Saturday, June 15, 2024

ಸತ್ಯ | ನ್ಯಾಯ |ಧರ್ಮ

ಸ್ತ್ರೀ ಸಮೂಹ ಶಕ್ತಿ ‘ಸೇವಾ’ದ ರೂವಾರಿ ಇಳಾ ಭಟ್: ಒಂದು ನುಡಿ ನಮನ

ಭಾರತೀಯ ಮಹಿಳಾ ಚಳುವಳಿ ಕ್ರಮಿಸಿದ ಹಾದಿಯಲ್ಲಿ ಇಳಾ ಭಟ್‌ ಸಾಧನೆಯು ಒಂದು ಮೈಲಿಗಲ್ಲಾಗಿರುವಂತೆ ಭಾರತೀಯ ಸಹಕಾರಿ ಚಳುವಳಿಯ ಹಾದಿಯಲ್ಲೂ ಅವರ ಸಾಧನೆ ಒಂದು ಕ್ರಾಂತಿಕಾರಕವಾದುದು. ಇಂತಹ ಅಪ್ರತಿಮ ಸಾಧಕಿ, ಸಾಮಾಜಿಕ ಹೋರಾಟಗಾರ್ತಿ, ಪದ್ಮಭೂಷಣ, ರಾಮನ್‌ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತೆ ಇದೇ ನವೆಂಬರ್ 2 ರಂದು ನಮ್ಮನ್ನು ಅಗಲಿದ್ದಾರೆ. ಪೀಪಲ್‌ ಮೀಡಿಯಾ ಕನ್ನಡ ಜಾಲತಾಣದ ನುಡಿ ನಮನವಾಗಿ ಕನ್ನಡದ ಪ್ರಮುಖ ಲೇಖಕಿ ಡಾ. ಗೀತಾ ಶೆಣೈಯವರು ಬರೆದ ಲೇಖನ ಇಲ್ಲಿದೆ.

ಅಭಿವೃದ್ಧಿ ಹೊಂದಿದ ಪ್ರಾಂತವೊಂದರಲ್ಲಿ ಶ್ರೀಮಂತ ಕುಲೀನ ಮನೆತನದಲ್ಲಿ ಹುಟ್ಟಿ ಬೆಳೆದು, ಐಶಾರಾಮದ ನೆಮ್ಮದಿಯ ಬದುಕನ್ನು ಆಯ್ಕೆ ಮಾಡಿಕೊಳ್ಳದೆ, ಅದುವರೆಗೆ ಯಾರೂ ಗಮನವನ್ನು ಹರಿಸದೇ ಇದ್ದಂತಹ ತಳಸಮುದಾಯದ ಸಾವಿರಾರು ಶ್ರಮಿಕ ಮಹಿಳೆಯರ ಸಂಕಷ್ಟಗಳಿಗೆ ಸ್ಪಂದಿಸಿ, ತಮ್ಮ ವೈವಿಧ್ಯಪೂರ್ಣ ಕಾರ್ಯಾಚರಣೆಗಳ ಮೂಲಕ ಈ ಅಸಂಘಟಿತ ಮಹಿಳೆಯರ ಆರ್ಥಿಕ ಸಬಲೀಕರಣದ ಹಾದಿಯನ್ನು ಸುಗಮಗೊಳಿಸಿ, ಆವರ ದುಡಿಮೆಗೆ ಮಾನ್ಯತೆ, ಗೌರವವನ್ನು ತಂದುಕೊಟ್ಟವರು ಇಳಾ ಭಟ್. ಸಮಾಜಸೇವಾ ಧುರೀಣೆಯಾಗಿ, ಸ್ತ್ರೀಪರ ಹೋರಾಟಗಾರ್ತಿಯಾಗಿ ಅಂತಾರಾಷ್ಟ್ರೀಯ ಮನ್ನಣೆ, ಖ್ಯಾತಿಯನ್ನು ಹೊಂದಿದರೂ ಇಳಾ ಭಟ್ ತಮ್ಮ ನಿತ್ಯದ ಬದುಕಿನಲ್ಲಿ ಗಾಂಧೀತತ್ವವನ್ನು ಅಳವಡಿಸಿಕೊಂಡ, ಮಾನವಾಭಿವೃದ್ಧಿ ಗುರಿಯನ್ನು ಹೊಂದಿದ್ದ ಅತ್ಯಂತ ಸರಳ, ಸಜ್ಜನ ಮಹಿಳೆಯಾಗಿದ್ದವರು.

ಸೂರತ್ ನಗರದ ನ್ಯಾಯವಾದಿ ಸುಮಂತ್ ಭಟ್ ಮತ್ತು ವನಲೀಲಾ ದಂಪತಿಗಳ ಹಿರಿಯ ಮಗಳಾಗಿ ಇಳಾ ಭಟ್ ಹುಟ್ಟಿದ್ದು ಸೆಪ್ಟೆಂಬರ್ 7. 1933 ರಂದು, ತಾಯಿಯ ತವರೂರು ಅಹಮದಾಬಾದಿನಲ್ಲಿ. ಸ್ವಾತಂತ್ರ್ಯ ಚಳವಳಿ ಕ್ರಿಯಾಶೀಲವಾಗಿದ್ದ ಪರಿಸರ ಹಾಗೂ ದೇಶದ ನೇತಾರರ ಆದರ್ಶವನ್ನು ಮೈಗೂಡಿಸಿಕೊಂಡು ದೇಶಸೇವೆ, ಜನಸೇವೆಯ ಕಡೆಗೆ ಆಕರ್ಷಿತರಾಗಿದ್ದ ಯುವಶಕ್ತಿಗಳ ಪ್ರಭಾವದಲ್ಲಿ ಇಳಾ ಭಟ್ ತಮ್ಮ ವಿದ್ಯಾರ್ಥಿ ಜೀವನದ ಹಂತದಲ್ಲಿಯೇ ಸಮಾಜಸೇವೆಯ ಕಡೆಗೆ ಆಕರ್ಷಿತರಾದವರು. ಕಾನೂನು ಪದವೀಧರೆಯಾದ ಬಳಿಕ ಅವರು 1955 ರಲ್ಲಿ ಅಹಮದಾಬಾದ್ ಮಜೂರ್ ಮಹಾಜನ್ ಸಂಘಟನೆಯ ಕಾನೂನು ವಿಭಾಗದಲ್ಲಿ ಜ್ಯೂನಿಯರ್ ಲಾಯರ್ ಆಗಿ ಉದ್ಯೋಗಕ್ಕೆ ಸೇರಿಕೊಂಡರು. ಮಜೂರ್ ಮಹಾಜನ್ ಅಥವಾ ಟಿಎಲ್‍ಎ ಎಂದೇ ಜನಪ್ರಿಯವಾಗಿದ್ದ ಭಾರತದ ಅತ್ಯಂತ ಪ್ರಬಲ ಕಾರ್ಮಿಕ ಸಂಘಟನೆ ಟೆಕ್ಸ್ ಟೈಲ್ ಲೇಬರ್ ಅಸೋಸಿಯೇಶನ್‍ಗೆ ಪ್ರವೇಶ ಪಡೆದದ್ದು ಅವರ ಬದುಕಿನ ಮಹತ್ವಪೂರ್ಣ ತಿರುವಿಗೆ ಕಾರಣವಾಯಿತು.

ಟಿಎಲ್‍ಎ ನಡೆಸಿದ ಮಹಿಳಾ ಕಾರ್ಮಿಕರ ಕುರಿತಾದ ಸಮೀಕ್ಷೆಯ ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ  ಇಳಾ ಭಟ್ ಅವರಿಗೆ ತಮ್ಮ ಸುತ್ತಮುತ್ತ ಹೊಟ್ಟೆ ಪಾಡಿಗಾಗಿ ಹಗಲಿರುಳು ದುಡಿಯುತ್ತಿರುವ ಸಾವಿರಾರು ಮಹಿಳೆಯರ ದುರ್ಬರ ಬದುಕಿನ ಸತ್ಯ ದರ್ಶನವಾಯಿತು. ಸಾಮಾಜಿಕ ಭದ್ರತೆ, ಆರ್ಥಿಕ ಸೇವೆಗಳ ಬೆಂಬಲ ಹಾಗೂ ಸೂಕ್ತ ತರಬೇತಿಗಳಿಲ್ಲದೆ, ಸರಕಾರಿ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳ ಫಲಾನುಭವಿಗಳಾಗುವ ಅವಕಾಶದಿಂದ ವಂಚಿತರಾಗಿರುವ ಬಡ ಮಹಿಳೆಯರು ಬೀದಿ ಬದಿಯ ವ್ಯಾಪಾರ, ಗುಜರಿ ಸಂಗ್ರಹ, ಬೀಡಿ ಕಟ್ಟುವಿಕೆ, ಸರಕುಗಳ ಸಾಗಾಣಿಕೆ ಇತ್ಯಾದಿ ಕಾರ್ಯಗಳನ್ನು ನಡೆಸುತ್ತಾ ದಲ್ಲಾಳಿಗಳ, ಕಾನೂನು ಪಾಲಕರ ಕೈಯಲ್ಲಿ ಶೋಷಣೆಯನ್ನು ಅನುಭವಿಸುತ್ತಾ ಕಾಲ ಕಳೆಯುತ್ತಿರುವುದು ಹಾಗೂ ಅವರ ಆರ್ಥಿಕ ಮಟ್ಟ ಸುಧಾರಣೆಯನ್ನು ಕಾಣದಿರುವುದು ಇಳಾ ಭಟ್ ಅವರ ಗಮನಕ್ಕೆ ಬಂತು. ಇದಕ್ಕೆ ಪರಿಹಾರ ರೂಪವಾಗಿ ಮಹಿಳಾ ದುಡಿಮೆದಾರರಿಗೆ ವೇತನದ ಭದ್ರತೆ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವ, ಅವರನ್ನು ಸ್ವಾವಲಂಬಿಗಳಾಗಿ, ಶೋಷಣಾ ಮುಕ್ತರನ್ನಾಗಿಸುವ ಎಲ್ಲಕ್ಕಿಂತ ಹೆಚ್ಚಾಗಿ ಅವರಲ್ಲಿ ಒಗ್ಗಟ್ಟಿನ ಮಹತ್ವವನ್ನು ಕಾಣಿಸುವ, ಪರಸ್ಪರ ಸೋದರಿತ್ವದ ಭಾವನೆಯನ್ನು ಬೆಳೆಸುವ ‘ಸ್ವ-ಉದ್ಯೋಗಸ್ಥ ಮಹಿಳಾ ಸಂಘಟನೆ’ (SEWA)ಯನ್ನು ಅವರು 1971 ರಲ್ಲಿ ಟಿಎಲ್‍ಎ ಮಹಿಳಾ ವಿಭಾಗದ ಒಂದು ಭಾಗವಾಗಿ ಪ್ರಾರಂಭಿಸಿದರು. ‘ಸೇವಾ’ದ ವ್ಯಾಪ್ತಿಯಲ್ಲಿ ಅರ್ಥಿಕವಾಗಿ ಅತ್ಯಂತ ಕೆಳಮಟ್ಟದಲ್ಲಿರುವ ಚಿಂದಿ ವಸ್ತು ಸಂಗ್ರಹಕಾರರಿಂದ ಹಿಡಿದು ಗೃಹಕೇಂದ್ರಿತ ಮಹಿಳಾ ಉದ್ಯೋಗಿಗಳು ಕೂಡ ಸೇರಿರುತ್ತಾರೆ.

