ಅಬುಧಾಬಿ: ಕ್ಷಿಪಣಿ ಅವಶೇಷ ಬಿದ್ದು ಐವರು ಭಾರತೀಯರು ಸೇರಿ 12 ಮಂದಿಗೆ ಗಾಯ

ಶುಕ್ರವಾರ ಅಬುಧಾಬಿಯಲ್ಲಿ ತಡೆಹಿಡಿಯಲಾದ ಕ್ಷಿಪಣಿಯ ಅವಶೇಷಗಳು ಬಿದ್ದ ಪರಿಣಾಮ ಗಾಯಗೊಂಡ 12 ಜನರಲ್ಲಿ ಐವರು ಭಾರತೀಯ ಪ್ರಜೆಗಳೂ ಸೇರಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯಲ್ಲಿ ಜನರು ಸಣ್ಣಪುಟ್ಟ ಮತ್ತು ಸಾಧಾರಣ ಪ್ರಮಾಣದ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಐವರು ಭಾರತೀಯರು ಮತ್ತು ಆರು ಮಂದಿ ನೇಪಾಳಿ ಪ್ರಜೆಗಳಿಗೆ ಸಾಧಾರಣ ಗಾಯಗಳಾಗಿವೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಮತ್ತೊಬ್ಬ ನೇಪಾಳಿ ಪ್ರಜೆಗೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿದೆ. ಅಬುಧಾಬಿಯ ಅಜ್ಬಾನ್ ಪ್ರದೇಶದಲ್ಲಿ “ವೈಮಾನಿಕ ರಕ್ಷಣಾ ವ್ಯವಸ್ಥೆಯು ಕ್ಷಿಪಣಿಯನ್ನು ಯಶಸ್ವಿಯಾಗಿ ತಡೆಹಿಡಿದ” ನಂತರ ಅದರ ಅವಶೇಷಗಳು ಕೆಳಗೆ ಬಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅದು ಸೇರಿಸಿದೆ.

ಈ ಘಟನೆಯ ಬಗ್ಗೆ ಭಾರತದ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಫೆಬ್ರವರಿ 28 ರಂದು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ, ಈ ಪ್ರದೇಶದಲ್ಲಿ ಎಂಟು ಭಾರತೀಯ ಪ್ರಜೆಗಳು ಹತರಾಗಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ವಾಸಿಸುತ್ತಿರುವ ಸುಮಾರು 1 ಕೋಟಿ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕಳೆದ ಕೆಲವು ವಾರಗಳಿಂದ ಭಾರತವು ತನ್ನ ರಾಜತಾಂತ್ರಿಕ ಪ್ರಯತ್ನಗಳನ್ನು ಚುರುಕುಗೊಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು