Friday, June 14, 2024

ಸತ್ಯ | ನ್ಯಾಯ |ಧರ್ಮ

ಒಂದು ಪಾರ್ಸೆಲ್ಹೇಳಿದ ಕಥೆ 

ಶಿವಮೊಗ್ಗದ ಪೆಸೆಟ್‌ ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿ ಶ್ರವಣ್ ಅಡ್ಡೇರಿ ಒಂದು ʼಕಥೆಯಲ್ಲದ ಕಥೆʼ ಬರೆಯುವ ಪ್ರಯತ್ನ ಮಾಡಿದ್ದಾರೆ..ಓದಿ ಅವರನ್ನು ಪ್ರೋತ್ಸಾಹಿಸಿ.

“ ಒಂದ್ ನಿಮಿಷ, ಅಜಯ್.. ಬಾಗಿಲಲ್ಲಿ ಯಾರೋ ಇದ್ದಾರೆ ನೋಡು” ಎಂದು ನಾನು ಕಿರುಚಿದೆ. “ನಾನು ಆಫೀಸ್ ಗೆ ರೆಡಿ ಆಗ್ತಾ ಇದೀನಿ ವಿದ್ಯಾ… ನೀನೇ ನೋಡು ಎಂದ”. ಗೊಣಗುತ್ತಾ ನಾನೇ ಬಾಗಿಲ ಬಳಿ ಹೊರಟೆ. ಬಾಗಿಲು ತೆರೆದಾಗ ಅಲ್ಲಿ ಒಬ್ಬ ಡೆಲಿವರಿ ಬಾಯ್ ನಿಂತಿದ್ದ. ನಾನು ಏನನ್ನೂ ತರಿಸಿರಲಿಲ್ಲ. ಆದರೂ ಪಾರ್ಸೆಲ್ ಬಂದಿದೆಯಲ್ಲ ಎಂಬ ಕುತೂಹಲ ಮೂಡಿತು. ಆತ ನನಗೆ ಸಹಿ ಹಾಕಿ ಪಾರ್ಸೆಲ್ ತೆಗೆದು ಕೊಳ್ಳುವಂತೆ ಸೂಚಿಸಿದ. ಪಾರ್ಸೆಲ್ ಭಾರವಾಗಿತ್ತು. ಇದರ ಒಳಗೆ ಏನಿರಬಹುದೆಂಬ ಕುತೂಹಲದಿಂದ ನಾನು ಟೇಬಲ್ ಮೇಲಿದ್ದ ಚಾಕುವಿನಿಂದ ತೆರೆದು ನೋಡಿದೆ. ಅದರಲ್ಲಿ ನಾನು ಎರಡು ವಾರದ ಮೊದಲೇ ಆರ್ಡರ್ ಮಾಡಿದಂತಹ ಹೊಲಿಗೆ ಯಂತ್ರವಿತ್ತು. ಮೂರು ತಿಂಗಳ ಹಿಂದೆ ನನ್ನ ಬೇಕರಿ ಬಿಸಿನೆಸ್ ಕೈಕೊಟ್ಟ ಮೇಲೆ, ನಾನು ಬಟ್ಟೆ ಹೊಲಿಯುವ ಬಿಸಿನೆಸ್‌ ಪ್ರಾರಂಭಿಸುವ ಎಂದು ಈ ಯಂತ್ರವನ್ನು ತರಿಸಿದ್ದೆ. 

ನಾನು ಡಿಪ್ರೆಶನ್‌ನಲ್ಲಿದ್ದಾಗ ಅದರಿಂದ ಹೊರಬರಲು ಅನೇಕ ಮಾತ್ರೆಗಳನ್ನು ತೆಗೆದು ಕೊಂಡಿದ್ದೆ. ದಿನಕ್ಕೆ ಎರಡು ಬಾರಿ ಆಸ್ಪತ್ರೆಗೆ ಹೋಗುತ್ತಿದ್ದೆ. ಒಡೆದು ಹೋದ ಐದು ವರ್ಷದ ಪ್ರೀತಿ ನನ್ನನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು. ನಿಮ್ಮಲ್ಲಿ ಅನೇಕರಂತೆ ನಂಗೂ ಕೂಡ ಒಬ್ಬ ಗೆಳೆಯ ಇದ್ದ. ನಮ್ಮ ಗೆಳೆತನ ಹೇಗಿತ್ತೆಂದರೆ ಪರಸ್ಪರ ನಾವು ಸುಖ, ದುಃಖಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಇದ್ದಕ್ಕಿದ್ದಂತೆ ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ನಮ್ಮ ಗೆಳೆತನವನ್ನು ಒಡೆದು ಹಾಕಿತ್ತು. ಆ ಒಂದು ಕ್ಷಣದಿಂದ ನನ್ನ ಬದುಕಿನಲ್ಲಿ ʼಪ್ರೀತಿʼ ಎಂಬ ಎರಡಕ್ಷರ  ಅರ್ಥ ಕಳೆದುಕೊಂಡು ಕೇವಲ ಅಕ್ಷರವೇ ಆಗಿ ಹೋಯ್ತು. ಅದೇ ಸಮಯದಲ್ಲಿ ನನ್ನ ಅಪ್ಪ ವಿಧಿವಶರಾದರು. ಒಬ್ಬ ಹೆಣ್ಣುಮಗಳಿಗೆ ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿಯೇ ಅಪ್ಪ. ಅವರೇ ನನ್ನನ್ನು  ಬಿಟ್ಟು ಹೋದ ಮೇಲೆ ನನಗೆ ಜೀವನವೇ ಮುಗಿದಂತೆ ಭಾಸವಾಗಿತ್ತು. ಈ ಎರಡೂ ಘಟನೆಗಳು ನನ್ನನ್ನು ಇನ್ನಿಲ್ಲದಂತೆ ಕುಸಿಯುವಂತೆ ಮಾಡಿ ಕೆಲ ಕಾಲ ನಾನು ಖಿನ್ನತೆಗೊಳಗಾಗುವಂತೆ ಮಾಡಿದವು.

ಅನೇಕ ಬಾರಿ ನನಗೆ ಜೀವಿಸುವುದೇ ವ್ಯರ್ಥ ಎನಿಸಿ ಬಿಟ್ಟಿತ್ತು. ಆದರೆ ನಾನು ಬಲವಾಗಿ ನಂಬಿದ್ದ ಸಿದ್ಧಾಂತವೆಂದರೆ ನಾವು ಪ್ರಯತ್ನ ಪಟ್ಟರೆ ಹಳೆಯದನ್ನು ಮರೆತು ಅದ್ಭುತವಾಗಿ ಬದುಕಬಹುದು ಎಂದು. ಆ ಅದ್ಭುತ ನನ್ನ ಜೀವನದಲ್ಲಿ ಕೊನೆಗೂ ನಡೆಯಿತು. ಹಾಗಾಗಿಯೇ ನಾನು ನಿಮ್ಮೆಲ್ಲರ ಮುಂದೆ ಇಂದು ಮಾತನಾಡುತ್ತಿದ್ದೇನೆ.

“ವಿದ್ಯಾ, ಏನ್ ಮಾಡ್ತಾ ಇದ್ದೀಯ? ನಾನು ಆಫೀಸ್ ಗೆ ರೆಡಿ ಆಗಿ, ನಿನಗೋಸ್ಕರ ನಿನ್ನ ಇಷ್ಟದ ಪುಳಿಯೋಗರೆ ಮಾಡಿದ್ದೇನೆ”. ಅಜಯ್ ನನಗೋಸ್ಕರ ನನ್ನ ಇಷ್ಟದ ಉಪಹಾರ ತಯಾರಿಸಿದ್ದ. ‘ಅಜಯ್ ಏನಿವತ್ತು ವಿಶೇಷ? ನನ್ನ ಇಷ್ಟದ ಉಪಹಾರ ತಯಾರಿಸಿದ್ದೀಯಾʼ ಎಂದು ಕೇಳಿದೆ. ಆಗ ಅಜಯ್ “ಇವತ್ತು ನಮ್ಮ 28ನೇ ವೆಡ್ಡಿಂಗ್ ಆನಿವರ್ಸರಿ” ಎಂದು ನನಗೆ ಬೆಚ್ಚನೆಯ ಅಪ್ಪುಗೆ ನೀಡಿದ.  ಮನಸು ಮುದ ಗೊಂಡಿತಾದರೂ  ನೆನಪು 28 ವರ್ಷಗಳ ಹಿಂದೆ ಬೇಡ ಬೇಡವೆಂದರೂ ಓಡಿತು. ತಕ್ಷಣ ನನಗೆ ನೆನಪಾದದ್ದು ನನ್ನ ಹಳೆಯ ಐದು ವರ್ಷದ ಗೆಳೆತನ ಮುರಿದು ಬಿದ್ದ ದಿನ. ನಾವು ಒಟ್ಟಾಗಿ ಕಳೆದ ಐದು ವರ್ಷಗಳ ಪ್ರೀತಿಯ ಕ್ಷಣಗಳಿಗೆ ನಾನು ಬಹಳಷ್ಟು  ಚಿರಋಣಿ… ನೀನು ನನ್ನ ಬದುಕಿನಲ್ಲಿ ಕೊಟ್ಟ ನೋವಿಗೆ ಅದಕ್ಕಿಂತ ಹೆಚ್ಚು ಚಿರಋಣಿ. ಯಾಕೆಂದರೆ ಆ ನೋವಿಲ್ಲದಿದ್ದರೆ ನಾನು ಇವತ್ತು ಓರ್ವ ಸ್ವಾವಲಂಬಿ ಯಶಸ್ವೀ ಮಹಿಳೆಯಾಗಿ ನಿಲ್ಲುತ್ತಿರಲಿಲ್ಲ. ಆವತ್ತು ನಾನು ನಿರಾಶಳಾಗಿ ನನ್ನ ಪ್ರಾಣ ಕಳೆದು ಕೊಂಡಿದ್ದರೆ ಈ ಸುಂದರವಾದ ಜೀವನವನ್ನು ನಾನು ಕಾಣುತ್ತಿರಲಿಲ್ಲ.

