Thursday, June 13, 2024

ಸತ್ಯ | ನ್ಯಾಯ |ಧರ್ಮ

ಕೊಳೆಗೇರಿ ನಿವಾಸಿಗಳಿಗೆ ಶಾಶ್ವತ ಸೂರು ಯೋಜನೆ – ವಸತಿ ಸಚಿವ ಜಮೀರ್ ಅಹಮದ್

ಬೆಂಗಳೂರು : ಹಲವಷ್ಟು ವರ್ಷಗಳಿಂದ ಕೊಳೆಗೇರಿ ಪ್ರದೇಶದಲ್ಲಿ ವಾಸವಿದ್ದರೂ ಶಾಶ್ವತ ಮನೆಯ ವ್ಯವಸ್ಥೆ ಇಲ್ಲದ ಸುಮಾರು ಮೂರು ಸಾವಿರ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಯೋಜನೆ ರೂಪಿಸುವಂತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರದ ಕೊಳೆಗೇರಿ ವಾಸಿಗಳ ಪರ ಸಂಘ – ಸಂಸ್ಥೆಗಳ ಅಹವಾಲು ಸ್ವೀಕರಿಸಿ ಮಾತನಾಡಿದ ವಸತಿ ಸಚಿವ ಜಮೀರ್ ಅಹಮದ್ ಖಾನ್ ರವರು, ಹತ್ತಾರು ವರ್ಷಗಳಿಂದ ಗುಡಿಸಲು ಹಾಗೂ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವವರು, ಕೆಲವೆಡೆ ನೆಲ ಬಾಡಿಗೆ ನೀಡಿ ಜೀವನ ಮಾಡುತ್ತಿರುವ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಡಲು ಪ್ರಸ್ತಾವನೆ ಸಿದ್ದಪಡಿಸಲು ನಿರ್ದೇಶನ ನೀಡಿದರು.

ಸಭೆಯ ನಂತರ ಮಾತನಾಡಿದ ಸಚಿವರು, ಕೊಳೆಗೇರಿ ಎಂದು ಘೋಷಣೆ ಆಗಿದ್ದರೂ ಕೆರೆಯಂಗಳ, ಮಳೆ ನೀರು ಹರಿಯುವ ಕಾಲುವೆ, ವಿದ್ಯುತ್ ತಂತಿ ಹಾದು ಹೋಗಿರುವ ಮಾರ್ಗ, ಅರಣ್ಯ ಪ್ರದೇಶ ಎಂಬ ಕಾರಣಕ್ಕೆ ಮನೆ ಕಟ್ಟಿಕೊಡಲು ಸಾಧ್ಯವಾಗಿಲ್ಲ. ಯಾವುದೇ ಮೂಲ ಸೌಕರ್ಯ ಇಲ್ಲದೆ ಹತ್ತಾರು ವರ್ಷ ಗಳಿಂದ ಸಾವಿರಾರು ಕುಟುಂಬಗಳು ಸಂಕಷ್ಟ ದಲ್ಲಿ ಅಲ್ಲಿ ವಾಸಿಸುತ್ತಿವೆ.  ಹೀಗಾಗಿ ಅವರಿಗೆಲ್ಲ ಶಾಶ್ವತ ಸೂರು ಕಲ್ಪಿಸಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ಈ ಬಗ್ಗೆ ಕೆ.ಆರ್.ಪುರ ಹೋಬಳಿಯ ಬಿದರಹಳ್ಳಿಯಲ್ಲಿ ಎಂಟು ಎಕರೆ ಈಗಾಗಲೇ ಗುರುತಿಸಲಾಗಿದೆ. ಇದೇ ರೀತಿ ನಗರದ ಇತರೆಡೆ  ಇರುವ ಸರ್ಕಾರಿ ಜಮೀನು ಪಡೆಯುವ ಬಗ್ಗೆ ಕಂದಾಯ ಸಚಿವರ ಜತೆ ಚರ್ಚಿಸಲಾಗುವುದು. ಅಲ್ಲಿ ಪಡೆದು ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ವಸತಿ ಸಮುಚ್ಚಯ ನಿರ್ಮಿಸಿ ಎಲ್ಲ ಕುಟುಂಬಗಳನ್ನು ಶಿಫ್ಟ್ ಮಾಡಲಾಗುವುದು ಎಂದು ತಿಳಿಸಿದರು.

ಶಾಶ್ವತ ಸೂರು ಕಲ್ಪಿಸಿದರೆ ನಾವು ಬೇರೆಡೆ ಶಿಫ್ಟ್ ಆಗಲು ಸಿದ್ದ ಎಂದು ಅಲ್ಲಿನ ನಿವಾಸಿಗಳು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಆದಷ್ಟು ಬೇಗ ಈ ಯೋಜನೆ ಸಂಬಂಧ ಪ್ರಸ್ತಾವನೆ ಸಿದ್ದ ಪಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಕಾಚರಕನಹಳ್ಳಿ ಕೆರೆ ವ್ಯಾಪ್ತಿ, ಗೋವಿಂದರಾಜ ನಗರದ ವಿನಾಯಕ ನಗರ, ಉತ್ತರಹಳ್ಳಿಯ ರಸ್ತೆಯ ಕೊಡಿಪಾಳ್ಯ, ದೊಡ್ಡ ಆಲದ ಮರ ಸಮೀಪದ ಭೀಮನಕುಪ್ಪೆ, ದಾಸರಹಳ್ಳಿ, ಮಹಾಲಕ್ಷ್ಮೀ ಲೇ ಔಟ್, ಬ್ಯಾಟರಾಯನಪುರ ಭಾಗದ ಕೊಳೆಗೇರಿಗಳಲ್ಲಿ ಶೆಡ್, ಗುಡಿಸಲು, ಕಚ್ಚಾ ಮನೆ ಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಇದರಿಂದ ನೆರವಾಗಲಿದೆ ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು