ದೆಹಲಿ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಪಡಿತರ ಚೀಟಿಗಳನ್ನು
ಇನ್ನು ಮುಂದೆ ವ್ಯಕ್ತಿಯ ಭಾರತೀಯ ಪೌರತ್ವದ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಪೊಲೀಸರಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ.
ಇದರ ಪ್ರಕಾರ, ವಿದೇಶಿ ಪ್ರಜೆಗಳೆಂದು ಶಂಕಿಸಲಾಗಿರುವ ಜನರಿಂದ ಪೌರತ್ವದ ಪುರಾವೆಯಾಗಿ ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟನ್ನು ಮಾತ್ರ ಸ್ವೀಕರಿಸಲಾಗುತ್ತದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದ ಸೂಚನೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಿಂದ ನಡೆಯುತ್ತಿರುವ ಪರಿಶೀಲನಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯ ಅಕ್ರಮ ವಿದೇಶಿ ಪ್ರಜೆಗಳು, ವಿಶೇಷವಾಗಿ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳು ಪತ್ತೆಯಾಗಿದ್ದಾರೆ ಎಂದು ಅವರು ಹೇಳಿದರು.
ಅವರು ಆಧಾರ್, ಪ್ಯಾನ್, ಪಡಿತರ ಕಾರ್ಡ್‌ಗಳು ಹಾಗೂ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (UNHCR) ನೀಡಿದ ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂದು ವಿವರಿಸಿದರು. ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, ಮತದಾರರ ಗುರುತಿನ ಚೀಟಿ ಅಥವಾ ಭಾರತೀಯ ಪಾಸ್‌ಪೋರ್ಟನ್ನು ಈಗ ಕಡ್ಡಾಯಗೊಳಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.