ಇವೆಲ್ಲವೂ ನನಗೆ ನನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ. ನನ್ನ ಮುಖದಲ್ಲಿ ಕಿರು ನಗೆ ಮೂಡಿಸುತ್ತದೆ. ನಾನು ಕೂಡ ಈ ಹಿಂದೆ ಒಬ್ಬರ ಹಿಂದೆ ಓಡುತ್ತಿದ್ದೆ. ಯಾವ ವ್ಯಕ್ತಿ ನನ್ನ ಹಣೆಬರಹದಲ್ಲಿ ಇರಲಿಲ್ಲವೋ ಅವರನ್ನು ಹಿಂಬಾಲಿಸಿ ಅವರಿಗೆ ಕಾಟ ಕೊಡುತ್ತಿದ್ದೆ. ಆದರೆ, ನನ್ನ ಜೀವನದ ಪುಟಗಳಲ್ಲಿ ಈ ವ್ಯಕ್ತಿಯ ಪ್ರವೇಶ ಒಂದು ಉತ್ತಮ ಅಧ್ಯಾಯವನ್ನೇ ರಚಿಸಿತು. ಇವರಿಂದಾಗಿ ನಾನು ಹಲವಾರು ವ್ಯಕ್ತಿಗಳನ್ನು ಭೇಟಿಯಾದೆ. ಒಬ್ಬೊಬ್ಬರ ಭೇಟಿಯೂ ಒಂದೊಂದು ಹೊಸ ಅನುಭವವನ್ನು ನೀಡಿತು. ಕೆಲವರು ನನಗೆ ನೀನು ಜೀವನದಲ್ಲಿ ಹಳೇ ದಿನಗಳಿಗೆ ಮತ್ತೆ ತೆರಳಲು ಬಯಸುತ್ತೀಯಾ ಎಂದು ಕೇಳಿದರು. ಆದರೆ ನನ್ನ ಉತ್ತರ ‘ಇಲ್ಲ’ ಎಂಬುದೇ ಆಗಿತ್ತು. ಮತ್ತೆ ಹಿಂದಿರುಗಿ ನಡೆದು ಹೋದ ಘಟನೆಗಳನ್ನು ಸರಿಪಡಿಸುವುದು ನನ್ನ ಪ್ರಕಾರ ಸಮಯದ ಕೊಲೆ. ನಾನೀಗ ನನ್ನ ಮನಸಿಗೊಪ್ಪಿದವನೊಡನೆ ಸುಖವಾಗಿರುವೆ.

ಜನರ ಪ್ರಕಾರ ಪ್ರೀತಿ ಎಂದರೆ ನಾವು ಇಷ್ಟ ಪಡುವವರ ಜೊತೆಗೆ ನಮ್ಮ ಸುಖ, ದುಃಖ ಹಂಚಿಕೊಳ್ಳುವುದು ಹಾಗೂ ಅವರೊಂದಿಗೆ ನಮ್ಮ ಇಡೀ ಜೀವನ ಕಳೆಯುವುದು. ಆದರೆ ನನ್ನ ಪ್ರಕಾರ ಪ್ರೀತಿ ಎಂದರೆ ನಾವು ಇಷ್ಟ ಪಡುವವರಿಗೆ ಅವರ ತಪ್ಪುಗಳನ್ನು ತಿಳಿಸುವುದು ಹಾಗು ಅವರು ಆ ತಪ್ಪುಗಳನ್ನು ಒಪ್ಪಿಕೊಳ್ಳುವುದು, ಇಬ್ಬರು ಪರಸ್ಪರ ತಪ್ಪುಗಳನ್ನು ಸರಿಪಡಿಸಿಕೊಂಡು ಮೇಲೇರುವುದು. ನೀವೇನ್‌ ಹೇಳ್ತೀರಿ?

ಶ್ರವಣ್ ಅಡ್ಡೇರಿ

ಶಿವಮೊಗ್ಗದ ಪೆಸೆಟ್‌ ಎಂಜಿನಿಯರಿಂಗ್ ಕಾಲೇಜ್‌ ನಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿ

Related Articles

ಇತ್ತೀಚಿನ ಸುದ್ದಿಗಳು