Thursday, June 13, 2024

ಸತ್ಯ | ನ್ಯಾಯ |ಧರ್ಮ

ಆಮ್‌ ಆದ್ಮಿ ನಾಯಕ ಸಂಜಯ್‌ ಸಿಂಗ್‌ ಬಿಡುಗಡೆ: ಇದು ಸಂಭ್ರಮದ ಸಮಯವಲ್ಲ ಹೋರಾಟದ ಸಮಯ ಎಂದ ಸಂಸದ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಬುಧವಾರ (ಏಪ್ರಿಲ್ 4) ತಿಹಾರ್ ಜೈಲಿನಿಂದ ಹೊರಬಂದರು.

ಜೈಲಿನಿಂದ ಹೊರಬಂದ ಕೂಡಲೇ ಇದು ಸಂಭ್ರಮಾಚರಣೆಯ ಸಮಯವಲ್ಲ ಹೋರಾಟದ ಸಮಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಜೈಲಿನಿಂದ ಹೊರಬಂದ ನಂತರ ಆಪ್ ನಾಯಕ ಸಂಜಯ್ ಸಿಂಗ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ್ದಾರೆ. ಅಲ್ಲಿಗೆ ತಲುಪಿದ ಅವರು ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಮತ್ತು ಮನೀಶ್ ಸಿಸೋಡಿಯಾ ಅವರ ಪತ್ನಿ ಸೀಮಾ ಸಿಸೋಡಿಯಾ ಅವರನ್ನು ಭೇಟಿಯಾದರು. ಇದಾದ ನಂತರ ಅವರು ಎಎಪಿ ಕೇಂದ್ರ ಕಚೇರಿಗೆ ತಲುಪಿದರು. ಎಎಪಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ಸುನೀತಾ ಕೇಜ್ರಿವಾಲ್ ಅವರ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ.

ನಿಮ್ಮ ಕಣ್ಣಲ್ಲಿ ನೀರು ತರಿಸುವ “ಸರ್ವಾಧಿಕಾರಿಗಳ” ಬಗ್ಗೆ ಎಚ್ಚರದಿಂದಿರಿ ಎಂದು ಸಂಜಯ್ ಸಿಂಗ್ ದೇಶದ ಜನರನ್ನು ಕೇಳಿಕೊಂಡರು. ಕೇಜ್ರಿವಾಲ್ ಅವರು ಜನರ ಮುಖದಲ್ಲಿ ಮಂದಹಾಸವನ್ನು ತರುತ್ತಾರೆ ಮತ್ತು ಅವರಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಾರೆ ಎಂದು ಅವರು ಹೇಳಿದರು. ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಆಪ್ ಕಾರ್ಯಕರ್ತರಿಗೆ, “ದೇಶದ ಸರ್ವಾಧಿಕಾರಿಗೆ ನನ್ನ ಧ್ವನಿ ಕೇಳುತ್ತಿದ್ದರೆ, ಇದನ್ನು ಅವರು ಕೇಳಿಸಿಕೊಳ್ಳಬೇಕು, ನಮ್ಮದು ಚಳವಳಿಯಿಂದ ಹುಟ್ಟಿದ ಆಮ್ ಆದ್ಮಿ ಪಕ್ಷ. ನಿಮ್ಮ ಬೆದರಿಕೆಗೆ ನಾವು ಹೆದರುವುದಿಲ್ಲ” ಎಂದು ಹೇಳಿದರು.

ಅರವಿಂದ್ ಕೇಜ್ರಿವಾಲ್ ಅವರ ಪತ್ನಿಯ ಕಣ್ಣಲ್ಲಿ ನೀರು ಕಂಡಿದ್ದೇನೆ ಮತ್ತು ದೆಹಲಿಯ ಎರಡು ಕೋಟಿ ಜನರು ಈ ಕಣ್ಣೀರಿಗೆ ಬಿಜೆಪಿಗೆ ಉತ್ತರಿಸುತ್ತಾರೆ ಎಂದು ಅವರು ಹೇಳಿದರು, “ದೇಶದಲ್ಲಿ ದೊಡ್ಡ ಮಟ್ಟದಲ್ಲಿ ದೌರ್ಜನ್ಯಗಳು ನಡೆಯುತ್ತಿವೆ, ನಾವೆಲ್ಲರೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ನಿಂತಿದ್ದೇವೆ” ಎಂದರು.

ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್ 13, 2023ರಿಂದ ರಾಷ್ಟ್ರ ರಾಜಧಾನಿಯ ಹೈ ಸೆಕ್ಯುರಿಟಿ ಜೈಲಿನಲ್ಲಿ ಇರಿಸಲಾಗಿತ್ತು. ರಾತ್ರಿ 8.11ಕ್ಕೆ ಮೂರನೇ ನಂಬರ್‌ನಿಂದ ಸೆಲ್‌ ಮೂಲಕ ಹೊರ ಬಂದರು. ಜಾಮೀನು ಪ್ರಕ್ರಿಯೆ ಮುಗಿಸಿ ಸಿಂಗ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಸಂಜಯ್ ಸಿಂಗ್ ಜೈಲಿನಿಂದ ಹೊರಬಂದಾಗ, ದೆಹಲಿ ಸರ್ಕಾರದ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಮತ್ತು ಎಎಪಿ ಶಾಸಕ ದುರ್ಗೇಶ್ ಪಾಠಕ್ ಜೈಲಿನ ಹೊರಗೆ ಹಾಜರಿದ್ದರು. ಭಾರದ್ವಾಜ್, “ಇದು ಸಂಭ್ರಮಾಚರಣೆಯ ಸಮಯವಲ್ಲ, ಹೋರಾಟದ ಸಮಯ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಸೇರಿದಂತೆ ಪಕ್ಷದ ನಾಯಕರು ಇನ್ನೂ ಜೈಲಿನಲ್ಲಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ನಮ್ಮ ಮೂವರು ನಾಯಕರು ಜೈಲಿನಲ್ಲಿದ್ದಾರೆ ಹಾಗಾಗಿ ಪಕ್ಷ ಹೋರಾಟ ಮುಂದುವರಿಸಲಿದೆ” ಎಂದರು.

ಎಲ್ಲ ಭ್ರಷ್ಟ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದೆ . ಇದೀಗ ಬಿಜೆಪಿಗೆ ಉತ್ತರಿಸುವ ಸಮಯ ಬಂದಿದೆ ಎಂದು ಎಎಪಿ ನಾಯಕ ಹೇಳಿದ್ದಾರೆ.

ಸಂಜಯ್ ಸಿಂಗ್ ಬುಧವಾರ ತಡರಾತ್ರಿ ಎಎಪಿ ಕೇಂದ್ರ ಕಚೇರಿಗೆ ತಲುಪಿದ್ದಾರೆ. ಆಮ್ ಆದ್ಮಿ ಪಕ್ಷ ಹೆದರುವುದಿಲ್ಲ ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು. “ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಕ್ಷದ ಹಿರಿಯ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದಾರೆ. ಎರಡು ಕೋಟಿ ಜನರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ದೆಹಲಿ ಜೈಲಿನಲ್ಲಿದ್ದಾರೆ. ನಾವೆಲ್ಲರೂ ಕೇಜ್ರಿವಾಲ್ ಜೊತೆಗಿದ್ದೇವೆ.” ಎಂದು ಬಿಜೆಪಿಯನ್ನು ಗುರಿಯಾಗಿಸಿಕೊಂಡ ಸಂಜಯ್ ಸಿಂಗ್, ರಾಜಧಾನಿಯಲ್ಲಿ ಉಚಿತ ನೀರು, ವಿದ್ಯುತ್ ಮತ್ತು ಮೊಹಲ್ಲಾ ಕ್ಲಿನಿಕ್‌ಗಳನ್ನು ಮುಚ್ಚುವುದಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆ ಬಯಸುಸುತ್ತಿದ್ದಾರೆ ಎಂದು ಆರೋಪಿಸಿದರು.

ಜೈಲಿನ ಹೊರಗೆ ಜಮಾಯಿಸಿದ ಎಎಪಿ ಬೆಂಬಲಿಗರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಿಂಗ್ ಬಿಡುಗಡೆಯ ಹಿನ್ನೆಲೆಯಲ್ಲಿ ಜೈಲಿನ ಹೊರಗೆ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ವಾಹನ ಹತ್ತಿ ಬೆಂಬಲಿಗರನ್ನು ಸ್ವಾಗತಿಸಿದರು. ಇದು ಹೋರಾಟದ ಸಮಯ ಜೈಲಿನಲ್ಲಿರುವ ನಮ್ಮ ನಾಯಕರೂ ಶೀಘ್ರದಲ್ಲೇ ಹೊರಗೆ ಬರುತ್ತಾರೆ ಎಂದು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು