Tuesday, March 4, 2025

ಸತ್ಯ | ನ್ಯಾಯ |ಧರ್ಮ

ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಅಗತ್ಯ – ಶಿಕ್ಷಣ ತಜ್ಞರು ಅರವಿಂದ್ ಚೊಕ್ಕಾಡಿ

ಬೆಳಗ್ಗಿನ ಟಿಫನ್, ಮಧ್ಯಾಹ್ನದ ಊಟವಿಲ್ಲ, ಪೂಜೆ-ಪ್ರಸಾದ-ಭಜನೆ ಇಲ್ಲ, ಕರ್ಕಶ ಡಿ.ಜೆ- ಡಿಸ್ಕೋ ಡ್ಯಾನ್ಸ್ ಇಲ್ಲ; ಆದರೂ ಹಾಸನದ ಗಾಂಧಿ ಭವನದಲ್ಲಿ ಶೈಕ್ಷಣಿಕ ಸಂವಾದಕ್ಕೆ ಜನ ಭರ್ತಿಯಾಗಿತ್ತು. ಅದಕ್ಕೆ ಕಾರಣ ಜೆ.ಪಿ.ಚಳವಳಿಯಿಂದ ಬೆಳೆದು ಬಂದ ಹಿರಿಯರಾದ ಆರ್. ಪಿ. ವೆಂಕಟೇಶ ಮೂರ್ತಿಯವರೇ.‌ ಕೇಳುಗರು ಕೂಡ ಬಹಳ ಸೆನ್ಸಿಬಲ್ ಕೇಳುಗರಾಗಿದ್ದರು. ಆಡಳಿತಾಧಿಕಾರಿಗಳು, ಶಿಕ್ಷಕರು, ಪೋಷಕರು, ಕಲಾವಿದರು, ಸ್ವಲ್ಪ ಚಳವಳಿಯ ಹಿನ್ನೆಲೆ ಇದ್ದವರು ಎಲ್ಲ ಬಂದಿದ್ದರು. ಯಾರಾದರೂ ಆಸಕ್ತರಿದ್ದರೆ ದಯವಿಟ್ಟು ವೆಂಕಟೇಶಮೂರ್ತಿಯವರೊಂದಿಗೆ ಸೇರಿಕೊಳ್ಳಿ.‌ ಅವರು ಕೆಟ್ಟೇ ಹೋಗಿರುವ ಶಿಕ್ಷಣ ವ್ಯವಸ್ಥೆಗೆ ಏನಾದರೂ ಮಾಡಬೇಕೆಂದು ಹೊರಟಿದ್ದಾರೆ. ವಯೋವೃದ್ಧರವರು. ಆದರೂ ನಾನಿರುವ ವರೆಗೆ ಸುಮ್ಮನೆ ಕೂರಲು ಆಗುವುದಿಲ್ಲ ಎಂದು ಹೊರಟಿದ್ದಾರೆ.

ಶಿಕ್ಷಕ ಸಂಘದವರೊಬ್ಬರು ಒಂದು ಒಳ್ಳೆ ಪ್ರಶ್ನೆ ಕೇಳಿದರು. ಬಹುಶಃ ಶಿಕ್ಷಕ ಸಂಘದವರು ಅವರೊಬ್ಬರೇ ಇದ್ದರು‌. ” ನೀವು ಇರುವ ವ್ಯವಸ್ಥೆಯನ್ನು ಹೇಗೆ ಮ್ಯಾನೆಜೀರಿಯಲ್ ಆಗಿ ಸುಧಾರಣೆ ಮಾಡಬಹುದು ಎನ್ನುತ್ತಿದ್ದೀರಿ. ಆದರೆ ಹೋರಾಟದ ಬಗ್ಗೆ ಹೇಳುತ್ತಿಲ್ಲ” ಎಂದು ಕೇಳಿದರು.

“ಹೋರಾಟ ಈಗ ಸತ್ತೇ ಹೋಗಿದೆ. ನಾವು ಹೋರಾಟ ಮಾಡಿದರೆ ನಮ್ಮನ್ನು ಹಾಗೆ ಮಾಡ್ತಾರೆ, ಹೀಗೆ ಮಾಡ್ತಾರೆ, ಹೀಗೆ ಹೇಳ್ತಾರೆ ಎಂಬ ವಾದಗಳು ಬರುತ್ತಿವೆ. ನಾವು ಹೋರಾಟ ಮಾಡುವುದು ನಮಗಿಂತ ಬಲಿಷ್ಠ ಶಕ್ತಿಯೊಂದಿಗೆ. ಅವರ ಹಿತಾಸಕ್ತಿಗೆ ಧಕ್ಕೆ ತರುವವರನ್ನು ದಮನಿಸದೆ ಏನು ಸಂಮ್ಮಾನ ಮಾಡುತ್ತಾರಾ.‌ ಬೂಟು ಕಾಲಿನಲ್ಲಿ ಒದೆ, ಲಾಠಿ ಚಾರ್ಜ್, ಜೀವನ ಪೂರ್ತಿ ಜೈಲು, ಮನೆಯಲ್ಲಿ ಊಟಕ್ಕಿಲ್ಲದಿದ್ದರೂ ದೇಶ ಬೇಕು ಎಂದು ಹೊರಟು ಸಾವಿಗೂ ಸಿದ್ಧರಾಗಿ ಹೋರಾಟ ಮಾಡಿದ್ದರಿಂದ ಸ್ವಾತಂತ್ರ್ಯ ಬಂತು.‌ ಇವತ್ತು ಹೋರಾಟ ಮಾಡಬೇಕು ಎನ್ನುವುದು ಭಾಷಣ, ಲೇಖನ, ಫೇಸ್ ಬುಕ್‌ನಲ್ಲಿ ಮಾತ್ರ.‌ ಒದೆ ತಿನ್ನಲು ನಾನು ತಯಾರು ಎನ್ನುವವರು ಯಾರಿದ್ದಾರೆ ಹೇಳಿ. ಎಲ್ಲರೂ ಹೋರಾಟ ಆಗಬೇಕು ಎನ್ನುತ್ತಾರೆ. ಹೋರಾಟ ಮಾಡಬೇಕಾದವರು ಯಾರು? ಯಾರೂ ಇಲ್ಲ. ಮತ್ತೆ ಹೋರಾಟದ ಬಗ್ಗೆ ನಾನೇಕೆ ಹೇಳಲಿ.‌ ಮೊದಲೆಲ್ಲ ಶಿಕ್ಷಕ ಸಂಘಗಳು ತಮ್ಮ ವೇತನ ಏರಿಕೆಗಾಗಿಯಾದರೂ ಹೋರಾಟ ಮಾಡುವುದಿತ್ತು. ಈಗ ಅದೂ ಇಲ್ಲ. ಇಷ್ಟು ಕೊಟ್ಟು ನಮಗೆ ಬೇಕಾದ್ದನ್ನು ಮಾಡ್ಸಿಕೊಂಡು ಬರುವುದು ಎಂಬ ಪದ್ಧತಿ ಬಂದಾಗಿದೆ. ಆದ್ದರಿಂದ ಹೋರಾಟದ ಬಗ್ಗೆ ಹೇಳಲಿಲ್ಲ” ಎಂದೆ.

ರೂಪಾ ಹಾಸನ ಅವರು ಸಾಕಷ್ಟು ಅಧಿಕೃತ ಮಾಹಿತಿಯೊಂದಿಗೆ ಬಂದಿದ್ದರು. ಸುಮಾರು ಆರೂವರೆ ಸಾವಿರ ಶಾಲೆಗಳು ಇನ್ನೂ ಏಕೋಪಾಧ್ಯಾಯ ಶಾಲೆಗಳಿವೆ ಎಂಬ ದಾಖಲೆ ಕೊಟ್ಟರು.ಬಹಳ ಚರ್ಚೆಗಳು ನಡೆದವು. ಎಲ್ಲವನ್ನೂ ಒಂದೇ ಸಲಕ್ಕೆ ಮಾಡಲು ಆಗುವುದಿಲ್ಲ. ಈ ಕ್ಷಣಕ್ಕೆ ಒಂದಷ್ಟು ಕಾರ್ಯಯೋಜನೆ ಮುಂದಿಟ್ಟುಕೊಂಡು ಚರ್ಚೆಗಳನ್ನು ಬೆಳೆಯಿಸುತ್ತಾ ರಾಜ್ಯಾದ್ಯಂತ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಿರುವವರನ್ನು ಒಂದು ನೆಟ್ವರ್ಕಿಗೆ ತಂದು ಜನರನ್ನು ಶೈಕ್ಷಣಿಕ ಚಳವಳಿಗೆ ಸನ್ನದ್ಧರನ್ನಾಗಿ ಮಾಡಬೇಕಾದ ಅಗತ್ಯವನ್ನು ಹೇಳಿದೆ. ನಾನು ಸೂಚಿಸಿದ ಅತೀ ಮುಖ್ಯ ಕಾರ್ಯಕ್ರಮಗಳು:

  • ಎಲ್ಲ ಶಾಲೆಗಳಲ್ಲೂ ಅಗತ್ಯ ಇರುವಷ್ಟು ಸುಸಜ್ಜಿತ ಕೋಣೆಗಳು, ಆಟದ ಮೈದಾನ, ಪೀಠೋಪಕರಣಗಳು, ಕುಡಿಯುವ ನೀರು, ಶೌಚಾಲಯ ಇಷ್ಟು ಇರಲೇಬೇಕು.
  • ಸಾಮಾನ್ಯವಾಗಿ ಸಮಾಜದಲ್ಲಿ 2-3% ಜೀನಿಯಸ್ ಎನ್ನುವಂಥ ಮಕ್ಕಳಿರುತ್ತಾರೆ.‌4-6% ತೀರಾ ಕಲಿಕೆಯಲ್ಲಿ ಹಿಂದುಳಿದವರಿರುತ್ತಾರೆ. ಒಟ್ಟಾಗಿ 10% ಎಂದು ತೆಗೆದುಕೊಂಡರೆ 90% ಮಕ್ಕಳು ಸಾಮಾನ್ಯ ಬೌದ್ಧಿಕ ಸಾಮರ್ಥ್ಯದವರು. ಇಲ್ಲೀಗ ರಿಸಲ್ಟಿನ ಹುಚ್ಚು ಒಬ್ಬ ಶಿಕ್ಷಕರ ಒಂದು ವಿಷಯದಲ್ಲಿ ಒಬ್ಬ ವಿದ್ಯಾರ್ಥಿ ಫೇಲಾದರೆ ಶಿಕ್ಷಕ ಅಪರಾಧಿಯ ಹಾಗೆ ನಡೆಸಿಕೊಳ್ಳಲ್ಪಡುತ್ತಾನೆ. ಇದರಿಂದಾಗಿ ಹೈಸ್ಕೂಲುಗಳಲ್ಲಿ ಏನಾಗಿದೆ ಎಂದರೆ 4-6% ಮಕ್ಕಳನ್ನು ಹೇಗಾದರೂ ಪಾಸ್ ಮಾಡಿಸ್ಲೇ ಬೇಕಾದ ಒತ್ತಡದ ಕಾರಣದಿಂದ ಶಿಕ್ಷಕರು ಪಾಸಾಗಬಲ್ಲ 94-96% ವಿದ್ಯಾರ್ಥಿಗಳನ್ನು ಅಟೆಂಡೇ ಮಾಡಲು ಹೋಗುತ್ತಿಲ್ಲ. ಹೋಗಲು ಸಮಯ ಸಾಲುವುದಿಲ್ಲ. ಹತ್ತನೆ ತರಗತಿಯಲ್ಲಿ ಅಕ್ಷರ ಜ್ಞಾನ ಇಲ್ಲದ ಒಬ್ಬ ವಿದ್ಯಾರ್ಥಿ ಇದ್ದರೆ ಬೇರೆ ಯಾರನ್ನೂ ಅಟೆಂಡ್ ಮಾಡಲು ಶಿಕ್ಷಕರಿಗೆ ಸಾಧ್ಯವಾಗುವುದಿಲ್ಲ.

ಸಾಮಾನ್ಯವಾಗಿ ನಾವು ಬೌದ್ಧಿಕ ಸಾಮಾನ್ಯ ವರ್ಗದ ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಪಾಠ ಬೋಧನೆ ಮಾಡುತ್ತೇವೆ. ಜೀನಿಯಸ್‌ಗಳಿಗೆ ಅದು ಬೋರಿಂಗ್ ಎನಿಸಿದರೆ ಕಲಿಕಾ ಹಿಂದುಳಿದವರಿಗೆ ಫಾಲೋ ಮಾಡಲು ಆಗುವುದಿಲ್ಲ. ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಇತರೇ ಕೆಲಸಗಳ ಒತ್ತಡದಲ್ಲಿ ಅಕ್ಷರ ಕಲಿಸುವಷ್ಟು ಕಲಿಸುತ್ತಾರೆ. ಕಲಿತವರು ಕಲಿಯುತ್ತಾರೆ. ಕಲಿಯಲಾರದವರು ಹಾಗೆಯೇ ಪಾಸಾಗಿ ಆಗಿ ಹತ್ತನೆ ತನಕ ಬರುತ್ತಾರೆ. ಇಂವ ಪಬ್ಲಿಕ್ ಎಕ್ಸಾಂ ಬರೀತಾನೇ ಎಂದಾಗ ಅವನಿಗೆ ಅಕ್ಷರ ಬರುವುದಿಲ್ಲ ಎಂದು ಗೊತ್ತಾಗುವುದು!ಈ ಸಮಸ್ಯೆಯನ್ನು ಪರಿಹರಿಸಲು ಮೊದಲನೆಯದಾಗಿ ಶಾಲೆಗಳಿಗೆ ನರ್ಸ್, ಎಫ್‌.ಡಿ‌.ಎ ಹುದ್ದೆಗಳನ್ನು ಕೊಟ್ಟು ಅಕಡೆಮಿಕ್ ಮತ್ತು ಅಡ್ಮಿನಿಸ್ಟ್ರೇಷನ್ ವಿಭಾಗವನ್ನು ಪ್ರತ್ಯೇಕ ಮಾಡಬೇಕು.

ನಮ್ಮ ಶಿಕ್ಷಣದಲ್ಲಿ ‘ಬಿ’ ಪಾರ್ಟ್ ಎಂದು ಇದೆ. ಅದರಲ್ಲಿ ಜೀವನ ಕೌಶಲ್ಯಗಳೆಲ್ಲ ಬರುತ್ತವೆ. ಆದರೆ ಸಧ್ಯಕ್ಕೆ ಇದು ಪರಿಗಣನೆಗೇ ಇಲ್ಲ. ‘ಎ’ ಪಾರ್ಟ್‌ನ ಆರು ವಿಷಯಗಳಲ್ಲಿ ಪಾಸಾಗಬೇಕು ಅಷ್ಟೆ.ತೀರಾ ಕಲಿಯಲಾರದ ಮಕ್ಕಳು ಜೀವನ ಕೌಶಲವನ್ನು ಚೆನ್ನಾಗಿ ಕಲಿಯುತ್ತಾರೆ. ಅವರಿಗೆ ಸರಿಯಾಗಿ ಅಕ್ಷರಾಭ್ಯಾಸ ಮತ್ತು ವಾಕ್ಯ ರಚನೆಯನ್ನು ಕಲಿಸಿ ಓದಲು ಬರೆಯಲು ಕಲಿಸಲು ಪ್ರತ್ಯೇಕ ಶಿಕ್ಷಕರನ್ನು ನೇಮಿಸುವುದೊ? ಅಲ್ಲ ಅದಕ್ಕಾಗಿ ಜಿಲ್ಲೆಗೊಂದು ವಸತಿ ಶಾಲೆ ಮಾಡುವುದೊ? ಎಂದು ತೀರ್ಮಾನಿಸಿ. ‘ಬಿ’ ಪಾರ್ಟ್‌ನಲ್ಲಿ ಪಾಸಾದವನಿಗೂ ಕೋರ್ಸ್ ಕಂಪ್ಲೀಟೆಡ್ ಸರ್ಟಿಫಿಕೇಟ್ ಮಾಡಿ. ಆಗ ಅಂತಹ ಮಕ್ಕಳಿಗೆ ಶಾಲೆಯೇ ಹಿಂಸೆ ಆಗುವುದು ತಪ್ಪುತ್ತದೆ. ಶಿಕ್ಷಕರಿಗೆ ಪರೀಕ್ಷಾ ಭಯದ ನಿವಾರಣೆ ಆಗುತ್ತದೆ. ಇತರೇ ವಿದ್ಯಾರ್ಥಿಗಳ ಕಲಿಕಾ ಅಗತ್ಯಗಳು ಅಟೆಂಡ್ ಆಗುತ್ತವೆ.

  • ಪ್ರಾಥಮಿಕ ಶಾಲೆಗೆ ಪ್ರಾಥಮಿಕ ಶಾಲಾ, ಪ್ರೌಢ ಶಾಲೆಗೆ ಪ್ರೌಢಶಾಲಗಳ ನಿವೃತ್ತರಾಗಿ 3 ವರ್ಷಕ್ಕಿಂತ ಜಾಸ್ತಿಯಾಗಿಲ್ಲದ ನಿವೃತ್ತ ಶಿಕ್ಷಕರನ್ನೆ ಅಧ್ಯಕ್ಷರನ್ನಾಗಿ ಮಾಡಿ ಪಠ್ಯ ಪುಸ್ತಕ ರಚನಾ ಸಮಿತಿ ಮಾಡಿ ಎಲ್ಲ ಪಾಠ ಪುಸ್ತಕಗಳನ್ನು ಹೊಸದಾಗಿಯೇ ಮಾಡಬೇಕು. ‘ಬಿ’ ಪಾರ್ಟ್‌ನ ಪಠ್ಯವನ್ನು ಜಿಲ್ಲಾ ಮಟ್ಟದಲ್ಲಿ ರಚಿಸಬೇಕು. ಏಕೆಂದರೆ ಅದು ಹೆಚ್ಚು ಸ್ಥಳೀಯ ಜ್ಞಾನವನ್ನು ಬಯಸುತ್ತದೆ.
  • ಆಟದ ಮೈದಾನವೇ ಇಲ್ಲದೆ ಶಾಲೆ ಮಾಡಲು ಅನುಮತಿ ಕೊಡಬಾರದು. ಅರ್ಥಾತ್ ಶಾಲೆ ಶಾಲೆಗಿರಬೇಕಾದ ಎಲ್ಲ ವ್ಯವಸ್ಥೆಗಳನ್ನು ಹೊಂದದೆ ಖಾಸಗಿ ಆಗಲಿ, ಸರ್ಕಾರಿ ಆಗಲಿ ಶಾಲೆ ಪ್ರಾರಂಭ ಆಗಬಾರದು.
  • ಸುಮಾರು 46 ಸಾವಿರದಷ್ಟು ಪ್ರಾಥಮಿಕ, 10 ಸಾವಿರದಷ್ಟು ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬಬೇಕು. ಶಿಕ್ಷಕರಿಗೆ ಜುಜುಬಿ ವೇತನ ಕೊಟ್ಟು ಸೂಪರ್ಬ್ ವಿದ್ಯಾರ್ಥಿಗಳನ್ನು ರೂಪಿಸಿ ಎನ್ನುವ ಅವೈಚಾರಿಕ ನಿಲುವುಗಳನ್ನು ಕೈಬಿಡಬೇಕು.
  • ರಾಜ್ಯದ ಬೇರೆ ಬೇರೆ ಇಲಾಖೆಗಳು, ಕೇಂದ್ರ ಸರ್ಕಾರ, ಸೈನಿಕ ಶಾಲೆ, ಅನುದಾನ ರಹಿತ ಖಾಸಗಿ, ಅನುದಾನಿತ ಖಾಸಗಿ ಎಂದೆಲ್ಲ ಆಗಿ ಶಿಕ್ಷಣದಲ್ಲಿ ಸಾಮಾನ್ಯತೆಯೇ ಹೊರಟು ಹೋಗಿದೆ. ಸೈನಿಕ ಶಾಲೆಯಲ್ಲಿ ಕುದುರೆ ಸವಾರಿ ಕಲಿಸ್ಲಿಕಿದೆ. ಆದರೆ ಉಳಿದ ಶಾಲೆಯ ಮಕ್ಕಳಿಗೆ ಕುದುರೆ ಸವಾರಿ ಕಲಿಸುವುದು ಬೇಡ್ವಾ. ಅವರು ಏನು ತಪ್ಪು ಮಾಡಿದ್ದಾರೆ? ಎಸ್ ಎಸ್ ಎಲ್ ಸಿ ಮುಗಿದ ಮೇಲೆ 95% ಗಿಂತ ಮೇಲೆ ಬಂದವರಿಗೆ ಫ್ರೀ ಸೀಟು…ಫ್ರೀ ಫ್ರೀ ಗಳು, ಬಹುಮಾನಗಳು ಎಲ್ಲವನ್ನೂ ಎಲ್ಲ ಸಂಸ್ಥೆಗಳೂ ಕೊಡುತ್ತವೆ. “ಆಯ್ತಪ್ಪ, ನನಗೆ 70%. ನಾನು 95% ನವರಷ್ಟು ಬುದ್ಧಿವಂತ ಅಲ್ಲ ಎಂದು ಒಪ್ಕೊಳ್ತೇನೆ‌. ಆದರೆ ನಾನೂ ಮನುಷ್ಯ, ನನಗೂ ಕಲಿಯಬೇಕು ಎಂದು ಇದೆ. ನನಗೂ ಕೊಡ್ಲಿಕೆ ಏನಾದರೂ ನಿಮ್ಮ ಬಳಿ ಉಂಟೊ? ಅಲ್ಲ ನಾನು ಮನುಷ್ಯನೇ ಅಲ್ಲಾಂತ ತೀರ್ಮಾನಿಸಿದ್ದೀರಾ?” ಎಂದು ಒಬ್ಬ ವಿದ್ಯಾರ್ಥಿ ಕೇಳಿದರೆ ಏನು ಉತ್ತರ ಕೊಡುತ್ತೀರಿ.‌ ಮೊದಲು ‘ ನಿರ್ವಹಣಾ ವ್ಯವಸ್ಥೆಯಲ್ಲೆ’ ಮಕ್ಕಳಿಗೆ ಮಾಡುತ್ತಿರುವ ಈ ಭೇದ ಭಾವವನ್ನು ನಿಲ್ಲಿಸಬೇಕು. ಅರ್ಥಾತ್ ಶಿಕ್ಷಣದ ನಿರ್ವಹಣಾ ಸಂಘಟನೆಯನ್ನು ಬದಲಿಸಬೇಕು. ಇದನ್ನೆಲ್ಲ ಸಾಧಿಸಲು ನಾನಾ ನಮೂನೆಯ ಶಾಲೆಗಳ ನಡುವೆ ಸಮನ್ವಯವನ್ನು ತರಲು ಒಂದು ಅಥಾರಿಟಿಯನ್ನು ರೂಪಿಸಬೇಕು.

ಇದಿಷ್ಟು ನನ್ನ ಸಲಹೆಗಳು. ನೋಡುವ ಮುಂದೆ ಇದು ಹೇಗೆ ಹೋಗುತ್ತದೆ ಎಂದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page