Home ಅಂಕಣ ದ್ವೇಷಕ್ಕೆ ಬೆನ್ನು ತಿರುಗಿಸಿದವರ ಕತೆ

ದ್ವೇಷಕ್ಕೆ ಬೆನ್ನು ತಿರುಗಿಸಿದವರ ಕತೆ

0

ಸದ್ಯಕ್ಕೆ ಬರೆಯಲು ಅಸಾಧ್ಯವಾಗಿರುವುದರಿಂದ ಹಳೆಯ ಕತೆಯೊಂದನ್ನು ಹಾಕುತ್ತಿದ್ದೇನೆ. ಕೋಮುವಾದಿ ಫ್ಯಾಸಿಸ್ಟರ ವಿರುದ್ಧ ಈ ಮಾದರಿ ಪರಿಣಾಮಕಾರಿಯಾದೀತೆ!? ಲೇಖಕಿ ಇದನ್ನು ಸುದ್ದಿ ರೂಪದಲ್ಲಿ ಬರೆದಿದ್ದರು. ನಾನದನ್ನು ಕಥಾ ರೂಪದಲ್ಲಿ ಬರೆದಿದ್ದೆ. “ವಾರ್ತಾಭಾರತಿ” ಇದನ್ನು ಪ್ರಕಟಿಸಿತ್ತು. ಗಳೆಯರು ದಯವಿಟ್ಟು ಓದಿ.

ಮೂಲ: ಲುಸಿಂಡಾ ಹಾನ್

ಸಂಗ್ರಹಿತ ಭಾವಾನುವಾದ: ನಿಖಿಲ್ ಕೋಲ್ಪೆ

“ನಿನ್ನ ಗಂಡನನ್ನು ಕೊಲ್ಲದೇ ಬಿಡುವುದಿಲ್ಲ!” ಈ ಮಾತುಗಳು ಕಿವಿಗಳಲ್ಲಿ ಗುಂಯ್‌ಗುಂಯ್ ಎನ್ನುತ್ತಿರುವಂತೆಯೇ ಈವಾ ಫೆಲ್ಡ್- ಕಾಲಿನಿಂದ ತಲೆಯವರೆಗೋ, ಗೊತ್ತಾಗದಂತೆ ನಡುಗಿದಳು. ವಾರಗಳಿಂದ ತಡರಾತ್ರಿ ಇಂತಹಾ ಟೆಲಿಫೋನ್ ಬೆದರಿಕೆಗಳು ಬರುತ್ತಲೇ ಇದ್ದವು. ಕೆಲವು ಸಲ ಹಿನ್ನೆಲೆಯಲ್ಲಿ “ದೇಶಭಕ್ತ” ಪುಂಡರ ಕೇಕೆನಾದವೂ ಕೇಳಿಸುತ್ತಿತ್ತು. ನಾರ್ವೆ ದೇಶದ ಬ್ರುಮುಂಡಾಲ್ ಎಂಬ ಶಾಂತಿಯುತ ಷಟ್ಟಣದಲ್ಲಿ ಇದು ನಡೆಯುತ್ತಿದ್ದುದು. ಅದು 1991ನೇ ಇಸವಿ.

ಈ ರಾತ್ರಿ ಮನೆಯ ಮುಂದೆ ಎಂದಿನಂತೆ ಮೈನಡುಗಿಸುವ ಕೇಕೆ, ಕಾರು ಇಂಜಿನ್‌ಗಳ ಆ ಘರ್ಜನೆ, ಟಯರುಗಳ ಕೀರಲು ಕಿರುಚಾಟ ಯಾವುದೂ ಇರಲಿಲ್ಲ. ಪಕ್ಕದಲ್ಲಿ ಮಲಗಿದ್ದ ಗಂಡ ಟ್ರೋಂಡ್ ಫೆಲ್ಡ್‌ನ ಲಯಬದ್ಧ ಉಸಿರಾಟದ ಹೊರತು ಎಲ್ಲವೂ ನೀರವವಾಗಿತ್ತು. ಮುಂದಿನ ದಿನ ಏನಾಗುವುದೋ ಎಂಬುದು ಅವಳ ನಿದ್ದೆಗೆಡಿಸಿತ್ತು.

ಆದರೆ, ಮರುದಿನ ಎದ್ದಾಗ ಟ್ರೋಂಡ್‌ನ ನಿರ್ಧಾರ ಅಚಲವಾಗಿತ್ತು. “ನಮ್ಮ ಈ ಪಟ್ಟಣ ಏನು ಎಂಬುದನ್ನು, ಅದು ಯಾವಕಾಲಕ್ಕೂ ಯಾವುದರ ಪರವಾಗಿ ನಿಂತಿದೆ ಎಂಬುದನ್ನು ಎಲ್ಲರಿಗೂ ತೋರಿಸಿಯೇಬಿಡೋಣ” ಎಂದು ಆತ ಗಟ್ಟಿಯಾಗಿಯೇ ಘೋಷಿಸಿದ.


ರಾಜಧಾನಿ ಓಸ್ಲೋದಿಂದ ವಾಹನದಲ್ಲಿ ಉತ್ತರಕ್ಕೆ ಅರ್ಧಗಂಟೆ ಪ್ರಯಾಣ ಮಾಡಿದರೆ ಸಿಗುವುದೇ ಈ ಬ್ರುಮುಂಡಾಲ್ ಪಟ್ಟಣ. ಅದರ ಪಶ್ಚಿಮ ಭಾಗವನ್ನು ಮೋಯ್ಸಾ ಸರೋವರದ ಬೆಳ್ಳಿಯ ಅಲೆಗಳು ನಿರಂತರವಾಗಿ ನೆಕ್ಕುತ್ತಿರುವಾಗ ಇಡೀ ಪಟ್ಟಣವು ಪ್ರಶಾಂತವಾಗಿಯೇ ಕಾಣುತ್ತಿತ್ತು. ಮಕ್ಕಳು ಅಂದವಾದ ಮರದ ಹಲಗೆ, ದಿಮ್ಮಿಗಳಿಂದ ಮಾಡಿದ ಸುಂದರ ಮನೆಗಳಿಂದ ಹೊರಬಿದ್ದು ಕುಣಿದು ಕುಪ್ಪಳಿಸುತ್ತಲೇ ಶಾಲೆಗೆ ಹೋಗುತ್ತಿದ್ದರು. ಚಳಿಗಾಲದಲ್ಲಿ ಹಿಮ ಬೀಳುತ್ತಿರುವಾಗ ಮನೆಬಾಗಿಲುಗಳ ಮುಂಗಟ್ಟುಗಳ ಗೋಡೆಗಳಿಗೆ ಸಾಲಾಗಿ ಒರಗಿಸಿಟ್ಟ ಸ್ಕೀಗಳು ಕಾಣಿಸುತ್ತಿದ್ದವು.

ಆದರೆ, ಇತ್ತೀಚಿನ ದಿನಗಳಲ್ಲಿ ತಾನು ಮುಖ್ಯಶಿಕ್ಷಕನಾಗಿದ್ದ ಶಾಲೆಯ ಕೆಲವು ಮಕ್ಕಳು ಆಡುತ್ತಿದ್ದ ಮಾತುಗಳನ್ನು ಕೇಳಿ ಟ್ರೋಂಡ್ ಬೆಚ್ಚಿಬಿದ್ದಿದ್ದ. “ಈ ವಿದೇಶಿ ಕರಿಯ ಜನಗಳು! ಅವರನ್ನೆಲ್ಲಾ ಬಡಿದು ಓಡಿಸಬೇಕು!”. ಇಂತಹ ಮಾತುಗಳನ್ನು ಕೆಲವರು ಆಡುತ್ತಿದ್ದರು. ಪಟ್ಟಣದ ಬೀದಿಗಳಲ್ಲಿ ಫ್ಯಾಸಿಸ್ಟ್ ಗೋಡೆಬರಹಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು. ಒಂದು ದಿನ ವಿಯೆಟ್ನಾಂ ಮೂಲದ ಮನುಷ್ಯನೊಬ್ಬನನ್ನು ಅವನ ಮನೆಯ ಅಂಗಳದಲ್ಲಿಯೇ ಯಾವುದೇ ಕಾರಣವಿಲ್ಲದೇ ಅಮಾನುಷವಾಗಿ ಥಳಿಸಲಾಯಿತು. ಆತ ವಾಹನಗಳ ರಿಪೇರಿ ಮಾಡುತ್ತಾ ಅವನ ಪಾಡಿಗೆ ಇದ್ದವನು. ಅದಕ್ಕಿಂತ ಮೊದಲು ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬನ ದಿನಸಿ ಅಂಗಡಿಯನ್ನು ಡೈನಮೈಟ್ ಇಟ್ಟು ಸ್ಫೋಟಿಸಲಾಗಿತ್ತು. ಒಂದು ಕಾಲದಲ್ಲಿ ಮೊಬಿಲ್ ಪೆಟ್ರೋಲ್ ಬಂಕ್ ಇದ್ದ ಖಾಲಿ ಜಾಗದಲ್ಲಿ ಪಡ್ಡೆ ಹುಡುಗರು ಅಡ್ಡೆ ಮಾಡಿಕೊಂಡು ವಲಸಿಗ ಕುಟುಂಬಗಳ ಮಕ್ಕಳಿಗೆ ಹೊಡೆಯುತ್ತಾ, ಬಡಿಯುತ್ತಾ ಕಿರುಕುಳ ನೀಡಲು ಆರಂಭಿಸಿದ್ದರು.

ಇದೇ ಸಮಯದಲ್ಲಿ ನಾರ್ವೆಯ ಅತ್ಯಂತ ಪ್ರಭಾವಶಾಲಿ ಪತ್ರಿಕೆ “ಆಫ್ಟೆನ್ ಪೋಸ್ಟೆನ್”ನಲ್ಲಿ ಬಂದ ವರದಿಯೊಂದು ಇಡೀ ಪಟ್ಟಣವೇ ತತ್ತರಿಸುವಂತೆ ಮಾಡಿತು. “ಬ್ರುಮುಂಡಾಲ್: ದೇವರು ಮರೆತುಬಿಟ್ಟ ಸ್ಥಳ” ಎಂಬ ಶೀರ್ಷಿಕೆಯ ಈ ವರದಿಯು ಬಹುಸಂಖ್ಯಾತರ ಗಮನಕ್ಕೆ ಬಾರದೆಯೇ ಬ್ರುಮುಂಡಾಲ್‌ನಲ್ಲಿ ಅಲ್ಪಸಂಖ್ಯಾತ ವಲಸಿಗರ ಮೇಲೆ ನಡೆಯುತ್ತಿದ್ದ ವ್ಯವಸ್ಥಿತ ದಾಳಿಗಳನ್ನು ವಿವರವಾಗಿ ಬಿಚ್ಚಿಟ್ಟಿತ್ತು. 1970ರಲ್ಲಿ ನಾರ್ವೆಯು ಮೂರನೇ ಜಗತ್ತಿನ ವಲಸಿಗರಿಗೆ ಮತ್ತು ರಾಜಕೀಯ ನಿರಾಶ್ರಿತರಿಗೆ ತನ್ನ ಗಡಿಗಳನ್ನು ತೆರೆದ ಬಳಿಕ ಬಲಪಂಥೀಯರು ಹಚ್ಚುತ್ತಿದ್ದ ಕಿಚ್ಚನ್ನು ಅದು ವಿವರಿಸಿತ್ತು.

ಬ್ರುಮುಂಡಾಲ್ ಜನಾಂಗೀಯ ದ್ವೇಷಕ್ಕಾಗಿ ಕುಖ್ಯಾತವಾಗುತ್ತಿತ್ತು. ಶಾಂತಿಪ್ರಿಯರಾದ ಬಹುತೇಕ ಪಟ್ಟಣವಾಸಿಗಳಿಗೆ ಒಂದೋ ಇದರ ಅರಿವಿರಲಿಲ್ಲ ಅಥವಾ ಅವರು ಎಲ್ಲವೂ ಸರಿಯಾಗಿದೆ ಎಂಬ ಭ್ರಮೆಯಲ್ಲಿದ್ದರು. ಇಲ್ಲಿ ಯಾವುದೇ ಜನಾಂಗದ್ವೇಷಿ ಗುಂಪುಗಳಿಲ್ಲ ಎಂದು ಪಟ್ಟಣದ ಪೊಲೀಸ್ ಮುಖ್ಯಸ್ಥರೇ ಹೇಳಿಕೆ ನೀಡಿದ್ದರು.

ಆದರೆ, ಈ ವರದಿಯು ಅಪ್ಪಟ ನಾರ್ವೇಜಿಯನ್ ಪ್ರಜೆ ಟ್ರೋಂಡ್‌ನ ಆತ್ಮಸಾಕ್ಷಿಯನ್ನು ಕಲಕಿತು. “ಈ ಬಗ್ಗೆ ಏನಾದರೂ ಮಾಡಲೇಬೇಕು” ಎಂದು ಅವನು ಘೋಷಿಸಿದ. ಸರಿ, ಇನ್ನೊಂದು ಸಮಸ್ಯೆ ಆರಂಭವಾಯಿತು ಎಂದು ಈವಾಳಿಗೆ ಮನವರಿಕೆಯಾಯಿತು. ಯಾವುದೇ ಸವಾಲಿನಿಂದ ತನ್ನ ಗಂಡ ಹಿಂದೆ ಸರಿಯುವವನೇ ಅಲ್ಲ ಎಂದು ಅವಳಿಗೆ ವರ್ಷಗಳಿಂದ ಗೊತ್ತಾಗಿತ್ತು. ಸ್ವತಃ ಕ್ರೀಡಾಳುವಾಗಿದ್ದು, ದೈಹಿಕ ಸವಾಲುಗಳನ್ನು ಎದುರಿಸುತ್ತಿರುವವರಿಗಾಗಿ ರಾಷ್ಟ್ರಮಟ್ಟದ ಕ್ರೀಡಾಕೂಟ ಏರ್ಪಡಿಸುವುದು, ಸಮಾಜಸೇವೆ ಇತ್ಯಾದಿಗಳಿಗಾಗಿ ಬಿಡುವಿನ ಸಮಯವನ್ನು ಬಳಸಿಕೊಳ್ಳುತ್ತಿದ್ದ ಟ್ರೋಂಡ್‌ಗೆ ಕೊನೆಯ ತನಕ ಹೋರಾಟದ ಪಾಠ ಹೊಸದೇನೂ ಆಗಿರಲಿಲ್ಲ.

ಟ್ರೋಂಡ್ ಮತ್ತು ಇತರ ಕೆಲವರು ಸ್ಥಳೀಯ ಸರಕಾರದ ಅಧಿಕಾರಿಗಳನ್ನು ಭೇಟಿಮಾಡಿದರು. ಅವನು ತನ್ನ ಶಾಲೆಯ ಸಭಾಂಗಣದಲ್ಲಿ ನಾಗರಿಕರ ಸಭೆಯೊಂದನ್ನು ಕರೆದ. ಸುಮಾರು ಇನ್ನೂರು ಜನರು ಸೇರಿದ್ದ ಸಭೆ ಸ್ವಲ್ಪ ಹೊತ್ತಿನಲ್ಲಿಯೇ ಭಾರೀ ಗದ್ದಲದೊಂದಿಗೆ ಕೊನೆಗೊಂಡಿತು.

“ನೀವು ಬ್ರುಮುಂಡಾಲ್‌ಗೆ ತಗಲಿರುವ ಕ್ಯಾನ್ಸರ್” ಎಂದು ಪ್ರಮುಖ ನಾಗರಿಕನೊಬ್ಬ ಮೊಬಿಲ್ ಗ್ಯಾಂಗಿನ ಪುಂಡರಿಗೆ ಮುಖದ ಮೇಲೆ ಹೊಡೆದಂತೆ ಹೇಳಿಬಿಟ್ಟ. “ನೀವು ಸಮುದಾಯದವರು ನಮಗಾಗಿ ಏನು ಮಾಡಿದ್ದೀರಿ?” ಎಂದು ಹದಿಹರೆಯದ ಹುಡುಗನೊಬ್ಬ ಕೇಳಿದ.

ಇದು ಚಿಕ್ಕ ಸಮಸ್ಯೆಯೇನಲ್ಲ ಎಂದು ಟ್ರೋಂಡ್‌ಗೆ ಸ್ಪಷ್ಟವಾಯಿತು. ಅವನು ಆಯ್ದ ಹತ್ತು ಮಂದಿ ನಾಗರಿಕರ ಜೊತೆ ಸೇರಿ “ಬ್ರುಮುಂಡಾಲ್ ಆನ್ ಎ ನ್ಯೂ ಪಾಥ್” (ಹೊಸದಾರಿಯಲ್ಲಿ ಬ್ರುಮುಂಡಾಲ್-ಬಿಓಎನ್‌ಪಿ) ಎಂಬ ಸಂಘಟನೆ ಸ್ಥಾಪಿಸಿದ. ಅವರು “ಆಫ್ಟರ್ ಪೋಸ್ಟೆನ್” ಪತ್ರಿಕೆಯಲ್ಲಿ ಒಂದು ಜಾಹೀರಾತು ಕೊಟ್ಟರು. “ವಲಸಿಗರು ಕತ್ತಲಲ್ಲಿ ಬದುಕಿದ್ದು ಸಾಕು; ಬೆಳಕು ಹಚ್ಚಲು ಇದು ಸಕಾಲ” ಎಂಬುದೇ ಅದರ ಮುಖ್ಯ ಘೋಷಣೆಯಾಗಿತ್ತು.

ಇದಾದ ಬಳಿಕ ಕೆಲಸದ ಮೇಲೆ ಸ್ಟಾಕ್‌ಹೋಂಗೆ ಹೋಗಿದ್ದ ಟ್ರೋಂಡ್ ಮನೆಗೆ ಮರಳಿದಾಗ ಈವಾ ಅಂಗಳದಲ್ಲಿಯೇ ಎದುರಾದಳು. “ಫೋನ್ ಗಂಟೆ ಬಾರಿಸುವುದು ನಿಲ್ಲುತ್ತಲೇ ಇಲ್ಲ” ಎಂದು ಅವಳು ತಿಳಿಸಿದಳು. ಇಡೀ ನಾರ್ವೆಯ ಪತ್ರಕರ್ತರು ಈ ಕುರಿತು ಹೆಚ್ಚು ತಿಳಿದುಕೊಳ್ಳಲು ಬಯಸಿದ್ದರು. ಈ ಪ್ರಚಾರದಿಂದಾಗಿ ಕೆಲವೇ ದಿನಗಳಲ್ಲಿ ಮುನ್ನೂರಕ್ಕೂ ಹೆಚ್ಚು ಜನರು ಸಂಘಟನೆ ಸೇರಿದರು.

ಆಗಲೇ ಒಂದು ಆತಂಕಕಾರಿ ಸುದ್ದಿ ಟ್ರೋಂಡ್‌ನ ಕಿವಿಗೆ ಬಿತ್ತು. ನಾರ್ವೆಯ ಅತ್ಯಂತ ಆಕ್ರಮಣಕಾರಿ ಜನಾಂಗೀಯ ವಿರೋಧಿ ಸಂಘಟನೆಯ ಕೆಲ ಸದಸ್ಯರು ಬ್ರುಮುಂಡಾಲ್‌ನಲ್ಲಿ ಠಳಾಯಿಸುತ್ತಿದ್ದರು. ಸ್ಕ್ಯಾಂಡಿನೇವಿಯನರಲ್ಲದ ಎಲ್ಲರನ್ನೂ ದೇಶದಿಂದ ಒದ್ದೋಡಿಸಬೇಕು ಎಂಬುದೇ ಈ ಸಂಘಟನೆಯ ಮುಖ್ಯ ಬೇಡಿಕೆಯಾಗಿತ್ತು. ತನ್ನ ಈ ಜನಾಂಗೀಯ ದ್ವೇಷಕ್ಕೆ ಬ್ರುಮುಂಡಾಲ್ ಫಲವತ್ತಾದ ಭೂಮಿ ಎಂದು ಆ ಸಂಘಟನೆಯ ನಾಯಕ ಅರ್ನ್ ಮೈರ್ಡಾಲ್ ತಿಳಿದುಕೊಂಡ.

ಮೈರ್ಡಾಲ್ ಸ್ಥಳೀಯ ಬಾರ್‌ಗಳಲ್ಲಿ ನಿರುದ್ಯೋಗಿ ಪಡ್ಡೆಗಳ ಜೊತೆ ಕುಳಿತುಕೊಂಡು ಕುಡಿಯುತ್ತಾ ವಿಷಬೀಜ ಬಿತ್ತಲು ಆರಂಭಿಸಿದ್ದ. ಹೊರಗಿನಿಂದ ಬಂದ ವಲಸಿಗರು ನಾರ್ವೆಯ ಜನರ ಮೇಲೆ ಹೊರೆಯಾಗಿದ್ದಾರೆ ಎಂದು ಅವನು ಪುಂಗಿಯೂದುತ್ತಿದ್ದ. ಹುಡುಗರು ತಲೆದೂಗುತ್ತಿದ್ದರು.

ತನಗೆ ಸಿಕ್ಕಿದ ಬೆಂಬಲದಿಂದ ಉತ್ತೇಜಿತನಾದ ಅವನು, ಬ್ರುಮುಂಡಾಲ್‌ನಲ್ಲಿ ಸಾರ್ವಜನಿಕ ಸಭೆಯೊಂದನ್ನು ಆಯೋಜಿಸಿದ. ನಿಗದಿತ ದಿನದಂದು ಆತ ತನ್ನ ಅಂಗರಕ್ಷಕ ಸೋಗಿನ ಗೂಂಡಾಪಡೆಯೊಂದಿಗೆ ಬಂದಾಗ ಕೆಲವು ನೂರು ಜನರು ಸೇರಿದ್ದರು. ಆದರೆ ಅವರಲ್ಲಿ ನವನಾಝಿಗಳು ಸೇರಿದಂತೆ ಅವನ ಬೆಂಬಲಿಗರು ಮಾತ್ರವಲ್ಲದೇ, ಬಿಓಎನ್‌ಪಿ ಸದಸ್ಯರು ಮತ್ತು ಓಸ್ಲೋದಿಂದ ಮೂರು ಬಸ್ಸುಗಳಲ್ಲಿ ಬಂದಿದ್ದ ಜನಾಂಗೀಯವಾದ ವಿರೋಧಿ ಸಂಘಟನೆ “ಬ್ಲಿಟ್ಝ್”ನ ಕಾರ್ಯಕರ್ತರೂ ಇದ್ದರು.

ಟ್ರಕ್ ಟ್ರೇಲರ್ ಮೇಲಿದ್ದ ವೇದಿಕೆ ಏರಿ ಮೈರ್ಡಾಲ್ ಭಾಷಣ ಆರಂಭಿಸುವ ಮೊದಲೇ “ಬ್ಲಿಟ್ಝ್” ಕಾರ್ಯಕರ್ತನೊಬ್ಬ ಎರಡೂ ಸ್ಟೀರಿಯೋಫೋನಿಕ್ ಸ್ಪೀಕರ್‌ಗಳನ್ನು ನೆಲಕ್ಕೆ ಅಪ್ಪಳಿಸಿದ. ಮೈರ್ಡಾಲ್ ಮೆಗಾಫೋನ್ ಹಿಡಿದುಕೊಂಡು ವಿಷಕಾರುವ ಭಾಷಣ ಮಾಡಿ ಮುಗಿಸಿದ ತಕ್ಷಣ ಪೊಲೀಸರು ಗುಂಪನ್ನು ಚದರುವಂತೆ ವಿನಂತಿಸಿದರು.

ಆದರೆ, ಮೊದಲೇ ಸಿದ್ಧರಾಗಿ ಬಂದಿದ್ದ ಆತನ ಬೆಂಬಲಿಗರು ಇತರರ ಮೇಲೆ ನುಗ್ಗಿ ದಾಳಿಗೆ ಆರಂಭಿಸಿದರು. ಕ್ಷಣಮಾತ್ರದಲ್ಲಿ ಸಭೆ ರಣರಂಗವಾಯಿತು. ಕಲ್ಲು, ಬಾಟಲಿಗಳು ಗಾಳಿಯಲ್ಲಿ ತೂರಾಡಲು ಆರಂಭವಾದವು. ಜನರು ಚೆಲ್ಲಾಪಿಲ್ಲಿಯಾಗಿ ಓಡಿದರು. ಅಂಗಡಿ ಮುಂಗಟ್ಟೊಂದರ ಹಿಂದೆ ಅವಿತುಕುಳಿತಿದ್ದ ಈವಾ, ಬಿಟ್ಝ್‌ನ ಒಬ್ಬಳು ಕಾರ್ಯಕರ್ತೆಗೆ ಒಬ್ಬ ಗೂಂಡಾ ನಿರ್ದಯವಾಗಿ ಥಳಿಸುವುದನ್ನು ನೋಡಿ ಕಂಗೆಟ್ಟಳು. ಹಲವರು ಗಾಯಗೊಂಡರೂ ಟ್ರೋಂಡ್ ಮತ್ತು ಈವಾ ಪಾರಾದರು. ಪೇಟೆ ಚೌಕದ ತುಂಬಾ ಕಲ್ಲುಗಳು, ಗಾಜಿನ ಚೂರುಗಳು ಚದರಿಬಿದ್ದಿದ್ದವು. ಮೈರ್ಡಾಲ್ ಕೇಕೆ ಹಾಕುತ್ತಿರುವ ತನ್ನ ಬೆಂಬಲಿಗರ ಜೊತೆ ಕೈಕೈ ಜೋಡಿಸಿಕೊಂಡು ಅಟ್ಟಹಾಸದಿಂದ ಬೀದಿಯಲ್ಲಿ ಮೆರವಣಿಗೆ ಮಾಡಿದ.

