Sunday, September 28, 2025

ಸತ್ಯ | ನ್ಯಾಯ |ಧರ್ಮ

ನೂತನ ಪಾರ್ಕಿಂಕ್‌ ನೀತಿಗೆ ಎಎಪಿ ವಿರೋಧ: ಹಿಂಪಡೆಯದಿದ್ದರೆ ಹೋರಾಟದ ಎಚ್ಚರಿಕೆ

ಬೆಂಗಳೂರು: ಬೆಂಗಳೂರಿನ ವಾಹನ ಸವಾರರಿಗೆ ಗುಣಮಟ್ಟದ ರಸ್ತೆ ಕಲ್ಪಿಸಲು ಸಾಧ್ಯವಾಗದ ಬಿಜೆಪಿಯ 40% ಸರ್ಕಾರವು ಈಗ ನೂತನ ಪಾರ್ಕಿಂಗ್‌ ನೀತಿ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ಮುಂದಾಗಿರುವುದು ಖಂಡನೀಯ ಎಂದು ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ಹೇಳಿದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್‌ ದಾಸರಿ, ಭಾನುವಾರವು ರಜಾ ದಿನವಾಗಿದ್ದರೂ ಕೂಡ ಸೆಪ್ಟೆಂಬರ್‌ 18ರ ಭಾನುವಾರದಂದು ಟೆಂಡರ್‌ಗೆ ಆಹ್ವಾನ ಕರೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾರ್ವಜನಿಕ ಸಂಗ್ರಹಣೆಯಲ್ಲಿ ಕರ್ನಾಟಕ ಪಾರದರ್ಶಕತೆ (ಕೆಟಿಪಿಪಿ) ಕಾಯಿದೆ ಪ್ರಕಾರ ಟೆಂಡರ್‌ಗೆ 40 ದಿನಗಳ ಕಾಲಾವಕಾಶ ನೀಡಬೇಕಾಗಿದ್ದರೂ ಕೇವಲ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಎಂಟು ವಲಯಗಳಲ್ಲೂ ಎಂಟು ಗುತ್ತಿಗೆದಾರರನ್ನು ಪೂರ್ವನಿಗದಿ ಮಾಡಿಕೊಂಡಿದ್ದು, ಕೇವಲ ನಾಮಕಾವಸ್ತೆಗಾಗಿ ಟೆಂಡರ್‌ ಕರೆಯಲಾಗಿದೆ ಎಂದು ಆರೋಪಿಸಿದರು.

ರಸ್ತೆ ಬದಿ ವಾಹನ ನಿಲ್ಲಿಸುವುದಕ್ಕೂ ಪ್ರಿಪೇಯ್ಡ್‌ ಶುಲ್ಕ ವಿಧಿಸುವ ನೂತನ ಪಾರ್ಕಿಂಗ್‌ ನೀತಿಯು ಸಾಮಾನ್ಯ ವಾಹನ ಸವಾರರಿಗೆ ಭಾರೀ ಹೊರೆಯಾಗಲಿದೆ. ಪ್ರತಿ ಗಂಟೆಗೆ 15ರಿಂದ 30 ರೂಪಾಯಿವರೆಗೆ ಪಾರ್ಕಿಂಗ್‌ ಶುಲ್ಕ ವಿಧಿಸುವುದರಿಂದ ಬಡ ಹಾಗೂ ಮಧ್ಯಮ ವರ್ಗದ ವಾಹನ ಸವಾರದ ಆದಾಯದ ದೊಡ್ಡ ಪಾಲು ಈ ಶುಲ್ಕಕ್ಕೇ ಖರ್ಚಾಗಲಿದೆ. ಇದರ ಜೊತೆಗೆ ತಮ್ಮ ಮನೆಯೆದುರು ಕಾರು ಪಾರ್ಕಿಂಗ್‌ ಮಾಡುವುದಕ್ಕೂ 3000ದಿಂದ 5000 ರೂಪಾಯಿ ನೀಡಿ ಪರವಾನಗಿ ಪಡೆಯಬೇಕೆಂಬ ನಿಯಮ ರೂಪಿಸಲಾಗಿದೆ. ವಾಹನ ಸವಾರರಿಗೆ ನೆರವಾಗುವಂತಹ ನೀತಿ ರೂಪಿಸುವ ಬದಲು ಅವರನ್ನು ಲೂಟಿ ಮಾಡಲು ಸರ್ಕಾರ ಮುಂದಾಗಿದೆ. ಈ ಜನವಿರೋಧಿ ನೀತಿಯನ್ನು ಹಿಂಪಡೆಯದಿದ್ದರೆ ಪಕ್ಷವು ಬೃಹತ್‌ ಹೋರಾಟ ರೂಪಿಸಲಿದೆ ಎಂದು ಮೋಹನ್‌ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಸುರೇಶ್‌ ರಾಥೋಡ್‌ ಮಾತನಾಡಿ, ಪಾರ್ಕಿಂಗ್‌ಗೆ ದುಬಾರಿ ಶುಲ್ಕ ವಿಧಿಸಲು ಸರ್ಕಾರ ಮುಂದಾಗಿರುವುದನ್ನು ಬೆಂಗಳೂರಿನ ಜನರು ಈಗ ಸಹಿಸಿಕೊಂಡರೆ, ಮುಂದಿನ ದಿನಗಳಲ್ಲಿ ಸರ್ಕಾರವು ಶುಲ್ಕವನ್ನು ಇನ್ನಷ್ಟು ಏರಿಕೆ ಮಾಡುವ ಸಾಧ್ಯತೆಯಿದೆ. ವರ್ಷಕ್ಕೆ ಸುಮಾರು 200 ಕೋಟಿ ರೂಪಾಯಿಯನ್ನು ಈ ಮೂಲಕ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಇದೊಂದು ದಂಧೆಯಾಗಿ ಮಾರ್ಪಾಡಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಜನರು ಕಟ್ಟುವ ಶುಲ್ಕವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೇಬು ಸೇರಲಿದೆ. ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಹಾಗೂ ರಸ್ತೆಗುಂಡಿ ಸಮಸ್ಯೆಯನ್ನು ಬಗೆಹರಿಸಲು ಮೀನಾಮೀಷ ಎಣಿಸುವ ಜನವಿರೋಧಿ ಸರ್ಕಾರವು ಜನರಿಂದ ವಸೂಲಿ ಮಾಡಲು ಮಾತ್ರ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಖಂಡನೀಯ ಎಂದು ಮೋಹನ್‌ ದಾಸರಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page