Tuesday, July 8, 2025

ಸತ್ಯ | ನ್ಯಾಯ |ಧರ್ಮ

ಕಿಟಕಿ ಮೂಲಕ ಬಸ್ ಹತ್ತಿ ಕೈ ಕಳೆದುಕೊಂಡ ಮಹಿಳೆ! ; ವಾಸ್ತವ ಸತ್ಯ ಇಲ್ಲಿದೆ ನೋಡಿ

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳಲ್ಲಿ ‘ಶಕ್ತಿ’ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಬಂದಿದ್ದು ರಾಜ್ಯದ ಮಹಿಳೆಯರು ಈಗಾಗಲೇ ಅತಿ ಉತ್ಸಾಹದಿಂದ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಶಕ್ತಿ ಯೋಜನೆಗೆ ಸಂಬಂಧಿಸಿ ವಿರೋಧಿಗಳ ಪ್ರಾಪಗಂಡಾ ಫೇಕ್ ಸುದ್ದಿಗಳು ಸಹ ಪ್ರಚಾರ ಪಡೆದುಕೊಂಡು ವೈರಲ್ ಆಗುತ್ತಿವೆ.

ಅಂತಹದ್ದೇ ಒಂದು ಫೇಕ್ ಸುದ್ದಿಯೊಂದು ಎಲ್ಲೆಡೆ ವೈರಲ್ ಆದ ನಂತರ ಈಗ ಕೆಎಸ್ಆರ್ಟಿಸಿ ಇಲಾಖೆ ಈಗ ಅದೊಂದು ಸುಳ್ಳು ಸುದ್ದಿ ಎಂಬುದನ್ನ ಸ್ಪಷ್ಟಪಡಿಸಿದೆ.

ಅಂದಹಾಗೆ ವೈರಲ್ ಆಗೋ ಮಟ್ಟಕ್ಕೆ ಹರಡಿದ ಸುಳ್ಳು ಸುದ್ದಿ ಏನಪ್ಪಾ ಅಂದ್ರೆ, ಈ ಕೆಳಗೆ ಕಾಣ್ತಿರೋ ಫೋಟೊ ಗಮನಿಸಿ. ಇದರಲ್ಲಿ ಮಹಿಳೆಯೊಬ್ಬರ ಕೈ ತುಂಡಾಗಿ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡುತ್ತಾ ಇರುವ ದೃಶ್ಯ ಇದು.

ಇಂತಹದ್ದೊಂದು ದೃಶ್ಯ ‘ಶಕ್ತಿ’ ಯೋಜನೆಯ ವಿರೋಧಿಗಳ ಕೈಗೆ ಸಿಕ್ಕಿ ಇನ್ನಿಲ್ಲದಂತೆ ಪ್ರಚಾರ ಪಡೆದುಕೊಂಡಿವೆ. ‘ಶಕ್ತಿ’ ಯೋಜನೆಯಡಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡುವ ಸಂದರ್ಭದಲ್ಲಿ ಆದ ನೂಕುನುಗ್ಗಲಿನಲ್ಲಿ ಮಹಿಳೆಯೊಬ್ಬರ ಕೈ ತುಂಡಾಗಿದೆ ಎಂಬ ರೀತಿಯಲ್ಲಿ ಪ್ರಚಾರ ಪಡೆದುಕೊಂಡಿದೆ. ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಮಹಿಳೆಯೊಬ್ಬರು ಕಿಟಕಿ ಮೂಲಕ ಬಸ್ ಹತ್ತುವಾಗ ಈ ಘಟನೆ ನಡೆದಿದೆ. ಇದು ‘ಶಕ್ತಿ’ ಯೋಜನೆಯ ಸೈಡ್ ಎಫೆಕ್ಟ್ ಎನ್ನುವ ರೀತಿಯಲ್ಲಿ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವು ಬಿಜೆಪಿ ಬೆಂಬಲಿತ ವೆರಿಫೈಡ್ ಅಕೌಂಟ್ (Verified Accounts) ಗಳೂ ಕೂಡಾ ಹಿಂದು ಮುಂದು ನೋಡದೇ ಇಂತಹದ್ದೊಂದು ಸುದ್ದಿಯನ್ನು ವೈರಲ್ ಮಾಡಲು ಮುಂದಾಗಿವೆ.

https://twitter.com/SaritaKaushik05/status/1673006824428285952?t=ECXRLeKGwnHraee2erFsLw&s=19

