ರಾಜ್ಯದಲ್ಲಿ ಬಾರೀ ಸಂಚಲನಕ್ಕೆ ಕಾರಣವಾದ ಬ್ರಾಹ್ಮಣ ಮಠವೊಂದರ ದೌರ್ಜನ್ಯ ಪ್ರಕರಣದ ಪ್ರತ್ಯಕ್ಷದರ್ಶಿ ಸಾಕ್ಷಿ ಅಭಿರಾಮ್ ಹೆಗಡೆ ದುರಂತ ಅಂತ್ಯ ಕಂಡಿದ್ದಾರೆ. ಅಷ್ಟಕ್ಕೂ ಅಭಿರಾಮ್ ಹೆಗಡೆ ಸಾವಿಗೆ ಕಾರಣರಾದವರು ಯಾರು? ಇದ್ದ ಏಕೈಕ ಸಾಕ್ಷಿಯ ನಂತರ ಪ್ರಕರಣದ ಹಾದಿ ಎಷ್ಟು ಸಾಗಬಹುದು.. ಈ ಕಥೆಯನ್ನು ಓದಿ.
ರಾಜ್ಯದಲ್ಲಿ ಬಾರೀ ಸಂಚಲನಕ್ಕೆ ಕಾರಣವಾಯಿತು ರಾಜ್ಯ ಪ್ರತಿಷ್ಠಿತ ಬ್ರಾಹ್ಮಣ ಮಠದ ಸ್ವಾಮಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದ ಪ್ರಮುಖ ಸಾಕ್ಷಿ ಅಭಿರಾಮ್ ಹೆಗಡೆ(31) ಅಕಾಲಿಕ ಮರಣ ಪ್ರಕರಣ. ಶನಿವಾರ ಮಧ್ಯಾಹ್ನ ಸಾಗರ ತಾಲೂಕಿನ ಕಾರ್ಗಲ್ ನಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ, ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಸಂಜೆ 7 ಗಂಟೆ ಆಸುಪಾಸಿನಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಅಭಿರಾಮ್ ಹೆಗಡೆ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಯಾರು ಈ ಅಭಿರಾಮ್? ಈತನ ಹಿನ್ನೆಲೆ ಏನು?
ಮಲೆನಾಡಿನ ಸಾಗರ ತಾಲ್ಲೂಕಿಗೆ ಅಂಟಿಕೊಂಡಿರುವ ಶಿರಸಿಯ ಹಣಜಿಬೈಲಿನ ಪ್ರತಿಷ್ಠಿತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಭಿರಾಮ್ ಹೆಗಡೆಯವರ ತಂದೆ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದವರು. ಇವರ ತಾಯಿಯ ತಂದೆ (ಅಭಿರಾಮ್ ಅಜ್ಜ) ಟಿ.ಜಿ.ರಾವ್ ಒಬ್ಬ ಬ್ರಾಹ್ಮಣ ಮುಖ್ಯ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸಿದವರು. ಅಭಿರಾಮ್ ಹೆಗಡೆಗೆ ಅತಿ ಚಿಕ್ಕ ವಯಸ್ಸಿನಲ್ಲೇ ಮಠದ ಮತ್ತು ಸ್ವಾಮಿಯ ನೇರ ಸಂಪರ್ಕ ಸಿಕ್ಕಿದೆ. ಬೇರಾವುದೇ ಉನ್ನತ ಕಲಿಕೆ ಸಿಗದೇ ಮಠದ ಮತ್ತು ಸ್ವಾಮಿಗಳ ಸೇವೆ ಮತ್ತು ಧಾರ್ಮಿಕ ಕೆಲಸಗಳಿಗೆ ಈತನ ಕೆಲಸ, ಬಾಲ್ಯ ಮುಡಿಪಾಗಿತ್ತು. ಮೂವರು ಅಕ್ಕಂದಿರ ನಂತರ ತುಂಬಾ ತಡವಾಗಿ ಹುಟ್ಟಿದ ಅಭಿರಾಮ್ ಕುಟುಂಬದ ಅತ್ಯಂತ ಕಿರಿಯ ಸಹೋದರ. ಅಷ್ಟೇ ಪ್ರೀತಿಯ ಮಗನಾಗಿದ್ದ. ಚಿಕ್ಕ ವಯಸ್ಸಿನಲ್ಲೇ ಬ್ರಾಹ್ಮಣ ಮಠಕ್ಕೆ ಸೇರಿಸಲಾಯಿತು, ಮಠದ ಹೆಚ್ಚಿನ ಜವಾಬ್ದಾರಿ ಕೂಡ ಅಭಿರಾಮ್ ಹೆಗಲಿಗೇರಿತ್ತು.
ಸಹಜವಾಗಿ ಅಜ್ಜನ ಉನ್ನತ ಹುದ್ದೆ, ಕುಟುಂಬದ ಹಿನ್ನೆಲೆಯಿಂದ ಮಠದ ಸ್ವಾಮಿಗೂ ಬಹಳ ಬೇಗನೇ ಆಪ್ತನಾಗಿದ್ದ ಅಭಿರಾಮ್. ಇದೇ ಕಾರಣದಿಂದ ಮುಂದೊಂದು ದಿನ ಸ್ವಾಮಿಯ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸರ್ಕಾರದ ಪರವಾಗಿ ಪ್ರಮುಖ ಮತ್ತು ಬಲವಾದ ಸಾಕ್ಷಿಯಾಗಿ ಅಭಿರಾಮ್ ನಿಲ್ಲಬಹುದು ಎಂದು ಸ್ವತಃ ಮಠದ ಸ್ವಾಮಿ ಕೂಡಾ ನಿರೀಕ್ಷಿಸಿರಲಿಲ್ಲವೇನೋ!? ಹೌದು. ತಾನು ಆ ಮಠದ ಸ್ವಾಮಿಯ ಲೈಂಗಿಕ ಚಟುವಟಿಕೆಯನ್ನು ನೇರವಾಗಿ ನೋಡಿರುವುದಾಗಿ ನ್ಯಾಯಾಧೀಶರ ಮುಂದೆ ನಿಂತು ಹೇಳಿದ ಏಕೈಕ ಸಾಕ್ಷಿ ಈಗ ದುರಂತ ಅಂತ್ಯ ಕಂಡಿದ್ದಾನೆ.
ರಾಜ್ಯದಲ್ಲೇ ದೊಡ್ಡದಾಗಿ ಸಂಚಲನ ಮೂಡಿಸಿದ್ದ, ಈಗಲೂ ಆ ಪ್ರಕರಣ ಎಂದಾಗ ಎಲ್ಲರ ಕುತೂಹಲ ಹೆಚ್ಚಾಗಲು ಕಾರಣವಾಗಿರೋದು ಇದೇ ವ್ಯಕ್ತಿಯ ಬಾಯಿಂದ ಬಂದ ಕೆಲವು ಸಾಕ್ಷಿಗಳು. ಅಭಿರಾಮ್ 9 ವರ್ಷದ ವಯಸ್ಸಿನಲ್ಲೇ ಸ್ವಾಮಿಯ ಲೈಂಗಿಕ ಚಟುವಟಿಕೆಯನ್ನು ನೇರವಾಗಿ ಕಂಡ ಹಿನ್ನೆಲೆಯಲ್ಲಿ ಆತನೂ ಅಷ್ಟೇ ನೇರವಾಗಿ ಇದನ್ನು ಸ್ವಾಮಿಯ ಬಳಿ ಕೇಳಿರುತ್ತಾನೆ. ಇದಕ್ಕೆ ಆ ಸ್ವಾಮಿ ನಾನು ನಿನಗೆ ತಂದೆಯ ಸಮಾನ, ಆಕೆ (ಸ್ವಾಮಿಯ ಜೊತೆಗೆ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಹೆಣ್ಣು) ನಿನ್ನ ತಾಯಿಯ ಸಮಾನ ಎಂದು ಆತನಿಗೆ ಕಥೆ ಕಟ್ಟಿ ಹೇಳಿರುತ್ತಾನೆ. 9 ವರ್ಷ ವಯಸ್ಸು ಎಂದರೆ ಇನ್ನೂ ಏನೇನೂ ಅರಿಯದ ಮುಗ್ಧತೆ. ಆ ಅವಧಿಯಲ್ಲೇ ಅಭಿರಾಮ್ ತನ್ನ ಮನಸ್ಸಿನಲ್ಲಿ ಸ್ವಾಮಿ ಹೇಳಿದ ‘ತಂದೆ-ತಾಯಿ’ಯ ಕಥೆಯನ್ನು ಬಲವಾಗಿ ನಂಬುತ್ತಾನೆ. ಆದರೆ ಕೇವಲ 2 ವರ್ಷಗಳ ಅವಧಿಯಲ್ಲಿ ತಾಯಿಯ ಜಾಗದಲ್ಲಿ ಹಲವಷ್ಟು ಮಂದಿ ಬಂದಿರುತ್ತಾರೆ. ಇಂತಹ ಚಟುವಟಿಕೆ ಅಭಿರಾಮ್ ಮನಸ್ಸಿನಲ್ಲಿ ಬಹಳ ಆಳವಾಗಿ, ಅತ್ಯಂತ ಪರಿಣಾಮಕಾರಿಯಾಗಿ ಬೇರೂರುತ್ತದೆ. ತಂದೆ-ತಾಯಿಯ ಸ್ಥಾನದಲ್ಲಿ ಇರುವವರ ನಡುವೆ ನಡೆಯುವ ಇಂತಹ ಅಸಹಜ ಅವ್ಯವಹಾರದಿಂದ ಅಭಿರಾಮ್ ಖಿನ್ನತೆಗೆ ಒಳಗಾಗುತ್ತಾನೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಆಗ ಅಭಿರಾಮ್ ಗೆ 13 ವರ್ಷದ ಆಸುಪಾಸು.
ಮೊದಮೊದಲು ಇದರ ಬಗ್ಗೆ ಸಣ್ಣದಾಗಿ ಸ್ವಾಮಿಯನ್ನು ಪ್ರಶ್ನಿಸುತ್ತಿದ್ದ ಅಭಿರಾಮ್ ನಂತರ ಸ್ವಾಮೀಜಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಾನೆ. ನಂತರ ಇದ್ಯಾಕೋ ಸಮಸ್ಯೆ ಬಿಗಡಾಯಿಸಬಹುದು ಎಂದೇ ಅರಿತ ಸ್ವಾಮಿಗಳು ಮತ್ತು ಮಠದ ಆಡಳಿತ ಮಂಡಳಿ ಅಭಿರಾಮ್ ನನ್ನು ಏಕಾಏಕಿ ಮಠದಿಂದ ಆಚೆಗೆ ಹಾಕುತ್ತಾರೆ. ಒಂದು ಕಡೆ ಕುಟುಂಬದಿಂದ ಅತಿ ಚಿಕ್ಕ ವಯಸ್ಸಿನಲ್ಲೇ ಬೇರ್ಪಟ್ಟು ಮಠದ ಧಾರ್ಮಿಕ ಕಾರ್ಯಕ್ಕೇ ತನ್ನನ್ನು ಮುಡಿಪಾಗಿಸಿಕೊಂಡಿದ್ದರಿಂದ ಕುಟುಂಬದ ಸಂಪರ್ಕದಿಂದಲೂ ದೂರ, ಇನ್ನೊಂದು ಕಡೆ ಮಠದಲ್ಲೂ ‘ವಿಶ್ವಾಸ’ ಕಳೆದುಕೊಂಡ ಹಿನ್ನೆಲೆಯಲ್ಲಿ ಅಭಿರಾಮ್ ಸುಮಾರು 15 ವರ್ಷದ ಆಸುಪಾಸಿನಲ್ಲಿ ಮಂಗಳೂರಿನಲ್ಲಿ ಬಂದು ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ಅದೃಷ್ಟವಶಾತ್ ಅಭಿರಾಮ್ ಬದುಕುಳಿಯುತ್ತಾನೆ. ಅದೇ ಸಮಯದಲ್ಲಿ ಆತನ ಬಳಿ ಇದ್ದ ಸ್ವಾಮಿಯ ಲೈಂಗಿಕ ಚಟುವಟಿಕೆಯ ವಿಡಿಯೋ ಸಾಕ್ಷಿಗಳು ನಾಶವಾಗುತ್ತವೆ ಎಂದು ಅಭಿರಾಮ್ ತನ್ನ ಆಪ್ತ ವಲಯದಲ್ಲಿ ಹೇಳಿಕೊಂಡಿರುತ್ತಾನೆ.
