುವಂತೆ ಕೋರಿ ಮಂಗಳವಾರ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಕೇರಳದ ವಕೀಲ ಕೆ ವಿಜಯನ್ ಅವರು ಸಲ್ಲಿಸಿದ ಅರ್ಜಿಯಲ್ಲಿ, ಕಾಂಗ್ರೆಸ್ ನ ಈ ಭಾರತ್ ಜೋಡೋ ಯಾತ್ರೆಯನ್ನು ನಿಯಂತ್ರಿಸಲು ನ್ಯಾಯಾಲಯಕ್ಕೆ ನಿರ್ದೇಶನವನ್ನು ಕೋರಿದ್ದು, ರಸ್ತೆಯ ಅರ್ಧದಷ್ಟು ಭಾಗವನ್ನು ಮಾತ್ರ ಬಳಸಿಕೊಳ್ಳಲು ಅನುಮತಿ ನೀಡಬೇಕು. ಆ ಮೂಲಕ ಇದು ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಯಾತ್ರೆಗಾಗಿ ಗಂಟೆಗಟ್ಟಲೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುತ್ತಿದ್ದು, ದಿನನಿತ್ಯದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ವಿಜಯನ್ ಮನವಿಯಲ್ಲಿ ತಿಳಿಸಿದ್ದಾರೆ.

ಇದರ ಜೊತೆಗೆ ಯಾತ್ರೆಯ ಭದ್ರತಾ ವ್ಯವಸ್ಥೆಗೆ ಸರ್ಕಾರದ ಕಡೆಯಿಂದ ಭಾರಿ ವೆಚ್ಚವಾಗುತ್ತಿದೆ ಮತ್ತು ನೂರಾರು ಪೊಲೀಸರು ರಸ್ತೆಗಳಲ್ಲಿ ಬೀಡುಬಿಟ್ಟಿದ್ದಾರೆ ಎಂದು ಪ್ರತಿಪಾದಿಸಿದ ಅರ್ಜಿದಾರರು, ತೆರಿಗೆದಾರರ ಹಣದಿಂದ ಪಾವತಿಸುವ ಬದಲು ಕಾಂಗ್ರೆಸ್ ಪಕ್ಷವು ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ.

ಯಾತ್ರೆಯು ಕೇರಳ ಸಾರ್ವಜನಿಕ ಮಾರ್ಗಗಳ ಕಾಯಿದೆ 2011 ಅನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದ ವಕೀಲ ವಿಜಯನ್, ಇದು ಸಾರ್ವಜನಿಕ ರಸ್ತೆಗಳಲ್ಲಿ ಅಡಚಣೆಗೆ ಸಂಬಂಧಿಸಿದ ಅಪರಾಧಗಳ ಬಗ್ಗೆ ಎತ್ತಿ ಹಿಡಿಯುತ್ತದೆ. ಹಾಗಾಗಿ ನ್ಯಾಯಾಲಯ ಇದನ್ನು ಶೀಘ್ರ ಬಗೆಹರಿಸಿಕೊಡಬೇಕು ಎಂದು ಕೇರಳ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ನ್ಯಾಯಾಲಯವು ಗುರುವಾರ ಅರ್ಜಿಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

ಭಾರತ್ ಜೋಡೋ ಯಾತ್ರೆಯ ಹದಿಮೂರನೇ ದಿನ ಮಂಗಳವಾರ ಕೇರಳದ ಆರಂಭವಾಯಿತು. “ಕಳೆದ ಕೆಲವು ದಿನಗಳಂತೆ, #BharatJodoYatra 13 ನೇ ದಿನವೂ ಸಹ ಬೆಳಿಗ್ಗೆ 6:30 ರ ಸುಮಾರಿಗೆ ಪ್ರಾರಂಭವಾಯಿತು. ಇಂದು ಪಾದಯಾತ್ರೆಯ ಬೆಳಗಿನ ಅವಧಿಯಲ್ಲಿ ಭಾರತೀಯ ಪ್ರಯಾಣಿಕರು ಚೆರ್ತಲದಿಂದ ಆಲಪ್ಪುಳ ಜಿಲ್ಲೆಯ ಕುಥಿಯಾತೋಡುವರೆಗೆ 15 ಕಿ.ಮೀ. ವರೆಗೆ ನಡೆದಿದೆ. ಕೊಚ್ಚಿ ಜಿಲ್ಲೆಯಲ್ಲಿ ಇಂದು ರಾತ್ರಿ ಶಿಬಿರವನ್ನು ಆಯೋಜಿಸಲಾಗುವುದು” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಸಧ್ಯ ವಕೀಲ ಕೆ.ವಿಜಯನ್ ಅವರ ಮನವಿಗೆ ಪ್ರತಿಕ್ರಿಯಿಸಿದ ಸಂಸದ ಕಾಂಗ್ರೆಸ್ ಮುಖಂಡ ಕೋಡಿಕುನ್ನಿಲ್ ಸುರೇಶ್ ಅವರು, ಸಂಚಾರಕ್ಕೆ ಅಡ್ಡಿಯಾಗದಂತೆ ಸಂಘಟಕರು ಎಲ್ಲಾ ವ್ಯವಸ್ಥೆಯನ್ನು ನಿಭಾಯಿಸುತ್ತಿದ್ದಾರೆ. ಕೆಲವು ಅಗತ್ಯ ಸ್ಥಳಗಳಲ್ಲಿ ಭದ್ರತಾ ಕಾರಣಗಳನ್ನು ಪೊಲೀಸರು ರಸ್ತೆಗಳನ್ನು ಸುತ್ತುವರೆದಿದ್ದಾರೆ. ಮುಂದಿನ 157 ದಿನಗಳಲ್ಲಿ ಯಾತ್ರೆಯನ್ನು ಒಳಗೊಳ್ಳಲಿರುವ ಎಲ್ಲಾ 12 ರಾಜ್ಯಗಳು ಮತ್ತು 2 ಯುಟಿಗಳಲ್ಲಿ ಪಕ್ಷವು ಪೂರ್ವಾನುಮತಿ ತೆಗೆದುಕೊಂಡಿದೆ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು