ಮಂಗಳೂರು: ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ವಿರೋಧಿಸಿ ಕಳೆದ 18 ದಿನಗಳಿಂದ ಹಗಲು ರಾತ್ರಿ ಧರಣಿ ನಡೆಸಿದ ನಂತರ ಈಗ ಹೋರಾಟಗಾರರ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿದಿದೆ. ಇದಕ್ಕೆ ಸಂಬಂಧಿಸಿದಂತೆ ಸಂಸದ ನಳೀನ್ ಕುಮಾರ್ ಕಟೀಲ್ ಟೋಲ್ ಕೇಂದ್ರ ರದ್ದಿನ ಬಗ್ಗೆ ಟ್ವಿಟ್ ಮಾಡಿದ್ದಾರೆ.
ಹಲವು ದಿನಗಳಿಂದ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ್ದ ಹೆದ್ದಾರಿ ಸಚಿವರು ಟೋಲ್ ರದ್ದಿಗೆ ಆದೇಶಿಸಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಟೋಲ್ ರದ್ದು ವಿಳಂಬವಾಗಿತ್ತು. ಆದರೆ ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ ಎಂದು ತಮ್ಮ ಟ್ವಿಟ್ ನಲ್ಲಿ ತಿಳಿಸಿದ್ದಾರೆ.
ಆದರೆ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಈ ಹೇಳಿಕೆ ಬಗ್ಗೆ ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದು, ಧರಣಿ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಪೀಪಲ್ ಮೀಡಿಯಾ ಜೊತೆಗೆ ಮಾತನಾಡಿದ “ಸುರತ್ಕಲ್ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿ” ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ ಈ ರೀತಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
“ನೋಟಿಫಿಕೇಶನ್ ಆದ ಬಗ್ಗೆ ಖುಷಿ ಇದೆ. ಆದರೆ ಜಿಲ್ಲಾಡಳಿತ ಅಧಿಕೃತ ಆದೇಶದ ಪ್ರತಿ ನಮಗೆ ಕೊಟ್ಟಿಲ್ಲ. ಧರಣಿ ನಿರತರು ಟ್ವಿಟ್ ಮತ್ತು ಫೇಸ್ಬುಕ್ ಪೋಸ್ಟ್ ನಂಬಿ ಕೂರುವರಲ್ಲ. ಮತ್ತೆ ಇನ್ನಾವುದಾದರೂ ತಾಂತ್ರಿಕ ಕಾರಣ ಇಟ್ಟು ಮುಂದುವರಿಸುವ ಬಗ್ಗೆಯೂ ನಮಗೆ ಅನುಮಾನವಿದೆ. ಹಾಗಾಗಿ ಆದೇಶದ ಪ್ರತಿ ನಮ್ಮ ಕೈಗೆ ಸಿಕ್ಕಿ, ಟೋಲ್ ಗೇಟ್ ತೆರವಿನ ನಂತರವೇ ನಾವು ಇಲ್ಲಿಂದ ತೆರಳುತ್ತೇವೆ.
ಹಾಗೇ ನಳಿನ್ ಕುಮಾರ್ ಕಟೀಲ್ ಪ್ರಧಾನಿಗೆ, ಹೆದ್ದಾರಿ ಪ್ರಾಧಿಕಾರದ ಸಚಿವರಿಗೆ ಧನ್ಯವಾದ ಹೇಳಿದ್ದಾರೆ. ಅದಕ್ಕೂ ಮೊದಲು 7 ವರ್ಷದಿಂದ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಹಣ ಸಂಗ್ರಹ ಮಾಡಿದ್ದಕ್ಕೆ ಕಟೀಲ್ ಎರಡು ಜಿಲ್ಲೆಯ ಜನರ ಕ್ಷಮೆ ಕೇಳಬೇಕು.”
– ಮುನೀರ್ ಕಾಟಿಪಳ್ಳ
ಹಾಗಾಗಿ ಟೋಲ್ ಸಂಗ್ರಹ ಕೇಂದ್ರ ತೆರವಾಗುವ ವರೆಗೂ ಈ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದು ಕುಳಿತಿದ್ದಾರೆ.