ನಂತರದ ದಿನಗಳಲ್ಲಿ ಹೇಗೋ ನನ್ನ ಜೀವನ ನಾನು ನೋಡಿಕೊಳ್ಳುತ್ತೇನೆ. ಯಾರ ಸಂಪರ್ಕವೂ ಬೇಡ ಎಂದು ನಾನಾ ಊರುಗಳನ್ನು ಸುತ್ತಿ, ಸರಿಯಾದ ಶೈಕ್ಷಣಿಕ ಕಲಿಕೆಯೂ ಇರದ ಹಿನ್ನೆಲೆಯಲ್ಲಿ ಒಳ್ಳೆಯ ಕೆಲಸವೂ ಸಿಗದೆ ಹಾಗೋ ಹೀಗೋ ಏನೇನೋ ಕೆಲಸ ಮಾಡಿಕೊಂಡು 10 ವರ್ಷ ಕಳೆಯುತ್ತದೆ.
ಅದೇ ಸಮಯದಲ್ಲಿ ಇದೇ ಮಠದ ಸ್ವಾಮಿಯ ಮೇಲೆ ರಾಮಕಥಾ ಗಾಯಕಿಯೊಬ್ಬರು (ಹೆಸರಿನ ಅಗತ್ಯವಿಲ್ಲ) ಆರೋಪದ ಮೇಲೆ ಆರೋಪ ಮಾಡುತ್ತಾರೆ. ಅದು ರಾಜ್ಯದಾದ್ಯಂತ ದೊಡ್ಡ ಸುದ್ದಿಯಾಗಿದೆ. ಆದ COD ಈ ಪ್ರಕರಣದ ತನಿಖೆ ವಹಿಸಿಕೊಳ್ಳುತ್ತದೆ. ಇದರ ತನಿಖಾಧಿಕಾರಿಗಳು ಮಠವನ್ನು ಸಂಪರ್ಕಿಸಿದಾಗ ಮಠದ ಹಿನ್ನೆಲೆಯ ಕೆಲವು ವ್ಯಕ್ತಿಗಳು ಅಭಿರಾಮ್ ಹೆಗಡೆ ಹೆಸರನ್ನು ಉಲ್ಲೇಖಿಸಿ ಆತನಿಗೆ ಸ್ವಾಮೀಜಿಯ ಚಟುವಟಿಕೆಗಳ ಸಂಪೂರ್ಣ ಮಾಹಿತಿ ಇದೆ. ಆತನನ್ನು ಸಂಪರ್ಕಿಸಿದರೆ ವಿಚಾರ ಹೊರಬರಬಹುದು ಎಂಬುದಾಗಿ ಹೇಳುತ್ತಾರೆ.
ಅಷ್ಟು ಹೊತ್ತಿಗಾಗಲೇ ಅಭಿರಾಮ್ ಮಠಕ್ಕೆ ಒಂದೆರಡು ಬಾರಿ ಬಂದು ಹೋಗಿರುತ್ತಾನೆ. (2016 ರ ಜೂನ್ ತಿಂಗಳಲ್ಲಿ ರಾಮಕಥಾ ಗಾಯಕಿ ಸ್ವಾಮಿಯ ಮೇಲೆ ಮುನಿಸಿಕೊಂಡು ಕೊಠಡಿಯಿಂದ ಹೊರಬರುವುದನ್ನು ನೋಡಿರುವುದಾಗಿ ತನಿಖೆ ವೇಳೆಯಲ್ಲಿ ಹೇಳಿರುವ ಉಲ್ಲೇಖವಿದೆ.) ಅಷ್ಟು ಹೊತ್ತಿಗಾಗಲೇ COD ಅಧಿಕಾರಿಗಳು ಅಭಿರಾಮ್ ಸಂಪರ್ಕಕ್ಕೆ ಬಂದಿರುತ್ತಾರೆ.
ಇನ್ನೂ ತನಿಖಾಧಿಕಾರಿಗಳು ಅಭಿರಾಮ್ ನನ್ನು ಯಾವುದೇ ತನಿಖೆ ನಡೆಸಿರದ ಸಂದರ್ಭದಲ್ಲಾಗಲೇ ಆ ಮಠದ ಭಕ್ತರು, ಹವ್ಯಕ ಸಮಾಜದ ಕೆಲವು ವ್ಯಕ್ತಿಗಳು ಅಭಿರಾಮ್ ಮತ್ತು ಆತನ ಕುಟುಂಬಕ್ಕೆ ಇನ್ನಿಲ್ಲದ ರೀತಿಯಲ್ಲಿ ಕಿರುಕುಳ ನೀಡಲು ಮುಂದಾಗಿರುತ್ತಾರೆ. ತನ್ನ ವಿಚಾರಣೆಯೇ ಇನ್ನೂ ನಡೆದಿಲ್ಲ, ತಾನೇನೂ ಹೇಳಿಯೇ ಇಲ್ಲ. ಅದಾಗಲೇ ನನ್ನ ಮತ್ತು ಕುಟುಂಬದ ಮೇಲೆ ಈ ರೀತಿಯ ಒತ್ತಡ ತಂದ ಹಿನ್ನೆಲೆಯಲ್ಲಿ ಇದರ ಜಿದ್ದಿಗೆ ಬಿದ್ದ ಅಭಿರಾಮ್ ಇದನ್ನೇ ಪ್ರಮುಖ ಸಾಕ್ಷಿಯಾಗಿ ತಗೆದುಕೊಂಡು ಅಭಿರಾಮ್ ತಾನು ಕಂಡ ಅಷ್ಟೂ ಸತ್ಯವನ್ನು COD ತನಿಖಾಧಿಕಾರಿಗಳ ಮುಂದೆ ಬಿಚ್ಚಿಡುತ್ತಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
‘ತಾನು 2001 ರಿಂದ 2010 ರ ವರೆಗೂ ಮಠದಲ್ಲಿ ಇದ್ದೆ. ಮಠದ ಮುಂಚೂಣಿ ಜವಾಬ್ದಾರಿ ನನ್ನ ಮೇಲಿತ್ತು. ಸ್ವಾಮಿಗಳ ಮೊಬೈಲ್, ಲ್ಯಾಪ್ಟಾಪ್ ನೋಡಿಕೊಳ್ಳುವ, ಮಠದ ವಾಹನ ನಿರ್ವಹಣೆಯ ಎಲ್ಲಾ ಜವಾಬ್ದಾರಿ ನನ್ನ ಮೇಲಿತ್ತು. ಸ್ವಾಮಿಗಳ ಜೊತೆಗೆ ಹೆಚ್ಚಿನ ಸಂದರ್ಭದಲ್ಲಿ ನಾನು ಇದ್ದೆ. ಆ ಸಮಯಕ್ಕಾಗಲೇ ಸ್ವಾಮಿಗಳು ಹಲವಷ್ಟು ಮಹಿಳೆಯರ ಸಂಪರ್ಕ ಹೊಂದಿದ್ದರು. ಸ್ವಾಮಿಗಳು