ಆದರೆ ವಾಸ್ತವ ಏನೆಂದರೆ, ಬಸ್ಸಿನ ಬಲಗಡೆಯ ಹಿಂಬದಿಯ ಕಿಟಕಿಯ ಬಳಿ ಕೆಎಸ್ಆರ್ಟಿಸಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಕಿಟಕಿ ಬಳಿ ಕೂತಿದ್ದ ಮಹಿಳೆಗೆ ಗಂಭೀರ ಗಾಯವಾಗಿದ್ದು, ಅವರ ಕೈ ತುಂಡಾಗಿದೆ. ಇದೊಂದು ಬಸ್ಸು ಮತ್ತು ಲಾರಿಯ ಡಿಕ್ಕಿಯಿಂದಾದ ಅಪಘಾತವೇ ಹೊರತು, ಮಹಿಳೆ ಕಿಟಕಿ ಮೂಲಕ ಬಸ್ ಹತ್ತುವಾಗ ಆದ ಅಪಘಾತ ಅಲ್ಲ ಎಂದು ಕೆಎಸ್ಆರ್ಟಿಸಿ ಸಂಸ್ಥೆ ಸ್ಪಷ್ಟಪಡಿಸಿದೆ. ಅಷ್ಟು ಮಾತ್ರವಲ್ಲ, ಆ ಮಹಿಳೆಗೆ ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ಸಂಸ್ಥೆಯೇ ಭರಿಸುವುದಾಗಿ ಸ್ಪಷ್ಟಪಡಿಸಿದೆ.

ಈ ಬಗ್ಗೆ ಕೆಎಸ್ಆರ್ಟಿಸಿ (KSRTC) ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಘಟನೆಯ ವಿವರವನ್ನು ಸ್ಪಷ್ಟಪಡಿಸಿದ್ದು, ಲಾರಿ ಚಾಲಕನ ಮೇಲೆ ದಾಖಲಾದ FIR ಪ್ರತಿಯನ್ನು ಕೂಡಾ ದಾಖಲಿಸಿದೆ.

ರಾಜ್ಯದಲ್ಲಿ ‘ಶಕ್ತಿ’ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಬಹುತೇಕ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅಷ್ಟೆ ಅಲ್ಲದೆ ರಾಜ್ಯದ ಮೂಲೆ ಮೂಲೆಗಳಿಗೆ ತೆರಳುವ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಕರು ತುಂಬಿ ಪ್ರಯಾಣ ಮಾಡುತ್ತಿದ್ದು, ಬಸ್ಸಿನ ಕಲೆಕ್ಷನ್ ನಲ್ಲಿ ಏನೊಂದೂ ಕಡಿಮೆ ಆಗುತ್ತಿಲ್ಲ ಎಂದು ಬಸ್ಸಿನ ನಿರ್ವಾಹಕರೇ ಸ್ಪಷ್ಟಪಡಿಸಿದ್ದಾರೆ. ಆದರೂ ಸರ್ಕಾರದ ಯೋಜನೆ ವಿರೋಧಿಗಳು‌.. ಅದರಲ್ಲೂ ಬಿಜೆಪಿ ಬೆಂಬಲಿಗರು ಪ್ರಾಪಗಂಡಾ ಅಡಿಯಲ್ಲಿ ಈ ರೀತಿಯ ಸುದ್ದಿ ಹರಡುತ್ತಿರುವುದು ಮತ್ತು ಅದು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೆ ಬರುತ್ತಿರುವುದು ದುರದೃಷ್ಟಕರ.

ಇನ್ನು ಫೇಕ್ ನ್ಯೂಸ್ ಹರಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಹೇಳಿಕೆ ನೀಡಿರುವುದು, ಅದೊಂದು ಕೇವಲ ಹೇಳಿಕೆಯಾಗಷ್ಟೆ ಉಳಿದಿದೆ. ಮಂಡ್ಯದ ಹುಲ್ಲಹಳ್ಳಿಯಲ್ಲಿ ಆದ ಈ ಘಟನೆ ಏನೇನೋ ರೂಪ ಪಡೆದುಕೊಂಡು ಸುಳ್ಳು ಸುದ್ದಿಯಾಗಿ ವೈರಲ್ ಆದರೂ ರಾಜ್ಯ ಸರ್ಕಾರ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಸರ್ಕಾರದ ಅಸಮರ್ಥತೆಯೋ ಅಥವಾ ನಿರ್ಲಕ್ಷ್ಯದ ಧೋರಣೆಯೋ ತಿಳಿಯದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page