ಆರ್ಟ್ಸ್ ಯಾಕೆ ತಗೊಂಡೆ? ಆರ್ಟ್ಸ್ ಓದಿ ಮುಂದೆ ಏನ್ ಮಾಡಬೇಕು ಅಂದುಕೊಂಡಿದ್ದೀಯಾ? ಎಂಬುದು ಕಾಲೇಜು ಮೆಟ್ಟಲೇರಿದ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು. ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯ ಗೌತಮಿ ತಿಪಟೂರು ಬರೆದ ಈ ಲೇಖನ ಕಲಾ ವಿಭಾಗವನ್ನು ತಾತ್ಸಾರ ಭಾವದಿಂದ ಕಾಣುವ ಎಲ್ಲರ ಕಣ್ಣು ತೆರೆಸುವಂತಿದೆ.
ಪ್ರತಿ ಸಾರಿ ಯಾರಾದರೂ ನನ್ನನ್ನು ಏನು ಓದುತ್ತಿದ್ದೀಯಾ? ಎಂದು ಕೇಳಿದರೆ ನನಗೆ ಮುಂದಿನ ಇಪ್ಪತ್ತು ನಿಮಿಷ ಏನು ನಡೆಯುತ್ತದೆಂದು ತಿಳಿದುಬಿಡುತ್ತದೆ.
ಅಯ್ಯೋ ಆರ್ಟ್ಸ್ ಓದ್ತಿದ್ದಿಯ..!? ಯಾಕೆ.. ? ಟೆನ್ತ್ ನಲ್ಲಿ ಒಳ್ಳೆಯ ಮಾರ್ಕ್ಸ್ ಬಂದಿತ್ತಲ್ವಾ..? ಅಲ್ಲಾ.. ಆರ್ಟ್ಸ್ ಓದಿ ಮುಂದೆ ಏನ್ ಮಾಡಬೇಕು ಅಂದುಕೊಂಡಿದ್ದೀಯಾ ? ಆರ್ಟ್ಸ್ ಗೆ ಇಂಡಿಯಾದಲ್ಲಿ ಜಾಸ್ತಿ ಸ್ಕೋಪ್ ಇಲ್ಲ ಅಲ್ವಾ ? ಆದ್ರೂ ಆರ್ಟ್ಸ್ ಯಾಕೆ ತಗೊಂಡೆ ? ಹೀಗೆ ಹಲವು ಪ್ರಶ್ನೆಗಳ ಸುರಿಮಳೆಯಾಗುತ್ತದೆ. ಅವರ ಈ ಎಲ್ಲಾ ಪ್ರಶ್ನೆಗಳು ಆರ್ಟ್ಸ್ ತೆಗೆದು ಕೊಂಡರೆ ಮುಂದಿನ ಭವಿಷ್ಯವೇನು? ಎಂಬುದು.
ಹೌದು. ಉದ್ಯೋಗಾವಕಾಶ ತುಂಬಾ ಮುಖ್ಯ. ನಾವು ಓದುವ ಸಬ್ಜೆಕ್ಟ್ ನಮ್ಮ ಫ್ಯೂಚರ್ ನಲ್ಲಿ ಕೆಲಸಕ್ಕೆ (employment) ಸಹಾಯ ಆಗಬೇಕು. ನಾನೂ ಹೀಗೆಯೇ ಯೋಚಿಸಿ, ಎಲ್ಲರಂತೆ ಪಿಯುಸಿ ಯಲ್ಲಿ ವಿಜ್ಞಾನ (p.c.m.c.s ) ವಿಷಯ ತೆಗೆದುಕೊಂಡೆ. ಎರಡು ತಿಂಗಳು ಕಳೆಯುವುದರೊಳಗೆ ನನ್ನೊಳಗೆ ಏನೋ ಖಾಲಿ ಎನ್ನಿಸ ತೊಡಗಿತು. ನಾನು ಓದುತ್ತಿರುವ ಸಬ್ಜೆಕ್ಟ್ ನನ್ನದಲ್ಲ ಎನಿಸುತ್ತಿತ್ತು. ಸ್ವತಃ ನಾನೇ ಸೈನ್ಸ್ ಆಯ್ಕೆ ಮಾಡಿ ಕೊಂಡಿದ್ದರೂ ನನಗೆ ನಾನು ಮಾಡುತ್ತಿರುವುದರಲ್ಲಿ ತೃಪ್ತಿ ಇರಲಿಲ್ಲ. ಬರಿ ಕೆಲಸದ ಬಗ್ಗೆ ಯೋಚಿಸಿಕೊಂಡು ಸೈನ್ಸ್ ತೆಗೆದುಕೊಂಡೆನಲ್ಲ ಎನ್ನಿಸಲು ಶುರುವಾಯಿತು. ಇದನ್ನೆಲ್ಲ ಅಪ್ಪನಿಗೆ ಹೇಳಿದೆ. ಅಪ್ಪ ಕೂಡಲೇ ಬಂದು ಸೈನ್ಸ್ ನಿಂದ ಆರ್ಟ್ಸ್ ಗೆ ಬದಲಾವಣೆ ಮಾಡಿಸಿದರು.
ನನಗೆ ಆಗಲೇ ಅನ್ನಿಸಿದ್ದು, ನಾವು ಉದ್ಯೋಗಾವಕಾಶ (employability) ಮತ್ತು ಟ್ರೆಂಡ್ ನಿಂದ ಪ್ರಭಾವಿತರಾಗಿ ನಿಜವಾಗಿಯೂ ನಮಗೆ ಏನು ಬೇಕು ಎಂಬುದನ್ನೇ ಮರೆತುಬಿಡುತ್ತೇವೆ ಎಂದು. ಹೌದು. ಉದ್ಯೋಗ ಮುಖ್ಯ. ಆದರೆ ಅದೇ ಫ್ಯೂಚರ್ ಅಲ್ಲವಲ್ಲ. ನಾವು ಮಾಡುವ ಕೆಲಸ / ಉದ್ಯೋಗ ನಮ್ಮ ಜೀವನದ ಒಂದು ಭಾಗವಷ್ಟೇ. ಆದರೆ ಅದೇ ಜೀವನ ಅಲ್ಲವಲ್ಲ.
ನಮ್ಮ ಆಸಕ್ತಿ ಮತ್ತು ನಾವು ಆಯ್ಕೆಮಾಡಿಕೊಳ್ಳುವ ವಿಷಯವು ನಾವು ಹೇಗೆ ಬೆಳೆದಿದ್ದೇವೆ, ನಮ್ಮ ಸುತ್ತಲಿನ ವಾತಾವರಣವೇನಿತ್ತು, ಚಿಕ್ಕ ವಯಸ್ಸಿನಲ್ಲಿ ನಾವು ಯಾವ ರೀತಿಯ ಬಾಲ್ಯವನ್ನು ಅನುಭವಿಸಿದ್ದೇವೆ ಎಂಬೆಲ್ಲದರ ಮೇಲೆ ಅವಲಂಬಿತವಾಗಿದೆ. ಎಂದರೆ ಯಾವ ಕಾರ್ಟೂನ್ ನೋಡುತ್ತಿದ್ದೆವು, ಯಾವ ಪುಸ್ತಕ ಓದುತ್ತಿದ್ದೆವು, ನಮ್ಮ ಚಿಕ್ಕ ವಯಸ್ಸಿನ ಫ್ರೆಂಡ್ಸ್ ಹೇಗಿದ್ದರು? ಯಾವೆಲ್ಲಾ ಆಟಗಳನ್ನು ಆಡುತ್ತಿದ್ದೆವು…ಮುಂತಾದ ಅಂಶಗಳು ಕೂಡ ನಮ್ಮ ಆಸಕ್ತಿಗಳಿಗೆ ಕಾರಣವಾಗಿರುತ್ತವೆ. ಈ ಅಂಶಗಳು ನಮ್ಮ ಫ್ಯೂಚರ್ ಅಷ್ಟೇ ಅಲ್ಲದೆ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತವೆ.
ಉದಾಹರಣೆಗೆ ಈ semester ನಲ್ಲಿ ನಾನು ‘Reading graphic narration’ ಎನ್ನುವ ಸಬ್ಜೆಕ್ಟ್ ತೆಗೆದುಕೊಂಡಿದ್ದೇನೆ. ಅದರಲ್ಲಿ ಕಾಮಿಕ್ ಪುಸ್ತಕಗಳು, ಮಾಂಗ, ಮಕ್ಕಳ ಚಿತ್ರಕಥೆ, ಗ್ರಾಫಿಕ್ಸ್ ನಾವೆಲ್ಸ್ ಗಳ ಬಗ್ಗೆ ಓದುತ್ತೇವೆ.
