Thursday, June 20, 2024

ಸತ್ಯ | ನ್ಯಾಯ |ಧರ್ಮ

ಕಿಕ್ಕಿರದ ಗದ್ದಲದಾಗ ಮನಸ್ಸ ಮುಟ್ಟಿದ ಮಾತ

ಬೆಂಗಳೂರ್ ಅಂದ್ರ್  ಇಲ್ಲಿ ಯಾರಿಗೆ ಏನ ಆದರೂ ಯಾರು ಹೊಳ್ಳಿ ನೋಡಲ್ಲ, ಬಿದ್ದ ಪೆಟ್ಟ ಮಾಡಕೊಂಡ್ರನು ಯಾರು ಎಬ್ಬಸಲ್ಲ,  ಎದ್ದ ನಡಿಲಿಲ್ಲ ಅಂದ್ರ ಹಿಂದ ಬಂದ ಗುದ್ದತಾರ ಅನ್ನ ಅಂಜಕಿಲೆ ನಮ್ಗ ನಾವೇ ಸುಧಾರಸಕೊಂಡ ಹೋಗಬೇಕಾದ ಟ್ರಾಫಿಕ್ ಜಾಮ್ ದುನಿಯಾ ಬೆಂಗಳೂರ್ ಅಂತೆಲ್ಲಾ ನಾ ಅನ್ಕೊಂಡಿದ್ದ ಮತ್ತ ಒಂದು ವರ್ಷದ ಬೆಂಗಳೂರ್ ಬದುಕಿನ ಅನುಭವದ ಪ್ರಕಾರ ಅದು ಖರೆನು ಹೌದು.

ಇದೆಲ್ಲ ಖರೆ ಆದ್ರ ನನ್ನ ಅನುಭವ ಮತ್ತ ಅನಿಸಿಕೆ ಇವೆಲ್ಲವಕ್ಕ ಅಪೋಜಿಟ್ ಅನ್ನಂಗ ಇವತ್ತ ಒಂದು ಘಟನೆ ನಡಿತು ಅದರ ಪೀಠಿಕೆ ಇದಿಷ್ಟು.

ದಿನ್ನ ಹೋಗದಕ್ಕಿನ ಒಂದು ತಾಸ ಮೊದಲ ಇವತ್ತ ಆಫೀಸಕ್ಕ ಹೋಗಿದ್ದ ದಿನ್ನ ಇರೋ ಸರ್ ಅವರಿಗೆ ಇವತ್ತ ಸುಟ್ಟಿ. ಯಾಕ ಅಂದ್ರ ಐತಾರ ಅದ್ಕ  ಇನ್ನ ಒಂದ  ತಾಸ ತಡ ಆತದ  ಆಫೀಸ್ ತೆಗೀಲಕ ಅಷ್ಟತನ  ಏನ್ ಮಾಡಲಿ..? ವಾಪಾಸ್ ಪಿಜಿಗಿ ಹೋಗಮ ಅಂತ ವಾಪಾಸ ಬರಸಟ್ಟತ್ತಗೆ, ಹಾದ್ಯಾಗ ಒಂದು ಗುಡಿ ಆದ್ ಅಲ್ಲಿ ಬರದಕ, ಏ.. ಎಲ್ಲಿ ಹೋಗದ ಪಿಜಿಗಿ ಇಲ್ಲೇ ಕುಡಮ ಅಂಕಾಸ ಅನ್ಸ್ತು ಅಲ್ಲೆ ಕುಂತ.

ಕುಂತಕೆ ರೋಡಿನ ನಡಬರಕ್ ಇರ ಜಾಗ ಅಂದ್ರ್ ಪುಟ್ ಪಾತ್ ಅಂತಿರಬೇಕು ಅದಕ. ಅಲ್ಲಿ ಪಾರಿವಾಳಗೊಳಗಿ ನೋಡಕೋತ ಕುಂತಿದ್ದ. ಆ ಗಾಡಿಗೋಳ ಸೌಂಡನ್ಯಾಗನು ಒಂದೆ ಚಿತ್ತಿನಿಂದ ಆ ಪಾರಿವಾಳಗೊಳಗಿ ನೋಡಕೋತ ಕುಂತಕ್ಕಿಗಿ ಮೆಟ್ರೋ ಸ್ಟೇಷನ್ಯಾಗಿಂದ ಒಬ್ಬಕ್ಕಿ ಹುಡಗಿ ಬಂದಳು. ಒಮ್ಮಿಂದ ಒಮ್ಮಿಲಿಗೇ ಅಕಿನ ಕಡಿ ಕಣ್ಣ ಹೋದವು.

ಅಕಿನ ಮೋತಿ ಅನ್ನದ ಅತ್ತು, ಅತ್ತು ಭಾವ ಆಗಿತ್ತು. ನಾ ಅಯ್ಯ ಆ ಹುಡುಗಿ ಮೋತಿ ಯಾಕ ಅಷ್ಟ ಉಬ್ಬ್ಯಾದ, ಕಣ್ಣ ಯಾಕಾ ಅಷ್ಟ ದಪ್ಪ, ಕೆಂಪಗ ಆಗ್ಯಾವ ಅನ್ಕೋಲತ್ತಿದ್ದ. ಅಸ್ಟೊತ್ತಿಗೆ ಅಕಿನ ಹಿಂದಿಂದ ಇನ್ನೊಬ್ಬಕ್ಕಿ ಹುಡಗಿ  ಅಕಿನ ಬಾಜು ಬಂದು” ಎಕ್ಸ್ ಕ್ಯೂಸ್ ಮೀ” ಅಂದಳು. ನಾ ಅಡ್ರಸ್ ಏನಾರೆ ಕೇಳತಿರಬೇಕು ಅನ್ಕೊಂಡ ನೋಡಲತ್ತಿದ್ದ. ಆ ಹುಡುಗಿ ಈ ಹುಡುಗಿಗೆ ಹಲೋ ನೀವು ಆಗಲೆ ಅಳತಿದ್ದರಿ “Are you Ok ” ಅಂದಳು. ಮೊದಲ ಬಂದ ಹುಡುಗಿ ಹಾ ನಾನು ಚೆನ್ನಾಗಿದ್ದೀನಿ ಅಂದಳು. ಅಂದ್ರೂನು ಆ ಹುಡುಗಿ ಪಕ್ಕಾ ಅಂದಳು ಇನ್ನೊಮ್ಮ, ಅದ್ಕ ಅತ್ತ, ಅತ್ತ ದಮ್ಮಿಗಿ ಬಂದ ಹುಡುಗಿ ಮೂತಿಯೊಳಗ ಅದೆಂತಾ ಖುಷಿ ಬಂತು ಅಂದ್ರ್ ಇಷ್ಟೋತ್ತನ ನಾ ನೋಡಿದ ಹುಡಿಗಿ ಇಕಿನೇ ಏನು ಅನ್ನಂಗ ನನ್ನ ಮ್ಯಾಲ ನನಗೆ ಅನುಮಾನ ಬಂತ.

ಆ ಹುಡುಗಿ ಯಾಕ್ ಅಳ್ಳತ್ತಿಳೋ ಏನೋ. ಆದ್ರ ನನಗು ಒಬ್ಬರು ಹಿಂಗ್ ನನ್ನ ಕಣ್ಣಿರಿಗಿ ಕಾರಣ ಕೇಳೋರ ಹಾರ ಅಲ್ಲ ಅಂತಾ ಅಳು ಮುಖದಾಗೂ ನಗು ಮೂಡತು  ಅಂತ ನನಗ್ ಅನಿಸ್ತು. ಅವಾಗ ನಂಗ ಅನಿಸಿದ್ದು ಅಯ್ಯ್ ನಾ ಬೆಂಗಳೂರ್ ಅಂದ್ರ್ ಹಾದ್ಯಾಗ ಯಾರು ಬಿದ್ರುನು ಟೈಮ್ ಆಯ್ತಾ ಅಂದ್ರ್ ಬಸ್, ಮೆಟ್ರೋ ತಪ್ಪತವ ಅಂತ ಓಡಿ, ಓಡಿ ಹೊಗೋರೆ ಹಾರ ಅನ್ಕೊಂಡಿದ್ದ ಆದ್ರ ಒಬ್ಬರ ಕಣ್ಣೀರ ನೋಡಿ if you dont mind ಅಂತ ಅಂದು ಇನ್ನೊಬ್ಬರ ದುಃಖಕ್ಕ  ಮರಗೋರನು ಹಾರ ಅಲ್ಲ ಅಂತ ಬಾಳ ಅಂದ್ರ ಬಾಳ ಖುಷಿ ಆಯಿತು.

