Monday, August 19, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ – 29 : ಮಲಾಬರ್‌ ಕ್ರಾಂತಿ ಕುರಿತ ಕಾದಂಬರಿ ಮತ್ತು ರತ್ನಗಿರಿಯ ಸಂದರ್ಶಕ

ಮದನ್‌ ಲಾಲ್‌ ಡಿಂಗ್ರಾನ ಹಾಗೆ, ಅನಂತ್‌ ಕನ್ಹಾರೆಯ ಹಾಗೆ ತನ್ನ ಸಿದ್ಧಾಂತಕ್ಕೆ ತೀವ್ರವಾದ ಪ್ರಾಯೋಗಿಕ ಯೋಜನೆಯನ್ನು ರೂಪಿಸುವ ಒಬ್ಬ ವರ್ಷಗಳ ನಂತರ ಸಾವರ್ಕರ್‌ಗೆ ದೊರೆತಿದ್ದ.

ಆ ಲೇಖನದಲ್ಲಿ ಸಾವರ್ಕರ್‌ ಮುಖ್ಯವಾಗಿ ಬೊಟ್ಟು ಮಾಡಿ ತೋರಿಸುವುದು ೧೯೨೧ರ ಮಲಬಾರ್‌ ಗಲಭೆ. ಮಲಬಾರ್‌ ಗಲಭೆಯನ್ನು ಮೊದಲ ಬಾರಿ ಮುಸ್ಲಿಂ ಕೋಮು ಘರ್ಷಣೆಯಾಗಿ ಚಿತ್ರಿಸುವುದು ಬ್ರಿಟಿಷರು. ಆ ಗಲಭೆಯ ಹಿಂದಿದ್ದ ಬ್ರಿಟಿಷ್‌ ವಿರೋಧಿ ಹೋರಾಟವನ್ನು ಅವರು ಮುಚ್ಚಿಟ್ಟಿದ್ದರು. ಹಿಂದೂಗಳ ಮೇಲೆ ಮುಸ್ಲಿಮರು ನಡೆಸಿದ ಕೋಮು ದಾಳಿಯಾಗಿ ಬ್ರಿಟಿಷರು ಅದಕ್ಕೆ ಬಣ್ಣ ಹಚ್ಚಿ ಪ್ರಚಾರ ಪಡಿಸಿದರು. ಅದರ ವರ್ಗ ಸಂಘರ್ಷದ ತಿರುಳನ್ನು, ಕೆ.ಎನ್‌ ಪಣಿಕ್ಕರ್‌ ತನ್ನ ಪ್ರಭುಗಳು ಮತ್ತು ಪ್ರಭುತ್ವಕ್ಕೆದುರಾಗಿ ಎಂಬ ಪುಸ್ತಕದಲ್ಲಿ ಬೊಟ್ಟು ಮಾಡಿ ತೋರಿಸಿದ, ಆರ್ಥಿಕ-ಅಧಿಕಾರದ ಅಸಮಾನತೆಯನ್ನು ಎಲ್ಲರೂ ಮುಚ್ಚಿಟ್ಟರು. ಗಾಂಧಿ ಹೇಳಿದ ‌ʼನಡೆದಾಡುವ ಪ್ಲೇಗ್ʼ ಪತ್ರಿಕೆಗಳು ಅವರಿಗೆ ತುತ್ತೂರಿ ಊದಿದವು. ಉದಾಹರಣೆಗೆ ಮ್ಯಾನ್ಚೆಸ್ಟರ್‌ ಗಾರ್ಡಿಯನ್‌ ಪತ್ರಿಕೆಯಲ್ಲಿ ಬಂದ ವರದಿಯನ್ನು ಒಮ್ಮೆ ನೋಡಿ.

ʼಮಾಪಿಳಗಳು ನಡೆಸಿದ ದಯಾಹೀನ ಕೊಲೆಗಳ ಕುರಿತು ಭಾರತವು ವ್ಯಾಕುಲಗೊಂಡಿದೆ. ತೀವ್ರವಾದಿ ಮುಹಮ್ಮದೀಯರಿಂದ ಹಿಂದೂಗಳಿಗೆ ಯಾವ ರೀತಿಯ ನ್ಯಾಯ ದೊರಕೀತು ಎಂದು ದಿನಂಪ್ರತಿ ನಾವು ಕಾಣುತ್ತಿದ್ದೇವೆ. ಹಿಂದೂಗಳ ಜನಾಂಗೀಯ ಹತ್ಯೆ ಮತ್ತು ಅವರ ಆಸ್ತಿಪಾಸ್ತಿ ಹಾನಿಯು ಖಿಲಾಫತ್‌ ಜೊತೆಗೆ ಸಂಬಂಧ ಹೊಂದಿರುವುದರಿಂದ, ರಹಸ್ಯವಾಗಿಯಾದರೂ ಕೆಲವರಾದರೂ ಸರಿಯಾದ ದಿಕ್ಕಿನಲ್ಲಿ ಚಿಂತಿಸುತ್ತಿದ್ದಾರೆ ಮತ್ತು ಬ್ರಿಟಿಷ್‌ ಆಡಳಿತವು ಕ್ರೂರವಾದರೂ ಅರಾಜಕತೆಗಿಂತ ಎಷ್ಟೋ ಪಾಲು ಉತ್ತಮವೆಂದು ಅವರು ಅರ್ಥ ಮಾಡಿಕೊಳ್ಳುತ್ತಿದ್ದಾರೆ.ʼ

ನಂತರದ ಕಾಲದಲ್ಲಿ ಸುಮಿತ್‌ ಸರ್ಕಾರ್‌ ತರಹದ ಇತಿಹಾಸಕಾರರು ಸವರ್ಣೀಯ ಜಮೀನ್ದಾರರು ಮತ್ತು ಮುಸ್ಲಿಂ, ದಲಿತ ಒಕ್ಕಲುಗಳ ನಡುವಿನ ಸಂಘರ್ಷದ ಆರ್ಥಿಕ ಕಾರಣಗಳನ್ನು ದಾಖಲಿಸುತ್ತಾರೆ. ದಕ್ಷಿಣ ಮಲಬಾರಿನಲ್ಲಿ ೧೮೬೨ರಿಂದ ೧೮೮೦ರ ನಡುವೆ ಗೇಣಿಯಲ್ಲಿ ೨೪೪% ಹೆಚ್ಚಳವಾಗಿತ್ತು. ಒಕ್ಕಲೆಬ್ಬಿಸುವುದು ೪೪೧% ಹೆಚ್ಚಾಗಿತ್ತು. ಇದು ಮುಸ್ಲಿಮರನ್ನು ಮಾತ್ರವಲ್ಲ, ದಲಿತ ಹಿಂದುಳಿದ ಹಿಂದೂಗಳಿಗೂ ಬಾಧಿಸಿತ್ತು ಎಂದು ಕೆ.ಎನ್‌ ಪಣಿಕ್ಕರ್‌ ಬೊಟ್ಟು ಮಾಡುತ್ತಾರೆ. ಆದರೆ ಹಿಂದೂ ಒಕ್ಕಲಿಗರು ಜಮೀನ್ದಾರರೊಂದಿಗೆ ತಮ್ಮ ಸಾಮಾಜಿಕ ಮತ್ತು ಧಾರ್ಮಿಕ ಕೊಡುಕೊಳೆಯನ್ನು ಹೊಂದಿದ್ದರಿಂದ ಅವರು ಮೌನವಾಗುಳಿದರು. ಆದರೆ ಮುಹಮ್ಮದೀಯರು ತೀವ್ರವಾದಿ ಹಾದಿ ತುಳಿದರು. ಏನೇ ಆದರೂ ದಕ್ಷಿಣ ಮಲಬಾರಿನ ಕೆಲವು ಪ್ರಾಂತ್ಯಗಳಲ್ಲಿ ಕೆಲವು ತಿಂಗಳುಗಳ ಕಾಲ ಬ್ರಿಟಿಷರ ನಿಯಂತ್ರಣ ಕೈಯಿಂದ ಜಾರಿ ಹೋಗಿತ್ತು. ಧರ್ಮ ಈ ಗಲಭೆಯ ಒಂದು ಅಂಶವಾಗಿದ್ದರಿಂದ ಕೆಲವು ಕಡೆಗಳಲ್ಲಿ ಸವರ್ಣ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷಗಳು ನಡೆಯುವ ಹಂತಕ್ಕೆ ಇದು ಮುಂದುವರಿಯಿತು. ಆರ್ಯಸಮಾಜದಂತಹ ಹಿಂದೂ ಸಂಘಟನೆ ಎಂಬ ಕನಸನ್ನು ಹೊತ್ತು ನಡೆಯುವ ಸಂಘಟನೆಗಳು ಬ್ರಿಟಿಷರು ಹೇಳುವ ಕತೆಯನ್ನೇ ಗಟ್ಟಿಯಾಗಿ ಪ್ರಚಾರ ಮಾಡಿದವು. ಸವರ್ಣೀಯ ಹಿಂದೂಗಳನ್ನು ಮಾಪಿಳಗಳು ಕೊಂದು ಹಾಕುತ್ತಿದ್ದಾರೆಂದೂ ಲೆಕ್ಕವಿಲ್ಲದಷ್ಟು ಮತಾಂತರಗಳನ್ನು ಅವರು ಮಾಡುತ್ತಿದ್ದಾರೆಂದೂ ಸಾವರ್ಕರ್‌ ಸಹಿತ ಹಿಂದೂ ಸಂಘಟನೆಗಳು ಪ್ರಚಾರ ಮಾಡಲಾರಂಭಿಸಿದರು. ಅದೇ ಹೊತ್ತು ಗಲಭೆಯಲ್ಲಿ ಪಾಲ್ಗೊಂಡವರ ಪರವಾಗಿ ಮಾತನಾಡಲು ಯಾರೂ ಅಲ್ಲಿರಲಿಲ್ಲ. ಅಂಕಿಅಂಶಗಳು ಹೇಳುವಂತೆ ಗಲಭೆಯಲ್ಲಿ ಪಾಲ್ಗೊಂಡ ೨೩೩೭ ಮುಸ್ಲಿಮರು ಕೊಲೆಯಾದರು. ೧೬೫೨ ಜನರು ಗಾಯಗೊಂಡರು. ೪೫,೪೦೪ ಜನರನ್ನು ಜೈಲಿಗೆ ತಳ್ಳಲಾಯಿತು. ಪೋತನೂರಿಗೆ ಖೈದಿಗಳನ್ನು ಕೊಂಡುಹೋದ ರೈಲುಗಾಡಿಯಲ್ಲಿ ಉಸಿರಾಡಲೂ ಜಾಗವಿಲ್ಲದ ಹಾಗೆ ಅವರನ್ನು ತುಂಬಿಸಿ ಉಸಿರುಗಟ್ಟಿಸಿ ಕೊಲ್ಲಲಾಯಿತು. ವ್ಯಾಗನ್‌ ಟ್ರಾಜಿಡಿ ಎಂದು ಕರೆಯಲ್ಪಡುವ ಈ ದುರಂತದಲ್ಲಿ ಮಾತ್ರ ೬೬ ಕ್ರಾಂತಿಕಾರಿಗಳು ಉಸಿರುಗಟ್ಟಿ ಅಸುನೀಗಿದರು.

ಹೀಗೆ ಬ್ರಿಟಿಷ್‌ ವಿರೋಧಿ ಹೋರಾಟವಾಗಿ ಆರಂಭಗೊಂಡ ಗಲಭೆಯನ್ನು ಸಂಪೂರ್ಣವಾಗಿ ಸದ್ದಡಗಿಸಿದ ಮೇಲೆ ಒಡೆದಾಳುವ ತಮ್ಮ ತಂತ್ರವನ್ನು ಪ್ರಯೋಗಿಸಲೆಂದು ಇದನ್ನು ಹಿಂದೂ-ಮುಸ್ಲಿಂ ಗಲಭೆಯಾಗಿ ಚಿತ್ರಿಸಿ ಬ್ರಿಟಿಷರು ಪ್ರಚಾರ ಪಡಿಸಿದರು. ಬ್ರಿಟಿಷರ ಅದೇ ರಾಗವನ್ನು ಸಾವರ್ಕರ್‌ ಮತ್ತು ಸಂಗಡಿಗರು ಹಾಡತೊಡಗಿದರು. ಗಾಂಧಿ ಮಾತ್ರವೇ ಆಗಲೂ ಭಿನ್ನವಾದ ದನಿ ಎತ್ತುವುದು. ಗಾಂಧಿ ಹೇಳಿದರು, ದೇಶಪ್ರೇಮಿಗಳು ಮತ್ತು ದೈವಭಕ್ತರುಗಳು ಆದ ಮಾಪಿಳಗಳು, ಅವರು ಧರ್ಮವೆಂದು ಭಾವಿಸುವ ಒಂದು ಸಂಗತಿಗಾಗಿ ಧಾರ್ಮಿಕವೆಂದು ಅವರು ಭಾವಿಸುವ ರೀತಿಯಲ್ಲಿ ಹೋರಾಡುತ್ತಿದ್ದಾರೆ.ʼ ಮಾಪಿಳಗಳ ತೀವ್ರವಾದಿ ಚಟುವಟಿಕೆಗಳ ಕಾರಣವನ್ನು ಹಿಂದೂಗಳು ಕಂಡುಕೊಳ್ಳಬೇಕಾಗಿದೆ. ಆಗ ಅವರು ಕೂಡ ಆರೋಪಗಳಿಂದ ಮುಕ್ತರಲ್ಲ ಎಂಬುದನ್ನೂ ಆರಿಯುತ್ತಾರೆ. ಅವರು ಇಲ್ಲಿಯ ತನಕ ಮಾಪಿಳರನ್ನು ರಕ್ಷಿಸುವ ಕೆಲಸ ಮಾಡಿಲ್ಲ. ಈಗ ಮಾಪಿಳರನ್ನು, ಅಥವಾ ಮುಸ್ಲಿಮರನ್ನು ಒಟ್ಟಾಗಿ ದ್ವೇಷಿಸುವುದರಲ್ಲಿ ಅರ್ಥವಿಲ್ಲ.ʼ