ಮಹಿಳಾ ಅಭಿವೃದ್ಧಿಯ ಈ ಹಾದಿಯಲ್ಲಿ ಇಳಾ ಭಟ್ ಇಟ್ಟ ಮತ್ತೊಂದು ಹೆಜ್ಜೆಯೆಂದರೆ ಮಹಿಳಾ ಸಹಕಾರಿಗಳ ಸ್ಥಾಪನೆ. ಇದರಲ್ಲಿ ಇಳಾ ಭಟ್ ನೇತೃತ್ವದಲ್ಲಿ ಪ್ರಾರಂಭಗೊಂಡ ‘ಸೇವಾ ಬ್ಯಾಂಕ್’’ ಅನಕ್ಷರಸ್ಥ ಮಹಿಳೆಯರನ್ನು ಬ್ಯಾಂಕ್ ಗ್ರಾಹಕರನ್ನಾಗಿಸಿದ ಅತ್ಯಂತ ರೋಚಕ ಘಟನೆಗಳನ್ನು ಮೈಗೂಡಿಸಿಕೊಂಡಿದೆ. ಸ್ವ-ಉದ್ಯೋಗಿ ಮಹಿಳೆಯರ ಅಗತ್ಯಗಳನ್ನು ಪೂರೈಸುವ ಈ ಸೇವಾ ಬ್ಯಾಂಕಿನಲ್ಲಿ ಮಾಲೀಕ, ಆಡಳಿತಗಾರ ಮತ್ತು ಗ್ರಾಹಕರ ನಡುವಿನ ಅಂತರವು ಸೀಮಿತವಾಗಿರುವಂತೆ ಕಾಪಾಡಿಕೊಂಡು ಬರಲಾಗಿದೆ.

ಇಳಾ ಭಟ್ ಅವರ ‘ಸೇವಾ’ ಮಹಿಳಾ ಕಾರ್ಮಿಕ ಸಂಘಟನೆಯಾಗಿ ಮಾತ್ರ ಮುಂದುವರಿದಿದ್ದರೆ ಅದಕ್ಕೆ ಹೆಚ್ಚಿನ ಸಾಧನೆಯನ್ನು ದಾಖಲಿಸುವುದು ಸಾಧ್ಯವಿರುತ್ತಿರಲಿಲ್ಲ. ಯಾಕೆಂದರೆ ಕಾರ್ಮಿಕರ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಅವರ ಸ್ಥಿತಿಗತಿಯನ್ನು ಸುಧಾರಣೆಗೆ ಒಳಪಡಿಸುವುದು ಸಂಘಟನೆಗೆ ಸುಲಭದ ಕೆಲಸವಲ್ಲ. ಇದಕ್ಕಾಗಿ ಬೇರೆ ದಾರಿಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಳಾ ಭಟ್ ಅವರು ಮಹಿಳಾ ಸಹಕಾರಿಗಳ ಸ್ಥಾಪನೆಯನ್ನು ಕಾರ್ಯಗತಗೊಳಿಸಿರುವುದು ಎಷ್ಟು ಸಮಯೋಚಿತ ಕ್ರಮವೆಂದರೆ ಸ್ತ್ರೀ ಸಮೂಹ ಧ್ವನಿಗೆ ಅದು ಸೂಕ್ತ ತಳಹದಿಯನ್ನು ರೂಪಿಸಿ ಇಡೀ ಜಗತ್ತಿಗೇ ಮಾದರಿಯಾಗಿ ಪರಿಣಮಿಸಿದೆ.

ಕ್ರಾಂತಿ ಎಂದರೆ ಹಳೆಯ ಪದ್ಧತಿಯನ್ನು ಬಲವಂತವಾಗಿ ಬದಲಾಯಿಸಿ ಹೊಸ ವ್ಯವಸ್ಥೆಯನ್ನು ಸ್ಥಾಪಿಸುವುದು ಎಂದಾಗುತ್ತದೆ. ಇಳಾ ಭಟ್ ನಡೆಸಿದ ಮಹಿಳಾ ಪರ ಕಾರ್ಯಾಚರಣೆಯು ಯಾವ ಕ್ರಾಂತಿಗೂ ಕಡಿಮೆಯದಾಗಿಲ್ಲವೆಂದು ಹೇಳಬಹುದು. ಮೊತ್ತ ಮೊದಲನೆಯದಾಗಿ ಅವರು ಆದ್ಯತೆಯ ಮೇರೆಗೆ ಅಸಂಘಟಿತ ಮಹಿಳೆಯರು ನಡೆಸುವ ಉದ್ಯೋಗಗಳನ್ನು ವಿಂಗಡಿಸಿದರು. ಆಮೇಲೆ ಅವರ ಅಗತ್ಯಗಳ ಯಾದಿಯನ್ನು ಸಿದ್ಧಪಡಿಸಿದರು. ಆನಂತರ ಕಣಕ್ಕಿಳಿದು ನ್ಯಾಯಬದ್ಧವಾಗಿ ಅವರಿಗೆ ಸಿಗಬೇಕಾಗಿರುವ ಸವಲತ್ತು ಮತ್ತು ಹಕ್ಕುಗಳಿಗಾಗಿ ಅವರನ್ನು ಜೊತೆಗೂಡಿಸಿಕೊಂಡೇ ಹೋರಾಟ ನಡೆಸಿದರು. ಇದರ ನಂತರ ಆರೋಗ್ಯ ಸೇವೆ, ವಿಮೆ, ಜಮಾ ಸೌಲಭ್ಯ ಇತ್ಯಾದಿ ಅಗತ್ಯಗಳ ಪೂರೈಕೆಗಾಗಿ ಸಹಕಾರಿಗಳ ಸ್ಥಾಪನೆಯ ಕಡೆಗೆ ಗಮನ ಹರಿಸಿದರು. ಹೀಗೆ ಹಂತ ಹಂತವಾಗಿ ತಮ್ಮ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸಿದರು. ಅವರ ಈ ದೂರದರ್ಶಿತ್ವದಿಂದಾಗಿ ಸ್ವ-ಉದ್ಯೋಗಸ್ಥ ಮಹಿಳೆಯರ ಸ್ವಾವಲಂಬನದ ದಾರಿಯು ತೆರೆದುಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ದುಡಿಮೆಯಲ್ಲಿ ಸ್ವಾತಂತ್ರ್ಯವನ್ನು ಮತ್ತು ತಮ್ಮ ಸಂಪಾದನೆಯಲ್ಲಿ ಹಕ್ಕನ್ನು ಸಾಧಿಸುವ ಅರಿವನ್ನು ಈ ಮಹಿಳೆಯರಲ್ಲಿ ಮೂಡಿಸಿದೆ. ಇದು ಭಾರತೀಯ ಸ್ತ್ರೀ ವಿಮೋಚನಾ ಹೋರಾಟದ ಹಾದಿಯಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ.

ಇಂದು ಇಳಾ ಭಟ್ ನಮ್ಮೊಂದಿಗಿಲ್ಲ. ಇದೇ ನವೆಂಬರ್ 2 ರಂದು ಅವರು ನಮ್ಮನ್ನು ಅಗಲಿದ್ದಾರೆ. ಆದರೆ ಈ ದೇಶದ ಲಕ್ಷಾಂತರ ಕಾರ್ಮಿಕ ಮಹಿಳೆಯರಲ್ಲಿ ಅವರು ಉದ್ದೀಪನಗೊಳಿಸಿದ ಚೈತನ್ಯ ನಿರಂತರವಾಗಿ ಬೆಳಗುತ್ತಿದೆ.

 ಡಾ. ಗೀತಾ ಶೆಣೈ

ಕನ್ನಡದ ಮಹತ್ವದ ಲೇಖಕಿಯಾಗಿರುವ ಇವರು  ಸಂಶೋಧನೆ, ಭಾಷಾಂತರಗಳಲ್ಲಿ ಸದಾ ಉತ್ಸಾಹಿತರು.

Related Articles

ಇತ್ತೀಚಿನ ಸುದ್ದಿಗಳು