Thursday, September 25, 2025

ಸತ್ಯ | ನ್ಯಾಯ |ಧರ್ಮ

ಮತಗಳ್ಳತನ ಆರೋಪದ ಎಫೆಕ್ಟ್: ಆನ್‌ಲೈನ್‌ನಲ್ಲಿ ಮತದಾರರ ಹೆಸರು ತೆಗೆದುಹಾಕಲು ಆಧಾರ್-ಲಿಂಕ್ಡ್ ಮೊಬೈಲ್ ಸಂಖ್ಯೆ ಕಡ್ಡಾಯ!

ದೆಹಲಿ: ಕೇಂದ್ರ ಚುನಾವಣಾ ಆಯೋಗ (ಇಸಿ) ತನ್ನ ಪೋರ್ಟಲ್‌ನಲ್ಲಿ ಇ-ಸೈನ್ (e-Sign) ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇನ್ನು ಮುಂದೆ, ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಆಧಾರ್ ಆಧಾರಿತ ದೃಢೀಕರಣವನ್ನು (Aadhaar-based authentication) ಕಡ್ಡಾಯಗೊಳಿಸಿದೆ.

ಈ ಹಿಂದೆ, ಅರ್ಜಿದಾರರು ತಮ್ಮ ಗುರುತನ್ನು ದೃಢೀಕರಿಸುವ ಅಗತ್ಯವಿಲ್ಲದೆ, ತಮ್ಮ ಮತದಾರರ ಗುರುತಿನ ಚೀಟಿ (EPIC) ಗೆ ಜೋಡಿಸಲಾದ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿ ನಮೂನೆಗಳನ್ನು ಸಲ್ಲಿಸುತ್ತಿದ್ದರು. ಆದರೆ ಈ ಹೊಸ ನಿಯಮದ ಪ್ರಕಾರ, ಅರ್ಜಿದಾರರ ಹೆಸರು ಆಧಾರ್ ಕಾರ್ಡ್‌ನಲ್ಲಿರುವ ಹೆಸರಿಗೆ ಹೊಂದಿಕೆಯಾಗಬೇಕು ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಬಳಸಿದರೆ ಮಾತ್ರ ಅರ್ಜಿಯನ್ನು ಪರಿಶೀಲನೆಗೆ ಪರಿಗಣಿಸಲಾಗುತ್ತದೆ. ಇನ್ನು ಮುಂದೆ, ಫಾರ್ಮ್ 6 (ಮತದಾರರ ನೋಂದಣಿ), ಫಾರ್ಮ್ 7 (ಸೇರ್ಪಡೆ/ತೆಗೆದುಹಾಕುವಿಕೆ ಕುರಿತು ಆಕ್ಷೇಪಣೆ) ಮತ್ತು ಫಾರ್ಮ್ 8 (ತಿದ್ದುಪಡಿ) ಸಲ್ಲಿಸುವ ಅರ್ಜಿದಾರರಿಗೆ ಈ ದೃಢೀಕರಣ ಕಡ್ಡಾಯ.

ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಈ ನಿಯಮ ಬದಲಾವಣೆ ಕುರಿತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್‌ ಕುಮಾರ್ ಅವರನ್ನು ಟೀಕಿಸಿ, “ನೀವು ಕಳ್ಳತನ ಮಾಡುತ್ತಿರುವಾಗ ನಾವು ನಿಮ್ಮನ್ನು ಹಿಡಿದ ನಂತರವೇ ನೀವು ಬೀಗ ಹಾಕುತ್ತಿದ್ದೀರಿ” ಎಂದು ವ್ಯಂಗ್ಯವಾಡಿದ್ದಾರೆ. “ನಾವು ಕಳ್ಳರನ್ನು ಸಹ ಹಿಡಿಯುತ್ತೇವೆ. ಸಿಐಡಿ (CID)ಗೆ ಸಾಕ್ಷ್ಯಗಳನ್ನು ಯಾವಾಗ ಹಸ್ತಾಂತರಿಸುತ್ತೀರಿ ಎಂದು ಹೇಳಿ” ಎಂದು ಅವರು ಮುಖ್ಯ ಚುನಾವಣಾ ಆಯುಕ್ತರನ್ನು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ರಾಹುಲ್ ಗಾಂಧಿ ಅವರು ಹಲವು ರಾಜ್ಯಗಳಲ್ಲಿ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಳು ಮತ್ತು ತೆಗೆದುಹಾಕುವಿಕೆಗಳು ಅಕ್ರಮವಾಗಿ ನಡೆದಿವೆ ಎಂದು ಪದೇ ಪದೇ ಆರೋಪಿಸಿದ್ದರು. ಅವರ ಆರೋಪಗಳು ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಹೊಸ ವ್ಯವಸ್ಥೆ ಜಾರಿಗೆ ಬರಲು ಕಾರಣವಾಗಿರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೂ, ರಾಹುಲ್ ಗಾಂಧಿ ಅವರು ಈ ನಿಯಮ ಬದಲಾವಣೆಯನ್ನು ಅಪರಾಧ ಒಪ್ಪಿಕೊಂಡಂತೆ ಎಂದು ಪರಿಗಣಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page