ನಂತರದ ಕಾಲದಲ್ಲಿ ಕೆ.ಎನ್‌ ಪಣಿಕ್ಕರ್‌ ಮತ್ತು ಸುಮಿತ್‌ ಸರ್ಕಾರ್‌ ಕಂಡುಕೊಂಡ ಕಾರಣಗಳನ್ನೇ ಗಾಂಧಿ ತನ್ನದೇ ರೀತಿಯಲ್ಲಿ ಆಗಲೇ ಮುಂದಿಟ್ಟಿದ್ದರು. ಇದು ಸಾವರ್ಕರ್‌ ತರದ ಬ್ರಾಹ್ಮಣಿಸಮ್ಮಿನ ನೆರಳಲ್ಲಿ ಬದುಕುವವರಿಗೆ ಯೋಚಿಸಲೂ ಅಸಾಧ್ಯವಾದ ಸಂಗತಿಯಾಗಿತ್ತು. ಅಷ್ಟೇ ಅಲ್ಲ, ಕುಮಾರನ್‌ ಆಶಾನ್‌ ಮತ್ತು ಅಂಬೇಡ್ಕರ್‌ ತರದವರನ್ನೂ ದಾರಿತಪ್ಪಿಸಲು ಸಾಧ್ಯವಾಗುವಂತಹ ವಾತಾವರಣವನ್ನು ಬ್ರಿಟಿಷರು ಮತ್ತು ಅವರಿಗೆ ಬೆಂಬಲ ನೀಡಿದ್ದ ಸಾವರ್ಕರ್‌ ಮತ್ತು ಆರ್ಯ ಸಮಾಜದಂತಹ ಹಿಂದೂ ಸಂಘಟನೆಗಳ ನಾಯಕರು ಸೃಷ್ಟಿಸಿದ್ದರು. ಆಶಾನ್‌ ಕ್ರೂರಮುಹಮ್ಮದೀಯರು ಎಂದು ಒಂದು ಸಂದರ್ಭದಲ್ಲಿ ಮಲಬಾರ್‌ ಕ್ರಾಂತಿಯ ನಾಯಕರನ್ನು ಕರೆದುಬಿಟ್ಟರು. ಅದೇ ಕವಿತೆಯಲ್ಲಿ ಇನ್ನೊಂದು ಕಡೆ ಹಿಂದೂ ಧರ್ಮದ ಜಾತಿವ್ಯಸ್ಥೆಯೇ ಜಾತಿಯಲ್ಲಿ ಕೆಳಗಿರುವ ಒಕ್ಕಲು ಮಾಡುವವರನ್ನು ಮುಸ್ಲಿಮರಾಗಿ ಮತಾಂತರಗೊಳಿಸಲು ಕಾರಣವೆಂದೂ ತಮ್ಮ ಮೇಲೆ ನಡೆದ ಶೋಷಣೆಗೆ ಪ್ರತಿಕಾರವಾಗಿ ಆ ಗಲಭೆ ನಡೆದಿದತ್ತೆಂದೂ ಬರೆದರು. ಆದರೆ, ಈ ಗಲಭೆಯ ಮೂಲಬಿಂದುವಾಗಿದ್ದ ಬ್ರಿಟಿಷ್‌ ವಿರೋಧಿತನವನ್ನು ಆಶಾನ್‌ ಕಾಣದೇ ಹೋಗುತ್ತಾರೆ. ಅಂಬೇಡ್ಕರ್‌ ಕೂಡ ಇದನ್ನು ಗಮನಿಸದೇ ಇರಲು ಕಾರಣ ನಾವು ಈಗಾಗಲೇ ಚರ್ಚಿಸಿದಂತೆ ಆ ಕ್ರಾಂತಿಕಾರಿಗಳು ಯಾರೂ ಕೂಡ ಮಾತನಾಡಲು ಬಾಕಿಯಿರಲಿಲ್ಲ ಎಂಬುದು. ಮುಸ್ಲಿಮರು ಗಲಭೆಯ ವಿರುದ್ಧ ದನಿಯೆತ್ತದೇ ಇದ್ದ ಕುರಿತು ಅಂಬೇಡ್ಕರ್‌ ಬರೆಯುತ್ತಾರೆ. ಗಾಂಧಿಯ ನಿಲುವನ್ನು ಟೀಕಿಸಿಕೊಂಡು ಅಂಬೇಡ್ಕರ್‌ ಆ ಲೇಖವನ್ನು ಬರೆದಿದ್ದರು. ʼಮಾಪಿಳ ಹುಚ್ಚನ್ನು ಕೈಗೆತ್ತಿಕೊಂಡಿರುವ ಮುಸ್ಲಿಮರನ್ನು ಒಪ್ಪದಿರುವುದು ಮುಸ್ಲಿಂ ಸೌಹಾರ್ದತೆ ತೂಗುತಕ್ಕಡಿಯಲ್ಲಾಗುತ್ತದೆ ಎಂಬ ಕಾರಣದಿಂದಲ್ಲ. ಅವರು ನಡೆಸಿದ ದರೋಡೆಗಳು ಮತ್ತು ಬಲವಂತದ ಮತಾಂತರದ ಕುರಿತು ಮುಸ್ಲಿಮರಿಗೆ ಸಹಜವಾಗಿಯೇ ನಾಚಿಕೆಯಾಗಬೇಕಿತ್ತು. ಅಷ್ಟೇ ಅಲ್ಲ, ಇನ್ನೊಮ್ಮೆ ಇಂತಹದ್ದೊಂದು ಕಾರ್ಯವು ಅವರ ಅತ್ಯಂತ ದೊಡ್ಡ ಭಯೋತ್ಪಾದನಿಗೂ ಅಸಾಧ್ಯವಾಗುವ ರೀತಿಯಲ್ಲಿ ಮೌನವಾಗಿಯೂ ಫಲಪ್ರದವಾಗಿಯೂ ಇನ್ನು ಮುಂದಾದರೂ ಅವರು ಕೆಲಸ ಮಾಡಬೇಕಿದೆ.ʼ

ಈ ಸಂಗತಿಗಳನ್ನು ಮನಸ್ಸಿಲ್ಲಿಟ್ಟುಕೊಂಡು ಗಾಂಧಿಯ ಯಂಗ್‌ ಇಂಡಿಯಾದ ಲೇಖನವನ್ನು ತಾರ್ಕಿಕವಾಗಿ ಎದುರಿಸಲು ಸಾವರ್ಕರ್‌ ಶ್ರಮಿಸಿದರು. ʼಮಲಬಾರಿನಲ್ಲಿ ಮಾಪಿಳಗಳು ನಡೆಸಿದ ಸಾಮೂಹಿಕ ಮತಾಂತರ ಮತ್ತು ಅತ್ಯಾಚಾರದಂತಹ ಸಾಕ್ಷಿಗಳಿರುವ, ನ್ಯಾಯಾಲಯದಲ್ಲಿ ಸಾಬೀತಾಗಿರುವ ಅಕ್ರಮಿಗಳ ಕುರಿತು ಮಹಾತ್ಮನಿಗೆ ಹೇಳಲು ಏನಿದೆಯೋ ಏನೋ? ಯಾರ ಕೈವಾಡ ಇದರ ಹಿಂದಿದೆ? ಪುನಹ ಹಿಂದೂಗಳ ಕೈವಾಡವೇ?ʼ ಮಾಪಿಳಗಳು ಈ ಜನಾಂಗಹತ್ಯೆಗೆ ಜೊತೆ ನಿಲ್ಲಲಿಲ್ಲವೆಂದು ಹೇಳಿದ ಮುಸ್ಲಿಂ ಸಾಕ್ಷಿಯನ್ನು ಉದಾಹರಿಸಿದ ಗಾಂಧಿಯನ್ನು ಪುನಹ ತಾರ್ಕಿಕವಾಗಿ ಎದುರಿಸುತ್ತಾರೆ. ʼಆದ್ದರಿಂದ ಯಂಗ್‌ ಇಂಡಿಯಾವನ್ನು ಮತ್ತು ಅದರ ಗೌರವಾನ್ವಿತ ಸಂಪಾದಕರನ್ನು ‌ʼನಡೆದಾಡುವ ಪ್ಲೇಗ್ʼ ಎಂದು ಕರೆಯಲು ಸಾಧ್ಯವಿದೆಯೇ?ʼ

ಈ ತರ್ಕಗಳ ನಡುವೆಯೇ ಸಾವರ್ಕರ್‌ ೧೯೨೬ರಲ್ಲಿ ಮಾಲಾ ಕಾಯ್‌ ತ್ಯಾಚೇ? (ನಾನು ಯಾಕೆ ಜಾಗರೂಕನಾಗಬೇಕು?) ಎಂಬ ಕಾದಂಬರಿಯನ್ನು ಬರೆಯುವುದು. ಮಲಬಾರ್‌ ಗಲಭೆಯ ಕುರಿತು ಬಣ್ಣ ಹಚ್ಚಿದ ಸುಳ್ಳುಗಳನ್ನು ನೇಯ್ದುಕೊಂಡು ಈ ಕಾದಂಬರಿಯನ್ನು ಬರೆಯಲಾಗಿತ್ತೆಂದು ನಾವು ಈ ಮೊದಲೇ ನೋಡಿದೆವು. ಗಾಂಧಿಯ ಜೊತೆಗಿನ ವಾಗ್ವಾದವನ್ನೂ, ಈ ಕಾದಂಬರಿಯನ್ನೂ ತನ್ನ ಬ್ರಿಟಿಷ್‌ ಅನುಕೂಲಕರ, ಹಿಂದೂ ಜನಾಂಗಿಯ ರಾಜಕಾರಣದ ಪ್ರಚಾರಕ್ಕೆ ಸಾವರ್ಕರ್‌ ಬಳಸಿಕೊಳ್ಳುತ್ತಾರೆ. ಮೂರು ಸಂಗತಿಗಳು ಈ ಕಾದಂಬರಿಯ ಸಾರಾಂಶವಾಗಿದ್ದವು ಎಂದು ಅಪ್ಪು ಎಸ್ತೋಸ್‌ ಸುರೇಶ್‌ ಮತ್ತು ಪ್ರಿಯಾಂಕ ಕೋಟ ರಾಜು ಜಂಟಿಯಾಗಿ ಬರೆದ ದಿ ಮರ್ಡರರ್‌, ದಿ ಮೊನಾರ್ಕರ್‌ ಆಂಡ್‌ ದಿ ಫಕೀರ್:‌ ಎ ನ್ಯೂ ಇನ್ವೆಸ್ಟಿಗೇಷನ್‌ ಆಫ್‌ ಮಾಹತ್ಮಾ ಗಾಂಧೀಸ್‌ ಅಸಾಸಿನೇಷನ್‌ ಎಂಬ ಪುಸ್ತಕದಲ್ಲಿ ಹೇಳುತ್ತಾರೆ. ʼಈ ಕೃತಿಯಲ್ಲಿ ಸಾವರ್ಕರ್ ಅವರ ಉಳಿದ ಬರಹಗಳಲ್ಲಿ ಕಾಣುವಂತೆ ಹಿಂದುತ್ವ ಗಂಡಸುತನದ ವ್ಯಾಖ್ಯಾನಕ್ಕೆ ಅಗತ್ಯವಾದ ವಿಷಯಗಳನ್ನು ತಂದು ಸುರಿಯಲಾಗಿತ್ತು. ಮುಸ್ಲಿಂ ವ್ಯಕ್ತಿತ್ವವಾಗಿ ಕಾಣುವ ಅನ್ಯತೆಯೊಂದಿಗೆ ಇನ್ನಿಲ್ಲದ ದ್ವೇಷ, ಅಹಿಂಸೆಯ ಮೇಲೆ ಇನ್ನಿಲ್ಲದ ವಿರೋಧ, ಸಮಾನತೆಗಾಗಿ ಹೋರಾಡುತ್ತಿರುವ ಜಾತಿ ವಿರೋಧಿ ಚಳುವಳಿಗಳ ಜೊತೆಗೆ ಯಾವ ಕಾರಣಕ್ಕೂ ಸೇರದಿರುವುದು, ಹಿಂದೂಗಳ ಒಗ್ಗಟ್ಟಿಗಾಗಿ ಜಾತಿಯೊಂದಿಗೆ ಹೊಂದಿಕೊಳ್ಳುವ ರೀತಿ.ʼ

ಈ ಪುಸ್ತಕವು ಇನ್ನಷ್ಟು ವಿವರವಾಗಿ ಸಾವರ್ಕರ್‌ ಅವರ ಕಾದಂಬರಿಯ ಕುರಿತು ಮಾತನಾಡುತ್ತದೆ. ಅದರಲ್ಲಿ ಒಂದು ಕಥಾಪಾತ್ರವು ತಾಲೂಕೊಂದರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರನ್ನು ಹೊರತು ಪಡಿಸಿ ಉಳಿದವರೆಲ್ಲರನ್ನು ಕೊಂದು ಹಾಕುವ ಕುರಿತು ಬಡಾಯಿ ಬಿಡುತ್ತದೆ. ಆ ಪಾತ್ರ ಹಿಂದೂ ವಿಗ್ರಹಗಳನ್ನು ನಾಶ ಮಾಡಿ, ಇನ್ನೂ ಹುಟ್ಟಲಿರುವ ಮಕ್ಕಳನ್ನು ಕೊಂದು ಹಾಕುತ್ತದೆ. ಜಿಹಾದ್‌ಗೆ ಸಾವರ್ಕರ್‌ ನೀಡುವ ವ್ಯಾಖ್ಯಾನ ಹಿಂಸೆ, ಸೊತ್ತುನಾಶ ಮತ್ತು ಸ್ತ್ರೀಗಳ ಮೇಲಿನ ಅತ್ಯಾಚಾರವೆಂದು. ಜನ್ನತ್‌ ಎಂದರೆ ಸಾರಾಯಿ ಮತ್ತು ಹಾಲಿನ ನದಿಗಳು ಹರಿಯುವ ನಾಡು. ಅಲ್ಲಿ ಪ್ರತಿಯೊಬ್ಬ ಮುಸ್ಲಿಂ ಗಂಡಸಿಗೂ ಎಪ್ಪತ್ತು ಸುಂದರ ಕನ್ಯೆಯರನ್ನೂ ಮತ್ತು ಅವರ ಆನಂದಕ್ಕೆ ಬೇಕಾದ ಗಂಡುಮಕ್ಕಳನ್ನೂ ನೀಡಲಾಗುತ್ತದೆ. ಅವರ ಗಂಡಸ್ತನವು ನೂರ್ಮಡಿಯಾಗಿರುತ್ತದೆ.