ಮಠದಿಂದ ಹೊರಗೆ ಇದ್ದಾಗಲೂ ಬೇರೆ ಬೇರೆ ಮಹಿಳೆಯರ ಸಂಪರ್ಕ ಇತ್ತು. ಇದನ್ನು ಮಠಕ್ಕೆ ಸಂಬಂಧಿಸಿದ ಇನ್ನಿತರರ ಬಳಿ ಹೇಳಿದಾಗಲೂ ಇದು ಸಾಮಾನ್ಯ ಎಂದಿದ್ದರು. ಈ ಬಗ್ಗೆ ಯಾವುದೇ ಸಾಕ್ಷಿಗೆ ನಾನು ಸಿದ್ದನಿದ್ದೇನೆ’ ಎಂಬ ಹೇಳಿಕೆ ಕೊಡುವ ಮೂಲಕ ಆ ಪ್ರಕರಣಕ್ಕೆ ಮಹತ್ವದ ಸಾಕ್ಷಿಯಾಗಿ ಅಭಿರಾಮ್ ನಿಂತಿದ್ದರು. ಅಲ್ಲಿಯವರೆಗೂ ಕೇವಲ ಆರೋಪದಲ್ಲಷ್ಟೇ ಇದ್ದ ಪ್ರಕರಣಕ್ಕೆ ಒಬ್ಬ ಪ್ರತ್ಯಕ್ಷದರ್ಶಿ ಸಾಕ್ಷಿಯಾಗಿ ಅಭಿರಾಮ್ ನಿಲ್ಲುತ್ತಾನೆ. ಇದರ ಅಷ್ಟೂ ಧ್ವನಿ ಮುದ್ರಿಕೆಯನ್ನು COD ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಇರಿಸುತ್ತಾರೆ. ನಂತರ ಅಭಿರಾಮ್ ಕೂಡಾ ನೇರ ಸಾಕ್ಷಿಯಾಗಿ ನ್ಯಾಯಾಧೀಶರ ಮುಂದೆ ತಾನು ಕಂಡ ಸತ್ಯವನ್ನು ಚಾಚೂತಪ್ಪದೇ ಹೇಳುತ್ತಾನೆ. ಆಗ ಇಡೀ ಪ್ರಕರಣ ಒಂದು ಮಹತ್ವದ ಘಟ್ಟಕ್ಕೆ ಬಂದು ನಿಲ್ಲುತ್ತದೆ.
ಆ ಹೊತ್ತಿಗಾಗಲೇ ನಿವೃತ್ತಿಯ ಹಂತದಲ್ಲಿ ಇದ್ದ ಅಭಿರಾಮ್ ತಂದೆಯನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ. ಯಾವ ನಿವೃತ್ತಿ ಭತ್ಯೆಗಳನ್ನೂ ಅವರ ಕೈಗೆ ಸಿಗದಂತೆ ಮಾಡಲಾಗುತ್ತದೆ. ಇಡೀ ಕುಟುಂಬಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ ದಿಗ್ಬಂಧನಕ್ಕೆ ಒಳಗಾದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಇನ್ನೊಂದು ದುರಂತ ಎಂದರೆ, ಯಾವ ಪ್ರಕರಣ ಇಡೀ ರಾಜ್ಯದ ಜನರ ಗಮನ ಸೆಳೆದಿತ್ತೋ, ಅಂತಹ ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿ ಸಾಕ್ಷಿಯಾಗಿ ಅಭಿರಾಮ್ ನಿಂತಿದ್ದನೋ ಆ ಪ್ರಕರಣಕ್ಕೆ ತೀರ್ಪು ನೀಡಲು ನ್ಯಾಯಾಲಯದಲ್ಲಿ ನ್ಯಾಯಾಧೀಶರೇ ನಿಲ್ಲದೇ ಹೋಗುವ ಸ್ಥಿತಿ ನಿರ್ಮಾಣವಾಗಿ ಹೋಯ್ತು. ಇದರಿಂದ ಆಘಾತಕ್ಕೊಳಗಾದ ಅಭಿರಾಮ್ ಮಧ್ಯಪಾನದಂತಹ ದುಶ್ಚಟಕ್ಕೆ ಬೀಳುತ್ತಾನೆ. ಇದು ಮುಂದೆ ಹೋಗುತ್ತಾ ಹೋಗುತ್ತಾ ಆತ ದುಶ್ಚಟಗಳಿಗೆ ಸಂಪೂರ್ಣ ದಾಸನಾಗುತ್ತಾನೆ. ಅದು ಕುಡಿತ ಇಲ್ಲದೇ ತಾನು ಬದುಕೋಕೆ ಸಾಧ್ಯವೆ ಇಲ್ಲ ಎನ್ನುವಷ್ಟರ ಮಟ್ಟಿಗೆ. ಇದರ ನಡುವೆ ಮಠಕ್ಕೆ ಮತ್ತು ಸ್ವಾಮಿಗೆ ಆಗದ ಮಂದಿ ಕೂಡಾ ಆತನನ್ನು ಹಲವು ರೀತಿಯಲ್ಲಿ ಬಳಸಿಕೊಂಡಿರುತ್ತಾರೆ. ತೀರಾ ಚಿಕ್ಕ ವಯಸ್ಸಿಗೆ ಮನಸ್ಸಿಗೆ ಒಗ್ಗಿಸಿಕೊಳ್ಳಲಾರದಂತಹ ದುರ್ಘಟನೆಗಳು, ಪ್ರತಿಕೂಲ ಬೆಳವಣಿಗೆಗಳು ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ. ಆ ಸಂದರ್ಭದಲ್ಲಿ ಆತ ಯಾವ ದುಶ್ಚಟ ಕೂಡಾ ಕ್ಷಣಕಾಲ ಅವನ್ನು ಮರೆಯುವಂತೆ ಮಾಡಿದರೆ ಅದರಲ್ಲಿ ಆತ ಮುಂದುವರೆಯುವಂತೆ ಮಾಡುತ್ತದೆ. ಇದೇ ಅಭಿರಾಮ್ ಕುಡಿತಕ್ಕೆ ಅಂಟಿಕೊಳ್ಳುವಂತೆ ಮಾಡಿರಬಹುದು.
ಇಂತಹ ಸಂದರ್ಭದಲ್ಲಾಗಲೇ ಕನ್ನಡದ ಸ್ವತಂತ್ರ ಮಾಧ್ಯಮವೊಂದರ ಸಂಪರ್ಕಕ್ಕೆ ಬಂದ ಅಭಿರಾಮ್ ತನ್ನ ಜೀವನದಲ್ಲಿ ನಡೆದ ಎಲ್ಲಾ ದುರ್ಘಟನೆಗಳು, ಅಸಹಜ ಬೆಳವಣಿಗೆ, ಕುಟುಂಬದ ಪರಿಸ್ಥಿತಿಯನ್ನು ವಿವರಿಸಿರುತ್ತಾನೆ. ಆಗ ಇವೆಲ್ಲವನ್ನೂ ಒಳಗೊಂಡಂತೆ ಒಂದು ಕಾದಂಬರಿ ಬರೆಯುವುದಾಗಿಯೂ ಹೇಳಿ, ಆ ಮಾಧ್ಯಮದಲ್ಲಿ ಒಂದು ಅಧ್ಯಾಯ ಕೂಡಾ ಹೊರಬರುತ್ತದೆ. ಬಹುಶಃ ಅದೊಂದು ಅಧ್ಯಾಯ ಮಠದ ಮತ್ತು ಸ್ವಾಮಿಯ ನಿದ್ದೆಗೆಡಿಸಿರಬಹುದೇನೋ!? ತಕ್ಷಣವೇ ಆತನ ಕಾದಂಬರಿ ಮೇಲೆ ಕೋರ್ಟ್ ನಿಂದ ತಡೆಯಾಜ್ಞೆ ತರಲಾಯಿತು.