ಒಂದ ವರ್ಷಿನ ಬೆಂಗಳೂರ ಬದುಕಿನೊಳಗೆ ಎರಡು -ಮೂರು ಸಲ ಬಸ್ ನ್ಯಾಗ್ ಹೋಗಗ್ ಅರಾಮಿಲ್ಲದ ಮಲಕೊಂಡೋರಿಗಿ ಮತ್ತ ರಾತ್ರಿ ಹೊತ್ತ್ಯಾನ್ಯಾಗ್ ನಡಕೋತ ಹೋಗಾಗ ಅಂಗಡಿ ಮುಂದ ಎರಡು ಮಕ್ಕಳ ತಗೊಂಡ ಅಳ್ಕೋತ ಕುಂತ ಹೆಣ್ಣಮಗಳಿಗಿ ನೋಡಿದ್ದ, ನೋಡಿದಾಗ ಎಲ್ಲ ಕೇಳಬೇಕು ಏನ್ ಆಯಿತು ಅಂತ ಅನಿಸಿದ್ರನು,  ಅಯ್ಯ್ ಬೆಂಗಳೂರ್ ಮಂದಿ ನಾ ಏನಾರೆ ಕೇಳಿದ್ರ್ ನಿನಗೆ ಯಾಕ ಬೇಕು ಹೋಗವ್ವ ಅನ್ನಂಗ ಹಾರ ಅಂತ ಕೇಳಿದ್ದಿಲ್ಲ.

ಇವತ್ತಿನ ಈ ಘಟನೆ ನೋಡಿದ ಮ್ಯಾಲ ಅನ್ಸ್ತು ಕಂಡೋರ ದುಃಖಕ್ಕ್ ಮರಗಲಿಕರ ಇಲ್ಲಾ.  ಕಣ್ಣಿಗಿ ಕಂಡ ದುಃಖಕ್ಕ  ಒಂದು ಸಣ್ಣ ಮಾತಿಂದ ಸಮಾಧಾನ ಮಾಡಂತ ಮನಸುಗೋಳ ಆವ್ ಅಲ್ಲ ಅಂತ ಬಕ್ಕುಳ ಖುಷಿ ಆಯಿತು. ಇನ್ನುನೂ Are you ok ಅಂದ ಧ್ವನಿನ ಕಿವ್ಯಾಗ ಗುಯ್  ಗುಡ್ಲತ್ತದ, ಆ ಮೋತಿ ಕಣ್ಣಿನೊಳಗ ಹಚ್ಚಿ ಹಾಕದಂಗ ಆಗ್ಯಾದ.

ಪ್ರಾಣಿಗೋಳಿಗೂ ಮಾತ ಬರ್ತೀವ ಅಂದ್ರ ಅವು ನಮ್ಮ ಕಷ್ಟ-ಸುಖ ಕೇಳತಿವು, ಮನುಷ್ಯರಿಗಿ ಮನುಷ್ಯರೆ ಆಗಬೇಕು. ಅದ್ಕ ನಮ್ಗ ದುಃಖ, ತ್ರಾಸನ್ಯಾಗ ಇರಂತ ಮನಸಗೋಳಿಗಿ ಮಾತಾಡ್ಸಮು ಬಾಳ ಆಪ್ತತೆ ಇಂದ ಕೂಡಿದ ಒಂದು ಸಣ್ಣ ಮಾತ ಎಂತಾ ದುಃಖದಾಗ ಇರಂತ ಮನಸಿಗನು ಸಮಾಧಾನ ನೀಡತವ ಅನ್ನದ ಖರೆ ಆದ.

ಬಾಳ ಕಾರಣಕ್ಕ ಬೆಂಗಳೂರ್ ಅಂದ್ರ್ ಅಂಜಕಿ, ಒಂತರ ಚಂದಿಲ್ಲ ಈ ಊರು ನಮ್ಮೂರ ಚಂದ ಅಂತ ಅನ್ಸ್ತಿದ್ದ ಈ ಮನಸಿಗಿ ಆದ್ರ ಇವತ್ತಿನ ಈ ಕಾರಣಕ್ಕೆ ಯಾವುರಿಗಿ ಹೋದರು ಅಲ್ಲಿ ಎಲ್ಲಾ ಕಡಿನು ಚೊಲೋ ಮನಸಗೋಳ ಇರ್ತಾವ ಆದ್ರ ನಾವ್ ಚೊಲೋ ಮನಸಲೇ ನೋಡಬೇಕು ಅಂತ ಅನ್ಸ್ತು. ಹಿಂಗ್ ಅನ್ನಿಸ್ಲಿಕ್ ಮತ್ತ ಈ ಅನಿಸಿಕೆ ಬರಹ ರೂಪ ಕೊಡತನಕ ಕಾಡಿದ ಮನಸ್ಸಿಗೆ love you.

ರೇಣುಕಾ ಹನ್ನುರ್‌

ಯುವ ಬರಹಗಾರ್ತಿ

Related Articles

ಇತ್ತೀಚಿನ ಸುದ್ದಿಗಳು