ಹಾಸನ : ಬೇಲೂರು ಪಟ್ಟಣದ ಲಾಡ್ಜ್‌ವೊಂದರಲ್ಲಿ ರಾಕೇಶ್‌ಗೌಡ (25) ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.ತೀರ್ಥಹಳ್ಳಿಯ ಸ್ಪಂದನಾ ಸ್ಪೂರ್ತಿ ಪೈನಾನ್ಸ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷನಾಗಿದ್ದ ರಾಕೇಶ್‌ಗೌಡ, ಆನ್‌ಲೈನ್ ಗೇಮ್‌ಗಳಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲಾಗದೇ, ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್‌ನೋಟ್‌ನಿಂದ ಬಹಿರಂಗವಾದ ಸಂಗತಿಗಳು:
ರಾಕೇಶ್‌ಗೌಡ, ಬೇಲೂರು ತಾಲ್ಲೂಕಿನ ಚೀಕನಹಳ್ಳಿ ಗ್ರಾಮದ ಉಮೇಶ್ ಅವರ ಒಬ್ಬನೇ ಪುತ್ರ. ಎರಡು ವರ್ಷಗಳಿಂದ ಆನ್‌ಲೈನ್ ಗೇಮ್ ಆಡುವ ಚಟದಿಂದ ತೀವ್ರ ಸಾಲದಲ್ಲಿ ಸಿಲುಕಿಕೊಂಡಿದ್ದೆ ಎಂದು ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರೆ. “ನಾನು ಈ ನಿರ್ಧಾರ ತೆಗೆದುಕೊಂಡು ನನ್ನ ಜೀವನ ಕೊನೆಗೊಳಿಸುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ನನ್ನನ್ನ ಕ್ಷಮಿಸಿ, ಅಮ್ಮ,” ಎಂದು ಭಾವನಾತ್ಮಕ ಸಂದೇಶ ಬರೆದಿದ್ದಾರೆ.
ಅಂತಿಮ ಮನವಿ
ಡೆತ್‌ನೋಟ್‌ನಲ್ಲಿ, ತಂದೆ-ತಾಯಿಯ ಮುಂದೆ ಸಾಲದ ಭಾರವನ್ನು ಹೆಚ್ಚಿಸಬಾರದೆಂದು ತನ್ನ ಶವವನ್ನು ಚೀಕನಹಳ್ಳಿಗೆ ಕೊಂಡೊಯ್ಯದೇ ಬೇಲೂರಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಮನವಿ ಮಾಡಿದ್ದಾರೆ. ಅಲ್ಲದೆ, ತನ್ನ ಕಣ್ಣನ್ನು ದಾನ ಮಾಡಬೇಕು ಹಾಗೂ ಬೇಲೂರು ಶಾಸಕರು ತನ್ನ ಅಂತಿಮ ದರ್ಶನಕ್ಕೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ಆನ್‌ಲೈನ್ ಗೇಮ್‌ನಂತಹ ಚಟಗಳು ಹೇಗೆ ಯುವಕರ ಜೀವನವನ್ನು ಹಾನಿಗೊಳಿಸುತ್ತವೆ ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಸಾಬೀತಾಗಿದೆ. ರಾಕೇಶ್‌ಗೌಡ ಫೈನಾನ್ಸ್‌ನಲ್ಲಿ ಹಣ ದುರುಪಯೋಗ ಮಾಡಿದ ಕಾರಣ ಹಾಗೂ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ಸುದ್ದಿ ಕುಟುಂಬಸ್ಥರು, ಸ್ನೇಹಿತರು, ಹಾಗೂ ಸ್ಥಳೀಯ ಜನತೆಯಲ್ಲಿ ಶೋಕ ಮಡುಗಟ್ಟಿಸಿದೆ.
ಪೊಲೀಸರ ಕ್ರಮ
ಬೆಳಕಿಗೆ ಬಂದ ಡೆತ್‌ನೋಟ್‌ನೊಂದಿಗೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. “ಆನ್‌ಲೈನ್ ಗೇಮ್‌ಗಳ ಪರಿಣಾಮಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ,” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.