ಮೇಲಿಂದ ಮೇಲೆ ತನ್ನೆಲ್ಲಾ ಸ್ವಾತಂತ್ರ್ಯವನ್ನೂ ಕಸಿದುಕೊಂಡ ಬ್ರಾಹ್ಮಣ ಮಠ ಮತ್ತು ಸ್ವಾಮಿಯ ಮೇಲೆ ಅಭಿರಾಮ್ ನ ಒಳಗೆ ದೊಡ್ಡದೊಂದು ಅಸಮಾಧಾನ ಮನೆ ಮಾಡಿತ್ತು. ಆದರೆ ಅಭಿರಾಮ್ ಏನೂ ಮಾಡಲಾಗದ ಸ್ಥಿತಿಗೆ ಬಂದು ತಲುಪಿದ್ದ. ಇತ್ತ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವೂ ಕಳೆದುಕೊಂಡು, ಕುಟುಂಬವೂ ಸಮಾಜದಿಂದ ವಿಮುಖವಾಗುವ ಸ್ಥಿತಿ ಬಂದರೆ.. ಅಭಿರಾಮ್ ನ ಸ್ಥಿತಿ ಊಹಿಸಲೂ ಸಾಧ್ಯವಿಲ್ಲ.
ಅತನ ತಾಯಿ ಮತ್ತು ಆತ ಸಾಗರ ತಾಲ್ಲೂಕಿನ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಿರುತ್ತಾರೆ. ಆದರೆ ಆತ ಮಾತ್ರ ಕುಡಿತದಿಂದ ಹೊರಬಂದಿರಲಿಲ್ಲ. ತೀರಾ ಖಿನ್ನತೆಗೆ ಒಳಗಾದ ಅಭಿರಾಮ್ ತಾನು ಸಾಯಲೆಂದೇ ಕುಡಿತಕ್ಕೆ ಬಿದ್ದಿರುವುದಾಗಿಯೂ ತನ್ನ ಆಪ್ತರ ಬಳಿ ಹೇಳಿಕೊಂಡಿದ್ದ. ಸಾಯುವುದಕ್ಕಿಂತ ತಿಂಗಳ ಹಿಂದೆ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಅಭಿರಾಮ್ ದಾಖಲಾಗುತ್ತಾನೆ. ಆದರೆ ಆತನ ದೇಹದ ಎಲ್ಲಾ ಅಂಗಾಂಗಗಳು ಬಹುತೇಕ ನಿಷ್ಕ್ರಿಯ ವಾಗಿರುತ್ತವೆ.
ಅಂತಿಮವಾಗಿ ಶನಿವಾರ ಸಂಜೆ ವೇಳೆಗೆ ಸಾಗರ ತಾಲ್ಲೂಕಿನಲ್ಲಿ ಅಭಿರಾಮ್ ತನ್ನ 31 ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾನೆ. ಅತಿ ಚಿಕ್ಕ ವಯಸ್ಸಿನಲ್ಲೇ ಮಠ, ಧಾರ್ಮಿಕ ಎಂದು ಹೋದ ಅಭಿರಾಮ್ ನ ಈ ಸ್ಥಿತಿಗೆ ಕಾರಣರಾರು?. ಮನಸ್ಸಾಕ್ಷಿ ಎಂಬುದು ಒಂದಿದ್ದರೆ ಅಭಿರಾಮ್ ಹೆಗಡೆ ಸಾವಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾದವರಿಗೆ ಪಾಪ ಕಾಣದೆ ಇರದು. ಸತ್ತ ನಂತರವಾದರೂ ಆತನ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ.
ಪೀಪಲ್ ಮೀಡಿಯಾ