Wednesday, August 14, 2024

ಸತ್ಯ | ನ್ಯಾಯ |ಧರ್ಮ

ಸಾಮಾಜಿಕ ಪಲ್ಲಟಗಳಿಗೆ ಸ್ಪಂದಿಸುವಿಕೆಯಿಂದಲೇ ಲೇಖಕ ಸಮಕಾಲೀನವಾಗುವುದು: ಅಗ್ರಹಾರ ಕೃಷ್ಣಮೂರ್ತಿ

ಬೆಂಗಳೂರು: ನಗರದಲ್ಲಿರುವಷ್ಟು ವೇಗದ ಜೀವನದಲ್ಲಿ ಹಲವಾರು ವಿಷಯಗಳು ನಮ್ಮ ಗಮನಕ್ಕೆ ಬರೋದಿಲ್ಲ, ಆದರೆ ಹಳ್ಳಿಯಲ್ಲಿ ನಡೆಯುವ ಪ್ರತಿಯೊಂದನ್ನು ತುಂಬಾ ಸೂಕ್ಷ್ಮವಾಗಿ ನೋಡಿ ಬರಹಗಾರನೊಬ್ಬ ದಾಖಲಿಸಬಹುದು ಎಂದು ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.
ಬೆಂಗಳೂರಿನ ವಿಜಯನಗರ ಮೆಟ್ರೋ ಸ್ಟೇಶನ್ ಹತ್ತಿರವಿರುವ ‘ಬೀಟಲ್ ಪುಸ್ತಕ ಮಳಿಗೆ’ಯಲ್ಲಿ ಕಾವ್ಯಮನೆ ಪ್ರಕಾಶನದಿಂದ ಪ್ರಕಟವಾಗಿರುವ ಯುವಲೇಖಕ ಕಪೀಲ್ ಹುಮನಾಬಾದೆ ಅವರ ‘ಬಣಮಿ’ ಹಾಗೂ ಕತೆಗಾರ್ತಿ ದೀಪದ ಮಲ್ಲಿ ಅವರ ‘ಹುಣಸೇ ಚಿಗುರು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಗರದ ವೇಗದ ಜೀವನದಲ್ಲಿ ನಮಗೆ ಯಾವುದನ್ನು ಸರಿಯಾಗಿ ಗ್ರಹಿಸಲು ಆಗುವುದಿಲ್ಲ, ಆದರೆ ಹಳ್ಳಿಗಳಲ್ಲಿ ಆ ವೇಗದ ಜೀವನ ಇರದೇ ಇರುವುದರಿಂದ ಅಲ್ಲಿ ನಡೆಯುವ ಪ್ರತಿಯೊಂದು ಘಟನೆಗಳು, ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದರ ಅಂತರಾಳವನ್ನು ಗ್ರಹಿಸಿದಾಗ ಕತೆಗಳನು ಕಟ್ಟಬಹುದಾಗಿದೆ ಎಂದರು.

ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪಲ್ಲಟಗಳು ಸೇರಿದಂತೆ ಹಲವಾರು ವೈರುಧ್ಯಗಳನ್ನು ಗ್ರಹಿಸಿ ಅವುಗಳನ್ನೇ ಯುವ ಬರಹಗಾರರು ತಮ್ಮ ಕತೆಗಳಿಗೆ ವಿಷಯ ವಸ್ತುವಾಗಿಸಿಕೊಳ್ಳುವ ಮೂಲಕ ಸಮಕಾಲೀನ ಸ್ಥಿತಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕತೆಗಾರ್ತಿ ಕಾವ್ಯ ಕಡಮೆ ಅವರು ‘ಹುಣಸೇ ಚಿಗುರು’ ಪುಸ್ತಕದ ಬಗ್ಗೆ ಮಾತನಾಡಿ, ಕನ್ನಡದ ಕಥಾ ಪರಂಪರೆಯನ್ನ ಮಾಸ್ತಿಯವರು ಹಾಕಿಕೊಟ್ಟ ಪರಂಪರೆ ಎನ್ನಬಹುದು, ಯಾಕೆಂದರೆ ಜಾಗತಿಕವಾಗಿ ಬೇರೆ ಭಾಷೆಗಳ ಸಾಹಿತ್ಯ ಕ್ಷೇತ್ರ ಕತೆಗಳಿಗಿಂತ ಕಾದಂಬರಿಗೆ ಹೆಚ್ಚಿನ ಸ್ಥಾನಮಾನ ಕೊಟ್ಟಿದೆ. ಹಾಗಾಗಿ ಕನ್ನಡದಲ್ಲೀ ಮಾತ್ರ ಕಥಾ ಪರಂಪರೆಯ ತುಂಬಾ ವಿಶಿಷ್ಟವಾಗಿ ಬೆಳೆದುಕೊಂಡ ಬಂದಿದೆ ಎಂದರು.