ಒಂದು ದಿನ ಕ್ಲಾಸಿನಲ್ಲಿ ಸೂಪರ್ ಮ್ಯಾನ್ ನಾವೆಲ್ಸ್ ಎಂದರೆ ಸ್ಪೈಡರ್ ಮ್ಯಾನ್, ಬ್ಯಾಟ್ಸ್‌ಮನ್ ಮಾರ್ವೆಲ್ ಸೀರೀಸ್ ಮುಂತಾದ ಬಹಳ ಜನಪ್ರಿಯ ಕಾಮಿಕ್ ಪುಸ್ತಕಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವಿಷಯಗಳು ಎಲ್ಲರಿಗೂ ಚಿಕ್ಕಂದಿನಿಂದ ಚಿರಪರಿಚಿತವಾದ್ದರಿಂದ ಹೆಚ್ಚಾಗಿ ಎಲ್ಲಾ ವಿದ್ಯಾರ್ಥಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಅವರವರ ಬಾಲ್ಯದಲ್ಲಿ ಈ ಕಾಮಿಕ್ ಪುಸ್ತಕಗಳು ಎಷ್ಟು ಮುಖ್ಯವಾದ ಪಾತ್ರ ವಹಿಸಿದವೆಂದು ಹಾಗೂ ಈ ಕಾಮಿಕ್ ಪುಸ್ತಕಗಳ visual version ಎಂದರೆ ಮಾರ್ವೆಲ್ ಸೀರೀಸ್, ಮೂವೀಸ್, ಕಾಮಿಕ್ ಪುಸ್ತಕ ಪ್ರೇರಿತ ಟಿ ವಿ ಶೋಗಳು ಅವರ ಬಾಲ್ಯ ಮತ್ತು ಇಮ್ಯಾಜಿನೇಷನ್ ಗಳ ಮೇಲೆ ಎಷ್ಟು ಪರಿಣಾಮ ಬೀರಿತ್ತೆಂದು ಹೇಳುತ್ತಿದ್ದರು. ನಾನು ಒಂದು ಬದಿಯಲ್ಲಿ ಕುಳಿತು ಈ ಎಲ್ಲವನ್ನು ಕುತೂಹಲ ಮತ್ತು ಆಶ್ಚರ್ಯದಿಂದ ನೋಡುತ್ತಿದ್ದೆ. ನಾನು ಏಕೆ ಅವರು ಮಾತನಾಡುತ್ತಿರುವ ಯಾವುದನ್ನೂ ನೋಡಿಲ್ಲ? ಯಾಕೆ ಎಲ್ಲ ಮಕ್ಕಳ ಬಾಲ್ಯದ ಮುಖ್ಯ ಭಾಗವಾಗಿರುವ ಈ ಕಾಮಿಕ್ ಗಳು, ಕಾರ್ಟೂನ್ ಗಳು ನನ್ನ ಬಾಲ್ಯದಲ್ಲಿ ಇರಲಿಲ್ಲ? ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತಿದ್ದೆ.
ಹೀಗೇ ಯೋಚಿಸುತ್ತಾ ನನ್ನ ಬಾಲ್ಯ ಹೇಗಿತ್ತೆಂದು ನೆನೆದು ಕೊಳ್ಳುತ್ತಿದ್ದೆ. ಹೌದು ನಾನು ಈ ಯಾವ ಜನಪ್ರಿಯ ಕಾಮಿಕ್ ಪುಸ್ತಕಗಳನ್ನಾಗಲಿ, ಟಿವಿ ಶೋಗಳನ್ನಾಗಲಿ ನೋಡಿಲ್ಲ. ನನ್ನ ಬಾಲ್ಯ ನೆನೆಸಿಕೊಂಡರೆ ಬಹುವಾಗಿ ಕಣ್ಣು ಮುಂದೆ ಬರುವುದು ನಾಟಕಗಳು, ನೃತ್ಯ, ಸಂಗೀತ. ಹಾಗೂ ಪುಸ್ತಕಗಳೆಂದರೆ ಮಲೆಗಳಲ್ಲಿ ಮದುಮಗಳು, ತಲೆಮಾರು, ತೊತ್ತೊ ಚಾನ್ ಮುಂತಾದ ಕಾದಂಬರಿಗಳು. ನಾನು ಟಿವಿಗಿಂತ ಹೆಚ್ಚಾಗಿ ನೋಡಿರುವುದು ನಾಟಕವನ್ನು. ಕೆಲವು ನಾಟಕಗಳನ್ನಂತು ಮತ್ತೆ ಮತ್ತೆ ಏಳೆಂಟು ಬಾರಿ ನೋಡಿರುತ್ತಿದ್ದೆ. ನನ್ನ ಅಪ್ಪ ಅಮ್ಮ ಕಲಾವಿದರಾದುದರಿಂದ ನಮ್ಮ ಮನೆಯ ವಾತಾವರಣ ಎಲ್ಲರ ಮನೆಗಳಿಗಿಂತ ತುಂಬಾ ಬೇರೆಯಾಗಿತ್ತು.
ಮನೆಯಲ್ಲಿಯೇ ಥಿಯೇಟರ್ ಕ್ಲಾಸ್, ಡಾನ್ಸ್ ಕ್ಲಾಸ್, ಸಂಗೀತ ಕ್ಲಾಸ್ ಗಳು ನಡೆಯುತ್ತಿದ್ದವು. ಜೊತೆಗೆ ಒಂದು ಪುಟ್ಟ ಲೈಬ್ರರಿಯೂ ಇತ್ತು. ಮನೆಯಲ್ಲಿ ಪುಸ್ತಕಗಳ ಬಗೆಗಿನ ಚರ್ಚೆ, ಮತ್ತು ನನಗೆ ಪ್ರತಿದಿನ ಕಥೆಗಳನ್ನು ಹೇಳಿ ಮಲಗಿಸುತ್ತಿದ್ದ ಅಕ್ಕ… ಹೀಗೆ, ಈ ಎಲ್ಲವೂ ಬಹಳ ವಿಭಿನ್ನವಾದ ವಾತಾವರಣವನ್ನು ನನ್ನ ಸುತ್ತ ಸೃಷ್ಟಿಸಿತ್ತು.
ಸ್ಕೂಲ್ ? ಓ… ಪ್ರೈಮರಿ ಸ್ಕೂಲ್ ನಲ್ಲಿ ಇದ್ದಾಗ ನನಗೆ ಹೆಚ್ಚಾಗಿ ಶಾಲೆಗೆ ಹೋದ ನೆನಪೇ ಇಲ್ಲ. ಯಾವಾಗಲೂ ಅಪ್ಪ ಅಮ್ಮ ಎಲ್ಲೇ ಹೊರಟರು ನಾನು ಅವರ ಬಾಲದಂತೆ ಎಲ್ಲಾ ಕಡೆಗೂ ಹೋಗುತ್ತಿದ್ದೆ. ನಾಟಕ ನೋಡಲೆಂದೋ ಅಥವಾ ಯಾವುದೋ ನನಗೆ ಆ ವಯಸ್ಸಿನಲ್ಲಿ ಅರ್ಥವಾಗದ ಸೆಮಿನಾರ್ ಅಟೆಂಡ್ ಮಾಡಲೆಂದೋ ಒಂದಲ್ಲ ಇನ್ನೊಂದು ಕಾರಣದಿಂದ ಯಾವಾಗಲೂ ಶಾಲೆಗೆ ರಜೆ ಹಾಕುತ್ತಿದ್ದೆ. ಇದೇ ಕಾರಣಕ್ಕೆ ನನ್ನ ಅಪ್ಪ ಅಮ್ಮ ಬಹಳ ಜನಗಳ ಹತ್ತಿರ “ನೀವು ಹೀಗೆ ಈ ಮಗುವನ್ನು ಹಾಳು ಮಾಡಿ ಬಿಡುತ್ತೀರಾ” ಎಂದು ಹೇಳಿಸಿ ಕೊಂಡುದೂ ಇದೆ. ಹಾಗಂತ ನಾನು ಶಾಲೆಯಲ್ಲಿ ಎಂದೂ ಹಿಂದೆ ಬಿದ್ದಿರಲಿಲ್ಲ. ಜೊತೆಗೆ ಶಾಲೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಭಾಷಣ ಏನೂ ನಡೆದರೂ ಗೌತಮಿ ಭಾಗವಹಿಸುವುದು ಖಂಡಿತವಾದ್ದರಿಂದ, ಶಾಲೆಯಲ್ಲಿ ಎಲ್ಲಾ ಶಿಕ್ಷಕರಿಗೂ ನಾನು ಚಿರಪರಿಚಿತಳು. ಹೀಗೆ, ನನ್ನ ಬಾಲ್ಯ ಬೇರೆ ಮಕ್ಕಳಿಗಿಂತ ಭಿನ್ನವಾಗಿದ್ದರಿಂದ ನನಗೆ ಕ್ಲಾಸಿನಲ್ಲಿ ಚರ್ಚಿಸುತ್ತಿದ್ದ ಯಾವುದೇ ಕಾಮಿಕ್ ಪುಸ್ತಕಗಳಾಗಲಿ, ಮೂವಿಗಳಾಗಲಿ ಹೆಚ್ಚಾಗಿ ಪರಿಚಯವಿರಲಿಲ್ಲ.
ನನ್ನ ಕಾಲೇಜಿನ ಸಹಪಾಠಿಗಳ ಜೊತೆಗೆ ನನ್ನ ಬಾಲ್ಯವನ್ನು ಹೋಲಿಸಿದರೆ ಬಹಳ ವ್ಯತ್ಯಾಸವಿದೆ. ಇದೇ ರೀತಿ ನಮ್ಮ ಆಸಕ್ತಿಗಳು ಮತ್ತು ವ್ಯಕ್ತಿತ್ವ ಕೂಡ ನಮ್ಮ ಬಾಲ್ಯ, ಬೆಳೆದ ವಾತಾವರಣ, ನಮ್ಮ ಸುತ್ತಲಿನ ಜನ ಮತ್ತು ಅವರ ವಿಚಾರಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ- ನಾನು ಹಾಗೂ ನನ್ನ ಸಹಪಾಠಿಗಳು ಒಂದೇ ವಿಷಯವನ್ನು ಓದುತ್ತಿದ್ದರೂ ಪ್ರತಿಯೊಬ್ಬರ ಗ್ರಹಿಕೆ ಬೇರೆ ಬೇರೆ ರೀತಿಯದ್ದಾಗಿರುತ್ತದೆ. ಒಂದೇ ವಿಷಯವನ್ನು ಚರ್ಚಿಸುತ್ತಿದ್ದರು ಒಬ್ಬೊಬ್ಬರ ಅಭಿಪ್ರಾಯ ವಿಭಿನ್ನವಾಗಿರುತ್ತದೆ. ಹೀಗೆ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ, ಆಸಕ್ತಿ, ಹಾಗು ದೃಷ್ಟಿಕೋನಗಳ ಮೇಲೆ ಅವರು ಬೆಳೆದಿರುವ ಪರಿಸರದ ಮತ್ತು ಓದುವ ವಿಷಯಗಳ ಪ್ರಭಾವ ಬಹಳ ಗಾಢವಾಗಿರುತ್ತದೆ. ನಮ್ಮ ಸುತ್ತಲಿನ ಪರಿಸರ ನಮ್ಮ ವ್ಯಕ್ತಿತ್ವವನ್ನು ಮತ್ತು ಯೋಚನೆಗಳನ್ನು ಕಟ್ಟುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ನಾವು ಯಾವ ಸಬ್ಜೆಕ್ಟ್ ನಲ್ಲಿ ಮತ್ತು ಸ್ಟ್ರೀಮ್ (streem)ನಲ್ಲಿ ಆಸಕ್ತಿ ವಹಿಸುತ್ತೇವೆ ಎನ್ನುವುದು ನಮ್ಮ ವ್ಯಕ್ತಿತ್ವದ ಒಂದು ಭಾಗವಾಗಿರುತ್ತದೆ. ಅದನ್ನು materialistic ಆಗಿ ನೋಡುವುದು ಅಷ್ಟು ಸರಿಯಲ್ಲ ಅನ್ನಿಸುತ್ತದೆ. ಎಲ್ಲರಿಗೂ ಉದ್ಯೋಗಾವಕಾಶದ ಪ್ರಶ್ನೆ ಬಂದೇ ಬರುತ್ತದೆ. ಆದರೆ ನಾವು ಆಸಕ್ತಿ ಇಲ್ಲದ ವಿಷಯವನ್ನು ಕೇವಲ ಕೆಲಸಕ್ಕಾಗಿ ಇಷ್ಟವಿಲ್ಲದೆ ಕಷ್ಟಪಟ್ಟು ಓದಿದರೆ ಏನು ಪ್ರಯೋಜನ. ದುಡ್ಡು ಬರಬಹುದು ಜೀವನ ಕಂಫರ್ಟೆಬಲ್ (comfortable) ಆಗಿ ಇರಬಹುದು ಆದರೆ ಜೀವನದಲ್ಲಿ ಖುಷಿ ಮತ್ತು ಸಂತೃಪ್ತಿ ಕೂಡ ಮುಖ್ಯವಲ್ಲವೇ?
ಗೌತಮಿ ತಿಪಟೂರು
ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ʼಲಿಬರಲ್ ಆರ್ಟ್ಸ್ʼ ಓದುತ್ತಿದ್ದಾರೆ.