ಈ ದೊಂಬಿಯನ್ನು ನಾರ್ವೆಯ ಪತ್ರಿಕೆಗಳು ಬ್ರುಮುಂಡಾಲ್ ಕದನ ಎಂದು ಬಣ್ಣಿಸಿದವು. “ಹೌದು! ಇದು ಕದನವೇ! ಸರಕಾರ ಈ ಗೂಂಡಾಗಿರಿಯನ್ನು ನಿಲ್ಲಿಸದಿದ್ದರೆ ಬ್ರುಮುಂಡಾಲ್‌ನ ಜನರೇ ಅದನ್ನು ನಿಲ್ಲಿಸುತ್ತಾರೆ” ಎಂದು ಟ್ರೋಂಡ್ ಒಂದು ರೇಡಿಯೋ ಸಂದರ್ಶನದಲ್ಲಿ ಹೇಳಿದ. ಅಂದಿನಿಂದಲೇ ಬೆದರಿಕೆ ಕರೆಗಳು ಆರಂಭವಾದದ್ದು.

ಟ್ರೋಂಡ್ ಹೇಳಿದ್ದು ನಿಜವಾಗಿತ್ತು: ಇದೊಂದು ಕದನವಾಗಿಯೇ ಬೆಳೆಯುತ್ತಿತ್ತು. ಬ್ರುಮುಂಡಾಲ್‌ನಲ್ಲಿ ಕೇವಲ ಇನ್ನೂರಷ್ಟಿದ್ದು ಅವರ ಪಾಡಿಗೆ ಅವರಿದ್ದ ವಲಸಿಗರ ಮೇಲಿನ ದಾಳಿಗಳು ಹೆಚ್ಚಾದವು. ಒಂದು ದಿನ ಈವಾ ಮತ್ತು ಟ್ರೋಂಡ್ ಪೇಟೆಗೆ ಹೋಗಿ ಮರಳಿ ಮನೆಗೆ ಬಂದಾಗ ಹಿತ್ತಲಿಗೆ ಬೆಂಕಿ ಹಚ್ಚಲಾಗಿತ್ತು. ಮನೆಗೆ ಏನೂ ಆಗಿರಲಿಲ್ಲ. “ಅವರು ನಮಗೆ ಏನೂ ಮಾಡುವುದಿಲ್ಲ” ಎಂದು ಟ್ರೋಂಡ್ ಹೆಂಡತಿಗೆ ಸಮಾಧಾನ ಹೇಳಿದರೂ, ಅವನಿಗೂ ಒಳಗೊಳಗೇ ಭಯವಿತ್ತು.

ತಡರಾತ್ರಿಯ ಫೋನ್ ಕರೆಗಳು ಹೆಚ್ಚಾದವು. ಪಾನಮತ್ತರು ಅಶ್ಲೀಲ ಕರೆಗಳನ್ನೂ ಮಾಡುತ್ತಿದ್ದರು. ಈವಾ ದಿನದಿಂದ ದಿನಕ್ಕೆ ಚಿಂತೆಯಿಂದ ಸಣಕಲಾಗುತ್ತಾ ಹೋದಳು. ಒಂದು ದಿನ ವಿಯೆಟ್ನಾಂ ಮೂಲದ ವಿದ್ಯಾರ್ಥಿನಿಯೊಬ್ಬಳು ಕೇಳಿದಳು, “ಏನು ವಿಷಯ ಮಿಸೆಸ್ ಫೆಲ್ಡ್?”
ಈವಾ ಉತ್ತರಿಸಿದಳು, “ನೀವೆಲ್ಲರೂ ಇಲ್ಲಿ ಏನನ್ನು ಅನುಭವಿಸುತ್ತಿದ್ದೀರಿ ಎಂದು ಈಗ ನನಗೆ ಅರ್ಥವಾಗುತ್ತಿದೆ. ಇಲ್ಲಿ ಅಲ್ಪಸಂಖ್ಯಾತರಾಗಿ ಬದುಕುವುದು ಸುಲಭದ ವಿಷಯವಲ್ಲ!”

ಕೆಲವು ವಾರಗಳ ಬಳಿಕ ಟ್ರೋಂಡ್‌ಗೆ ಇನ್ನಷ್ಟು ಆತಂಕಕಾರಿ ಸುದ್ದಿ ಸಿಕ್ಕಿತು. ಅರ್ನ್ ಮೈರ್ಡಾಲ್ ಇನ್ನೊಂದು ಸಾರ್ವಜನಿಕ ಸಭೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ. ಹಲವರ ವಿರೋಧದ ನಡುವೆಯೂ ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಅನುಮತಿ ನೀಡಲಾಯಿತು. ಬೇರೆಯವರ ಧ್ವನಿಯನ್ನು ಅಡಗಿಸುವವರೇ ಈಗ ವಾಕ್ ಸ್ವಾತಂತ್ರ್ಯದ ವಕ್ತಾರರಾಗಿದ್ದರು!

ಟ್ರೋಂಡ್ ಬಿಓಎನ್‌ಪಿ ಸದಸ್ಯರ ಸಭೆ ಕರೆದ. ಅವರು ಒಂದು ಪ್ರತಿತಂತ್ರ ರೂಪಿಸಿದರು. ಆದರೆ ಅದು ಯಶಸ್ವಿಯಾಗಲು ಸಂಪೂರ್ಣ ಬಲದೊಂದಿಗೆ ಹೊರಬರುವಂತೆ ಬ್ರುಮುಂಡಾಲ್‌ನ ನಾಗರಿಕರಿಗೆ ಮನವರಿಕೆ ಮಾಡಬೇಕಾಗಿತ್ತು. ಕಾರ್ಯಕರ್ತರು ಸಾವಿರಾರು ಕರಪತ್ರಗಳನ್ನು ಮನೆ, ಚರ್ಚ್, ಬೀದಿಗಳಲ್ಲಿ ಹಂಚಿದರು.

ಸಭೆಯ ಮುಂಚಿನ ದಿನ ಮಧ್ಯಾಹ್ನವೇ ಒಂದು ಫೋನ್ ಕರೆ ಬಂತು. “ನಿನ್ನ ಗಂಡನನ್ನು ಕೊಲ್ಲದೇ ಬಿಡುವುದಿಲ್ಲ. ಅವನಿಗೆ ನಾಳೆ ಗತಿ ಕಾಣಿಸುತ್ತೇನೆ. ಆಗಲೇ ನನಗೆ ಸಮಾಧಾನ.” ಆರಂಭದಲ್ಲಿ ಹೇಳಿದ್ದು ಇದನ್ನೇ. ಈವಾಳ ಹೊಟ್ಟೆಯಲ್ಲಿ ಗಂಟುಬಿದ್ದಂತಾಯಿತು. ಟ್ರೋಂಡ್ ಸಂಜೆ ಶಾಲೆಯಿಂದ ಬಂದಾಗ ಅವಳು ಹೇಳಿದಳು, “ನಾಳಿನ ಸಭೆಗೆ ಹೋಗಲು ನಾನು ನಿನ್ನನ್ನು ಬಿಡುವುದಿಲ್ಲ!”

ಆತ ಯಾವ ಉತ್ತರವನ್ನೂ ನೀಡಲಿಲ್ಲ. ಕತ್ತಲಲ್ಲಿ ಯೋಚಿಸುತ್ತಾ ಕುಳಿತ: “ಇದನ್ನು ಆರಂಭಿಸಿದ್ದು ನಾನು. ನಾನು ನಾಳೆ ಮೊದಲ ಸಾಲಿನಲ್ಲಿಯೇ ನಿಲ್ಲಬೇಕು. ಏನು ಬೇಕಾದರೂ ಆಗಲಿ!” ಆದರೆ, ಮಲಗುವ ಮೊದಲು ಹಾಸಿಗೆ ಅಡಿಯಲ್ಲಿ ರಕ್ಷಣೆಗಾಗಿ ಇರಿಸಿದ್ದ ಕತ್ತಿ ಅಲ್ಲಿಯೇ ಇದೆ ಎಂದು ಮತ್ತೊಮ್ಮೆ ಮುಟ್ಟಿ ಖಾತರಿಪಡಿಸಿಕೊಂಡೇ ಮಲಗಿದ.

ಮರುದಿನ ಸಂಜೆ ಬೇಗನೇ ಟ್ರೋಂಡ್ ಮತ್ತು ಬಿಓಎನ್‌ಪಿ ಕಾರ್ಯಕರ್ತರು ವೇದಿಕೆಯ ಎದುರು ಹಾಕಿದ್ದ ತಡೆಬೇಲಿಯ ಹತ್ತಿರವೇ ನೆರೆದರು. ಆಗ ಸುಮಾರು ನಾಲ್ನೂರು ಮಂದಿ ಇದ್ದರು. ಸ್ವಲ್ಪ ಹೊತ್ತಿನಲ್ಲಿ ಸಂಖ್ಯೆ ಇಮ್ಮಡಿಯಾಯಿತು. ಸ್ವಲ್ಪದರಲ್ಲೇ ಮತ್ತೆ ಇಮ್ಮಡಿ. ಸಭೆ ಆರಂಭವಾಗುವ ಹೊತ್ತಿಗೆ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಟ್ರೋಂಡ್ ಜನಸಮುದಾಯದತ್ತ ಕಣ್ಣುಹಾಯಿಸಿ ಹಿಂಸಾಚಾರದ ಲಕ್ಷಣಗಳೇನಾದರೂ ಇವೆಯೇ ಎಂದು ನೋಡಿದ. ಹಾಗೇನೂ ಕಾಣಲಿಲ್ಲ.

ಮೈರ್ಡಾಲ್ ಸಭಾ ಸ್ಥಳಕ್ಕೆ ಬಂದು ವೇದಿಕೆ ಹತ್ತಿದ. ನೆರೆದ ಜನರನ್ನು ಕಂಡು ಅವನಿಗೇ ಅಚ್ಚರಿಯಾಯಿತು. ಅವನು ಭಾಷಣ ಆರಂಭಿಸಿದ: “ನಾವು ನಾರ್ವೇಜಿಯನ್ನರು. ನಮ್ಮ ಪೂರ್ವಜರು ಈ ಸಮಾಜವನ್ನು ಕಟ್ಟಿದರು. ಈಗ ವಿದೇಶೀಯರು ನಮ್ಮ ಪಾಲನ್ನು ಕಬಳಿಸುತ್ತಿದ್ದಾರೆ. ಮುಂದಿನ ಕೆಲವೇ ವರ್ಷಗಳಲ್ಲಿ ಎಲ್ಲವನ್ನೂ ಕಸಿದುಕೊಳ್ಳುತ್ತಾರೆ..”

ಅವನ ಮಾತುಗಳಿಗೆ ಬ್ರುಮುಂಡಾಲ್ ಜನತೆ ತಕ್ಕ ಉತ್ತರ ನೀಡಿತು. ಮೊದಲಿಗೆ ಮೊದಲ ಸಾಲಿನ ಜನರೆಲ್ಲರೂ ತಿರುಗಿ ವೇದಿಕೆಗೆ ಬೆನ್ನು ತೋರಿಸಿ ನಿಂತರು. (ಕುಂಡೆ ತಿರುಗಿಸಿ ಎಂದು ಓದಿಕೊಳ್ಳಬೇಕು !) ತಕ್ಷಣವೇ ಇನ್ನೊಂದು ಸಾಲಿನ ಜನರು! ನಂತರ ಸಾಲಿನ ನಂತರ ಸಾಲು… ಬಹುತೇಕ ಇಡೀ ಸಭೆಯೇ ಆತನ ಮಾತುಗಳಿಗೆ ಬೆನ್ನು ತಿರುಗಿಸಿ ನಿಂತಿತ್ತು! ತತ್ತರಿಸಿದ ಆತ, ತನ್ನ ಬೆಂಬಲಿಗರ ಚಿಕ್ಕ ಗುಂಪಿನತ್ತ ತಿರುಗಿ ಮಾತನಾಡಬೇಕಾಯಿತು. ಬಹುಜನರಲ್ಲಿ ಭಯಹುಟ್ಟಿಸುತ್ತಿದ್ದ ಈ ಚಿಕ್ಕಗುಂಪು ಕುಬ್ಜವಾಗಿ ಉಳಿದವರ ಮುಂದೆ ನಿಲ್ಲಬೇಕಾಯಿತು. ಮೈರ್ಡಾಲ್ ಆ ರಾತ್ರಿಯೇ ಪಟ್ಟಣ ಬಿಟ್ಟುಹೋದ. ಆದರೆ, ಬ್ರುಮುಂಡಾಲ್‌ನ ಜನರು ಆತನಿಗೆ ಬೆನ್ನು ತಿರುಗಿಸಿದ ಕತೆ ಮಾತ್ರ ಆತನ ಬೆನ್ನುಬಿಡಲಿಲ್ಲ! ಇಡೀ ನಾರ್ವೆಯ ಮಾಧ್ಯಮಗಳಲ್ಲಿ ಇದು ಮುಖ್ಯ ಸುದ್ದಿಯಾಯಿತು.

ಕೆಲಸಮಯದ ಬಳಿಕ ಆತ ರಾಜಧಾನಿ ಓಸ್ಲೋದಲ್ಲಿ 10,000 ಜನರು ಸೇರಿದ್ದ ಸಭೆಯಲ್ಲಿ ಭಾಷಣ ಮಾಡಲು ನಿಂತಾಗ ಜನರು ಬೆನ್ನು ಹಾಕಿದರು. ನಂತರ ಸ್ವಾವೆಂಜರ್ ಪಟ್ಟಣದಲ್ಲಿ ಜನರು ಬೆನ್ನುಹಾಕಿ ನಿಂತರು. ಮತ್ತೆ ಮೂರು ಪಟ್ಟಣಗಳಲ್ಲೂ ಜನರು ಬೆನ್ನು ತಿರುಗಿಸಿದ ಬಳಿಕ ಮೈರ್ಡಾಲ್ ಎಲ್ಲಿ ಮಾಯವಾದನೆಂದು ಯಾರಿಗೂ ಗೊತ್ತಾಗಲಿಲ್ಲ!

ಈಗಲ್ಲಿ ಅಲ್ಪಸಂಖ್ಯಾತರನ್ನು, ವಲಸಿಗರನ್ನು ಯಾರೂ ಪೀಡಿಸುವುದಿಲ್ಲ. ಅಂದು ನಕಲಿ ದೇಶ ಪ್ರೇಮಿಗಳ ದ್ವೇಷ, ಅನ್ಯಾಯಗಳಿಗೆ ಬೆನ್ನು ತಿರುಗಿಸಿ ನಿಂತವರು ಸ್ವತಃ ಅವುಗಳಿಗೆ ಒಳಗಾದ ಅಲ್ಪಸಂಖ್ಯಾತ, ವಲಸಿಗರು ಆಗಿರಲೇ ಇಲ್ಲ! ಬದಲಾಗಿ, ನಾರ್ವೆಯ ಆತ್ಮಸಾಕ್ಷಿಯುಳ್ಳ ನಿಜವಾದ ದೇಶಭಕ್ತರಾಗಿದ್ದರು; ದೇಶಭಕ್ತಿಯೆಂದರೆ ದ್ವೇಷವಲ್ಲ, ಮಾನವೀಯತೆಯ ಸಹಬಾಳ್ವೆ ಎಂದು ತೋರಿಸಿಕೊಟ್ಟವರು

You cannot copy content of this page

Exit mobile version