ಕತೆ ಬರೆಯುವವರು ಬರಿ ಸ್ಪರ್ಧಾತ್ಮಕ ಮನೋಭಾವ ಇಟ್ಟುಕೊಂಡು ಬರೆಯದೆ ಓದುಗರ ಪ್ರೀತಿ ದಕ್ಕಿಸಿಕೊಳ್ಳುವ ಸಲುವಾಗಿ ಬರೆಯುತ್ತಿದ್ದೇವಾ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಯಾಕೆಂದರೆ ಕಥಾಪ್ರಕಾರ ಸಾಹಿತ್ಯ ಕ್ಷೇತ್ರದಲ್ಲಿ ಬಹಳ ದೊಡ್ಡ ಓದುಗ ಬಳಗ ಹೊಂದಿದೆ ಎಂದು ಹೇಳಿದರು.

ಸೃಜನಶೀಲ ಸಾಹಿತ್ಯ ಪ್ರಕಾರ ಎನಿಸಿರುವ ಕಾವ್ಯ, ಕಾದಂಬರಿ, ನಾಟಕ, ಕತೆ ಈ ನಾಲ್ಕು ಪ್ರಕಾರಗಳು ಜೋಗ ಜಲಪಾತದ ನಾಲ್ಕು ಧಾರೆಗಳು ಇದ್ದ ಹಾಗೆ ಅವುಗಳಲ್ಲಿ ಕಥಾಪ್ರಕಾರ ತುಂಬಾ ವಿಶಿಷ್ಟತೆಯನ್ನ ಹೊಂದಿದ್ದು, ಅದು ಕಾವ್ಯ ಮತ್ತು ಕಾದಂಬರಿ ಮಾಡಲಾರದಂತಹ ಒಂದು ನಿಗದತ ವಿಷಯದ ವಿಸ್ತಾರತೆ ನಮ್ಮ ಮುಂದಿಡುತ್ತದೆ ಎಂದರು.

ಸಂಶೋದನಾರ್ಥಿ ಸಿದ್ಧಾರ್ಥ ಎಂ.ಎಸ್ ಅವರು ಕಪೀಲ್ ಹುಮನಾಬಾದೆ ಅವರ ‘ಬಣಮಿ’ ಕಥಾ ಸಂಕಲನದ ಕುರಿತು ಮಾತನಾಡಿ, ಸಾಮಾಜಿಕವಾಗಿ ಮಹತ್ವ ಸಾರುವ ಜವಾಬ್ದಾರಿ ಕತೆಗಾರನ ಮೇಲಿರುತ್ತದೆ ಅದನ್ನು ಆತ ಯಾವತ್ತಿಗೂ ಮರೆಯಬಾರದು. ಕನ್ನಡದ ಸಾಹಿತ್ಯಿಕ ದಾಖಲೆಗಳು ಸಿಗೋದು ಕತೆಯ ಮೂಲದಿಂದಲೇ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಮರ್ಶಕ ಹೈ.ತೋರಣಗಲ್ಲು, ಧನಂಜಯ ಎನ್, ಮಮತಾ ಜಿ.ಸಾಗರ್, ರೂಮಿ ಹರೀಶ್, ಚಾಂದ್ ಪಾಷಾ, ದಾದಪೀರ್ ಜೈಮುನ್, ವಿನಯ್ ಗುಂಟೆ ಸೇರಿದಂತೆ ಹಲವಾರು ಕವಿ, ಲೇಖಕರು ಭಾಗಿಯಾಗಿದ್ದರು.

ಪ್ರತಿಗಳಾಗಿ ಸಂಪರ್ಕಿಸಿ

ಕಾವ್ಯಮನೆ ಪ್ರಕಾಶನ
ಹುಣಸೇ ಚಿಗುರು : 100 ರೂ
ಬಣಮಿ : 110 ರೂ.
ಕಾವ್ಯಮನೆ ಪ್ರಕಾಶನ : 8722039612

Related Articles

ಇತ್ತೀಚಿನ ಸುದ್ದಿಗಳು

You cannot copy content of this page