ಅದರ ಜೊತೆಜೊತೆಗೆ ಹಿಂದೂ ಜನಾಂಗೀಯತೆಯನ್ನು ಕಟೆದು ನಿಲ್ಲಿಸಲು ಬೇಕಾದಷ್ಟು ಪ್ರಮಾಣದಲ್ಲಿ ಹಿಂದೂಗಳ ನಡುವೆ ಭೀತಿಯನ್ನು ತುಂಬಿಸಲು ಕೂಡ ಈ ಪುಸ್ತಕ ಶ್ರಮಿಸುತ್ತದೆಯೆಂದು ಅಪ್ಪು ಮತ್ತು ಪ್ರಿಯಾಂಕ ಬೊಟ್ಟು ಮಾಡುತ್ತಾರೆ. ಈ ಪುಸ್ತಕದ ಮುನ್ನುಡಿಯಲ್ಲಿ ಸಿಂಧೂ (ನದಿ)ಯಿಂದ ಸಿಂಧೂ (ಸಮುದ್ರ)ದ ನಡುವಿನ ರಾಷ್ಟ್ರವನ್ನು ಪುರಾತನ ಆಲದ ಮರವಾಗಿ ಕಲ್ಪಿಸಿಕೊಳ್ಳಲು ಓದುಗರೊಂದಿಗೆ ಕೇಳಿಕೊಳ್ಳುತ್ತಾರೆ. ಈ ಮರ ಕೊಳೆಯುತ್ತಿದೆ. ಅಸ್ಪೃಶ್ಯತೆ, ಬಾಲ್ಯವಿವಾಹ, ಜಾತಿಪದ್ಧತಿ, ಅವೈದಿಕ ಧರ್ಮಗಳ ಮೇಲಿನ ವಿರೋಧ ಮೊದಲಾದ ಗೆದ್ದಲುಗಳು ಈ ಮರದ ಬೇರುಗಳನ್ನು ತಿನ್ನುತ್ತಿವೆ. ಇವೆಲ್ಲದರ ಫಲವಾಗಿ ಅರೇಬಿಯಾದಿಂದ ಬೀಸುವ ಇಸ್ಲಾಂ ಎಂಬ ಬಿರುಗಾಳಿಗೆ ಆರ್ಯವರ್ತವೆಂಬ ಈ ಆಲದ ಮರವು ನೆಲಕಚ್ಚುತ್ತದೆ.

ಹಿಂದೂ ಜನಾಂಗೀಯತೆ ತನ್ನ ವಿರೋಧಿ ಸ್ಥಾನದಲ್ಲಿ ನಿಲ್ಲಿಸುವ ಇದೇ ಬಾಲ್ಯವಿವಾಹದಂತಹ ಆಚಾರಗಳ ಮೇಲೆ ಬ್ರಿಟಿಷರ ಹಸ್ತಕ್ಷೇಪವನ್ನು ವಿರೋಧಿಸಿಕೊಂಡು, ಅದರ ಪೂರ್ವಿಕವಾಗಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಂ ಶಕ್ತಿ ಗಳಿಸಿಕೊಂಡಿದ್ದು ಎಂಬ ಸತ್ಯವನ್ನು ಸಾವರ್ಕರ್‌ ಕುಟಿಲತೆಯಿಂದ ಇಲ್ಲಿ ಮರೆಮಾಚುತ್ತಾರೆ. ತನ್ನ ಬ್ರಿಟಿಷ್‌ ಇತಿಹಾಸವನ್ನು ಅಡಗಿಸಿಟ್ಟ ಹಾಗೆ. ಈಗ ಆರ್ಯಾವರ್ತವೆಂಬ ಆಲದ ಮರದ ಒಡೆಯರು ಬ್ರಿಟಿಷರು ಎಂಬುದರ ಬಗ್ಗೆಯೂ ಸಾವರ್ಕರ್‌ ತುಟಿ ಬಿಚ್ಚುವುದಿಲ್ಲ.

ಹೀಗೆ ಇತಿಹಾಸದೊಂದಿಗೆ ಯಾವ ರೀತಿಯ ಸಂಬಂಧವೂ ಇಲ್ಲದ ಎರಡು ರೀತಿಯ ಚಿತ್ರೀಕರಣಗಳ ಮೂಲಕ ಒಂದು ಭಾವನಾತ್ಮಕ ಹಿಂದೂ ಸಮಾಜವನ್ನು ಕಟ್ಟುವ ಶ್ರಮವನ್ನು ಮಾಲಾ ಕಾಯ್‌ ತ್ಯಾಚೇ? ಎಂಬ ಕಾದಂಬರಿಯ ಮೂಲಕ ಸಾವರ್ಕರ್‌ ಮುಂದಿಡುವುದು. ಅದರ ವಿರುದ್ಧ ತಮ್ಮ ವಾದವನ್ನು ಮಂಡಿಸಲು ಆ ಕ್ರಾಂತಿಕಾರಿಗಳಲ್ಲಿ ಯಾರು ಕೂಡ ಬಾಕಿಯಿರಲಿಲ್ಲ. ಅದರ ಜೊತೆಗೆ ಭಾರತಕ್ಕೋಸ್ಕರ ಆ ಗಲಭೆಯನ್ನು ವ್ಯಾಖ್ಯಾನಿಸಲು ಶ್ರಮಿಸಿದ ಗಾಂಧಿಯನ್ನು ಹಿಂದುತ್ವದ ಶತ್ರುವಾಗಿ ಸಾವರ್ಕರ್‌ ಮುಂದಿಡುತ್ತಾರೆ. ಗಾಂಧಿ ಇದನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗಡೆ ನಡೆಯುವ ಭಿನ್ನಾಭಿಪ್ರಾವೆಂಬ ನೆಲೆಯಲ್ಲಿ ಕಾಣುತ್ತಾರೆ. ಆದರೆ ಸಾವರ್ಕರ್‌ ಮಾತ್ರ ದ್ವೇಷ ಉಗುಳುವ ಒಂದು ಬಂದೂಕಿನಂತೆ ತನ್ನನ್ನು ತಾನು ಗಾಂಧಿಯ ಎದುರು ಪ್ರತಿಷ್ಠಾಪಿಸುತ್ತಾರೆ. ಗಾಂಧಿ ಹತ್ಯೆಯ ತನಕ ಆ ದ್ವೇಷ ಸಾಗಿ ಬರುತ್ತದೆ.

ಸಾವರ್ಕರ್‌ ತನ್ನ ಕಾದಂಬರಿಯಲ್ಲಿ ಭಾವನಾತ್ಮಕವಾಗಿ ವಿವರಿಸಿದ ಮಾಪಿಳ ಅಕ್ರಮಗಳು ನಂತರ ಭಾರತದಲ್ಲಿ ಘಟಿಸಿಯೇ ಬಿಟ್ಟವು. ೨೦೦೨ರ ಗುಜರಾತ್‌ ನರಮೇಧದಲ್ಲಿ. ತನ್ನ ಭಾವನೆಯಲ್ಲಿ ಹಿಂದೂಗಳು ಬಲಿಯಾಗಿದ್ದರೆ, ವಾಸ್ತವದಲ್ಲಿ, ಜನಾಂಗೀಯ ಹತ್ಯೆಯೆಂದು ನಿಷ್ಪಕ್ಷಪಾತಿಗಳು ಕೂಡ ಕರೆದ ಅತಿಕ್ರೂರ ಹಿಂಸೆಗೆ ಗುರಿಯಾದವರು ಗುಜರಾತಿನ ಮುಸ್ಲಿಮರು. ಸಾವರ್ಕರ್‌ ತನ್ನ ಕಾದಂಬರಿಯಲ್ಲಿ ವಿವರಿಸಿದ ಘಟನೆಗಳು ಇಹ್ಸಾನ್‌ ಜಾಫ್ರಿ, ಬಲ್ಕೀಸ್‌ ಬಾನು ಮತ್ತು ಇತರ ಅನೇಕ ಮನುಷ್ಯರ ಅನುಭವಗಳ ಮೂಲಕ ಇತಿಹಾಸದಲ್ಲಿ ಪುನರ್‌ ಸೃಷ್ಟಿಯಾಯಿತು. ಮುಸ್ಲಿಂ ಗರ್ಭಿಣಿಯ ಹೊಟ್ಟೆ ಸೀಳಿ ಬ್ರೂಣಹತ್ಯೆ ನಡೆಸಿದ ಕರಾಳತೆಯನ್ನೂ ನಾವು ಗುಜರಾತಿನಲ್ಲಿ ಕಂಡೆವು. ಕಡಮನಿಟ್ಟ ರಾಮಕೃಷ್ಣ ಅವರ ಕವಿತೆ ಕ್ಯಾ ಅದರ ಆಧಾರದಲ್ಲಿ ಬರೆದದ್ದಾಗಿತ್ತು. ಸಾವರ್ಕರ್‌ ಅವರ ಕಾದಂಬರಿಯ ದೃಶ್ಯರೂಪ ಬೃಹತ್‌ ಯಶಸ್ಸು ಕಂಡಿತು. ಬೆಳ್ಳಿತೆರೆಯ ಮೇಲಲ್ಲ. ಇತಿಹಾಸದಲ್ಲಿ. ನೆತ್ತರಿನ, ನಡುಕದ, ನೋವುಭರಿತ ಮರೆಯಲಾಗದ ಆ ಮರುಸೃಷ್ಟಿಯಲ್ಲಿ ನಾಯಕರು ಮತ್ತು ಖಳನಾಯಕರು ಪರಸ್ಪರ ಅದಲುಬದಲಾಗಿದ್ದರು ಎಂದು ಮಾತ್ರ.

ಸಾವರ್ಕರ್‌ ಅವರ ರತ್ನಗಿರಿ ವಾಸದ ಸಮಯದಲ್ಲಿ ಒಬ್ಬ ಚಿತ್ಪಾವನ ಯುವಕ ಅವರನ್ನು ಭೇಟಿಯಾಗುತ್ತಾನೆ. ೧೯ ವಯಸ್ಸಿನ ಯುವಕ. ತಪಾಲು ವಿಭಾಗದಲ್ಲಿ ಉದ್ಯೋಗದಲ್ಲಿದ್ದ ತನ್ನ ತಂದೆ ರತ್ನಗಿರಿ ಜಿಲ್ಲೆಗೆ ವರ್ಗವಾಗಿ ಬಂದ ಕಾರಣ ಆತ ಅಲ್ಲಿ ಸೇರಿದ್ದ. ಸಾವರ್ಕರನ್ನು ಭೇಟಿಯಾದ ಆ ದಿನ ಆ ಯುವಕನ ಬದುಕಿನ ದೊಡ್ಡ ತಿರುವಾಗಿತ್ತು. ಯಾಕೆಂದರೆ, ಅಲ್ಲಿಯ ತನಕದ ತನ್ನ ಬದುಕು ಆ ಭೇಟಿಯ ನಂತರ ಸಂಪೂರ್ಣವಾಗಿ ಬದಲಾಗಿ ಹೋಯ್ತು. ಸಾವರ್ಕರ್‌ ಅವರ ಮಾತಿನ ಚತುರತೆ ಆ ಯುವಕನನ್ನು ದಾಸ್ಯತನದಷ್ಟು ಕೀಳಾದ ಅಭಿಮಾನದಲ್ಲಿ ಮುಳುಗಿಸಿತ್ತು. ಮದನ್‌ ಲಾಲ್‌ ಡಿಂಗ್ರಾನ ಹಾಗೆ, ಅನಂತ್‌ ಕನ್ಹಾರೆಯ ಹಾಗೆ ತನ್ನ ಸಿದ್ಧಾಂತಕ್ಕೆ ತೀವ್ರವಾದ ಪ್ರಾಯೋಗಿಕ ಯೋಜನೆಯನ್ನು ರೂಪಿಸುವ ಒಬ್ಬ ವರ್ಷಗಳ ನಂತರ ಸಾವರ್ಕರ್‌ಗೆ ದೊರೆತಿದ್ದ. ಡಿಂಗ್ರಾ ಮತ್ತು ಕನ್ಹಾರೆ ತನ್ನ ಬ್ರಿಟಿಷ್‌ ವಿರೋಧಿ ಕಾಂಡಕ್ಕೆ ಅರ್ಥ ನೀಡಲು ಕೊಲೆ ಮತ್ತು ಸಾವನ್ನು ತಮ್ಮ ಬದುಕಿನ ಒಟ್ಟು ಮೊತ್ತವಾಗಿ ಮುಡಿಪಿಟ್ಟವರಾಗಿದ್ದರು. ಈಗಿನ ಈ ಯುವಕ ತನ್ನ ಗಾಂಧಿ ವಿರೋಧಿ, ಮುಸ್ಲಿಂ ವಿರೋಧಿ ಸಿದ್ಧಾಂತಕ್ಕೆ ಪ್ರಾಯೋಗಿಕ ನೆಲೆಯನ್ನು ನೀಡಲು ಯಾವ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧನಿದ್ದ. ಸಹಜವಾಗಿಯೇ ಆ ಯುವಕನನ್ನು ಸಾವರ್ಕರ್‌ ಸೆಕ್ರೆಟರಿಯಾಗಿ ಮಾಡುತ್ತಾರೆ.

 ಆದರೆ, ೧೯೩೧ರಲ್ಲಿ ಆ ಯುವಕನಿಗೆ ರತ್ನಗಿರಿ ತೊರೆಯಬೇಕಾಗಿ ಬರುತ್ತದೆ. ಕಾರಣ, ಆತನ ತಂದೆ ಕೆಲಸದಿಂದ ನಿವೃತ್ತಿ ಹೊಂದಿದ್ದರು. ಆರ್ಥಿಕವಾಗಿ ದುರ್ಬಲವಾಗಿದ್ದ ಆ ಕುಟುಂಬ ನಿವೃತ್ತಿಯಲ್ಲಿ ದೊರೆತ ಸಣ್ಣ ಮೊತ್ತವನ್ನು ಬಳಸಿಕೊಂಡು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಾಸಿಸತೊಡಗಿತು. ಸಾಂಗ್ಲಿಯಲ್ಲಿ ತನ್ನ ಕುಟುಂಬವನ್ನು ಪೊರೆಯಲು ಟೈಲರ್‌ ಕೆಲಸ ಮತ್ತು ಹಣ್ಣಿನ ವ್ಯಾಪಾರವನ್ನು ಆ ಯುವಕ ಶುರು ಮಾಡುತ್ತಾನೆ. ಆದರೂ ಸಾವರ್ಕರ್‌ ಹೊತ್ತಿಸಿದ್ದ ಸಿದ್ಧಾಂತದ ಕಿಡಿಯೊಂದಿಗೆ ಆ ಯುವಕ ಭವಿಷ್ಯಕ್ಕೆ ಕಣ್ಣು ನೆಟ್ಟಿದ್ದ. ಸಾಂಗ್ಲಿಯ ಹಿಂದೂ ಸಂಘಟನಾ ಕೆಲಸಗಳಲ್ಲಿ ಸೇರಿಕೊಂಡು ಕೆಲಸ ಮಾಡಿದ. ಆದರೆ, ಆ ಯುವಕನ ಜವಾಬ್ದಾರಿಯು ಅದಕ್ಕಿಂತಲೂ ಮಿಗಿಲಾಗಿತ್ತು ಎಂದು ಇತಿಹಾಸ ತೋರಿಸಿ ಕೊಡುತ್ತದೆ.

ಆ ಹುಡುಗನ ಹೆಸರು ನಾಥುರಾಮ್‌ ವಿನಾಯಕ್‌ ಗೋಡ್ಸೆ ಎಂದಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page